ಮಂಗಳವಾರ, ಜೂನ್ 15, 2021
20 °C

ಪಾತ್ರಗಳೇ ಬರೆಸಿಕೊಂಡ ಕಥೆಗಳು

ಅನಿರುದ್ಧ ಕೃಷ್ಣ Updated:

ಅಕ್ಷರ ಗಾತ್ರ : | |

ಎಲ್ಲಾ ಕಾಲದ ಸಾಹಿತ್ಯದಲ್ಲೂ ಕೆಲವು ಮಾದರಿಗಳು ಯಾವ್ಯಾವುದೋ ಕಾರಣಗಳಿಂದ ‘ಪ್ರಾತಿನಿಧಿಕ’ ಆಗಿಬಿಡುತ್ತವೆ. ಮುಂದಿನ ಎಲ್ಲಾ ಚರ್ಚೆಗಳೂ ಈ ಪ್ರಾತಿನಿಧಿಕ ಮಾದರಿಗಳ ಸುತ್ತಲೇ ನಡೆಯುತ್ತಾ ಒಂದು ಶಿಷ್ಟೀಕರಣ ಪ್ರಕ್ರಿಯೆಯೂ ಜರುಗಿಬಿಡುತ್ತದೆ.ಇಡೀ ಪ್ರಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾದ ನಿರ್ಧಾರಗಳಿಗಿಂತ, ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ‘ಚರ್ಚೆಯ ಅನುಕೂಲ’ಗಳೇ ಮುಖ್ಯವಾಗಿರುತ್ತವೆ. ಇದರಲ್ಲಿ ಕಳೆದು ಹೋಗುವುದು ಢಾಳಾದ ವಿಶಿಷ್ಟತೆಯನ್ನು ಅಳವಡಿಸಿಕೊಳ್ಳದ ಮಧ್ಯಮ ಮಾರ್ಗದ ಅಭಿವ್ಯಕ್ತಿ ಮಾದರಿಗಳು. ಸ. ರಘುನಾಥ್ ಅವರ ‘ಬಿರೇಬೆತ್ಲೆ ವೆಂಕಟಸಾಮಿ’ ಸಂಕಲನದ ಕಥೆಗಳಲ್ಲಿ ಈ ಬಗೆಯ ವಿಶಿಷ್ಟ ಮಧ್ಯಮ ಮಾರ್ಗವೊಂದಿದೆ.ಇನ್ನೂ ಕುತೂಹಲಕಾರಿ ಸಂಗತಿಯೆಂದರೆ ಲೇಖಕರು ಈ ಕಥೆಗಳ ಕುರಿತಂತೆ ಹೇಳಿರುವ ಒಂದು ಮಾತು ‘ಇಲ್ಲಿನವೂ ಪಾತ್ರಗಳೇ ಬರೆಸಿಕೊಂಡ ಕಥೆಗಳು’.2004ರಲ್ಲಿ ರಘುನಾಥ್ ಅವರ ಮೊದಲ ಸಂಕಲನ ‘ತಂಗಡಿ ಹುವ್ವ’ ಪ್ರಕಟವಾಗಿತ್ತು. ಅದರ ನಂತರದ ಎಂಟು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಹನ್ನೊಂದು ಕಥೆಗಳು ‘ಬಿರೇಬೆತ್ಲೆ ವೆಂಕಟಸಾಮಿ’ಯಲ್ಲಿವೆ. ಕೋಲಾರಕ್ಕೆ ವಿಶಿಷ್ಟವಾದ ಕನ್ನಡದ ಜಗತ್ತಿನಲ್ಲೇ ಅನಾವರಣಗೊಳ್ಳುವ ಕಥೆಗಳಿವು. ಈ ಜಗತ್ತಿನ ಕಾಲವೂ ಭಿನ್ನ.