ಬುಧವಾರ, ಮೇ 18, 2022
23 °C

ಪರಿಶಿಷ್ಟರು, ಮುಸ್ಲಿಂ ವರ್ಗ ಉದ್ಯೋಗ ಅವಕಾಶದ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ದೇಶ ಪ್ರಗತಿಯ ಹಾದಿಯಲ್ಲಿದ್ದರೂ  ಪರಿಶಿಷ್ಟ ಜಾತಿ, ವರ್ಗ ಮತ್ತು ಮುಸ್ಲಿಂ ಸಮುದಾಯದವರಿಗೆ ಅಲ್ಪ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳು ದೊರೆಯುತ್ತಿವೆ ಎಂದು ಭಾರತೀಯ ಮಾನವ ಅಭಿವೃದ್ಧಿ ವರದಿ- 2011ರಲ್ಲಿ ಪ್ರಸ್ತಾಪಿಸಲಾಗಿದೆ.ಈ ಸಾಮಾಜಿಕ ಗುಂಪುಗಳಲ್ಲಿ ಪರಿಶಿಷ್ಟ ಜಾತಿಯವರಲ್ಲಿ ಹೆಚ್ಚಿನ ನಿರುದ್ಯೋಗ ಸಮಸ್ಯೆ ಇದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆ ಸಮನಾಗಿದೆ.ಕಳೆದ ಶುಕ್ರವಾರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಈ ವರದಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿಯ ಕೇಂದ್ರ ವಾಗಿರುವ ನಗರ ಪ್ರದೇಶಗಳಲ್ಲಿ ಸಹ ಪರಿಶಿಷ್ಟ ಜಾತಿಯವರ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದರು.2009- 2010ರಲ್ಲಿ ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ನಿರುದ್ಯೋಗ ಮಟ್ಟ ಶೇ 9.4ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದು ಶೇ 7ರಷ್ಟಿದೆ. ಹಾಗೆಯೇ ಪರಿಶಿಷ್ಟ ವರ್ಗದ ನಿರುದ್ಯೋಗದ ಪ್ರಮಾಣ ನಗರ ಪ್ರದೇಶದಲ್ಲಿ ಶೇ 6.3 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 7.8ರಷ್ಟಿದೆ.ವರದಿ ಪ್ರಕಾರ ಸಾಮಾಜಿಕ ಗುಂಪುಗಳ ಪೈಕಿ ಪರಿಶಿಷ್ಟ ಜಾತಿಯವರ ನಿರುದ್ಯೋಗ ಪ್ರಮಾಣ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ಆದರೆ ಇತರ ಗುಂಪುಗಳ ನಿರುದ್ಯೋಗ ಮಟ್ಟ ಇಳಿಮುಖವಾಗಿದೆ.ಪರಿಶಿಷ್ಟ ಜಾತಿಯವರಿಗೆ ಉದ್ಯೋಗ ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಕೌಶಲ್ಯ ತರಬೇತಿ ನೀಡುವಂತಹ ಕಾರ್ಯಕ್ರಮ ಹೆಚ್ಚಿಸಿಕೊಳ್ಳಲು ವರದಿಯಲ್ಲಿ ಶಿಫಾರಸು ಮಾಡಿದ್ದು, ಇದಕ್ಕಾಗಿಯೇ ಪ್ರತ್ಯೇಕ ನೀತಿ ಅನುಸರಿಸಲು ಸೂಚಿಸಲಾಗಿದೆ.ಆಂಧ್ರ ಪ್ರದೇಶ, ಛತ್ತೀಸ್‌ಗಡ, ಜಾರ್ಖಂಡ್ ಮತ್ತು ಮಧ್ಯ ಪ್ರದೇಶಗಳಲ್ಲಿ ಪರಿಶಿಷ್ಟ ವರ್ಗದ ಸಮುದಾಯದವರು ಹೆಚ್ಚಿದ್ದು, ಇಲ್ಲಿ ನಿರುದ್ಯೋಗ ಸಮಸ್ಯೆಯ ಮಟ್ಟ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಾಗಿದೆ.2007-08ರಲ್ಲಿ ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಶೇ 7ರಷ್ಟು ಹೆಚ್ಚಳವಾಗಿದೆ ಎಂದೂ ತಿಳಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.