ಭಾನುವಾರ, ಜನವರಿ 19, 2020
29 °C

ಪ್ರತಿಷ್ಠಿತ ರಸ್ತೆಗಳಲ್ಲೂ ಗುಂಡಿ, ದೂಳು

ಪ್ರಜಾವಾಣಿ ವಾರ್ತೆ/ ಅನುಪಮಾ ಫಾಸಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆ, ಚರ್ಚ್‌ಸ್ಟ್ರೀಟ್ , ರೆಸ್ಟ್‌ ಹೌಸ್‌ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾಗಿದರೆ ಕಿತ್ತು ಹೋಗಿರುವ ಡಾಂಬರು, ಅಲ್ಲಲ್ಲಿ ಬಿದ್ದಿರುವ ಗುಂಡಿಗಳು ನಿಮ್ಮನ್ನು ಸ್ವಾಗತಿಸುತ್ತವೆ.ಈ ರಸ್ತೆಗಳಿಗೆ ಹಾಕಿರುವ ಡಾಂಬರು ಕಿತ್ತುಹೋಗಿದೆ. ರಸ್ತೆಯಲ್ಲಿ ಸಂಚರಿಸಿದರೆ ದೂಳು ಕಣ್ಣಿಗೆ ರಾಚುತ್ತದೆ. ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಜತೆಗೆ ಪಾದಚಾರಿ ಮಾರ್ಗವೂ ವ್ಯವಸ್ಥಿತವಾಗಿಲ್ಲ.ಇದು ನಗರದ ಪ್ರತಿಷ್ಠಿತ ರಸ್ತೆಗಳ ಪರಿಸ್ಥಿತಿ. ರಸ್ತೆಗಳ ಗುಂಡಿ ಮುಚ್ಚಲು ಮಣ್ಣು ಹಾಕಿರುವುದರಿಂದ ಈ ರಸ್ತೆಗಳಲ್ಲಿ ದೂಳು ಹೆಚ್ಚಾಗಿದೆ. ನಗರದ ಅತಿ ಪ್ರತಿಷ್ಠಿತ ರಸ್ತೆ ಎನಿಸಿಕೊಂಡಿರುವ ಮಹಾತ್ಮ ಗಾಂಧಿ ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ಪಾದಚಾರಿ ಮಾರ್ಗವೂ ಹಾಳಾಗಿದೆ.‘ಪ್ರತಿಷ್ಠಿತ ರಸ್ತೆಗಳೇ ಹಾಳಾಗಿವೆ. ಮಹಾತ್ಮ ಗಾಂಧಿ ರಸ್ತೆಯ ಸುತ್ತಮುತ್ತಲಿನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಇಲ್ಲಿ ವಾಹನ ಸಂಚಾರಕ್ಕೆ ಪರದಾಡಬೇಕಾಗುತ್ತದೆ’ ಎಂಬುದು ಬೈಕ್‌ ಸವಾರ ಶ್ರೀನಿವಾಸ್‌ ದೂರು.‘ರಸ್ತೆಗಳಲ್ಲಿ ಹಾಕಿದ ಡಾಂಬರು ಕಿತ್ತು ತಿಂಗಳುಗಳೇ ಕಳೆದಿವೆ. ತಿಂಗಳ ಹಿಂದೆ ಗುಂಡಿಗಳನ್ನು ಮುಚ್ಚಿದ್ದರೂ ಮತ್ತೆ ಗುಂಡಿಗಳು ನಿರ್ಮಾಣವಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿ ಯಾವ ಗುಣಮಟ್ಟದ ಡಾಂಬರು ಹಾಕುತ್ತದೆ ಎಂಬುದು ಗೊತ್ತಾಗುತ್ತದೆ. ವಾಹನ ಸವಾರರು ಇಲ್ಲಿ ಸಂಚರಿಸಲು ಪರದಾಡಬೇಕಾಗಿದೆ’ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ರಮೇಶ್‌.‘ಶಾಪಿಂಗ್‌ಗೆ ಎಂದು ಇಲ್ಲಿನ ರಸ್ತೆಗಳಿಗೆ ಬಂದರೆ ಬೈಕ್‌ ಗುಂಡಿಯಲ್ಲಿ ಸಿಲುಕಿ ಪರದಾಡಬೇಕಾಗಿದೆ. ಗುಂಡಿಗಳಲ್ಲದೇ ದೂಳು ಕೂಡ ಹೆಚ್ಚಾಗಿದೆ. ಈ ರಸ್ತೆಗಳ ಅವಸ್ಥೆಯೇ ಹೀಗಿರುವಾಗ ನಗರದ ಇತರೆ ರಸ್ತೆಗಳ ಸ್ಥಿತಿ ಹೇಗಿದೆ ಎಂಬುದು ತಾನೇತಾನಾಗಿ ಗೊತ್ತಾಗುತ್ತದೆ’ ಎಂಬುದು ಖಾಸಗಿ ಕಂಪೆನಿ ಉದ್ಯೋಗಿ ಶ್ರೇಯಾ ಅವರ ಅಸಮಾಧಾನ.‘ಪ್ರತಿಷ್ಠಿತ ರಸ್ತೆಗಳೆನಿಸಿಕೊಂಡಿರುವ ಈ ರಸ್ತೆಗಳೂ ದುಃಸ್ಥಿತಿಯಲ್ಲಿವೆ. ಕಾಲೇಜು ಮುಗಿಸಿಕೊಂಡು ಇಲ್ಲಿ ಒಂದು ರೌಂಡ್‌ ಸುತ್ತೋಣ ಎಂದು ಬಂದರೆ, ಇಲ್ಲಿನ ರಸ್ತೆಗಳನ್ನು ನೋಡಿ, ಬೈಕ್‌ ಸವಾರಿಯೇ ಬೇಸರ ಮೂಡಿಸುತ್ತೆ’ ಎಂದು ಬೇಸರ ವ್ಯಕ್ತಪಡಿಸಿದ್ದು ಬಿಬಿಎಂ ವಿದ್ಯಾರ್ಥಿ ಆಕಾಶ್‌.ಚರ್ಚ್‌ಸ್ಟ್ರೀಟ್ ಮುಂದುವರೆದ ಭಾಗದಂತಿರುವ ಕೋಶಿಸ್‌ ಹೋಟೆಲ್‌ನ ಮುಂಭಾಗ ರಸ್ತೆ ಅಗೆದು ಆರು ತಿಂಗಳೇ ಕಳೆದಿದೆ. ಆದರೂ ಡಾಂಬರು ಬಿದ್ದಿಲ್ಲ. ಪಾಲಿಕೆ ಈ ಭಾಗವನ್ನು ಲೆಕ್ಕಕ್ಕೆ ಇರಿಸಿದಂತಿಲ್ಲ.ರೆಸ್ಟ್‌ಹೌಸ್‌ ರಸ್ತೆಯ ಸ್ಥಿತಿಯಂತೂ ತೀರಾ ಕೆಟ್ಟದಾಗಿದೆ. ಬ್ರಿಗೇಡ್‌ ರಸ್ತೆಯ ಬಳಿ ಈ ರಸ್ತೆ ಸೇರುವ ಸ್ಥಳದಲ್ಲಿ ಪಾದಚಾರಿ ಮಾರ್ಗವೇ ಇಲ್ಲದಾಗಿದೆ. ಕಸ ವಿಲೇವಾರಿ ಇಲ್ಲಿ ನಡೆಯುವುದೇ ಇಲ್ಲ  ಎನ್ನುವ ಮಟ್ಟಿಗೆ ಕಸ ಬಿದ್ದಿರುತ್ತದೆ.ಎರಡು ತಿಂಗಳಿನಲ್ಲಿ ಕಾಮಗಾರಿ

