ಸೋಮವಾರ, ಮೇ 23, 2022
21 °C

ಪೆನ್ ಹುಡುಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆನ್ ಹುಡುಗಿ

ತುಮಕೂರಿನ ಹಳೆ ಮಾರುಕಟ್ಟೆ ಚೌಕದ ಎಂಪ್ರೆಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಂಜನಾ ಗಂಗಾಧರ್ ದೇಶ್ ಭಂಡಾರಿ ವೇಸ್ಟ್ ಪೇಪರ್‌ಗಳಿಂದ ಪೆನ್ ತಯಾರಿಸುವುದರಲ್ಲಿ ಸಿದ್ಧಹಸ್ತೆ.ತ್ಯಾಜ್ಯ ಪ್ಲಾಸ್ಟಿಕ್, ಮರದ ತುಂಡು, ಕಾಗದದ ಚೂರು, ಮೂಲೆ ಸೇರಿದ ಬಟ್ಟೆಗಳು, ಗುಜರಿ ಸೇರಬೇಕಿದ್ದ ಚಿಕ್ಕ ಕಬ್ಬಿಣದ ತುಂಡುಗಳು, ಹಳೆಯ ನೋಟ್ ಪುಸ್ತಕ, ವೃತ್ತಪತ್ರಿಕೆ, ನಿಯತಕಾಲಿಕೆಗಳಿಗೆ ತನ್ನ ಬುದ್ಧಿ ಹಾಗೂ ಚಾಣಾಕ್ಷತೆಯ ಮೂಲಕ ವಿಶೇಷ ರೂಪ ಕೊಡುವುದು ಸಂಜನಾ ವೈಶಿಷ್ಟ್ಯ.ತುಮಕೂರಿನ ಮಾನಸ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಸಂಜನಾಳ ಅಮ್ಮ ವಿದ್ಯಾ ವಿಶೇಷ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡಲು ಅಮ್ಮ ತಯಾರಿಸುವ ಪರಿಕರಗಳನ್ನು ಸೂಕ್ಷ್ಮವಾಗಿ ಗಮನಿಸಿಯೇ ಸಂಜನಾ ಇದನ್ನೆಲ್ಲ ಕಲಿತಿರುವುದು ವಿಶೇಷ.ಕಳೆದ ಎರಡು ವರ್ಷಗಳಿಂದ ಅಮ್ಮನ ಕಾರ್ಯಚಟುವಟಿಕೆಯನ್ನು ಗಮನಿಸುತ್ತಿರುವ ಸಂಜನಾ ತಾನು ರೂಪಿಸುವ ವಸ್ತುಗಳ ವಿನ್ಯಾಸ, ಆಕೃತಿ ಹಾಗೂ ಇತರ ಪರಿಕರಗಳಲ್ಲಿ ಶೀಘ್ರ ಬದಲಾವಣೆ ತಂದುಕೊಳ್ಳುತ್ತಾಳೆ. ಸ್ವತಃ ರೂಪಿಸಿದ ವಿಶೇಷ ವಿನ್ಯಾಸಗಳನ್ನು ಮೆಟ್ರಿಕ್ ಮೇಳಗಳಲ್ಲಿ ಪ್ರದರ್ಶನಕ್ಕೆ ಇಟ್ಟು ಹಲವು ಬಹುಮಾನ ಪಡೆದುಕೊಂಡಿದ್ದಾರೆ. ಶಾಲೆಯಲ್ಲಿ ಶಿಕ್ಷಕರಿಗೆ ಹಾಗೂ ಸಹಪಾಠಿಗಳಿಗೆ ತಾನು ರೂಪಿಸಿದ ವಸ್ತುಗಳ ಮಹತ್ವವನ್ನು ವಿವರಿಸಿ ಹೇಳುವುದು ಕೂಡ ನಡೆಯುತ್ತದೆ.ರದ್ದಿ ಪೇಪರ್ ಮತ್ತು ರಿಫಿಲ್‌ಗಳಿಂದ ಲೇಖನಿ ತಯಾರಿಸುವುದು ಸಂಜನಾಳಿಗೆ ಯಶಸ್ಸು ತಂದುಕೊಟ್ಟಿದೆ. ಈ ಶಾಲೆಯ ಹಲವು ಮಕ್ಕಳಲ್ಲಿ `ಸಂಜನಾ~ ಬ್ರಾಂಡ್ ಪೆನ್‌ಗಳಿವೆ. ಕೇವಲ ಒಂದು ರೂಪಾಯಿಗೆ ಒಂದು ಪೆನ್ ಇಲ್ಲಿ ಲಭ್ಯ. ಇದೇ ಹಣವನ್ನು ಪಠ್ಯ ವಸ್ತುಗಳ ಖರೀದಿಗೆ ಸಂಜನಾ ಬಳಸಿಕೊಳ್ಳುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಪೆನ್‌ಗಳನ್ನು ಉಚಿತವಾಗಿ ನೀಡುತ್ತಾರೆ.ರಕ್ಷಾ ಬಂಧನ ಸಂದರ್ಭದಲ್ಲಿ ಸ್ನೇಹದ ಸಂಕೇತವಾಗಿ ರಾಕಿಗಳ ಉತ್ಪಾದನೆಯಲ್ಲೂ ಈಕೆಯದು ಸಿದ್ಧಹಸ್ತ. ಅತ್ಯಂತ ಕಡಿಮೆ ದರದಲ್ಲಿ ಅತ್ಯಂತ ಸುಂದರ ರಾಕಿಗಳನ್ನು ತಯಾರಿಸಿ ಸ್ನೇಹಿತರಿಗೆ ಕಟ್ಟಿ ಸಂತಸ ಪಡುತ್ತಾರೆ.