ಶನಿವಾರ, ಜನವರಿ 18, 2020
21 °C

ಪೊಲೀಸರ ಸೋಗಿನಲ್ಲಿ ಲೂಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ನಗರದ ಬಾಣಸವಾಡಿ, ಅಮೃತಹಳ್ಳಿ, ಜ್ಞಾನಭಾರತಿ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮಹಿಳೆಯರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.ಕೊಡಿಗೇಹಳ್ಳಿಗೇಟ್ ಬಳಿ ಸತ್ಯಪ್ರಕಾಶಮ್ಮ ಎಂಬ ಮಹಿಳೆಯ ಗಮನ ಬೇರೆಡೆ ಸೆಳೆದು 57 ಗ್ರಾಂ ಚಿನ್ನಾಭರಣ ದೋಚಲಾಗಿದೆ. ವಿದ್ಯಾರಣ್ಯಪುರ ಸಮೀಪದ ಶ್ರೀನಿಧಿಲೇಔಟ್ ನಿವಾಸಿಯಾದ ಅವರು, ಕೊಡಿಗೇಹಳ್ಳಿಗೇಟ್ ಬಳಿಯ ಭುವನೇಶ್ವರಿನಗರದಲ್ಲಿ ನೆಲೆಸಿರುವ ಮಗಳ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 11.30ರ ಸುಮಾರಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ.ಬಿಎಂಟಿಸಿ ಬಸ್‌ನಲ್ಲಿ ಕೊಡಿಗೇಹಳ್ಳಿಗೇಟ್‌ಗೆ ಬಂದ ಅವರು ವಾಹನದಿಂದ ಕೆಳಗಿಳಿದು ಮಗಳ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿ ಬಂದ ಮೂವರು ಅಪರಿಚಿತರು ಪೊಲೀಸರೆಂದು ಪರಿಚಯಿಸಿಕೊಂಡಿದ್ದಾರೆ. ಆ ಅಪರಿಚಿತ ವ್ಯಕ್ತಿಗಳು `ಮುಂದೆ ಕೊಲೆಯಾಗಿದೆ. ಆಭರಣಗಳನ್ನು ಬಿಚ್ಚಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ~ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಸತ್ಯಪ್ರಕಾಶಮ್ಮ ಚಿನ್ನದ ಸರ ಮತ್ತು ಎರಡು ಬಳೆಗಳನ್ನು ಬಿಚ್ಚಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ನೆರವಾಗುವ ನೆಪದಲ್ಲಿ ಆಭರಣಗಳನ್ನು ಪಡೆದುಕೊಂಡ ಕಿಡಿಗೇಡಿಗಳು ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿದಂತೆ ಮಾಡಿ ಪರಾರಿಯಾಗಿದ್ದಾರೆ. ಸತ್ಯಪ್ರಕಾಶಮ್ಮ ಮನೆಗೆ ಹೋಗಿ ಬ್ಯಾಗ್ ತೆರೆದು ಪರಿಶೀಲಿಸಿದಾಗ ಆಭರಣಗಳು ಇಲ್ಲದಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜ್ಞಾನಭಾರತಿ: ನಾಗರಬಾವಿ ಸಮೀಪದ ಮಾನಸನಗರದಲ್ಲಿ ಸಂಜೆ ಇದೇ ರೀತಿಯ ಘಟನೆ ನಡೆದಿದ್ದು, ಕಿಡಿಗೇಡಿಗಳು ವಿಜಯಮಾಲಿನಿ ಎಂಬುವರ 90 ಗ್ರಾಂ ಚಿನ್ನಾಭರಣ ದೋಚಿದ್ದಾರೆ.ಮಾನಸನಗರ ನಿವಾಸಿಯಾದ ವಿಜಯಮಾಲಿನಿ ಅವರು ಮನೆಯ ಸಮೀಪದ ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಜ್ಞಾನಭಾರತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಬಾಣಸವಾಡಿ: ಕಿಡಿಗೇಡಿಗಳು ಪೊಲೀಸರ ಸೋಗಿನಲ್ಲಿ ಪುಷ್ಪಾ ಎಂಬುವರ ಗಮನ ಬೇರೆಡೆ ಸೆಳೆದು 40 ಗ್ರಾಂ ಚಿನ್ನದ ಸರ ದೋಚಿರುವ ಘಟನೆ ಬಾಣಸವಾಡಿ 80 ಅಡಿ ರಸ್ತೆಯಲ್ಲಿ ನಡೆದಿದೆ.ಸುಬ್ಬಯ್ಯನಪಾಳ್ಯ ನಿವಾಸಿಯಾದ ಪುಷ್ಪಾ ಸಮೀಪದಲ್ಲೇ ಇರುವ ಸಂಬಂಧಿಕರ ಮನೆಗೆ ನಡೆದು ಹೋಗುತ್ತಿದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ.ಬ್ಯಾಟರಾಯನಪುರ: ಪಂತರಪಾಳ್ಯ ಬಸ್ ನಿಲ್ದಾಣದ ಬಳಿ ಆಟೊಗೆ ಕಾಯುತ್ತಾ ನಿಂತಿದ್ದ ಪ್ರೇಮಾಕುಮಾರಿ ಎಂಬ ಶಿಕ್ಷಕಿಯ ಗಮನ ಬೇರೆಡೆ ಸೆಳೆದು 76 ಗ್ರಾಂ ತೂಕದ ಚಿನ್ನದ ಸರ ದೋಚಲಾಗಿದೆ. ಪದ್ಮನಾಭನಗರ ನಿವಾಸಿಯಾದ ಪ್ರೇಮಾಕುಮಾರಿ, ಪಂತರಪಾಳ್ಯದಲ್ಲಿರುವ ಸ್ನೇಹಿತೆಯ ಮನೆಗೆ ಹೋಗುತ್ತಿದ್ದಾಗ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)