ಅಂದರೆ ನಾವಂದುಕೊಳ್ಳುವ ವರ್ತಮಾನಕ್ಕೂ ಈ ಕಥೆಗಳಲ್ಲಿ ಅಡಗಿರುವ ವರ್ತಮಾನಕ್ಕೂ ಇರುವ ಸಂಬಂಧ ಭಾರತ ಮತ್ತು ಇಂಡಿಯಾದ ನಡುವೆ ಇರುವಷ್ಟೇ ದೂರದಲ್ಲಿವೆ. ಕಥೆಗಾರನ ಯಶಸ್ಸಿರುವುದು ಕಾಲದ ಈ ಎರಡೂ ವಲಯಗಳಿಗೂ ಪ್ರಸ್ತುತವಾಗುವಂತೆ ಮಾಡುವ ಸಂವಹನ ತಂತ್ರದಲ್ಲಿ.ಸಂಕಲನದ ಬಹಳ ಮಹತ್ವಾಕಾಂಕ್ಷೆಯ ಕಥೆಯಂತಿರುವ ‘ಅವನು ಹೇಳಿದ್ದೆಲ್ಲ’ ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಬಹುದು. ಹಾಗೆಯೇ ಇದೊಂದು ರೀತಿಯಲ್ಲಿ ಕತೆಗಾರ ತನ್ನ ಇಡೀ ಅಭಿವ್ಯಕ್ತಿ ಮಾದರಿಯನ್ನು ನಿರ್ವಚಿಸಿಕೊಳ್ಳುವ ಪ್ರಯತ್ನದಂತೆಯೂ ಕಾಣಿಸುತ್ತದೆ. ಒಂದಕ್ಕೊಂದು ಸಂಬಂಧ ಪಡದ ಸಂಗತಿಗಳು ತನಗೆ ಸಂಗತವಾಗುವಂತೆ ಸೇರಿಸುತ್ತಾ ಹೋಗುವ ‘ಅವನು’ ಮತ್ತು ಅದನ್ನು ಆಲಿಸುತ್ತಿರುವ ನಿರೂಪಕ ತಾನು ಕೇಳಿಸಿಕೊಳ್ಳುತ್ತಿರುವುದಕ್ಕೆ ನೀಡುತ್ತಿರುವ ಅರ್ಥಗಳಲ್ಲಿ ಈ ಕಥೆ ಜನ್ಮ ತಳೆಯುತ್ತದೆ.ಮೇಲ್ನೋಟಕ್ಕೆ ಮನೋವಿಶ್ಲೇಷಣಾ ತಂತ್ರದ ಮೂಲಕ ಕಥೆಯನ್ನು ಹೇಳಲು ಹೊರಟಂತೆ ಕಾಣಿಸಿದರೂ ಇಲ್ಲಿ ಅದರ ಉದ್ದೇಶ ಕಥನವಲ್ಲ. ತಂತ್ರದ ನಿರಚನೆ ಮಾತ್ರ ಅನ್ನಿಸುತ್ತದೆ. ಅಷ್ಟಕ್ಕೂ ಇಲ್ಲಿ ಕಥೆ ಏನು? ‘ಅವನನ್ನು’ ಹೆಂಡತಿ ಗೋಳು ಹೊಯ್ದುಕೊಳ್ಳುತ್ತಿರುವುದೇ ಅಥವಾ ಅದರ ನೆಪದಲ್ಲಿ ಬರುತ್ತಿರುವ ಉಳಿದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಂಗತಿಗಳೇ ಅಥವಾ ನಿರೂಪಕ ಅದಕ್ಕೆ ನೀಡುತ್ತಿರುವ ಅರ್ಥಗಳೇ. ಬಹುಶಃ ಈ ಎಲ್ಲವೂ ಬಿಡಿಬಿಡಿಯಾಗಿ ಒಂದೊಂದು ಕಥೆಗಳು ಮತ್ತು ಇಡಿಯಾಗಿ ‘ಅವನು ಹೇಳಿದ್ದೆಲ್ಲ’.