ಮಂಗಳವಾರ, ಏಪ್ರಿಲ್ 13, 2021
24 °C

ಪೊಲೀಸ್ ಕಾಯ್ದೆ ಬದಲಾವಣೆಗೆ ಒಲವು

ಬಿ.ಎನ್.ಶ್ರೀಧರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಸಿಬ್ಬಂದಿ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಪ್ಪಿಸುವುದು ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಮುಂದಾಗಿದೆ.ರಾಜ್ಯದಲ್ಲಿ 1963ರ ಪೊಲೀಸ್ ಕಾಯ್ದೆಯೇ ಜಾರಿಯಲ್ಲಿದೆ. ಪರಿಣಾಮಕಾರಿಯಾದ ಹೊಸ ನಿಯಮಗಳನ್ನು ಇದರಲ್ಲಿ ಸೇರಿಸುವ ಉದ್ದೇಶದಿಂದ ಕಾಯ್ದೆಯನ್ನು ಸಮಗ್ರವಾಗಿ ಬದಲಿಸಲು ಸರ್ಕಾರ ನಿರ್ಧರಿಸಿದೆ.ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದಲೂ ಪ್ರಯತ್ನ ನಡೆದಿದೆ. ಈ ಮಧ್ಯೆ ನಿವೃತ್ತ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಮತ್ತಿತರರು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, `ಇಡೀ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿದೆ~ ಎಂದು ಆಗ್ರಹಪಡಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 2006ರಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಎಲ್ಲ ರಾಜ್ಯ ಸರ್ಕಾರಗಳಿಗೂ ಪ್ರಮುಖವಾದ ಆರು ಅಂಶಗಳನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಿತು.

ಅವುಗಳೆಂದರೆ, 
ಅಧಿಕಾರಿ ವಲಯದಲ್ಲಿ ಹರ್ಷ

ಬೆಂಗಳೂರು: `ಪೊಲೀಸ್ ಮಹಾನಿರ್ದೇಶಕರ ಸೇವಾವಧಿ, ಅವರ ನಿವೃತ್ತಿಯನ್ನು ಅವಲಂಬಿಸಿರುತ್ತದೆ~ ಎಂಬುದನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದಕ್ಕೆ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.`ನಿವೃತ್ತಿ ದಿನಾಂಕವನ್ನು ಗಮನಕ್ಕೆ ತೆಗೆದುಕೊಳ್ಳದೆ, ಕನಿಷ್ಠ ಎರಡು ವರ್ಷ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು~ ಎಂದು ಸುಪ್ರೀಂಕೋರ್ಟ್ ಹೇಳಿದ್ದಕ್ಕೆ ಸರ್ಕಾರ ಸೇರಿದಂತೆ ಅಧಿಕಾರಿ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. `ಹೀಗೆ ಮಾಡಿದರೆ ಇತರ ಹಿರಿಯ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ.ಅವರಿಗೆ ಡಿಜಿಪಿ ಆಗುವುದನ್ನು ತಪ್ಪಿಸಿದಂತಾಗುತ್ತದೆ~ ಎಂದೂ ಸರ್ಕಾರ ಹೇಳಿತ್ತು.

ಸರ್ಕಾರದ ನಿಲುವಿಗೆ ಪೂರಕವಾಗಿಯೇ ಶಾಸನ ರೂಪಿಸಲಾಗಿದ್ದು, `ಡಿಜಿಪಿಯಾದವರು ಅವರ ನಿವೃತ್ತಿವರೆಗೆ ಮಾತ್ರ ಅಧಿಕಾರದಲ್ಲಿ ಇರಬಹುದು~ ಎಂದು ಹೇಳಿದೆ.`ಇದು ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. `ಈ ನಿಲುವು ನ್ಯಾಯಯುತ~ ಎಂದು ಹಲವು ಅಧಿಕಾರಿಗಳು ಪ್ರತಿಕ್ರಿಯಿಸಿದರು.`ಡಿಜಿಪಿಯನ್ನು ಹೊರತುಪಡಿಸಿ, ಇತರ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸುಪ್ರೀಂಕೋರ್ಟ್, ಕನಿಷ್ಠ ಎರಡು ವರ್ಷಗಳ ಸೇವಾವಧಿ ನಿಗದಿಗೊಳಿಸಿತ್ತು. ಆದರೆ, ಕನಿಷ್ಠ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿರುವುದು ಪದೇ ಪದೇ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ~ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ ಜತೆ ತಮ್ಮ ಅಸಮಾಧಾನ ಹಂಚಿಕೊಂಡರು.

