ಬುಧವಾರ, ಜುಲೈ 15, 2020
21 °C

ಪಿ.ಜಿ ಸೀಟುಗಳಿಗೆ ಗ್ರಾಮೀಣ ಸೇವೆ ಪರಿಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿ.ಜಿ ಸೀಟುಗಳಿಗೆ ಗ್ರಾಮೀಣ ಸೇವೆ ಪರಿಗಣನೆ

ಬೆಂಗಳೂರು: ‘ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ವರ್ಷ ಕಾಲ ಸೇವೆ ಸಲ್ಲಿಸುವ ವೈದ್ಯಾಧಿಕಾರಿಗಳಿಗೆ ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟು ಹಂಚಿಕೆಯಲ್ಲಿ ಶೇಕಡಾ 50ರಷ್ಟು ಮೀಸಲಾತಿ ನೀಡಲಾಗುವುದು’ ಎಂದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ತಿಳಿಸಿದರು.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.‘ವೈದ್ಯಕೀಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಅವಧಿಯ ಆಧಾರದ ಮೇಲೆ ಅವರಿಗೆ ಸ್ನಾತಕೋತ್ತರ ಪದವಿಯಲ್ಲಿ ವಿಶೇಷ ಅಂಕಗಳನ್ನು ನೀಡಲಾಗುವುದು. ಈ ಸಂಬಂಧ ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಾವಳಿಯಲ್ಲಿ ತಿದ್ದುಪಡಿ ತರಲಾಗಿದ್ದು, ಅದರಂತೆ ವೈದ್ಯಕೀಯ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆದವರನ್ನು ವೈದ್ಯಕೀಯ ಸಿಬ್ಬಂದಿ ಎಂದೇ ಪರಿಗಣಿಸಲಾಗುವುದು’ ಎಂದರು.ಬೇಕಿದೆ 20, ಸಿಕ್ಕಿದೆ 10: ‘ವೈದ್ಯಕೀಯ ಕಾಲೇಜುಗಳು ದಕ್ಷಿಣ ಭಾರತದಲ್ಲಿ ಹೆಚ್ಚು ಕೇಂದ್ರಿಕೃತವಾಗಿವೆ. ಉತ್ತರ ಪ್ರದೇಶ, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ವೈದ್ಯರ ಕೊರತೆಯಿದ್ದು, ಈ ಭಾಗದಲ್ಲಿ  ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಒಂದು ಕಾಲೇಜು ಸ್ಥಾಪನೆಗೆ 20 ಎಕರೆ ಅಗತ್ಯವಿದ್ದು, ಆದರೆ ಅಗತ್ಯಕ್ಕೆ ತಕ್ಕಷ್ಟು ಭೂಮಿ ಸಿಗುತ್ತಿಲ್ಲ. ಆದ್ದರಿಂದ 10 ಎಕರೆಯಲ್ಲೇ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ತಿಳಿಸಿದರು.‘ಸಾರ್ವಜನಿಕ ಆಸ್ಪತ್ರೆಗಳು ಇತ್ತೀಚೆಗೆ ಉತ್ತಮ ಸೇವೆ ಸಲ್ಲಿಸಲು ಪ್ರಯತ್ನಿಸುತ್ತಿವೆ. ಖಾಸಗಿ ಆಸ್ಪತ್ರೆಗಳು ನೀಡುತ್ತಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಳವಡಿಸುವುದು ಸವಾಲಿನ ವಿಷಯವಾಗಿದೆ. ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರನ್ನು ಶೋಷಿಸುತ್ತಿವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.‘ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಆರೋಗ್ಯ ಭದ್ರತೆಯನ್ನು ಒದಗಿಸುವುದರೊಂದಿಗೆ ನೈರ್ಮಲ್ಯ, ಪೋಷಕಾಂಶ ಮತ್ತು ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಹೆಚ್ಚು ಒತ್ತು ನೀಡುತ್ತಿದೆ’ ಎಂದು ತಿಳಿಸಿದರು.ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು 44 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ, 14 ಮಂದಿ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದರು.

ಧಾರವಾಡದ ಎಸ್‌ಡಿಎಂ ದಂತ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ಜುಲ್ಫಿನ್ ಶೇಖ್ ಮತ್ತು ಮಂಗಳೂರಿನ ಯೇನಪೋಯ ವೈದ್ಯಕೀಯ ಕಾಲೇಜಿನ ರೂಪಶ್ರೀ ಅವರು ದಂತ ಮತ್ತು ವೈದ್ಯಕೀಯ ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಪಡೆದುಕೊಂಡರು.

ವೈದ್ಯಕೀಯ ಸಚಿವ ಎಸ್.ಎ.ರಾಮದಾಸ್, ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ, ಕುಲಸಚಿವ ಡಾ.ಡಿ.ಪ್ರೇಮ್‌ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ.ಜಿ.ಎಸ್.ವೆಂಕಟೇಶ್ ಉಪಸ್ಥಿತರಿದ್ದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಘಟಿಕೋತ್ಸವ;

ಶೇಕಡ 50ರಷ್ಟು ಮೀಸಲು ಪ್ರಕಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.