ಶುಕ್ರವಾರ, ಜೂನ್ 18, 2021
27 °C

ಪ್ರಗತಿಯತ್ತ ಮಹಿಳೆ ದಾಪುಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ:  ಜಿಲ್ಲೆಯಲ್ಲಿ, ಮಹಿಳೆಯರ ಹಣಕಾಸಿನ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ `ಮಹಿಳಾ ಆರ್ಥಿಕ ಸಬಲೀಕರಣ ಚಳವಳಿ~ಗೆ ಚಾಲನೆ ನೀಡಲಾಗುತ್ತಿದ್ದು, ಇದು ಈ ಆರ್ಥಿಕ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಜಯರಾಂ ಹೇಳಿದರು.ನಗರದಲ್ಲಿ ಗುರುವಾರ ಜಿಲ್ಲಾ ಆಡಳಿತ ಮತ್ತು ವಿವಿಧ ಇಲಾಖೆಗಳ ವತಿಯಿಂದ ನಡೆದ `ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ~ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯರ ಪ್ರಗತಿಯತ್ತ ಮುನ್ನಡೆಯುತ್ತಿದ್ದು, ಆರ್ಥಿಕವಾಗಿಯೂ ಮಹಿಳೆಯರನ್ನು ಸದೃಢಳನ್ನಾಗಿ ಮಾಡಬೇಕಿದೆ ಎಂದು ತಿಳಿಸಿದರು.ನಬಾರ್ಡ್ ಸಹಕಾರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆರಂಭಿಕ ಹಂತದಲ್ಲಿ ಎರಡು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸರ್ಕಾರದ ನಾನಾ ನೆರವುಗಳನ್ನು ಒದಗಿಸುವ ಮೂಲಕ ಮಹಿಳೆಯರನ್ನು ಶೇ 100ರಷ್ಟು ಆರ್ಥಿಕವಾಗಿ ಸಶಕ್ತಳನ್ನಾಗಿ ಮಾಡಲಾಗುವುದು ಎಂದರು.ಶಿಕ್ಷಣ ಕ್ಷೇತ್ರದ ಕ್ರಾಂತಿಯಿಂದಾಗಿ, ಮಹಿಳೆಯರ ಸ್ಥಾನ ಎತ್ತರಕ್ಕೆ ಏರಿದೆ. ಐಟಿ, ಬಿಟಿ, ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ. ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವವರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಮಾತನಾಡಿದರು.ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಮಲಾದೇವಿ (ಕೃಷಿ), ಚಿಕ್ಕ ತಾಯಮ್ಮ (ಸ್ವ ಉದ್ಯೋಗ), ಸಿಸ್ಟರ್ ಲೀಲಾ (ಸಮಾಜ ಸೇವೆ), ಸವಿತಾ (ಜನಪದ ಕಲೆ), ಮೋನಿಕಾ (ಕ್ರೀಡೆ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಕೋಮಲಾ, ಜಿಪಂ ಸದಸ್ಯರಾದ ಚಂದ್ರಕಲಾ, ಮಂಜೇಗೌಡ, ರೆಡ್‌ಕ್ರಾಸ್ ಸಂಸ್ಥೆಯ ಮೀರಾ ಶಿವಲಿಂಗಯ್ಯ ಇದ್ದರು.`ಸ್ವಾಭಿಮಾನದ ಪ್ರತೀಕ ಹೆಣ್ಣು~

ಕೃಷ್ಣರಾಜಪೇಟೆ: ಹೆಣ್ಣು ಮಕ್ಕಳು ಹುಟ್ಟಿದರು ಎಂದು ಕುಟುಂಬ ವರ್ಗದವರು ಪರಿತಪಿಸುತ್ತಿದ್ದ ದಿನಗಳು ಈಗ ಇಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ಗಂಡು ಮಕ್ಕಳಷ್ಟೇ ಸಮರ್ಥವಾಗಿ ದುಡಿಯುತ್ತಿರುವ ಇಂದಿನ ಹೆಣ್ಣುಮಕ್ಕಳು ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದು ಪಟ್ಟಣದ ಖ್ಯಾತ ಪ್ರಸೂತಿ ತಜ್ಞೆ ಡಾ.ರುಕ್ಮಿಣಿ ಅಭಿಪ್ರಾಯಪಟ್ಟರು.ಪಟ್ಟಣದ ಕಲ್ಪತರು ಪದವಿ ಕಾಲೇಜಿನಲ್ಲಿ ಸೋಮವಾರ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಿಂಗ ಆಯ್ಕೆ ಮತ್ತು ಹೆಣ್ಣು ಭ್ರೂಣ ಹತ್ಯೆ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ವಿಠಲಾಪುರ ಜಯರಾಂ, ಪುರಸಭೆ ಸದಸ್ಯ ಕೆ.ಆರ್.ನೀಲಕಂಠ ಉಪಸ್ಥಿತರಿದ್ದರು.`ದೌರ್ಜನ್ಯ ಪ್ರಮಾಣ ಕ್ಷೀಣಿಸಿಲ್ಲ~