1. ಪೊಲೀಸರ ಕಾರ್ಯನಿರ್ವಹಣೆಯ ಮೌಲ್ಯಮಾಪನಕ್ಕೆ `ರಾಜ್ಯ ಭದ್ರತಾ ಆಯೋಗ~ ರಚಿಸಬೇಕು.

2. ನಿವೃತ್ತಿ ದಿನಾಂಕ ಏನೇ ಇದ್ದರೂ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿ-ಐಜಿಪಿ) ಕನಿಷ್ಠ ಎರಡು ವರ್ಷಗಳ ಸೇವಾವಧಿ ಇರಬೇಕು.3.ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಕೂಡ ಕನಿಷ್ಠ ಎರಡು ವರ್ಷ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕು.4. ಪೊಲೀಸ್ ಠಾಣೆಗಳಲ್ಲಿ ಅಪರಾಧ ತನಿಖೆ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗವನ್ನು ಪ್ರತ್ಯೇಕ ಮಾಡುವುದು.

5. ಡಿವೈಎಸ್ಪಿ ಮತ್ತು ಕೆಳಹಂತದ ಪೊಲೀಸ್ ಸಿಬ್ಬಂದಿ ವರ್ಗಾವಣೆಗೆ `ಪೊಲೀಸ್ ಸಿಬ್ಬಂದಿ ಮಂಡಳಿ~ ರಚಿಸುವುದು.

