ಸೋಮವಾರ, ಸೆಪ್ಟೆಂಬರ್ 16, 2019
22 °C

ಪರಿಷ್ಕೃತ ಭೂಸ್ವಾಧೀನ ಮಸೂದೆ: ಲೋಕಸಭೆಯಲ್ಲಿ ಮಂಡನೆ

Published:
Updated:

ನವದೆಹಲಿ (ಪಿಟಿಐ): ನ್ಯಾಯೋಚಿತ ಹಾಗೂ ತೃಪ್ತಿಕರ ಪರಿಹಾರ ಒದಗಿಸುವ ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ಯಾವುದೇ ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಆ ಪ್ರದೇಶದ ಶೇಕಡಾ 80 ಜನರ ಒಪ್ಪಿಗೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಸರ್ಕಾರವು ಬುಧವಾರ ಲೋಕಸಭೆಯಲ್ಲಿ ಮಂಡಿಸಿದೆ.ದೀರ್ಘಕಾಲದಿಂದ ನಿರೀಕ್ಷಿಸಲಾಗಿದ್ದ ಭೂಸ್ವಾಧೀನ, ಪುನಃಶ್ಚೈತನ್ಯ ಮತ್ತು ಮರುವಸತಿ ಮಸೂದೆ 2011ನ್ನು ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಅವರು ಮೂಲ ಕರಡಿನಲ್ಲಿ ಸ್ವಲ್ಪ ಮಾರ್ಪಾಡಿನೊಂದಿಗೆ ಮಂಡಿಸಿದರು.ಉದ್ದೇಶಿತ ಮಸೂದೆಯು ಶತಮಾನದಷ್ಟು ಹಳೆಯದಾದ ಕಾನೂನಿಗೆ ಬದಲಿಯಾಗಿ ಜಾರಿಗೆ ಬರಲಿದೆ.

ಭೂಸ್ವಾಧೀನದಿಂದ ನಿರಾಶ್ರಿತರಾಗುವ ಕುಟುಂಬಗಳ ಮೇಲೆ ಆಗುವ ಆರ್ಥಿಕ, ಪರಿಸರ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಕೂಲ ಪರಿಣಾಮಗಳನ್ನು ಪ್ರಾತಿನಿಧಿಕ ಮತ್ತು ಪಾರದರ್ಶಕ ರೀತಿಯಲ್ಲಿ ಅಂದಾಜು ಮಾಡಬೇಕು ಎಂದು ಜೈರಾಂ ರಮೇಶ್ ಹೇಳಿದರು.ವಿವಿಧ ಪಾಲುದಾರರ ಜೊತೆಗೆ ಸಮಾಲೋಚಿಸಿದ ಬಳಿಕ ಸಿದ್ಧ ಪಡಿಸಲಾದ ಮಸೂದೆಯ ಅಂತಿಮ ರೂಪವು ~ಬಹುಬೆಳೆ ನೀರಾವರಿ ಭೂಮಿಯನ್ನು ಅಂತಿಮ ಹಂತದ ಕ್ರಮವಾಗಿ ಮಾತ್ರವೇ ಸ್ವಾಧೀನ ಪಡಿಸಿಕೊಳ್ಳಬಹುದು~ ಎಂದು ಸ್ಪಷ್ಟವಾಗಿ ಹೇಳುತ್ತದೆ.ಯಾವುದೇ ಬಹುಬೆಳೆ ನೀರಾವರಿ ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಅಗತ್ಯ ಸರ್ಕಾರಕ್ಕೆ ಕಂಡು ಬರುತ್ತಿಲ್ಲ~ ಎಂದು ಮೊದಲ ಕರಡು ಹೇಳಿತ್ತು.ಆಹಾರ ಸುರಕ್ಷತಾ ಖಾತರಿ ಸಲುವಾಗಿ ಬಹು ಬೆಳೆ ನೀರಾವರಿ ಪ್ರದೇಶವನ್ನು ಅಂತಿಮ ಕ್ರಮವಾಗಿ ಮಾತ್ರವೇ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಪರಿಷ್ಕೃತ ಮಸೂದೆ ಹೇಳಿದೆ.

 

Post Comments (+)