ಮದ್ದೂರು: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದರೂ, ಇಂದಿಗೂ ಆಕೆಯ ಮೇಲಿನ ದೌರ್ಜನ್ಯದ ಪ್ರಮಾಣ ಕ್ಷೀಣಿಸಿಲ್ಲ ಎಂದು ಶಾಸಕ ಬಿ.ರಾಮಕೃಷ್ಣ ಗುರುವಾರ ವಿಷಾದ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. `ಮಹಿಳೆಯರು ಸಂಘಟಿತರಾಗುವ ಮೂಲಕ ತಮಗೆ ನ್ಯಾಯಯುತವಾಗಿ ದೊರಕಬೇಕಾದ ಹಕ್ಕುಗಳನ್ನು ಪ್ರತಿಪಾದಿಸಬೇಕು~ಎಂದು ಸಲಹೆ ನೀಡಿದರು.ಶಾಸಕಿ ಕಲ್ಪನ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಪುಟ್ಟಸ್ವಾಮಿ, ಸರ್ವಮಂಗಳಾ ಅವರು ಮಹಿಳಾ ಮತ್ತು ಪಂಚಾಯತ್ ರಾಜ್ ಕುರಿತು ಉಪನ್ಯಾಸ ನೀಡಿದರು.ತಾಪಂ ಅಧ್ಯಕ್ಷೆ ಇಂದ್ರಾಣಿ, ಜಿ.ಪಂ. ಸದಸ್ಯೆ ಲಲಿತಾ ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷೆ ಚೌಡಮ್ಮ, ಸದಸ್ಯರಾದ ಗಂಗಾಬಲರಾಂ, ಲಕ್ಷ್ಮಿಚನ್ನರಾಜು, ಮಾಜಿ ಸದಸ್ಯ ಕೆ.ಸಿ.ಪ್ರಕಾಶ್, ಸಿಡಿಪಿಓ ಸುರೇಶ್ ಇದ್ದರು.ಕರ್ನಾಟಕ ರಕ್ಷಣಾ ವೇದಿಕೆ: ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಉದ್ಘಾಟಿಸಿ ಮಾತನಾಡಿದರು. ಶಾಸಕಿ ಕಲ್ಪನ ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಅಂಬರೀಶ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಅಧ್ಯಕ್ಷ ಎಸ್.ಅಶೋಕ್, ಮಹಿಳಾ ಅಧ್ಯಕ್ಷೆ ಸೆಲ್ವಿ ಮುರುಗೇಶ್, ನಗರ ಅಧ್ಯಕ್ಷೆ ನಾಗಮ್ಮ, ಪುರಸಭಾಧ್ಯಕ್ಷ ಚಂದ್ರು, ರೋಟರಿ ಅಧ್ಯಕ್ಷ ಗುರುಲಿಂಗಸ್ವಾಮಿ ಹಾಜರಿದ್ದರು.ಭ್ರೂಣ ಹತ್ಯೆ ನಿಂತಿಲ್ಲ: ವಿಷಾದಪಾಂಡವಪುರ: ಪ್ರಬಲ ಕಾನೂನುಗಳು ಇದ್ದರೂ ಮಹಿಳೆಯರ ಮೇಲಿನ ದೌರ್ಜನ್ಯ, ಭ್ರೂಣ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ ಪಂಚಾಯತ್ ರಾಜ್ ಮಹಿಳಾ ಸದಸ್ಯರ ಸಮಾವೇಶ ಹಾಗೂ ಕಾನೂನು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಿರಿಯ ಶ್ರೇಣಿ ಸಿವಿಲ್ ನ್ಯಾಯಧೀಶ ಶಶಿಧರ ಎಂ.ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ಐಆರ್‌ಡಿ ಸಂಸ್ಥೆಯ ಭಾಗ್ಯ, ಬಿಇಒ ಸ್ವಾಮಿ, ಮುಖ್ಯ ವೈದ್ಯಾಧಿಕಾರಿ ಡಾ.ಜಯರಾಮು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ವಿ.ಮ್ಯಾಥ್ಯೂ, ವಕೀಲ ಎಂ.ಎಸ್.ಕುಮಾರ ವಿಷಯ ಮಂಡಿಸಿದರು. ಜಿ.ಪಂ.ಸದಸ್ಯೆ ಮಂಜುಳ ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಎ.ಎಲ್.ಕೆಂಪೂಗೌಡ, ವಿ.ವಸಂತ ಪ್ರಕಾಶ್, ತಾಲ್ಲೂಕು ವಕೀಲರ ಸಂಘ ಅಧ್ಯಕ್ಷ ಸಿ.ಎಂ.ಚನ್ನೇಗೌಡ, ತಾ.ಪಂ. ಇಒ ಡಾ.ಎಂ.ವೆಂಕಟೇಶಪ್ಪ ಉಪಸ್ಥಿತರಿದ್ದರು.ಮಾರುಕಟ್ಟೆ ಕಲ್ಪಿಸುವ ಭರವಸೆಶ್ರೀರಂಗಪಟ್ಟಣ: ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳಿಗೆ ತಾಲ್ಲೂಕು ಕೇಂದ್ರದಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.

