ಮಂಗಳವಾರ, ಏಪ್ರಿಲ್ 20, 2021
26 °C

ಪುಸ್ತಕ ಪ್ರೇಮಿಗಳ ವಿಹಾರ

ಪ್ರಜಾವಾಣಿ ವಾರ್ತೆ/ ರಾಮರಡ್ಡಿ ಅಳವಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಸದಾ ಪುಸ್ತಕಗಳಿಗಾಗಿ ತಡಕಾಡುವ ಪುಸ್ತಕ ಪ್ರೇಮಿಗಳಿಗೆ... ಅಯ್ಯೋ ಆ ಪುಸ್ತಕ ಸಿಗ್ತಾ ಇಲ್ಲ ಮಾರಾಯಾ... ಎಂದು ಚಡಪಡಿಸುವ ಪುಸ್ತಕ ಹುಳುಗಳೇ ಎಂದು ಕರೆಯಲ್ಪಡುವ ಪುಸ್ತಕ ಪ್ರಿಯರಿಗೆ...ಮಕ್ಕಳಿಗೆ ವಿಭಿನ್ನ ಮತ್ತು ವಿಶಿಷ್ಟ ವರ್ಣರಂಜಿತ ಸಚಿತ್ರ ಪುಸ್ತಕಗಳು, ಚಿತ್ರಪಟಗಳನ್ನು ಪರಿಚಯಿಸಬೇಕು ಎಂಬ ಪಾಲಕರು ಮತ್ತು ಶಿಕ್ಷಕ ಸಮುದಾಯದ ಆಸಕ್ತಿ ಮನಗಂಡ ಬೆಂಗಳೂರಿನ ನವ ಕರ್ನಾಟಕ ಪಬ್ಲಿಕೇಷನ್ಸ್ ಸಂಸ್ಥೆಯು ನಗರದಲ್ಲಿ `ನವ ಕರ್ನಾಟಕ ಪುಸ್ತಕ ಪ್ರದರ್ಶನ~ ಆಯೋಜಿಸಿದೆ.ಎರಡು ವರ್ಷಕ್ಕೊಮ್ಮೆ ನವ ಕರ್ನಾಟಕ ಸಂಸ್ಥೆಯು ಇಲ್ಲಿ ಈ ರೀತಿ ಪುಸ್ತಕ ಪ್ರದರ್ಶನ ಆಯೋಜಿಸುತ್ತ ಬಂದಿದ್ದು, ಈ ವರ್ಷ ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದ ಮುಖ್ಯ ದ್ವಾರದ ಬಳಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ ಹಾಕಿದೆ.

 

