ಗುರುವಾರ , ಮೇ 13, 2021
16 °C

ಪುಸ್ತಕ ಪ್ರೀತಿಯ ಕೊಡುಕೊಳ್ಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನೀವು ಪುಸ್ತಕ ಪ್ರೀತಿಸುತ್ತೀರಾ? ಪುಸ್ತಕ ಮತ್ತು ಅದರ ಪ್ರೀತಿಯನ್ನು ಹಂಚುವ ಆಸೆ ಹೊತ್ತವರ `ಒನ್ ಸ್ಟಾಪ್ ಶಾಪ್~ ಇದು. ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಪರಿಚಯ, ವಿಮರ್ಶೆ ಇಲ್ಲಿ ಸಿಗುವಂತೆ ಮಾಡುವುದು ನಮ್ಮ ಆಶಯ. ಇದು, ನಮ್ಮ ಪತ್ರಿಕೆಗಳಲ್ಲಿ ಬರುವ ಪುಸ್ತಕ ಪರಿಚಯ-ವಿಮರ್ಶೆಯ ಡೈಜೆಸ್ಟ್ ಸಹ. ನೀವು ಓದಿದ, ಮೆಚ್ಚಿದ, ಎಲ್ಲರೂ ಓದಲೇಬೇಕೆಂದು ನೀವು ಬಯಸುವ ಪುಸ್ತಕದ ಬಗ್ಗೆ ಬರೆಯಿರಿ. ನಿಮಗೆ ಸಿಗದ ಪುಸ್ತಕ ಎಲ್ಲಿ ಸಿಗಬಹುದು ಎಂಬ ಬಗ್ಗೆ ಪ್ರಶ್ನೆ ಕೇಳಿ. ನೀವು ಲೇಖಕರು ಅಥವಾ ಪ್ರಕಾಶಕರಾಗಿದ್ದರೆ ನಿಮ್ಮ ಪುಸ್ತಕಗಳ ಮಾಹಿತಿ ಕಳಿಸಿ. ಪುಸ್ತಕದ ಎಲ್ಲಾ ಮಗ್ಗುಲುಗಳನ್ನು ಮುಟ್ಟುವ ನಮ್ಮ ಆಶಯದಲ್ಲಿ ಕೈಜೋಡಿಸಿ”.ಮೇಲಿನದು, `ಪುಸ್ತಕ ಪ್ರೀತಿ~ (http://pusthakapreethi.wordpress.com)  ಬ್ಲಾಗ್‌ನ ಆಶಯನುಡಿ. ಹೆಸರಿಗೆ ತಕ್ಕಂತೆ ಪುಸ್ತಕಗಳಿಗೆ ಮೀಸಲಾದ ಇ-ವೇದಿಕೆಯಿದು. ಕನ್ನಡ ಪುಸ್ತಕ ಜಗತ್ತಿನ ತುಣುಕೊಂದು ಇಲ್ಲಿ ಅನಾವರಣಗೊಂಡಂತಿದೆ.ಬೆಂಗಳೂರು ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ನಡೆಯುವ ಪುಸ್ತಕ ಬಿಡುಗಡೆಯ ವಿವರಗಳಿಗೆ `ಪುಸ್ತಕ ಪ್ರೀತಿ~ ನೋಟಿಸ್ ಬೋರ್ಡ್‌ನಂತೆ ಕಾರ್ಯ ನಿರ್ವಹಿಸುತ್ತಿದೆ. ಈ ಮೂಲಕ ಪುಸ್ತಕದೋದ್ಯಮದ ಈ ಕ್ಷಣದ ಚಟುವಟಿಕೆಗಳನ್ನು ದಾಖಲಿಸುವ ಕೆಲಸವನ್ನು ತನ್ನ ಮಿತಿಯಲ್ಲಿಯೇ ನಿರ್ವಹಿಸುತ್ತಿದೆ. ಅಂತೆಯೇ, ಪುಸ್ತಕಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ವಿಮರ್ಶೆ ಬರಹಗಳು ಹಾಗೂ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಮಾಹಿತಿ ತುಣುಕುಗಳನ್ನು ತನ್ನಲ್ಲಿ ಸಂಕಲಿಸುತ್ತಿದೆ.