ಭಾನುವಾರ, ಮೇ 22, 2022
29 °C

ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನ ವಿಫಲ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ತಡೆಯುವಲ್ಲಿ ಮತ್ತು ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಎಂಜಿನಿಯರ್‌ಗಳ ಸಾಧನೆ ತೃಪ್ತಿಕರವಾಗಿಲ್ಲ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಜಿ.ಸೀತಾರಾಮ್ ವಿಷಾದಿಸಿದರು.ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಮತ್ತು ಕಂದಾಯ ಇಲಾಖೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಜಂಟಿಯಾಗಿ ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ಆವರಣದಲ್ಲಿ ಬುಧವಾರದಿಂದ ಏರ್ಪಡಿಸಿದ ಮೂರು ದಿನಗಳ, `ಕಟ್ಟಡಗಳ ನಿರ್ಮಾಣದಲ್ಲಿ ಸಾಮರ್ಥ್ಯ, ವಾಸ್ತುಶಿಲ್ಪ ಮತ್ತು ಭೂಕಂಪ ಅನಾಹುತ ತಡೆಯುವಲ್ಲಿ ಎಂಜಿನಿಯರ್‌ಗಳ ಪಾತ್ರ~ ಕುರಿತ ಕಾರ್ಯಾಗಾರದಲ್ಲಿ  ಮಾತನಾಡಿದರು.`ಎಂಜಿನಿಯರ್‌ಗಳು ಭೂಕಂಪ, ಸುನಾಮಿಗಳಂತಹ ಪ್ರಾಕೃತಿಕ ವೈಪರೀತ್ಯಗಳ ಬಗ್ಗೆ ಯೋಚಿಸುವುದಿಲ್ಲ. ಪಾಕೃತಿಕ ವಿಕೋಪ ತಡೆಗೆ ಸಂಬಂಧಿಸಿದಂತೆ ಅವರು ಪಡೆಯುವ ತರಬೇತಿಯೂ ಕಳಪೆ ಮಟ್ಟದ್ದು. ದುರಂತಗಳನ್ನು ಹೇಗೆ ಕಡಿತಗೊಳಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು~ ಎಂದು ಸಲಹೆ ನೀಡಿದ ಅವರು, ` ಭೂಕಂಪಗಳು ಮನುಷ್ಯರನ್ನು ಸಾಯಿಸುವುದಿಲ್ಲ. ಬದಲಾಗಿ ಕಳಪೆ ಕಟ್ಟಡ ಕಾಮಗಾರಿಗೆ ಬಲಿಯಾಗುತ್ತಾರೆ~ ಎಂದರು.ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಭಾರತದ ಶೇಕಡಾ 60ರಷ್ಟು ಪ್ರದೇಶ ಭೂಕಂಪಕ್ಕೆ ಒಳಗಾಗುತ್ತದೆ. ಸರ್ಕಾರ ಇದನ್ನು ತಡೆಯಲು ಗುಣಮಟ್ಟದ ಎಂಜಿನಿಯರಿಂಗ್‌ಗೆ ಮಹತ್ವ ನೀಡಬೇಕು. ಪುನರ್‌ನಿರ್ಮಾಣ ಮತ್ತು ಪುನರ್‌ವಸತಿಗಳು ಮುಖ್ಯ ಆದ್ಯತೆಯಾಗಬೇಕು~ ಎಂದರು.ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್, `ಕಟ್ಟಡ ನಿರ್ಮಾಣದಲ್ಲಿ ಜಪಾನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭೂಕಂಪನವು ರಿಕ್ಟರ್ ಮಾಪಕದಲ್ಲಿ 7ರಷ್ಟಿದ್ದರೂ ಆ ಮನೆಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂದು ಹೇಳಿದರು.

 

ಪ್ರಾಧ್ಯಾಪಕರಾದ ಡಾ.ವಿ.ದೇವರಾಜು ಮತ್ತು ಡಾ.ಎಲ್.ಗೋವಿಂದರಾಜು ಅವರು ಮೂರು ದಿನಗಳ ಕಾರ್ಯಾಗಾರದ ವಿವರ ನೀಡಿದರು. ಡಾ.ಎಚ್.ಎನ್.ರಮೇಶ್ ಸ್ವಾಗತಿಸಿದರು. ಡಾ.ಜಯರಾಮಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.