ಗುರುವಾರ ಇಲ್ಲಿಗೆ ಸಮೀಪದ ನಿಮಿಷಾಂಬ ದೇವಾಲಯ ಆವರಣದಲ್ಲಿ ಸ್ತ್ರೀಶಕ್ತಿ ಮಹಿಳಾ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರು ಉತ್ಪಾದಿಸುವ ಗೃಹೋಪಯೋಗಿ ಮತ್ತು ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಇಲ್ಲದ ಕಾರಣಕ್ಕೆ ತೊಂದರೆ ಅನುಭವಿಸುವಂತಾಗಿದೆ. ಉತ್ತಮ ಗುಣಮಟ್ಟದ ವಸ್ತುಗಳಿಗೂ ಬೇಡಿಕೆ ಇಲ್ಲವಾಗಿದೆ. ಹಾಗಾಗಿ ತಾಲ್ಲೂಕು ಕೇಂದ್ರದಲ್ಲಿ ಮಹಿಳಾ ಮಾರುಕಟ್ಟೆ ಆರಂಭಿಸಲಾಗುವುದು ಎಂದು ಹೇಳಿದರು.ವಿವಿಧ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಉತ್ಪಾದಿಸಿದ ಹಪ್ಪಳ, ಸಂಡಿಗೆ, ರಾಗಿ ಮಾಲ್ಟ್, ಫಿನಾಯಿಲ್, ನೀಲಿ, ಬಿಸ್ಕತ್, ಚಕ್ಕುಲಿ ಇತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ರೇಷ್ಮೆ, ಕೃಷಿ ಇತರ ಇಲಾಖೆಗಳ ವಸ್ತುಗಳು ಪ್ರದರ್ಶನದಲ್ಲಿದ್ದವು. ಸಿಡಿಪಿಓ ಮಂಜುನಾಥ್, ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಉಮಾ ಬಸವರಾಜು, ತಾ.ಪಂ. ಅಧ್ಯಕ್ಷೆ ಸುಮಲತಾ ಸಿದ್ದೇಗೌಡ, ಇಓ ಅಮರನಾಥ್, ಅಂಗನವಾಡಿ ಮೇಲ್ವಿಚಾರಕಿಯರಾದ ಗಂಗಮ್ಮ, ಶಿವಮ್ಮ ಇತರರು ಇದ್ದರು.ಪುರುಷ-ಮಹಿಳೆ ಸಮಾನರು: ನ್ಯಾಯಾಧೀಶೆಮಳವಳ್ಳಿ: ಮಹಿಳೆ ಹಾಗೂ ಪುರುಷರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿ ಯಾರು ಮೇಲಲ್ಲ, ಎಲ್ಲರೂ ಸಮಾನರು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶೆ ಹೇಮಾ ಪಸ್ತಾಪುರ್ ಅಭಿಪ್ರಾಯಪಟ್ಟರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರಾದ ಡಿ.ವೀರಣ್ಣ, ಹೆಚ್ಚುವರಿ ನ್ಯಾಯಾಧೀಶ ಡಿ.ಕಮಲಾಕ್ಷ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಶಿವಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಾಗಮಣಿ, ಇಒ ಕೆ.ಎಚ್.ಓಂಕಾರಪ್ಪ, ಸಿಡಿಪಿಒ ಅರುಂಧತಿ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.