ಗುರುವಾರ , ಜೂನ್ 24, 2021
28 °C
ವಿದ್ಯಾರ್ಥಿನಿಯರ ಹಾಜರಾತಿ ಹೆಚ್ಚಳಕ್ಕೆ ಕ್ರಮ

ಪ್ರತಿದಿನ ₨ 2 ಪ್ರೋತ್ಸಾಹ ಧನ

ಇಮಾಮಹುಸೇನ್ ಎಂ. ಗೂಡುನವರ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಕ್ಕಳನ್ನು ಶಾಲೆಗಳತ್ತ ಕರೆ ತರುವ ನಿಟ್ಟಿನಲ್ಲಿ ನಾನಾ ಕಸರತ್ತು ನಡೆಸುತ್ತಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾ ತಿಗೆ ₨ 2 ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಇದರಿಂದಾಗಿ ಶಾಲಾ ಮೆಟ್ಟಿಲನ್ನೇರಿದ ಆರಂಭದ ವರ್ಷದಲ್ಲೇ ಹೆಣ್ಣು ಮಕ್ಕಳು ನೂರಾರು ರೂಪಾಯಿ ಪ್ರೋತ್ಸಾಹಧನವನ್ನು ಜೇಬಿಗಿಳಿಸ ಲಿದ್ದಾರೆ...!ಹೌದು, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳು ಇನ್ನೂ ಮುಂದೆ ಪ್ರತಿದಿನದ ಹಾಜರಾತಿಗೆ ₨ 2 ಪ್ರೋತ್ಸಾಹಧನ ಪಡೆಯಲಿದ್ದಾರೆ. 2014ರ ಜ. 1ರಿಂ ದಲೇ ಈ ಯೋಜನೆ ಜಾರಿಗೆ ಬಂದಿದ್ದು, ಪ್ರಸಕ್ತ ಸಾಲಿನಲ್ಲಿ ಜ.1ರಿಂದ ಏ. 10ರ ಅವಧಿಗೆ ಅನ್ವಯವಾಗಲಿದೆ. ಹೀಗಾಗಿ ಅಳುಮುಖದೊಂದಿಗೆ ನಿತ್ಯ ಶಾಲೆಯತ್ತ ಹೆಜ್ಜೆ ಹಾಕುವ ಬಾಲೆಯರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.72 ದಿನಕ್ಕೆ ₨ 144: ಪ್ರಸಕ್ತ ಸಾಲಿನಲ್ಲಿ ಜ. 1ರಿಂದ ಎ. 10ರ ಅವಧಿಗೆ ಅನ್ವ ಯವಾಗುವಂತೆ ಯೋಜನೆ ಜಾರಿಗೆ ಬಂದಿದ್ದು, ಈ ಅವಧಿಯಲ್ಲಿ 72 ದಿನಗಳ ಕಾಲ ಸರ್ಕಾರಿ ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸಲಿವೆ. ಈ ಪ್ರಕಾರ ಶಾಲೆಗೆ ಹಾಜರಾದ ದಿನಗಳ ಆಧಾರದ ಮೇಲೆ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ಸಿಗಲಿದೆ. ಒಂದೂ ದಿನ ಶಾಲೆಗೆ ಚಕ್ಕರ್ ಹೊಡೆಯದ ವಿದ್ಯಾ ರ್ಥಿನಿಗೆ ಪ್ರತಿದಿನಕ್ಕೆ ₨ 2 ಅಂತೆ 72 ದಿನಗಳಿಗೆ ಒಟ್ಟು ₨ 144 ಕೈ  ಸೇರಲಿದೆ.31,452 ಮಕ್ಕಳು: 2013–14ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 31,452 ಹೆಣ್ಣು ಮಕ್ಕಳು 1ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಈ ಅಂಕಿ–ಅಂಶಗಳ ಪ್ರಕಾರ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 13,383, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 18,069 ಸೇರಿದಂತೆ 31, 452 ಹೆಣ್ಣು ಮಕ್ಕಳು ಈ ಯೋಜನೆಗೆ ಫಲಾನುಭವಿಗಳಾಗಲಿದ್ದಾರೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾ ಖೆಯ ವತಿಯಿಂದ ಬೆಳಗಾವಿ ಶೈಕ್ಷಣಿಕ ಜಿಲ್ಲೆಗೆ 19,27,152, ಚಿಕ್ಕೋಡಿಗೆ 26,01,936 ಸೇರಿದಂತೆ 45,29, 088 ಅನುದಾನ ಮಂಜೂರಾಗಿದೆ.ಹಂಚಿಕೆ ಹೇಗೆ?: ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರ ಮೂಲಕ ನೇರವಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಅನುದಾನ ಹಂಚಿಕೆಯಾಗಲಿದೆ. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಖಾತೆಗೆ ಜಮಾ ಮಾಡಿ, ಮಕ್ಕಳ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಸೂಚನೆ ನೀಡಲಾಗಿದೆ. ಮಾರ್ಚ್‌ ಅಂತ್ಯದ ವೇಳೆಗೆ ಅನುದಾನ ಬಿಡುಗಡೆಯಾಗಲಿದ್ದು, ಬಳಿಕ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.‘1ನೇ ತರಗತಿಯ ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾತಿಗೆ ₨ 2 ಪ್ರೋತ್ಸಾಹಧನ ನೀಡುವದರಿಂದ ಹಾಜರಾತಿ ಹಾಗೂ ದಾಖಲಾತಿ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಮಕ್ಕಳು ಅನಿರ್ದಿಷ್ಟವಾಗಿ ಶಾಲೆಗೆ ಗೈರು ಹಾಜರಾಗುವುದು ತಪ್ಪಲಿದೆ. ಇದರಿಂ ದಾಗಿ ಮಕ್ಕಳ ಶೈಕ್ಷಣಿಕ ಸಾಧನೆಯಲ್ಲೂ ಪ್ರಗತಿ ಕಂಡು ಬರಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ  ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.ಗಂಡು ಮಕ್ಕಳಿಗೂ ವಿಸ್ತರಿಸಿ: ‘1ನೇ ತರಗತಿಯ ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾತಿಗೆ 2 ಪ್ರೋತ್ಸಾಹಧನ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಇದು ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾ ಗಬಾರದು. ಮುಂಬರುವ ಶೈಕ್ಷಣಿಕ ವರ್ಷದಿಂದ ಗಂಡು ಮಕ್ಕಳಿಗೂ ಈ ಸೌಲಭ್ಯವನ್ನೂ ವಿಸ್ತರಿಸಬೇಕು’ ಎಂದು ಗಿರೀಶ ನಿಂಬಕ್ಕನವರ ಒತ್ತಾಯಿಸಿದರು.‘ರಾಜ್ಯ ಸರ್ಕಾರವು ಹೆಣ್ಣು ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವ ನಿಟ್ಟಿನಲ್ಲಿ ಪ್ರೋತ್ಸಾಹಧನ ನೀಡುವ ಮೂಲಕ ಹೊಸ ಪ್ರಯೋಗ ಮಾಡಲು ಹೊರಟಿದೆ. ಸರ್ಕಾರವು ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸ ಬಹುದು ಎಂಬುದನ್ನು ಊಹಿಸುವುದು ಕಷ್ಟಸಾಧ್ಯ. ಏಕೆಂದರೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಇಬ್ಬರೂ ಜಾಗೃತರಾಗಬೇಕು. ಇದರ ಜೊತೆಗೆ ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಸೌಕರ್ಯಗಳನ್ನು ಹೊಂದಿ ಮಕ್ಕಳನ್ನು ಆಕರ್ಷಿಸುವಂತಾಗಬೇಕು. ಆಗ ಹಾಜ ರಾತಿ ಹಾಗೂ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬರಲು ಸಾಧ್ಯ’ ಎಂದು ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಅಭಿಪ್ರಾಯಪಟ್ಟರು.ರಾಜ್ಯ ಸರ್ಕಾರವು ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸಲು ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕಳೆದ 2 ವರ್ಷಗಳಲ್ಲಿ ಜಿಲ್ಲೆಯಲ್ಲಿ 19,483 ಮಕ್ಕಳು ಶಾಲೆಯಿಂದ ಹೊರಗುಳಿದ ಆತಂಕಕಾರಿ ಅಂಶ ಶಿಕ್ಷಣ ಇಲಾಖೆಯ ಕೈಗೊಂಡ ಸಮೀಕ್ಷೆಯಿಂದ ಹೊರಬಿದ್ದಿತ್ತು.ಈ ವರದಿ ಹೊರಬಿದ್ದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಪ್ರೋತ್ಸಾಹಧನ ನೀಡುವ ಮೂಲಕ ಹಾಜರಾತಿ ಪ್ರಮಾಣದಲ್ಲಿ ಏರಿಕೆ ತರಲು ವಿನೂತನ ತಂತ್ರಕ್ಕೆ ಮೊರೆ ಹೋಗಿದೆ. ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.