ಈಗಾಗಲೇ ಸುಮಾರು ಒಂದುವರೆ ತಿಂಗಳ ಹಿಂದೆಯೇ ಈ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆದಿದೆ. ರಾಯಚೂರು ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಪುಸ್ತಕ ಪ್ರಿಯರು, ಆಸಕ್ತ ಓದುಗರು ಪುಸ್ತಕ ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ಖರೀದಿ ಮಾಡಿದ್ದಾರೆ.ಕನ್ನಡ ವ್ಯಾಕರಣ, ಇಂಗ್ಲಿಷ್ ವ್ಯಾಕರಣ, ಪರಿಸರ,  ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು, ಪ್ರಸಿದ್ಧ ಸಾಹಿತಿಗಳು ಬರೆದಂಥವೂ ಸೇರಿದಂತೆ ಅನೇಕ ಬರಹಗಾರರು ಬರೆದ ಕನ್ನಡ ಮತ್ತು ಇಂಗ್ಲಿಷ್ ಕಾದಂಬರಿ, ನೀತಿ ಕಥೆಗಳು, ಮನರಂಜನೆ ಕಥೆಗಳು, ನಿಘಂಟುಗಳು, ಸಾಮಾನ್ಯ ಜ್ಞಾನ, ಕ್ವಿಜ್, ಮ್ಯಾಜಿಕ್, ಚಿತ್ರಕಲೆ, ವಿಜ್ಞಾನ, ತಂತ್ರಜ್ಞಾನ, ಜೀವನ ಚರಿತ್ರೆ ಪುಸ್ತಕಗಳು, ಆರೋಗ್ಯ, ವ್ಯಕ್ತಿತ್ವ ವಿಕಸನ, ಸ್ಪೋಕನ ಇಂಗ್ಲಿಷ್, ಯೋಗ, ನಕಾಶೆ,  ವಿಶ್ವಕೋಶ,  ಅಡುಗೆ ಪುಸ್ತಕ, ಕ್ರೀಡೆ, ಧಾರ್ಮಿಕ, ಪಕ್ಷಿ ಪ್ರಾಣಿಗಳು, ವಚನ ಸಾಹಿತ್ಯ, ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳ ರಸ್ತೆ ನಕಾಶೆ,  ವಾಹನಗಳು, ಸರ್ಕಾರದ ಕಂದಾಯ ಇಲಾಖೆ ಕಾಯ್ದೆ ಕುರಿತ ಪುಸ್ತಕ, ಈಚೆಗಷ್ಟೇ ರಾಜ್ಯ ಸರ್ಕಾರ ಜಾರಿಗೊಳಿಸಿದ ನಾಗರಿಕ ಸನ್ನದು `ಸಕಾಲ~ ಸೇವೆ ಕುರಿತು ಮುರುಳೀಧರ ಅವರು ಬರೆದ ಸಕಾಲ ಎಂಬ ಪುಸ್ತಕ, ರಂಗೋಲಿ, ಕೃಷಿ  ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷ್  ಭಾಷೆಯಲ್ಲಿನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ನವ ಕರ್ನಾಟಕ ಪುಸ್ತಕ ಪ್ರಕಾಶನ ಸಂಸ್ಥೆ ಮಾಡಿದೆ.ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ಡಿ.ವಿ ಗುಂಡಪ್ಪ, ಗುರುರಾಜ ಕರ್ಜಗಿ, ಡಾ. ಗಿರೀಶ ಕಾರ್ನಾಡ, ಡಾ. ಚಂದ್ರಶೇಖರ ಕಂಬಾರ,  ಶರ್ಲಾಕ್ ಹೋಮ್ಸ, ಆರ್.ಕೆ ನಾರಾಯಣ, ಡಾ.ಯು.ಆರ್ ಅನಂತಮೂರ್ತಿ, ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ, ಯಂಡಮೂರಿ ವಿರೇಂದ್ರನಾಥ್, ರವಿ ಬೆಳಗೆರೆ, ರಾಮದೇವ ಬಾಬಾ ಸೇರಿದಂತೆ ಹಲವು ಪ್ರಖ್ಯಾತ ಲೇಖಕರರ ವಿವಿಧ ಕೃತಿಗಳು ಪ್ರದರ್ಶನದಲ್ಲಿವೆ.ಈಗಾಗಲೇ ಸಾವಿರಾರು ಪುಸ್ತಕಗಳು ಒಂದುವರೆ ತಿಂಗಳಲ್ಲಿ ಮಾರಾಟ ಆಗಿವೆ. ಸುಮಾರು 60ರಿಂದ 70 ಸಾವಿರ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಮೂರು ತಿಂಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಗೆ ನಿಗದಿಪಡಿಸಲಾಗಿದೆ. ಇನ್ನೂ ಒಂದುವರೆ ತಿಂಗಳು ಈ ಪುಸ್ತಕ ಪ್ರದರ್ಶನ ಇರುತ್ತದೆ.

 

ನವ ಕರ್ನಾಟಕ ಪ್ರಕಾಶನ ಪ್ರಕಟಿಸಿದ ಪುಸ್ತಕ ಖರೀದಿಸಿದರೆ ಶೇ 10ರಷ್ಟು ರಿಯಾಯ್ತಿ. ಬೇರೆ ಪ್ರಕಾಶನ ಸಂಸ್ಥೆ ಪ್ರಕಟಿಸಿದ ಪುಸ್ತಕಕ್ಕೆ ಶೇ 5 ರಿಯಾಯ್ತಿ ನಿಗದಿಪಡಿಸಲಾಗಿದೆ.  ಎಲ್ಲ ರಂಗದವರಿಗೂ, ಎಲ್ಲ ವಯೋಮಾನದವರಿಗೂ ಬೇಕಾದ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರಕಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ನವ ಕರ್ನಾಟಕ ಪುಸ್ತಕ ಪ್ರದರ್ಶನ ಮಳಿಗೆ ನಿರ್ವಾಹಕ ಹರೀಶ್ `ಪ್ರಜಾವಾಣಿ~ಗೆ ತಿಳಿಸಿದರು.ವಿಶೇಷವಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಶಾಲೆಯ ಗ್ರಂಥಾಲಯಕ್ಕೆ, ಮಕ್ಕಳ ಕಲಿಕೆಗೆ ಉಪಯುಕ್ತ ಪುಸ್ತಕಗಳನ್ನು ಈ ಮಳಿಗೆಯಲ್ಲಿ ಖರೀದಿಸಲು ಆಸಕ್ತಿವಹಿಸಿದರೆ ಅಂಥ ಶಾಲೆಗಳಿಗೆ ಹೆಚ್ಚು ರಿಯಾಯಿತಿ ದರದಲ್ಲಿ ಪುಸ್ತಕ ದೊರಕಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.