ಸೋಮವಾರ, ಜನವರಿ 20, 2020
29 °C

ಪವಾರ್ ಭೇಟಿಗೆ ದಾಳಿಂಬೆ ಬೆಳೆಗಾರರ ನಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯದ ದಾಳಿಂಬೆ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರದಲ್ಲಿಯೇ ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿಯಾಗಲು ರಾಜ್ಯದ ನಿಯೋಗ ತೆರಳಲಿದೆ ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ  ಎಸ್.ಎ. ರವೀಂದ್ರನಾಥ್ ಹೇಳಿದರು.ದಾಳಿಂಬೆಗೆ ಒಳ್ಳೆಯ ಮಾರುಕಟ್ಟೆ ಹಾಗೂ ರಫ್ತು ಮೌಲ್ಯ ಇದೆ. ಆದರೆ, ಹಲವೆಡೆ ರೋಗಬಾಧೆ, ನಿರ್ವಹಣಾ ಸಮಸ್ಯೆಯಿಂದ ರೈತರು ಕಂಗೆಟ್ಟಿದ್ದಾರೆ. ಆದ್ದರಿಂದ ಈ ಸಮಸ್ಯೆಗಳಿಗೆ ಪರಿಹಾರೋಪಾಯ ಚರ್ಚಿಸಲು ಈ ನಿಯೋಗ ತೆರಳಲಿದೆ ಎಂದು ಗುರುವಾರ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು. ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಅಡಿಕೆಗೆ ಬಂದಿರುವ ಕೊಳೆರೋಗ, ಬಾಳೆ ಬೆಳೆಗೆ ಬಾಧಿಸಿರುವ ಎಲೆ ಸುಡುವ ರೋಗ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಬಾಧಿಸುತ್ತಿರುವ ಅನೇಕ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ತಜ್ಞರ ಸಲಹೆ ಮೇರೆಗೆ ಭೂಮಿಯಲ್ಲಿ ಲವಣಾಂಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ತಾಳೆ ಬೆಳೆಗೆ ಉತ್ತೇಜನ: ಸುಳ್ಯ, ಪುತ್ತೂರು ಕಡೆಗಳಲ್ಲಿ ತಾಳೆ ಬೆಳೆ ಬೆಳೆಸಲು ಒಳ್ಳೆಯ ಅವಕಾಶವಿದೆ. ರಾಜ್ಯದ ಒಟ್ಟು 5,000 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಸುವ ಗುರಿ ಹೊಂದಲಾಗಿದೆ. ಈಗ 3,500 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಮರಗಳು ಇವೆ. ಅವುಗಳ ಕಾಯಿ ಕೀಳುವವರಿಗೆ ವಿಶೇಷ ತರಬೇತಿ ನೀಡುವ ಚಿಂತನೆಯಿದೆ ಎಂದರು.ತೋಟಗಾರಿಕೆ ಡಿಪ್ಲೊಮಾ: ಕೃಷಿ ವಿವಿಗಳ ವ್ಯಾಪ್ತಿಗೆ ಒಳಪಟ್ಟ 9 ಕಾಲೇಜುಗಳಲ್ಲಿ ಕೃಷಿ ಡಿಪ್ಲೊಮಾ ಮಾದರಿಯಲ್ಲಿಯೇ ತೋಟಗಾರಿಕೆ ಡಿಪ್ಲೊಮಾ ಅಧ್ಯಯನವನ್ನೂ ಆರಂಭಿಸಲಾಗುವುದು. ಪ್ರತಿ ಕಾಲೇಜಿಗೆ ತಲಾ 50 ವಿದ್ಯಾರ್ಥಿಗಳಂತೆ ಪ್ರವೇಶ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅದು ಜಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)