ಸಂಕಲನದ ಶೀರ್ಷಿಕೆಯೂ ಆಗಿರುವ ಕಥೆ ‘ಬಿರೇಬೆತ್ಲೆ ವೆಂಕಟಸಾಮಿ’ಯ ದೊಡ ಶಕ್ತಿ ಇರುವುದು ಅದರ ವಸ್ತುವಿನಲ್ಲಿ. ‘ಇಲ್ಲಿನವೂ ಪಾತ್ರಗಳೇ ಬರೆಸಿಕೊಂಡ ಕಥೆಗಳು’ ಎಂಬ ಮಾತನ್ನು ಸಾಬೀತು ಮಾಡುವ ಕಥೆಯಿದು. ಭಾರತದ ಎರಡು ಕಾಲ ವಲಯಗಳ ನಡುವಣ ಕೊಂಡಿಯಂತೆ ಕಾಣಿಸುವ ವೆಂಕಟಸಾಮಿಯ ಕಥೆಯನ್ನು ನಿರೂಪಿಸುತ್ತಾ ಹೋಗುವ ಕ್ರಿಯೆಯೇ ಕಥನ ಕ್ರಿಯೆಯೇ ತಂತ್ರವನ್ನೂ ರೂಪಿಸಿಬಿಡುತ್ತದೆ. ನಿರೂಪಕನ ಬದುಕಿನೊಳಕ್ಕೆ ವೆಂಕಟಸಾಮಿ ಒಂದು ಅವತಾರದಂತೆ ಬಂದು ಬಿಡುತ್ತಾನೆ.ಅವನ ಅಂತ್ಯವೂ ಅಷ್ಟೇ ಅವತಾರದ ಉದ್ದೇಶ ಮುಗಿದಾಗ ಕಣ್ಮರೆಯಾಗುವಂತೆಯೇ ಇದೆ. ನಿರೂಪಕನ ಬದುಕಿನೊಳಗೆ ಅವನು ಪ್ರವೇಶ ಪಡೆದುಕೊಂಡು ಸಕ್ರಿಯವಾಗಿದ್ದಷ್ಟು ಕಾಲವೂ ದುಡ್ಡಿಗಾಗಿ ಏನೂ ಮಾಡಬಲ್ಲವನಂತೆ ಕಾಣಿಸುತ್ತಿರುತ್ತಾನೆ. ನಿರೂಪಕನ ಆಳಕ್ಕೂ ಓದುಗನ ಮನಸ್ಸಿನೊಳಕ್ಕೂ ಇಳಿಯುತ್ತಾ ಹೋಗುವ ಕ್ರಿಯೆಯಲ್ಲಿ ವೆಂಕಟಸಾಮಿಯ ನಿಜರೂಪ ನಿಚ್ಚಳವಾಗುತ್ತದೆ. ಹೆಂಡತಿಯೇನಾದರೂ ಸತ್ತು ಹೋಗಿದ್ದರೆ ನಿನ್ನಿಂದ ಎರಡು ಲಕ್ಷ ರೂಪಾಯಿಗಳನ್ನು ವಸೂಲು ಮಾಡುತ್ತಿದ್ದೆ ಎಂದು ತಣ್ಣಗೆ ವೈದ್ಯರಿಗೆ ಹೇಳುವ ವೆಂಕಟಸಾಮಿ, ಅವನ ಮಗನ ಸ್ಕಾಲರ್ ಶಿಪ್ ಗಾಗಿ ಕಾಗದಕ್ಕೆ ಸಹಿ ಮಾಡಿಸಿಕೊಂಡರೂ ಶಿಕ್ಷಕರ ಬಳಿ ದುಡ್ಡು ಪೀಕುವ ವೆಂಕಟಸಾಮಿ, ಶಿಕ್ಷಕ ಚುನಾವಣಾ ಕರ್ತವ್ಯಕ್ಕೆ ಪಡೆಯುವ ದುಡ್ಡನ್ನೂ ತಾನು ಓಟು ಹಾಕಲೂ ಪಡೆಯುವ ದುಡ್ಡನ್ನೂ ಒಂದೇ ಎಂದು ತಾರ್ಕಿಕವಾಗಿ ವಿವರಿಸುವ ವೆಂಕಟಸಾಮಿ ದುಷ್ಟನೆನ್ನಲು ಸಾಧ್ಯವೇ ಇಲ್ಲ.ಹಾಗೆಂದು ದುಷ್ಟತನದೊಳಗೇ ದೊಡ್ಡದೊಂದು ತ್ಯಾಗ ಮಾಡಿದ್ದಾನೆಯೇ ಎಂದು ಪ್ರಶ್ನಿಸಿದರೆ ಅದೂ ಇಲ್ಲ. ನಾಯಿಯೊಂದರ ಜೀವ ಉಳಿಸುವುದಕ್ಕಾಗಿ ಅವನು ಪ್ರಾಣ ಕಳೆದುಕೊಂಡದ್ದೂ ಕೂಡಾ ಸಂಶಯಾಸ್ಪದವೇ. ಹಾಗಿದ್ದರೂ ವೆಂಕಟಸಾಮಿ ನಿರೂಪಕನೊಳಗೆ ಉಳಿದಂತೆ ಓದುಗನ ಮನಸ್ಸಿನೊಳಗೆಯೂ ಉಳಿಯುತ್ತಾನೆ.

