ಸೋಮವಾರ, ಜೂನ್ 14, 2021
26 °C
2008–2012ರ ಅವಧಿಯ ಸಿಎಜಿ ಲೆಕ್ಕಪರಿಶೋಧನೆಯಲ್ಲಿ ಪತ್ತೆ

ಪಿಡಬ್ಲ್ಯುಡಿ ಟೆಂಡರ್: ರೂ.100.34 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2008ರಿಂದ 2012ರ ಅವಧಿಯಲ್ಲಿ ರಾಜ್ಯದ ಲೋಕೋಪಯೋಗಿ ಇಲಾಖೆ­ಯಲ್ಲಿನ (ಪಿಡಬ್ಲ್ಯುಡಿ) ಟೆಂಡರುಗಳ ದರ ಸಂಧಾನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿಯಮಕ್ಕೆ ವಿರುದ್ಧವಾಗಿ ಹೆಚ್ಚಿನ ದರ ಒಪ್ಪಿಕೊಂಡ ಪರಿಣಾಮ­ವಾಗಿ ಸರ್ಕಾರಕ್ಕೆ ರೂ.100.34 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ಅಂದಾಜು ಮಾಡಿದ್ದಾರೆ.ಇತ್ತೀಚೆಗೆ ವಿಧಾನಮಂಡಲದಲ್ಲಿ ಮಂಡಿಸಿರುವ ಸಿಎಜಿ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ರೂ.50 ಲಕ್ಷದಿಂದ ರೂ.5 ಕೋಟಿ ಮೊತ್ತದವರೆಗಿನ ಟೆಂಡರುಗಳ ದರ ಸಂಧಾನ ಪ್ರಕ್ರಿಯೆಯಲ್ಲಿ ಟೆಂಡರಿಗೆ ಇಟ್ಟ ಮೊತ್ತಕ್ಕೆ ಶೇಕಡ ಹತ್ತನ್ನು ಮೀರದಂತೆ ನಿರ್ಧಾರ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಆದರೆ, ಶೇ 11ರಿಂದ ಶೇ 24.6ರವರೆಗೂ ಹೆಚ್ಚಿನ ದರಗಳನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ಸಿಎಜಿ ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.ಈ ಅವಧಿಯಲ್ಲಿ ನಡೆದ ರೂ.1,473.78 ಕೋಟಿ ಮೊತ್ತದ 1,057 ಟೆಂಡರುಗಳ ಪ್ರಕ್ರಿಯೆಯಲ್ಲಿ ಶೇ 10ಕ್ಕಿಂತ ಹೆಚ್ಚಿನ ಹೆಚ್ಚುವರಿ ದರವನ್ನು ಒಪ್ಪಿಕೊಳ್ಳಲಾಗಿತ್ತು. ಅಂತಿಮವಾಗಿ ಟೆಂಡರು ಮೊತ್ತ ರೂ.1,721.49 ಕೋಟಿ ಮೊತ್ತಕ್ಕೆ ಬಿಡ್‌ಗಳನ್ನು ಒಪ್ಪಿಕೊಳ್ಳಲಾಗಿತ್ತು. ಮುಖ್ಯ ಎಂಜಿನಿಯರುಗಳ ವ್ಯಾಪ್ತಿಯಲ್ಲಿದ್ದ 442 ಟೆಂಡರುಗಳಲ್ಲಿ ದರ ಸಂಧಾನ ನಡೆಸದೇ ಮೊದಲ ಕರೆಯಲ್ಲಿಯೇ ಬಿಡ್‌ಗಳನ್ನು ಒಪ್ಪಿಕೊಳ್ಳಲಾಯಿತು. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಹೆಚ್ಚಿನ ದರಕ್ಕೆ ಟೆಂಡರುಗಳನ್ನು ಒಪ್ಪಿಕೊಳ್ಳುವ ಸಂಬಂಧ ಸರ್ಕಾರವು ಯಾವುದೇ ಆದೇಶಗಳನ್ನು ನೀಡಿರಲಿಲ್ಲ. ಆ ಬಳಿಕವೂ, ಟೆಂಡರು ಒಪ್ಪಿಕೊಂಡಿ­ರುವುದನ್ನು ಸಮರ್ಥಿಸುವಂತಹ ಆದೇಶವನ್ನು ನೀಡಿರಲಿಲ್ಲ. ಇಂತಹ ಬಿಡ್‌ಗಳನ್ನು ತಿರಸ್ಕರಿಸ­ಬೇಕಾದ ಟೆಂಡರು ಪರಿಶೀಲನಾ ಸಮಿತಿಯೇ, ಅವುಗಳನ್ನು ಒಪ್ಪಿಕೊಳ್ಳುವಂತೆ ಶಿಫಾರಸು ಮಾಡಿತ್ತು. ಇಲಾಖೆಯ ಕಾರ್ಯದರ್ಶಿ ಅವು­ಗಳನ್ನು ಒಪ್ಪಿ­ಕೊಂಡಿ­ದ್ದರು. ಟೆಂಡರು ಪರಿಶೀಲನಾ ಸಮಿತಿಯ ನಡವಳಿಕೆಗಳು ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿರಲಿಲ್ಲ ಎಂದು ಸಿಎಜಿ ತಿಳಿಸಿದೆ.