ಭಾನುವಾರ, ಮಾರ್ಚ್ 7, 2021
30 °C

ಪ್ರತಿಷ್ಠಿತ ರಾಮಸೇವಾ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಷ್ಠಿತ ರಾಮಸೇವಾ ಮಂಡಳಿ

ರಾಮೋತ್ಸವ ಎಂದರೆ  ರಾಮಸೇವಾ ಮಂಡಳಿ  ಎನ್ನುವಷ್ಟರ ಮಟ್ಟಿಗೆ ಚಾಮರಾಜಪೇಟೆಯ ಶ್ರಿ ರಾಮ ಸೇವಾ ಮಂಡಳಿ ಪ್ರತಿಷ್ಠಿತವಾಗಿ ಬೆಳೆದಿದೆ. ಇ್ಲ್ಲಲಿ ಕಛೇರಿ ಮಾಡುವುದು ಕಲಾವಿದರಿಗೆ ಹೆಮ್ಮೆಯ ವಿಷಯವಾದರೆ, ಕೇಳುಗರಿಗೆ ಸಂಭ್ರಮದ ವಿಷಯ.

ಹಾಗೆ ನೋಡಿದರೆ ಮಂಡಳಿ ಪ್ರಾರಂಭವಾದದ್ದು ಪುಟ್ಟ ಪ್ರಮಾಣದಲ್ಲಿಯೇ.ಮೀಸೆ ಚಿಗುರುತ್ತಿದ್ದ ಕೆಲ ಹುಡುಗರು ಚಾಮರಾಜಪೇಟೆಯಲ್ಲಿ ಗಣೇಶನ ಉತ್ಸವ ಮಾಡುತ್ತಿದ್ದರು. ಒಂದು ವರ್ಷ ಅದರಲ್ಲಿ ಸ್ವಲ್ಪ ದುಡ್ಡು ಉಳಿಯಿತು. ಅದರಲ್ಲಿ ಯಾಕೆ ರಾಮೋತ್ಸವ ಮಾಡಬಾರದು ಎಂಬುದು ನಾರಾಯಣಸ್ವಾಮಿ ಅವರ ಅನಿಸಿಕೆ.ಹೀಗೆ ಚಾಮರಾಜಪೇಟೆಯ ರಸ್ತೆ ಬದಿಯಲ್ಲಿ 1939ರಲ್ಲಿ ಆವಿರ್ಭವಿಸಿದ ರಾಮ ಸೇವಾ ಮಂಡಳಿ ಮೊದಲು ರಾಮೇಶ್ವರ ಗುಡಿಗೆ, ಅಲ್ಲಿಂದ ಸಿಟಿ ಇನ್ಸ್‌ಟಿಟ್ಯೂಟ್‌ಗೆ ಸ್ಥಳಾಂತರವಾಗಿ, 1967ರಿಂದ ಈಗಿರುವ ಕೋಟೆ ಪ್ರೌಢ ಶಾಲೆಗೆ ವರ್ಗವಾಯಿತು. ರಾಮೋತ್ಸವಕ್ಕಾಗೇ ವಿಶೇಷವಾಗಿ ಕಟ್ಟುವ ಚಪ್ಪರ, ಒಂದು ಸಂಪೂರ್ಣ ಸಭಾಂಗಣದಂತೆಯೇ ಇರುತ್ತದೆ.

 

