ಬುಧವಾರ, ಏಪ್ರಿಲ್ 14, 2021
26 °C

ಪ್ರತ್ಯೇಕ ಅಪಘಾತ: ವಿದ್ಯಾರ್ಥಿ ಸೇರಿ ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊಸೂರು ರಸ್ತೆ ಮೇಲು ಸೇತುವೆ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ರಸ್ತೆಯಲ್ಲಿ   ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಿಐಎಎಲ್ ರಸ್ತೆಯ ಭಾರತಿನಗರ ಕ್ರಾಸ್‌ನಲ್ಲಿ ಶನಿವಾರ ನಡೆದಿದೆ. ಚಿಕ್ಕಬಳ್ಳಾಪುರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಬಿ.ಇ ಎರಡನೆ ಸೆಮಿಸ್ಟರ್ ಓದುತ್ತಿದ್ದ ನೀರಜ್ ವಸಿಷ್ಠ (18) ಮೃತಪಟ್ಟ ವಿದ್ಯಾರ್ಥಿ.ಆತನ ತಂದೆ ಆರ್.ಎಸ್.ವಸಿಷ್ಠ ಅವರು ಭಾರತೀಯ ವಾಯುಪಡೆಯಲ್ಲಿ ಹವಾಲ್ದಾರ್ ಆಗಿದ್ದು, ಆಗ್ರಾದಲ್ಲಿ ನೆಲೆಸಿದ್ದಾರೆ. ನೀರಜ್ ತಾಯಿಯ ಜತೆ ಭಾರತಿನಗರಕ್ರಾಸ್‌ಬಡಾವಣೆಯಲ್ಲಿ ವಾಸವಿದ್ದ ಎಂದು ಪೊಲೀಸರು ಹೇಳಿದ್ದಾರೆ.ಆತ ಕಾಲೇಜಿನ ಬಸ್‌ನಲ್ಲಿ ಪ್ರತಿನಿತ್ಯ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುತ್ತಿದ್ದ. ಬಸ್ ಭಾರತಿನಗರ ಕ್ರಾಸ್ ನಿಲ್ದಾಣದಿಂದ ಆತನನ್ನು ಕರೆದೊಯ್ಯುತ್ತಿತ್ತು. ಬೆಳಿಗ್ಗೆ ಕಾಲೇಜಿಗೆ ಹೊರಟಿದ್ದ ನೀರಜ್ ಭಾರತಿನಗರ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಆತನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.ಯಲಹಂಕ ಸಂಚಾರ ಠಾಣೆ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.ಮತ್ತೊಂದು ಘಟನೆ: ಹೊಸೂರು ರಸ್ತೆ ಮೇಲು ಸೇತುವೆಯಲ್ಲಿ ಶುಕ್ರವಾರ ಸಂಜೆ ಆಂಬುಲೆನ್ಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ವೈದ್ಯೆಯೊಬ್ಬರು ಸಾವನ್ನಪ್ಪಿದ್ದಾರೆ.ಆಸ್ಟಿನ್‌ಟೌನ್ ಸಮೀಪದ ನೀಲಸಂದ್ರ ನಿವಾಸಿ ಅಂಗಧ್ ನಾಯರ್ ಎಂಬುವರ ಪತ್ನಿ ಡಾ.ಜ್ಯೋತ್ಸ್ನಾ ನಾಯರ್ (25) ಮೃತಪಟ್ಟವರು

.ವೈದ್ಯರಾದ ಅವರು ಇನ್ಫೋಸಿಸ್ ಕಂಪೆನಿ ಯಲ್ಲಿ ಕೆಲಸ ಮಾಡುತ್ತಿದ್ದರು. ಅಂಗಧ್ ಅವರು ಸಹ ವೈದ್ಯರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಜ್ಯೋತ್ಸ್ನಾ ಅವರು ಪತಿಯ ಜತೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ  ವೇಗವಾಗಿ ಬಂದ ಆಂಬುಲೆನ್ಸ್ ಅವರ ವಾಹನಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತು.ಈ ವೇಳೆ ಆಂಬುಲೆನ್ಸ್‌ನ ಕೆಳಗೆ ಸಿಲುಕಿ  ತೀವ್ರವಾಗಿ ಗಾಯಗೊಂಡ ಜ್ಯೋತ್ಸ್ನಾ ಅವರನ್ನು    ಆಸ್ಪತ್ರೆಗೆ ದಾಖಲಿಸಲಾಯಿತು. ತಡರಾತ್ರಿ ಅವರು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ ಅಂಗಧ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಂಬುಲೆನ್ಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.