6 ಪೊಲೀಸ್ ಅಧಿಕಾರಿಗಳ ವಿರುದ್ಧದ ಗಂಭೀರ ದೂರುಗಳ ವಿಚಾರಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ದೂರು ಪ್ರಾಧಿಕಾರ ರಚಿಸುವುದು.ಈ ಅಂಶಗಳಿಗೆ ಕಾಯ್ದೆಯ ರೂಪ ನೀಡಬೇಕೆಂದೂ ಸುಪ್ರೀಂಕೋರ್ಟ್ ಹೇಳಿತು. ಕಾಯ್ದೆಯ ರೂಪ ನೀಡುವವರೆಗೆ ತನ್ನ ನಿರ್ದೇಶನ ಪಾಲಿಸುವಂತೆಯೂ ಸುಪ್ರೀಂಕೋರ್ಟ್ ಹೇಳಿತ್ತು.ಇವುಗಳಲ್ಲಿ ಹಲವು ಅಂಶಗಳ ಬಗ್ಗೆ ರಾಜ್ಯ ಸರ್ಕಾರ ತಕರಾರು ತೆಗೆದಿತ್ತು.`ಡಿಜಿ-ಐಜಿಪಿ ಅಧಿಕಾರಾವಧಿ ಕನಿಷ್ಠ ಎರಡು ವರ್ಷ ಇರಬೇಕು ಎನ್ನುವುದನ್ನು ಒಪ್ಪಲು ಸಾಧ್ಯ ಇಲ್ಲ. ಇದರಿಂದ ಇತರ ಹಿರಿಯ ಅಧಿಕಾರಿಗಳಿಗೆ ಅನ್ಯಾಯವಾಗುತ್ತದೆ~ ಎಂದೂ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿತ್ತು.ಸುಪ್ರೀಂಕೋರ್ಟ್‌ನ ಆದೇಶ ಪಾಲಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ರಾಜ್ಯ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಕೂಡ ಹಾಕಿತ್ತು. ಡಿಜಿ-ಐಜಿಪಿ ಹುದ್ದೆಗೆ ಪ್ರತಿ ಸಲ ನೇಮಕ ಮಾಡುವಾಗಲೂ ಅವಧಿಗೆ ಸಂಬಂಧಿಸಿದ ಅಂಶ ವಿವಾದದ ಸ್ವರೂಪ ಪಡೆಯುತ್ತಿತ್ತು. ಇದರಿಂದ ಪಾರಾಗಲು 2009ರಲ್ಲಿ ಈ ಅಂಶಗಳ ಜಾರಿಗೆ ಸರ್ಕಾರ `ಎಕ್ಸಿಕ್ಯುಟಿವ್~ ಆದೇಶ ಹೊರಡಿಸಿತು.ಇದಕ್ಕೂ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ನಂತರ ಪೊಲೀಸ್ ಕಾಯ್ದೆಯನ್ನು ಸಮಗ್ರವಾಗಿ ತಿದ್ದುಪಡಿ ಮಾಡುವುದನ್ನು ಬದಿಗೆ ಸರಿಸಿ, ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ಆರು ಅಂಶಗಳ (ಕೆಲ ಬದಲಾವಣೆ ಗಳೊಂದಿಗೆ) ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿತು. `ಕರ್ನಾಟಕ ಪೊಲೀಸ್ (ತಿದ್ದುಪಡಿ) ಸುಗ್ರೀವಾಜ್ಞೆ- 2012~ ಹೆಸರಿನ ಈ ಸುಗ್ರೀವಾಜ್ಞೆಯನ್ನು ಜೂ.1ರ ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದೆ.ಆರು ಅಂಶಗಳ ಸಲುವಾಗಿಯೇ ಸುಗ್ರೀವಾಜ್ಞೆ ಹೊರಡಿಸಿರುವ ರಾಜ್ಯ ಸರ್ಕಾರ 1963ರ ಪೊಲೀಸ್ ಕಾಯ್ದೆಯನ್ನು ಸಮಗ್ರವಾಗಿ ಬದಲಿಸಲು ಗಮನಹರಿಸಿದೆ. ಗೃಹ ಸಚಿವ ಆರ್.ಅಶೋಕ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿದ್ದು, ಅದು ಹೊಸ ಮಸೂದೆಯ ಸಿದ್ಧತೆಯಲ್ಲಿ ತೊಡಗಿದೆ. ಎಲ್ಲವೂ ನಿರೀಕ್ಷೆಯಂತಾದರೆ ಇದೇ 16ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಈ ಮಸೂದೆ (ಇದರಲ್ಲಿ ಸುಗ್ರೀವಾಜ್ಞೆಯಲ್ಲಿರುವ ಅಂಶಗಳೂ ಸೇರಿವೆ) ಅಂಗೀಕಾರವಾಗುವ ಸಾಧ್ಯತೆ ಇದೆ.ಸುಗ್ರೀವಾಜ್ಞೆಯಲ್ಲಿ ಏನಿದೆ? ಏನಿಲ್ಲ?:
ಪೊಲೀಸ್ ಮಹಾನಿರ್ದೇಶಕ ಹಾಗೂ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಅಧಿಕಾರಾವಧಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳನ್ನು ಸ್ವಲ್ಪ ಬದಲಿಸಿರುವುದು ಬಿಟ್ಟರೆ, ಉಳಿದಂತೆ ಎಲ್ಲ ಅಂಶಗಳೂ ಸುಗ್ರೀವಾಜ್ಞೆಯಲ್ಲಿ ಅಡಕವಾಗಿವೆ.ಡಿಜಿಪಿ ನೇಮಕ ಮತ್ತು ಅವರ ಸೇವಾವಧಿ ಕುರಿತ ನಿಯಮಗಳನ್ನು ಇದರಲ್ಲಿ ಸೇರಿಸಲಾಗಿದೆ. ಸೇವಾವಧಿ, ಅತ್ಯುತ್ತಮ ಸೇವಾ ದಾಖಲೆ ಮತ್ತು ಪೊಲೀಸ್ ಪಡೆಯನ್ನು ಮುನ್ನಡೆಸಲು ಇರುವ ಅನುಭವದ ಆಧಾರದ ಮೇಲೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮೂವರು ಹಿರಿಯ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಈ ಮೂವರಲ್ಲಿ ಒಬ್ಬರನ್ನು ಡಿಜಿಪಿ ಮಾಡುವುದು ಮುಖ್ಯಮಂತ್ರಿ ಅಥವಾ ಸರ್ಕಾರಕ್ಕೆ ಬಿಟ್ಟ ವಿಷಯ.ಡಿಜಿಪಿಯಾದವರು ಕನಿಷ್ಠ 2 ವರ್ಷ ಅಧಿಕಾರದಲ್ಲಿ ಇರಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ, ಅದನ್ನು ಸರ್ಕಾರ ಬದಲಿಸಿದೆ. ಡಿಜಿ- ಐಜಿಪಿ ಹುದ್ದೆಗೆ ಎರಡು ವರ್ಷದ ಸೇವಾವಧಿ ನಿಗದಿ ಮಾಡಿದ್ದರೂ ಅದು ಆ ಅಧಿಕಾರಿಯ ಸೇವಾ ನಿವೃತ್ತಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ. ಇದರಿಂದ ಡಿಜಿಪಿ ಹುದ್ದೆಗೆ ನೇಮಕಗೊಂಡವರು ಕನಿಷ್ಠ ಎರಡು ವರ್ಷ ಸೇವೆಯಲ್ಲಿ ಇರಬೇಕೆಂಬ ನಿಯಮ ಕಡ್ಡಾಯವಾಗುವುದಿಲ್ಲ. ಸದ್ಯ ಜಾರಿಯಲ್ಲಿರುವ ನಿಯಮ ಪ್ರಕಾರ ನಿವೃತ್ತಿವರೆಗೆ ಮಾತ್ರ ಡಿಜಿಪಿಯಾಗಿ ಇರಬಹುದು.ಒಮ್ಮೆ ನೇಮಕಗೊಂಡ ಡಿಜಿಪಿಯನ್ನು ಅವಧಿಗೂ ಮುನ್ನವೇ ಆ ಹುದ್ದೆಯಿಂದ ಬೇರೊಂದು ಹುದ್ದೆಗೆ ವರ್ಗಾಯಿಸುವುದಕ್ಕೆ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಮರ್ಥವಾಗಿ ಕೆಲಸ ನಿರ್ವಹಿಸದೆ ನಿರ್ಲಕ್ಷ್ಯ ತೋರಿದಾಗ, ಭ್ರಷ್ಟಾಚಾರದಲ್ಲಿ ಸಿಲುಕಿದಾಗ, ಮಾನಸಿಕ ಅಸ್ವಸ್ಥರಾದ ಸಂದರ್ಭದಲ್ಲಿ ಅವರನ್ನು ಬೇರೆ ಹುದ್ದೆಗೆ ವರ್ಗಾಯಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.ಇದೇ ರೀತಿ ಐಜಿಪಿ, ಎಸ್ಪಿ, ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಮತ್ತು ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳ ಸೇವಾವಧಿ ಕೂಡ ಎರಡು ವರ್ಷ ಇರಬೇಕೆಂದು ಸುಪ್ರೀಂಕೋರ್ಟ್ ಹೇಳಿತ್ತು. ಅದಕ್ಕೂ ಸರ್ಕಾರ ಕತ್ತರಿ ಹಾಕಿದೆ. ಅದನ್ನು ಕನಿಷ್ಠ ಒಂದು ವರ್ಷ ಎಂದು ಬದಲಿಸಿದೆ. ಅಂದರೆ ಪ್ರತಿ ವರ್ಷವೂ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕಾನೂನಿನಲ್ಲೇ ಅವಕಾಶ ಕಲ್ಪಿಸಲಾಗಿದೆ.(ಮುಂದುವರಿಯುವುದು)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.