ಗುರುವಾರ , ಏಪ್ರಿಲ್ 15, 2021
26 °C

ಪರಾಗರೇಣು ಅಧ್ಯಯನ-ಮಾಹಿತಿ ಕೇಂದ್ರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ದೇಶದ ಜನಸಂಖ್ಯೆಯಲ್ಲಿ ಶೇಕಡ 22ರಷ್ಟು ಮಂದಿ ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ನವದಹೆಲಿಯ ಇಂಡಿಯನ್ ಏರೋಬಯಲಾಜಿ ಸೊಸೈಟಿ ಕಾರ್ಯದರ್ಶಿ, ವಿಜ್ಞಾನಿ ಡಾ.ಎ.ಬಿ. ಸಿಂಗ್ ಆತಂಕವ್ಯಕ್ತಪಡಿಸಿದರು.ನಗರದ ಡಿಆರ್‌ಎಂ ವಿಜ್ಞಾನ ಕಾಲೇಜಿನ ಪ್ರಾಣಿಶಾಸ್ತ್ರ-ಸಸ್ಯಶಾಸ್ತ್ರ ವಿಭಾಗ ಹಾಗೂ ಬಿಐಇಟಿ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಯುಜಿಸಿ ಪ್ರಾಯೋಜಿತ `ಮಾನವ ಅಭಿವೃದ್ಧಿಗೆ ಜೈವಿಕ ತಂತ್ರಜ್ಞಾನದ ಕೊಡುಗೆ~ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಗಿಡ-ಮರಗಳ ಪರಾಗ ರೇಣುಗಳು, ಫಂಗಸ್, ರಾಸಾಯನಿಕಗಳು, ಔಷಧಿಗಳು, ಕೆಲ ಆಹಾರ ಪದಾರ್ಥಗಳು, ಕ್ರಿಮಿಕೀಟಗಳು, ದೂಳು, ಪ್ರಾಣಿಗಳ ತುಪ್ಪಳ ಇತ್ಯಾದಿಗಳಿಂದ ಅಲರ್ಜಿ ಉಂಟಾಗುತ್ತದೆ. ದೇಶದ ಒಟ್ಟು ಜನಸಂಖ್ಯೆಯ ಶೇ 22ರಷ್ಟು ಮಂದಿ ಅಲರ್ಜಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ, ನಮ್ಮ ದೇಶದ ಅಭಿವೃದ್ಧಿಯ ನೀತಿ-ನಿರೂಪಕರು `ಪರಾಗರೇಣು ಅಧ್ಯಯನ ಮತ್ತು ಮಾಹಿತಿ ಕೇಂದ್ರ~ ಸ್ಥಾಪನೆಯತ್ತ ಆಸಕ್ತಿ ತೋರುತ್ತಿಲ್ಲ ಎಂದು ವಿಷಾದಿಸಿದರು.ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಪರಾಗರೇಣು ಅಧ್ಯಯನ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ಭಾರತದಲ್ಲಿ ನೀತಿ-ನಿರೂಪಕರು ಈ ಬಗ್ಗೆ ಇನ್ನೂ ಯೋಚನೆಯನ್ನೇ ಮಾಡಿಲ್ಲ. ಇಂತಹ ಕೇಂದ್ರಗಳ ಸ್ಥಾಪನೆಯಿಂದ ಅಲರ್ಜಿ ಉಂಟಾಗುವ ಕಾಲಘಟ್ಟವನ್ನು ಮೊದಲೇ ಗುರುತಿಸಿ, ಜನರಿಗೆ ಹವಾಮಾನ ಮುನ್ಸೂಚನೆಯಂತೆ ಮಾಹಿತಿ ನೀಡಬಹುದು. ಅಲ್ಲದೇ, ಏರೋಬಯಲಾಜಿ (ಪವನ ಜೀವಶಾಸ್ತ್ರ) ಮೂಲಕ ಅಲರ್ಜಿ ಮೂಲಕ ಉಂಟಾಗುವ ಕಾಯಿಲೆ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಪ್ರತಿಪಾದಿಸಿದರು.ನವದೆಹಲಿ, ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಮೆಟ್ರೋ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಯಥೇಚ್ಛವಾಗಿ ಪರಿಸರ ನಾಶ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ವಾತಾವರಣದ ಏರುಪೇರಿನಿಂದಾಗಿಯೂ ಕೂಡಾ ಜನರು ಅಲರ್ಜಿಗಳಿಗೆ ತುತ್ತಾಗುತ್ತಿದ್ದಾರೆ. ಕೆಲವರಿಗೆ ನಿರ್ದಿಷ್ಟ ವಸ್ತು, ಆಹಾರ, ಪ್ರಾಣಿ, ಪರಿಸರ, ಔಷಧಿ ಇತ್ಯಾದಿಗಳಿಂದಲೂ ಅಲರ್ಜಿ ಉಂಟಾಗುತ್ತದೆ.ಕೆಲ ಅಲರ್ಜಿಗಳು ವಂಶ ಪಾರಂಪರ್ಯವಾಗಿಯೂ ಮುಂದುವರಿಯುತ್ತವೆ. ಹಾಗಾಗಿ, ಶೇ 30ರಷ್ಟು ಮಂದಿ ಆಸ್ತಮ, ಶ್ವಾಸಕೋಶ ಸಂಬಂಧಿ ಸೋಂಕುಗಳಿಂದ ಬಳಲುತ್ತಿದ್ದಾರೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ಸರ್ಕಾರ, ಸಂಶೋಧಕರು ಶ್ರಮ ವಹಿಸಬೇಕು ಎಂದು ಸಿಂಗ್ ಸಲಹೆ ನೀಡಿದರು.ಡಿಆರ್‌ಎಂ ಕಾಲೇಜಿನ ಪ್ರಾಂಶುಪಾಲ ಮೇಜರ್ ಎನ್. ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಡಾ.ಬಿ.ಇ. ರಂಗಸ್ವಾಮಿ, ಡಾ.ಜಗದೀಶ್ ಭಟ್, ಡಾ.ಟಿ. ವಸಂತನಾಯ್ಕ, ಡಾ.ಜೆ.ಬಿ. ರಾಜ್ ಹಾಜರಿದ್ದರು.ನಿವೇದಿತಾ ಪ್ರಾರ್ಥಿಸಿದರು. ಡಿಆರ್‌ಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಆರ್. ವನಜಾ ಸ್ವಾಗತಿಸಿದರು. ಸಾರಿಕಾ, ಮಾನಸಾ ಕಾರ್ಯಕ್ರಮ ನಿರೂಪಿಸಿದರು. ಜಿ.ಎಸ್. ರವಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.