ವಿಶಾಲ ಸಭಾಂಗಣ, ಎತ್ತರದ ವೇದಿಕೆ, ಭವ್ಯ ಪೂಜಾ ಗೃಹ, ಕಛೇರಿ, ಶೃತಿ ಕೊಠಡಿ, ವಿಶ್ರಾಂತಿ ಗೃಹ, ಪಾಕಗೃಹ, ಭೋಜನ ಶಾಲೆ, ಶೌಚಾಲಯ ಎಲ್ಲವನ್ನೂ ಒಳಗೊಂಡ ಒಂದು ಸುಸಜ್ಜಿತ ಸಭಾಂಗಣವಾಗಿದೆ. ಮೊದಮೊದಲಲ್ಲಿ ಟಿ. ಚೌಡಯ್ಯ, ಟಿ.ಆರ್. ಮಹಾಲಿಂಗಂ, ಮಣಿ ಅಯ್ಯರ್ ಮುಂತಾದವರು ಪ್ರತಿಷ್ಠಿತ ಕಲಾವಿದರನ್ನು ಆಹ್ವಾನಿಸಲು ನೆರವಾದರು.ಮಂಡಳಿಯಲ್ಲಿ ಹಾಡದ ಕಲಾವಿದರೇ ಇಲ್ಲ. ಅನೇಕ ವರ್ಷಗಳು ಚಂಬೈ ಅವರ ಗಾಯನದಿಂದಲೇ ಪ್ರಾರಂಭವಾಗುತ್ತಿದ್ದ ರಾಮೋತ್ಸವದಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿ ಅವರು 40 ವರ್ಷಗಳ ಕಾಲ ಸತತವಾಗಿ ಹಾಡಿದ್ದಾರೆ! ಈಗ ಪ್ರತಿ ವರ್ಷ ಕದ್ರಿ ಗೋಪಾಲನಾಥ್ ಚೊಚ್ಚಲ ಕಾರ್ಯಕ್ರಮ ನೀಡುತ್ತಾ ಬಂದಿದ್ದಾರೆ. ಕರ್ನಾಟಕ ಸಂಗೀತವಲ್ಲದೆ,ಹಿಂದೂಸ್ತಾನಿ, ಹರಿಕಥೆ, ಗಮಕ, ನೃತ್ಯ ಕಾರ್ಯಕ್ರಮಗಳೂ ಆಗಾಗ್ಗೆ ನಡೆಯುತ್ತವೆ. ಉದಯೋನ್ಮುಖ ಕಲಾವಿದರಿಗೂ ವೇದಿಕೆ ಹಾಗೂ ಬಹುಮಾನಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದೆ. ಬೆಳಗಿನ ಹೊತ್ತು ನಡೆಯುವ ಉಪನ್ಯಾಸದಲ್ಲೂ ಕೇಳುಗರ ದೊಡ್ಡ ವರ್ಗ ಭಾಗವಹಿಸುತ್ತದೆ. ಹೀಗೆ ರಾಮ ಸೇವಾ ಮಂಡಳಿ ಜ್ಞಾನ ಮತ್ತು ಗಾನ ಎರಡೂ ಕೈಂಕರ್ಯಗಳಲ್ಲಿ ತೊಡಗಿಕೊಂಡಿದೆ.ಪ್ರಶಸ್ತಿ ಪುರಸ್ಕಾರ


ಎಸ್. ವಿ. ನಾರಾಯಣಸ್ವಾಮಿ ರಾವ್ ಅವರು ಶ್ರದ್ಧೆ, ದೈವ ಭಕ್ತಿ, ವ್ಯವಹಾರಿಕ ಚಾಣಾಕ್ಷತನ, ಮುಂದಾಲೋಚನೆಗಳಿಂದ 60 ವರ್ಷಗಳಷ್ಟು ಸುದೀರ್ಘ ಕಾಲ ರಾಮ ಸೇವಾ ಮಂಡಳಿಯನ್ನು ನಡೆಸಿದರು. ಅವರ ಸ್ಮರಣಾರ್ಥ ಪ್ರತಿ ವರ್ಷ 50,000 ರೂ. ನಗದು ಪ್ರಶಸ್ತಿಯನ್ನು ಮಂಡಳಿ ನೀಡುತ್ತಿದೆ.ಈ ವರ್ಷ ಹಿರಿಯ ಕಲಾವಿದರಾದ ಗಿರಿಜಾ ದೇವಿ (ಹಿಂದುಸ್ತಾನಿ) ಮತ್ತು ಉಮಯಾಳಪುರಂ ಶಿವರಾಮನ್ ಅವರುಗಳಿಗೆ ಈ ಪ್ರಶಸ್ತಿ ಏ. 29ರಂದು ವಿತರಣೆ ಮಾಡಲಾಗುವುದು. ಅಲ್ಲದೆ ಈ ವರ್ಷ ಸಂಸ್ಥಾಪಕರ ದಿನಾಚರಣೆಯಂದು ಐವರು ಕಲಾವಿದರನ್ನೂ ಸನ್ಮಾನಿಸಲಾಯಿತು.36 ದಿನಗಳ ಈ ವರ್ಷದ ರಾಮೋತ್ಸವವು ಮೇ 6ರಂದು ವಿಶ್ವಮೋಹನ್ ಭಟ್ ಮತ್ತು ಗಣೇಶ್ ರಾಜಗೋಪಾಲನ್ ಅವರ ಜುಗಲ್‌ಬಂದಿಯೊಂದಿಗೆ ಮುಕ್ತಾಯವಾಗುವುದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.