‘ಬೆಟ್ಟದ ಕಥೆ’ ಕಥನ ಕ್ರಮದ ದೃಷ್ಟಿಯಲ್ಲಿ ಮುಖ್ಯವಾಗುತ್ತದೆ. ಅಲ್ಲಿರುವ ಸ್ವರ್ಗಕ್ಕಿಂತ ಇಲ್ಲೊಂದು ಸ್ವರ್ಗ ಸೃಷ್ಟಿಸುವ ಅಭೀಪ್ಸೆಯಿರುವ ಈ ಕಥೆ ಬಹಳ ಕುತೂಹಲಕರವಾಗಿ ಸಂಭಾಷಣೆಗಳಲ್ಲಿಯೇ ಸಾಗುತ್ತದೆ.ಸಂಭಾಷಣೆಯೊಳಗೇ ಕಾಲದಲ್ಲಿ ಹಿಂದು–ಮುಂದಾಡುತ್ತಾ ಬಹಳ ಯಶಸ್ವೀ ಎನಿಸುವಂಥ ಅಂತ್ಯಕ್ಕೆ ಬಂದು ನಿರಾಶೆಗೊಳಿಸಿಬಿಡುತ್ತದೆ. ಕಥೆಯ ಅಂತ್ಯದ ತನಕವೂ ತಾವು ಅನುಸರಿಸಿದ ತಂತ್ರದಲ್ಲಿ ಭರವಸೆ ಉಳಿಸಿಕೊಂಡಿದ್ದ ಕಥೆಗಾರ ಕೊನೆಯಲ್ಲಿ ವಿವರಣೆಯ ಸಾಲು ಸೇರಿಸಿ ಕಥೆಯನ್ನು ವಾಚ್ಯಗೊಳಿಸಿಬಿಡುತ್ತಾರೆ.