ಚರ್ಚ್‌ ಸ್ಟ್ರೀಟ್‌, ಸೆಂಟ್‌ ಮಾರ್ಕ್ಸ್‌ ಮತ್ತಿತರ ಸುತ್ತಮುತ್ತಲಿನ ರಸ್ತೆಗಳು ಟೆಂಡರ್‌ ಶ್ಯೂರ್‌ನಲ್ಲಿವೆ. ಮೂರು ಬಾರಿ ಟೆಂಡರ್ ಕರೆದರೂ ಇದುವರೆಗೂ ಯಾರು ಕಾಮಗಾರಿ ಕೈಗೆತ್ತಿಕೊಳ್ಳಲು ಆಸಕ್ತಿ ತೋರಿಸಿಲ್ಲ. ಮೂರನೇ ಟೆಂಡರ್‌ ಅನುಮೋದನೆಗೆ ಇನ್ನು ಹದಿನೈದು ದಿನಗಳು ಬಾಕಿಯಿದೆ. ಇದರಿಂದ, ಟೆಂಡರ್‌ ಅನುಮೋದನೆಯಾದ ಕೂಡಲೆ ಕಾರ್ಯ ಆರಂಭ ಮಾಡುತ್ತೇವೆ. ಎರಡು ತಿಂಗಳಿನಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

–ಕೆ.ಜಿ.ನಾಗರಾಜ್‌, ರಸ್ತೆ ಮೂಲಭೂತ ಸೌಕರ್ಯ, ಸೂಪರಿಂಟೆಂಡಿಂಗ್‌ ಎಂಜಿನಿಯರ್‌.ಓದುಗರ ಗಮನಕ್ಕೆ

ನಗರದ ರಸ್ತೆಗಳು ತೀರಾ ಹಾಳಾಗಿವೆ. ಇಂತಹ ರಸ್ತೆಗಳ ಚಿತ್ರಗಳನ್ನು ಓದುಗರು ಈ ಮೇಲ್‌ ಮೂಲಕ ಕಳುಹಿಸಿದರೆ ‘ಪ್ರಜಾವಾಣಿ’ ಆಯ್ದ ಚಿತ್ರಗಳನ್ನು ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿದೆ. ಗುಂಡಿ ಬಿದ್ದ ರಸ್ತೆಗಳು ಹಾಗೂ ನಿಂತು ಹೋದ ಬಿಬಿಎಂಪಿ, ಜಲಮಂಡಳಿ ಕಾಮಗಾರಿಗಳ ಬಗ್ಗೆ ಓದುಗರು ಮಾಹಿತಿಯನ್ನೂ ನೀಡಬಹುದು. ಈ ಮೇಲ್‌: bangalore@prajavani.co.in

 

ಪ್ರತಿಕ್ರಿಯಿಸಿ (+)