ಶನಿವಾರ, ಜನವರಿ 18, 2020
21 °C

ಪುನರ್‌ವಿಂಗಡಣೆ: ಅಭ್ಯರ್ಥಿಗಳ ತಳಮಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರುದ್ರಪ್ರಯಾಗ (ಪಿಟಿಐ): ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ಕ್ಷೇತ್ರ ಪುನರ್‌ವಿಂಗಡಣೆಯಿಂದಾಗಿ ಅನೇಕ ಮುಖಂಡರು ಹೊಸದಾಗಿ ಅಸ್ತಿತ್ವಕ್ಕೆ ಬಂದ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದರಿಂದ, ಅಭ್ಯರ್ಥಿಗಳು ಹೊರಗಿನವರು ಎಂಬ ಭಾವನೆ ಜನರಲ್ಲಿ ಮೂಡಿದೆ.ಇಂತಹ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಕೂಡ ಸೇರಿದ್ದಾರೆ. ಬಿಜೆಪಿ ಪ್ರಚಾರದ ನೇತೃತ್ವ ವಹಿಸಿರುವ ಖಂಡೂರಿ ಕಳೆದ ಬಾರಿ ಧುಮಾಕೋಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಗ ಧುಮಾಕೋಟ್‌ನ ಹಲವು ಭಾಗಗಳನ್ನು ಅನ್ಯ ಕ್ಷೇತ್ರದಲ್ಲಿ ವಿಲೀನಗೊಳಿಸಿರುವುದರಿಂದ ಖಂಡೂರಿ ಪೊದಾರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.`ಮುಖ್ಯಮಂತ್ರಿಯಾಗಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಗೊತ್ತಿದೆ. ಹೀಗಾಗಿ ಗೆಲ್ಲುವ ವಿಶ್ವಾಸ ಇದೆ~ ಎಂದು ಅವರು ಹೇಳಿದ್ದಾರೆ.ಪ್ರಮುಖ ಕಾಂಗ್ರೆಸ್ ಮುಖಂಡ ಹರಕ್ ಸಿಂಗ್ ರಾವತ್ ಕೂಡ ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಬದಲಾಗಿ ರುದ್ರಪ್ರಯಾಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಥಾಲಿಸೆನ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಮಾಜಿ ಮುಖ್ಯಮಂತ್ರಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರೂ ಗೆಲುವಿಗೆ ಪ್ರಯಾಸಪಡಬೇಕಾಗಿದೆ. ಏಕೆಂದರೆ ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಈ ಕ್ಷೇತ್ರ ಶ್ರೀನಗರ ಮತಕ್ಷೇತ್ರದ ಭಾಗವಾಗಿತ್ತು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಯಶಪಾಲ್ ಆರ್ಯ ಮುಕ್ತೇಶ್ವರ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿದ್ದರು. ಆದರೆ, ಈಗ ಅವರು ಅನಿವಾರ್ಯವಾಗಿ ಬಜಪುರ್ ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿ ಬಂದಿದೆ.ಪಕ್ಷೇತರರದ್ದೇ ಅಡ್ಡಿ


ಉತ್ತರಾಖಂಡ ಚುನಾವಣೆಯಲ್ಲಿ ಸಾಮಾನ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇರುತ್ತದೆ. ಆದರೆ ಈ ಬಾರಿ ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಇರುವುದರಿಂದ ಎರಡೂ ಪಕ್ಷಗಳಲ್ಲಿ ತಳಮಳ ಉಂಟಾಗಿದೆ.ರಾಜ್ಯದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 800 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕೆಲ ಕ್ಷೇತ್ರಗಳಲ್ಲಂತೂ ಬಂಡಾಯ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)