ಸೋಮವಾರ, ಮೇ 17, 2021
23 °C

ಪಾಕ್ ವಿಮಾನ ಅಪಘಾತ: 127 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಕರಾಚಿಯಿಂದ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದ ಪಾಕಿಸ್ತಾನದ ಖಾಸಗಿ ಪ್ರಯಾಣಿಕ ವಿಮಾನ ನಿಗದಿತ ಸ್ಥಳದಲ್ಲಿ ಇಳಿಯುವ ಕೆಲವೇ ಕ್ಷಣಗಳ ಮುನ್ನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲಾ 127 ಮಂದಿ ಸಾವಿಗೀಡಾದರು.ಮೃತರಾದವರಲ್ಲಿ 118 ಪ್ರಯಾಣಿಕರಾದರೆ, 9 ಮಂದಿ ಸಿಬ್ಬಂದಿ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಸಂಜೆ 5ಕ್ಕೆ ಹೊರಟಿದ್ದ ಕರಾಚಿ ಮೂಲದ ಭೋಜಾ ಏರ್‌ಲೈನ್ಸ್ 6.40ಕ್ಕೆ ಇಸ್ಲಾಮಾಬಾದ್ ತಲುಪಬೇಕಿತ್ತು.ನಿಲ್ದಾಣ ಇನ್ನು ಕೆಲವೇ ಕಿಲೋಮೀಟರ್ ದೂರವಿದ್ದಾಗ ಸಮೀಪದಲ್ಲೇ ಇರುವ ರಾವಲ್ಪಿಂಡಿ ನಗರದ ಚಕ್‌ಲಾಲಾ ವೈಮಾನಿಕ ನೆಲೆಯ ಬಳಿ ದಟ್ಟಣೆಯ ಜನವಸತಿ ಪ್ರದೇಶಕ್ಕೆ ಹೊತ್ತಿ ಉರಿಯುತ್ತಾ ಅಪ್ಪಳಿಸಿತು. ಇದರಿಂದಾಗಿ ಆ ಪ್ರದೇಶದ 40 ಮನೆಗಳು ಕೂಡ ಉರಿಯಲಾರಂಭಿಸಿದವು. ರಾತ್ರಿ 9.30ರ ವೇಳೆಗೆ ಅದನ್ನು ಆರಿಸಲಾಯಿತಾದರೂ ಮನೆಗಳಲ್ಲಿದ್ದವರಿಗೆ ಏನಾಗಿದೆ ಎಂಬುದು ಇನ್ನೂ ಖಚಿತಪಟ್ಟಿಲ್ಲ.ಹೊತ್ತಿ ಉರಿಯುತ್ತಿದ್ದ ವಿಮಾನದ ಅವಶೇಷಗಳಿಂದಾಗಿ ಅದೇ ಪ್ರದೇಶದಲ್ಲಿದ್ದ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಘಟಕವೂ ಹೊತ್ತಿ ಉರಿಯಿತು. ಛಿದ್ರಛಿದ್ರವಾದ ವಿಮಾನದ ಅವಶೇಷಗಳು ಸುತ್ತೆಲ್ಲಾ ಚದುರಿ ಬಿದ್ದವು.ಈ ಸಂದರ್ಭದಲ್ಲಿ ಪ್ರತಿಕೂಲ ಹವಾಮಾನವಿದ್ದರೂ, ವಿಮಾನಕ್ಕೆ ಇಳಿಯಲು ಅನುಮತಿ ನೀಡಲಾಗಿತ್ತು. ಆದರೆ ದುರಂತ ಸಂಭವಿಸುವ ಕೆಲವೇ ಕ್ಷಣಗಳ ಮುನ್ನ ವಿಮಾನವು ಸಂಚಾರ ನಿಯಂತ್ರಣ ಗೋಪುರದ ಸಂಪರ್ಕ ಕಳೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.ಸೇನಾ ಪಡೆ ಯೋಧರು ಸೇರಿದಂತೆ ಘಟನಾ ಸ್ಥಳಕ್ಕೆ ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ.

ವಿಮಾನದ ಕಪ್ಪು ಪೆಟ್ಟಿಗೆಯಲ್ಲಿ ದಾಖಲಾಗಿರುವ ದತ್ತಾಂಶಗಳನ್ನು ವಿಶ್ಲೇಷಿಸದ ನಂತರವಷ್ಟೇ ದುರಂತದ ನಿಖರ ಕಾರಣ ತಿಳಿಯಲು ಸಾಧ್ಯ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ.

ತನಿಖೆಗೆ ಆದೇಶ: ವಿಮಾನ ದುರಂತದ ಬಗ್ಗೆ ದಿಗ್ಭ್ರಮೆ ಮತ್ತು ಸಾವು-ನೋವಿನ ಕುರಿತು ಶೋಕ ವ್ಯಕ್ತಪಡಿಸಿರುವ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು, ತನಿಖೆಗೆ ಆದೇಶಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಅಪಘಾತಕ್ಕೆ ಬಲಿಯಾದವರ ಸಂಬಂಧಿಕರನ್ನು ಇಸ್ಲಾಮಾಬಾದ್‌ಗೆ ಕರೆತರಲು ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡುವಂತೆ ಅಧ್ಯಕ್ಷರು ಸೂಚನೆ ನೀಡಿರುವುದಾಗಿಯೂ ಅವು ತಿಳಿಸಿವೆ. ಜಿಯೋ ನ್ಯೂಸ್ ಟಿವಿ ಚಾನೆಲ್ ಪ್ರಕಾರ, ಭೋಜಾ ಏರ್‌ಲೈನ್ಸ್ ಸಂಸ್ಥೆಯು ಶಾಹೀನ್ ಏರ್‌ಲೈನ್ಸ್ ಸಂಸ್ಥೆಯಿಂದ 27.4 ವರ್ಷಗಳಷ್ಟು ಹಳೆಯ ಈ ವಿಮಾನವನ್ನು ಖರೀದಿ ಮಾಡಿದ್ದು, ಆ ಸಂಸ್ಥೆಯು ಇದರ ಹಾರಾಟವನ್ನು ನಿಲ್ಲಿಸಿತ್ತು ಎಂದು ಹೇಳಿದೆ.ನವದೆಹಲಿ ವರದಿ: ವಿಮಾನ ಅಪಘಾತದ ಬಗ್ಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.