ತುಂಡುಗುತ್ತಿಗೆ ಪರ್ವ: ರೂ.20 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಇ–ಸಂಗ್ರಹಣೆಯ ಮೂಲಕ ಟೆಂಡರು ಪ್ರಕ್ರಿಯೆ ನಡೆಸುವುದನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರ­ದರ್ಶಕತೆ ಕಾಯ್ದೆ ಕಡ್ಡಾಯಗೊಳಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ಒಂದೇ ಕಾಮಗಾರಿಯನ್ನು ರೂ.20 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ಬರುವಂತೆ ಹಲವು ತುಂಡುಗಳಾಗಿ ವಿಭಜಿಸಿ ಗುತ್ತಿಗೆ ನೀಡಲಾಗಿತ್ತು.2011–12ರಲ್ಲಿ ಬೆಂಗಳೂರಿನ ರಸ್ತೆಗಳು ಮತ್ತು ಕಟ್ಟಡಗಳ ವಿಭಾಗದಲ್ಲಿ 40 ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು 175 ತುಂಡುಗಳನ್ನಾಗಿ ವಿಭಜಿಸಲಾಗಿತ್ತು. ಇ–ಟೆಂಡರು ಪ್ರಕ್ರಿಯೆಯನ್ನು ನಡೆಸದೇ ಇದ್ದ ಕಾರಣ ಈ ಕಾಮಗಾರಿಗಳಲ್ಲಿ ಸರ್ಕಾರಕ್ಕೆ ರೂ.5.08 ಕೋಟಿ ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ಮತ್ತು ಕೋಲಾರ ವಿಭಾಗಗಳಲ್ಲಿ ರೂ.15.90 ಕೋಟಿ ಮೊತ್ತದ 12 ರಸ್ತೆ ಕಾಮಗಾರಿಗಳನ್ನು 136 ತುಂಡುಗಳನ್ನಾಗಿ ವಿಭಜಿಸಲಾಗಿತ್ತು. ಈ ಪೈಕಿ ರೂ.4.83 ಕೋಟಿ ಮೊತ್ತದ ಒಂದು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು 50 ತುಂಡುಗಳನ್ನಾಗಿ ವಿಭಜಿಸಲಾಗಿತ್ತು ಎಂದು ಸಿಎಜಿ ದಾಖಲಿಸಿದೆ.ಟೆಂಡರು ಪ್ರಕ್ರಿಯೆ ನಡೆಸುವಾಗ ಬಿಡ್‌ ಸಲ್ಲಿಕೆಗೆ ನಿಗದಿತ ಅವಧಿಯನ್ನು ನೀಡದಿರುವ ಪ್ರಕರಣಗಳ ಬಗ್ಗೆಯೂ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ. ಬಿಡ್‌ ಸಲ್ಲಿಸಲು ರೂ.2 ಕೋಟಿವರೆಗಿನ ಕಾಮಗಾರಿಗಳಿಗೆ 30 ದಿನ ಮತ್ತು ಅದಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ 60 ದಿನ ಕಾಲಾವಕಾಶ ಇರಬೇಕು ಎಂಬ ನಿಯಮವಿದೆ. ಆದರೆ, ಬಹುಪಾಲುಪ್ರಕರಣಗಳಲ್ಲಿ ಈ ನಿಯಮ ಪಾಲನೆ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.ಲೆಕ್ಕಪರಿಶೋಧನೆ ವ್ಯಾಪ್ತಿಯಲ್ಲಿದ್ದ ಹತ್ತು ವಿಭಾಗಗಳಲ್ಲಿ ರೂ.827.11 ಕೋಟಿ ಮೊತ್ತದ 466 ಕಾಮಗಾರಿಗಳ ಟೆಂಡರು ಪ್ರಕ್ರಿಯೆಯಲ್ಲಿ ನಿಗದಿತ ಕಾಲಾವಕಾಶ ನೀಡದೆ ನಿಯಮ ಉಲ್ಲಂಘಿಸಲಾಗಿದೆ. ರೂ.2 ಕೋಟಿವರೆಗಿನ 364 ಕಾಮಗಾರಿಗಳ ಪೈಕಿ 280 ಕಾಮಗಾರಿಗಳ ಟೆಂಡರು ಪ್ರಕ್ರಿಯೆಯಲ್ಲಿ ಈ ರೀತಿ ನಿಯಮ ಉಲ್ಲಂಘನೆ ನಡೆದಿದೆ. ರೂ.2 ಕೋಟಿಗಿಂತ ಹೆಚ್ಚು ಮೊತ್ತದ 102 ಕಾಮಗಾರಿಗಳಲ್ಲಿ 89 ಕಾಮಗಾರಿಗಳ ಟೆಂಡರು ಪ್ರಕ್ರಿಯೆಲ್ಲಿ ನಿಗದಿತ ಕಾಲಾವಕಾಶ ನೀಡಿರಲಿಲ್ಲ ಎಂದು ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.