ಬುಧವಾರ, ಜನವರಿ 29, 2020
29 °C

ಪೊಲೀಸರಿಗೆ ವಿಶೇಷ ಸೌಕರ್ಯ: ಸಿಎಂ ಪತ್ನಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಿನದ 24 ಗಂಟೆಯೂ ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಶ್ರಮಿಸುವ ಪೊಲೀಸರಿಗೆ ವಿಶೇಷ ಸೌಕರ್ಯ ನೀಡುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಪತ್ನಿ ಡಾಟಿ ಅಭಿಪ್ರಾಯಪಟ್ಟರು.ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಕ್ರೀಡಾಂಗಣದಲ್ಲಿ ರಾಜ್ಯ ಪೊಲೀಸ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ `2011ನೇ ಸಾಲಿನ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ~ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.  ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ಅಧಿಕಾರಿಗಳಿಗೆ ಬಹುಮಾನ ನೀಡುವ ಅವಕಾಶ ಸಿಕ್ಕಿರುವುದು ನನಗೆ ಸಂತಸ ತಂದಿದೆ. ವರ್ಷವಿಡೀ ಸಾರ್ವಜನಿಕರ ಹಿತರಕ್ಷಣೆಗಾಗಿ ಶ್ರಮಿಸುವ ಪೊಲೀಸರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಇಂತಹ ಯೋಜನೆಗಳನ್ನು ಸರ್ಕಾರ ಸಾಕಾರಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ವೈಯಕ್ತಿಕ ಸಾಧನೆ ಮಾಡಿದ ಆಟಗಾರರಿಗೆ 25 ಸಾವಿರ ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಘೋಷಸಿದ್ದಾರೆ. ಬೆಂಗಳೂರು ಜಿಲ್ಲಾ ಪೊಲೀಸ್ ತಂಡದ ಎನ್.ಉಷಾರಾಣಿ ಹಾಗೂ ನಗರ ಪೊಲೀಸ್ ತಂಡದ ಜಗದೀಶ್ ಅವರು ಶನಿವಾರ ಈ ಬಹುಮಾನವನ್ನು ಡಿಜಿಪಿ ಶಂಕರ ಬಿದರಿ ಅವರಿಂದ ಸ್ವೀಕರಿಸಲಿದ್ದಾರೆ ಎಂದರು.ಆಕಾಶ ಬುಟ್ಟಿ (ಚೈನೀಸ್ ಲ್ಯಾಂಪ್)ಗಳನ್ನು ಗಗನಕ್ಕೆ ಹಾರಿಸಿ ಪಟಾಕಿ, ಬಾಣ, ಬಿರುಸುಗಳನ್ನು ಸಿಡಿಸುವ ಮೂಲಕ ಮೂರು ದಿನಗಳ ಕ್ರೀಡಾಕೂಟವನ್ನು ಅದ್ಧೂರಿಯಾಗಿ ಮುಕ್ತಾಯ ಮಾಡಲಾಯಿತು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರ ಪತ್ನಿ ಡಾ.ಉಮಾದೇವಿ ಬಿದರಿ, ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾ ಮಂಡಳಿ ಅಧ್ಯಕ್ಷ ಬಿ.ಎಂ.ಹಯಾತ್, ಕಾರ್ಯದರ್ಶಿ ಸುಧೀರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಪ್ರತಿಕ್ರಿಯಿಸಿ (+)