`ಪುಸ್ತಕಪ್ರೀತಿ~ ಹೆಸರಿನಲ್ಲೇ ನಡೆಯುತ್ತಿರುವ ಈ ಬ್ಲಾಗ್, ಕನ್ನಡ ನೆಲದಿಂದ ದೂರ ಇರುವವರಿಗೆ ಸಾಹಿತ್ಯ ಲೋಕದ ಹೊಸ ಬರವಣಿಗೆಯ ಬಗ್ಗೆ ಕಿರು ಪರಿಚಯ ಮಾಡಿಕೊಡುವಂತಿದೆ. ಸುಮಾರು ಐದು ವರ್ಷಗಳಿಂದ ಈ ಪುಸ್ತಕ ಪ್ರೀತಿ ನಿರಂತರವಾಗಿರುವುದು ವಿಶೇಷ.`ಪುಸ್ತಕಪ್ರೀತಿ~ಯ ಬರಹದ ಮಾದರಿಗೆ `ರೊಟ್ಟಿ ಮತ್ತು ಗುಲಾಬಿ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ~ ಎನ್ನುವ ಬರಹವನ್ನು ನೋಡಿ:ರೊಟ್ಟಿ- ತುಂಬಿದ ಹೊಟ್ಟೆಯ ಹಾಗೂ ಗುಲಾಬಿ- ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ~ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ.ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ ಸ್ಥಾನಮಾನ ಸಿಕ್ಕಿದೆ. ಈ ಕೊರತೆಗಳ ನಿರ್ಮೂಲನೆಗಾಗಿ ನಾವು `ವಿಶ್ವ ಮಹಿಳಾ ದಿನ~ದ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಾಗಿದೆ.ಮಹಿಳೆಯ ಗುಣಗಾನ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ `ಕ್ಷಮೆ~ ಎನ್ನುವ ಗುಣವನ್ನು ಹೊರಿಸಿ ತಾನು ಅನುಭವಿಸುವ ಹಸಿವು ಅಪಮಾನಗಳನ್ನು ಸಹಿಸಿಕೊಂಡಿರು ಎನ್ನುವ, `ಕ್ಷಮಯಾ ಧರಿತ್ರೀ~ ಎನ್ನುವ ಧರ್ಮವಾಕ್ಯ, ಮಹಿಳೆಯರನ್ನು ಹೋರಾಟದ ಹಾದಿಯಿಂದ ವಿಮುಖಳಾಗಿಸುವ ಒಂದು ಹುನ್ನಾರ ಎನ್ನುವುದು ಮಹಿಳೆ ಅರಿತಿರಬೇಕು. ಸಮ್ಮೋನ, ಗೌರವಗಳಿಲ್ಲದ ಬರಿಯ ಹೊಗಳಿಕೆ ಇನ್ನು ಸಾಕು.ದುಡಿಮೆಯ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಹಾಗೂ ಗೌರವಾನ್ವಿತ ಬದುಕನ್ನು ನಡೆಸುವುದೇ ಎಲ್ಲಾ ಮಹಿಳೆಯರ ಗುರಿಯಾಗಿರಲಿ. ಯಾವುದೇ ರೀತಿಯ ದುಡಿಮೆಯಿರಲಿ ಅದು ಮಹಿಳೆಯ ಹಸಿವನ್ನು ನೀಗುವುದು ಮಾತ್ರವಲ್ಲದೇ ಅವಳು ಗೌರವ ಪಡೆಯಲು ಅನುಕೂಲವಾಗುವಂತಿರಬೇಕು. ಅಂತಹ ದುಡಿಮೆಯ ಹಕ್ಕು ಮಹಿಳೆಯರದಾಗಬೇಕು. ಆಗಲಷ್ಟೇ ನೂರು ವರ್ಷಗಳಿಂದ ವಿವಿಧ ಬೇಡಿಕೆಗಳನ್ನಿಟ್ಟು ಹೋರಾಡಿದ ಮಹಿಳೆಯರ ಹೋರಾಟದ ಯಶಸ್ವಿಯಾಗಿದೆ ಎನ್ನಬಹುದು... 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.