ಸಂಕಲನದ ಮತ್ತೊಂದು ಮುಖ್ಯಕಥೆ ‘ಏನಾಗುವುದೋ?’. ಉತ್ತರರಾಮ ಚರಿತೆಯ ಸೀತೆಯೊಂದಿಗೆ ಆರಂಭವಾಗುವ ಈ ಕಥೆ ವರ್ತಮಾನದೊಂದಿಗೆ ಸಂಬಂಧ ಕಲ್ಪಿಸಿಕೊಂಡಿರುವುದು ನಾರಣಪ್ಪನ ಮೂಲಕ.ಈತ ಬರೆದ ‘ಸೀತಾ ಪರಿತ್ಯಾಗ’ವನ್ನು ನಿರೂಪಕ ಓದುವ ಕ್ರಿಯೆಯಲ್ಲಿ ನಾರಣಪ್ಪನ ಬದುಕಿನಲ್ಲಿದ್ದ ಸೀತೆಯನ್ನೂ ಲಕ್ಷ್ಮಣನನ್ನೂ ಕಂಡುಕೊಳ್ಳುತ್ತಾನೆ. ಈ ಪ್ರಕ್ರಿಯೆಯಲ್ಲಿ ಅವನು ಶೋಧಿಸುವುದು ಸೀತೆ ಹೇಳಿದ ‘ಕರುಣಾಳು ರಾಘವನಲ್ಲಿ ತಪ್ಪಿಲ್ಲ’ ಎಂಬ ಮಾತಿನ ಅರ್ಥವನ್ನು ಅರಿಯುತ್ತಾನಷ್ಟೇ ಅಲ್ಲದೆ ನಾರಣಪ್ಪನಿಗೂ ಅರಿವು ಮೂಡಿಸುತ್ತಾನೆ.ಲಕ್ಷ್ಮಣ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋದ ನಂತರದ ಕ್ಷಣವೇ ಅಲ್ಲಿಗೆ ವಾಲ್ಮೀಕಿ ಬರಲಿಲ್ಲ. ಲಕ್ಷ್ಮಣ ಹೋದ ಮೇಲೆ ವಾಲ್ಮೀಕಿ ಆಕೆಯನ್ನು ಕಾಣುವ ನಡುವಣ ಅವಧಿಯಲ್ಲಿ ಏನಾಯಿತು ಎಂಬ ಪ್ರಶ್ನೆಯನ್ನಿಟ್ಟುಕೊಂಡೇ  ಈ ಕಥೆ ನಾರಣಪ್ಪನ ಬದುಕನ್ನು ಶೋಧಿಸುತ್ತದೆ. ಅಲ್ಲೇ ನಿರೂಪಕನಿಗೆ ನಾರಣಪ್ಪನ ಬದುಕಿನ ಲಕ್ಷ್ಮಣನಾದ ಹನುಮನಬೋವಿ ಸಿಗುತ್ತಾನೆ. ಈ ಲಕ್ಷ್ಮಣ ಸಿಕ್ಕಮೇಲೆ ‘ಸೀತಾಪರಿತ್ಯಾಗ’ದ ಹೊಸ ಅರ್ಥಗಳು ಹೊಳೆಯುತ್ತಾ ಹೋಗುತ್ತವೆ. ಸೀತೆಯ ಕಥೆಯ ಜೊತೆಗೇ ರಂಗಕ್ಕನ ಕಥೆಯೂ ವೆಂಕಟಾಚಾರಿಯ ಕಥೆಯೂ ಅನಾವರಣಗೊಳ್ಳುತ್ತದೆ.ಹೀಗೆ ಪದರ ಪದರಗಳಾಗಿ ವರ್ತಮಾನಕ್ಕೂ ತ್ರೇತಾಯುಗಕ್ಕೂ ಸಂಬಂಧ ಕಲ್ಪಿಸುತ್ತಾ ಸಾಗುವ ಕಥೆ, ಇಂದಿಗೂ ಸೀತೆಯರು ಅನುಭವಿಸಬೇಕಾದ ‘ಪುರುಷ ಪರೀಕ್ಷೆ’ಯೊಂದನ್ನು ಅನಾವರಣಗೊಳಿಸುತ್ತದೆ. ಬಹುಶಃ ಇದು ಇಷ್ಟಕ್ಕೇ ಮುಗಿದುಹೋಗಿದ್ದರೆ ತಂತ್ರಗಾರಿಕೆಯ ಈ ಕಥೆ ಮಾಯಾಜಾಲದ ಕಾರಣಕ್ಕಷ್ಟೇ ಹಿತವಾಗಿರುತ್ತಿತ್ತೇನೋ. ಕಥೆಗಾರ ಇಲ್ಲಿ ಅದನ್ನು ಮೀರಿ ನಿಲ್ಲುವ ಪ್ರಯತ್ನ ಮಾಡುತ್ತಾರೆ.ನಾರಣಪ್ಪನ ‘ಸೀತಾ ಪರಿತ್ಯಾಗ’ ನಾಟಕದ ಹಸ್ತಪ್ರತಿಯಲ್ಲಿ ನಿರೂಪಕ ಮಾಡುವ ವಾಲ್ಮೀಕೆಯ ಸಂಭಾಷಣೆಗೊಂದು ಸಾಲನ್ನು ತಿದ್ದುಪಡಿಯಾಗಿ ಸೇರಿಸುತ್ತಾನೆ– ‘ಮಗಳೇ ನಿನ್ನ ಪುರುಷ ಪರೀಕ್ಷೆ ಮುಗಿಯಿತು’. ಇಲ್ಲಿ ಆತ ಉದ್ಧರಿಸುವುದು ರಂಗಕ್ಕನನ್ನಷ್ಟೇ ಅಲ್ಲ. ಸಂಶಯದ ಬಂಧನದಿಂದ ನಾರಣಪ್ಪನನ್ನೂ ಬಿಡಿಸುತ್ತಾನೆ– ಶಾಶ್ವತವಾಗಿ.ಸಂಕಲನದಲ್ಲಿ ಗಮನಸೆಳೆಯುವ ಇನ್ನುಳಿದ ಕಥೆಗಳೆಂದರೆ ‘ಕಥೆ ಆರಂಭವಾಗುವುದಂತೂ ನಿಜ’, ‘ಇಷ್ಟಪ್ಪ ಶಿವನೇ’ ಮತ್ತು ‘ನೆಲೆ’. ಇನ್ನುಳಿದ ಕಥೆಗಳು ಕಥೆಗಾರರೇ ಸೃಷ್ಟಿಸಿರುವ ಮಾನದಂಡಗಳಲ್ಲೇ ಹಿಂದುಳಿದುಬಿಡುತ್ತವೆ. ಪಾತ್ರಗಳ ಒತ್ತಡಕ್ಕೆ ಬರೆಯುವ ಕ್ರಿಯೆಯಲ್ಲಿ ಹೀಗಾಗುವುದು ಸಹಜ ಎಂದು ಓದುಗರು ಸಮಾಧಾನ ಪಟ್ಟುಕೊಳ್ಳಬಹುದು.ಬಿರೇಬೆತ್ಲೆ ವೆಂಕಟಸಾಮಿ ಮತ್ತು ಇತರ ಕಥೆಗಳು

ಲೇ: ಸ. ರಘುನಾಥ್

ಬೆ: ರೂ. 80

ಪ್ರ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತ, ಗುಲ್ಬರ್ಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.