ರದ್ದಿ ಕಾಗದದಲ್ಲಿ ಸೂರ್ಯೋದಯ, ಪ್ರಕೃತಿಯ ಸೊಬಗಿನಲ್ಲಿ ಚಲಿಸುತ್ತಿರುವ ರೈಲು, ಗಿಳಿ ಹಾರುವ ವೈಖರಿ, ನವಿಲಿನ ನೃತ್ಯ, ಕಪ್ಪೆ, ಹೀಗೆ ಹಲವು ವಿಶೇಷಾಕೃತಿಗಳನ್ನು ಕಡಿಮೆ ಅವಧಿಯಲ್ಲಿ ಮಾಡುವ ಕೌಶಲ್ಯ ಇವರದು.ಸಂಜನಾ ರೂಪಿಸುವ ಹಲವು ಕಲಾಕೃತಿಗಳಲ್ಲಿ ಪರಿಸರ ಪ್ರೀತಿ ಎದ್ದು ಕಾಣುತ್ತದೆ. ಸಂಜನಾ ರೂಪಿಸುವ ಗ್ರೀಟಿಂಗ್ಸ್ ಕಾರ್ಡ್‌ಗಳು ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಇವು ಅಂಗಡಿಯಲ್ಲಿ ದೊರೆಯುವ ಕಾರ್ಡ್‌ಗಳಿಂತಲೂ ಚೆನ್ನಾಗಿವೆ ಎಂದು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸುತ್ತಾರೆ.ಹಳೆ ಬಟ್ಟೆಗಳಲ್ಲಿ ಇರುವ ಬಣ್ಣಬಣ್ಣದ ಚಿತ್ರಾಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ದಪ್ಪ ಡ್ರಾಯಿಂಗ್ ಕಾಗದಕ್ಕೆ ಅಂಟಿಸುವ ಮೂಲಕ ವಿವಿಧ ಆಕೃತಿಗಳಲ್ಲಿ ವಿನ್ಯಾಸ ಮಾಡುವುದು ಈಕೆಯ ಮತ್ತೊಂದು ಜಾಣ್ಮೆ. ಹಳೆ ಬಟ್ಟೆಗಳಿಂದ ಮ್ಯಾಟ್, ಚಾಕಲೇಟ್ ಪೇಪರ್‌ಗಳಲ್ಲಿ ಹೂವಿನಹಾರ, ಬಳೆಗಳಲ್ಲಿ ಹಲವು ಆಕೃತಿಗಳು, ಪ್ಲಾಸ್ಟಿಕ್ ಪೇಪರ್‌ನಲ್ಲಿ ಗುಲಾಬಿ, ಕಮಲ, ಮಲ್ಲಿಗೆ ಹಾಗೂ ಇತರ ಕಣ್ಮನಸೆಳೆಯುವ ಹೂವುಗಳನ್ನು ಈಕೆ ರೂಪಿಸುತ್ತಾಳೆ.ತಂದೆ ಗಂಗಾಧರ್ ಗೋವಿಂದ ದೇಶ ಬಂಡಾರಿ ಅವರು ವೃತ್ತಿಯಲ್ಲಿ ಟೈಲರ್. ಹಾಗಾಗಿ ಅಂಗಡಿಯಲ್ಲಿ ಉಳಿದ ಬಟ್ಟೆ ಪೀಸ್‌ಗಳೂ ಮ್ಯಾಟ್ ತಯಾರಿಕೆಗೆ ಬಳಕೆಯಾಗುತ್ತಿದೆ.`ಸಂಜನಾ ಪಠ್ಯ ವಿಷಯದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡಿದ್ದಾಳೆ. ಪಠ್ಯೇತರ ಚಟುವಟಿಕೆಯಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾಳೆ~ ಎಂದು ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ಕಮಲಮ್ಮ ಹೆಮ್ಮೆ ವ್ಯಕ್ತಪಡಿಸುತ್ತಾರೆ.`5ನೇ ತರಗತಿಯಲ್ಲಿರುವಾಗಲೇ ಕಲಾಕೃತಿ ರೂಪಿಸುವ ವಿಚಾರದಲ್ಲಿ ಹೆಚ್ಚು ಲಕ್ಷ್ಯಕೊಟ್ಟು ತೊಡಗಿಸಿಕೊಂಡೆ. ಮನೆ ಮತ್ತು ಶಾಲೆಯಲ್ಲಿ ಪ್ರೋತ್ಸಾಹ ಸಿಕ್ಕ ಕಾರಣ ಹಲವು ವಿನ್ಯಾಸಗಳನ್ನು ರೂಪಿಸಲು ಹಾಗೂ ಹೊಸತನ್ನು ಕಲಿಯಲು ಸಾಧ್ಯವಾಯಿತು~ ಎನ್ನುತ್ತಾರೆ ಸಂಜನಾ.`ಮಗಳು ನಮ್ಮ ಮನೆತನಕ್ಕೆ ಕೀರ್ತಿ ತರುತ್ತಾಳೆ. ಅಕೆಯ ಪ್ರತಿಭೆಯನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು~ ಎಂದು ಹೆತ್ತವರು ಆಶಯ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.