ಗುರುವಾರ , ಆಗಸ್ಟ್ 13, 2020
26 °C

ಪ್ರಧಾನಿಗೆ ರಾಜ್ಯಗಳ ಮನವಿ ಪತ್ರ: ಜಿಎಸ್‌ಟಿ ಜಾರಿ ಕಷ್ಟ ಎಂಬ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿಗೆ ರಾಜ್ಯಗಳ ಮನವಿ ಪತ್ರ: ಜಿಎಸ್‌ಟಿ ಜಾರಿ ಕಷ್ಟ ಎಂಬ ಸೂಚನೆ

ನವದೆಹಲಿ (ಪಿಟಿಐ): ಕೇಂದ್ರ ಮಾರಾಟ ತೆರಿಗೆಯಲ್ಲಿನ ಕಡಿತದಿಂದಾಗಿ ರಾಜ್ಯಗಳಿಗೆ ಆಗಿರುವ ಆರ್ಥಿಕ ಸಂಪನ್ಮೂಲ ಕೊರತೆಗೆ ಸೂಕ್ತ ಪರಿಹಾರ ಒದಗಿಸಲು ನಿರಾಕರಿಸಿದ್ದೇ ಆದರೆ, ಕೇಂದ್ರ ಸರ್ಕಾರದ ಭಾರಿ ಮಹತ್ವಾಕಾಂಕ್ಷೆಯ `ಸರಕು ಮತ್ತು ಸೇವಾ ತೆರಿಗೆ~ (ಜಿಎಸ್‌ಟಿ) ನೀತಿ ಜಾರಿ ಕಷ್ಟವಾಗಲಿದೆ ಎಂದು ರಾಜ್ಯ ಸರ್ಕಾರಗಳು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿವೆ.ಕೇಂದ್ರ ಸರ್ಕಾರ `ಜಿಎಸ್‌ಟಿ~ ಜಾರಿಗೂ ಮುನ್ನವೇ ರಾಜ್ಯ ಸರ್ಕಾರಗಳಿಗೆ `ಸಿಎಸ್‌ಟಿ~ಯಿಂದ ಆಗಿರುವ ತೆರಿಗೆ ನಷ್ಟವನ್ನು ತುಂಬಿಕೊಡಬೇಕು. ಇಲ್ಲವಾದರೆ ರಾಜ್ಯಗಳು ಆರ್ಥಿಕ ಆದಾಯ ಕೊರತೆಯಿಂದ ಸಂಕಷ್ಟಕ್ಕೊಳಗಾಗಲಿವೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಅನಿವಾರ್ಯವಾಗಿ ತೆರಿಗೆ ನೀತಿ ಸುಧಾರಣೆಗೆ ಪೂರಕವಲ್ಲದ ಪರ್ಯಾಯ ಕ್ರಮಗಳನ್ನು ಅಳವಡಿಸಿಕೊಳ್ಳಲೇಬೇಕಾಗುತ್ತದೆ~ ಎಂದು ರಾಜ್ಯಗಳ ಹಣಕಾಸು ಸಚಿವರ ಉನ್ನತ ಸಮಿತಿ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಅವರು ಪ್ರಧಾನಿಗೆ ಬುಧವಾರ ಬರೆದ ಪತ್ರದಲ್ಲಿ ಗಮನ ಸೆಳೆದಿದ್ದಾರೆ.ಸದ್ಯ ಕೇಂದ್ರದಲ್ಲಿ ಹಣಕಾಸು ಖಾತೆ ಜವಾಬ್ದಾರಿಯನ್ನೂ ಹೊತ್ತಿರುವ ಮನಮೋಹನ್ ಸಿಂಗ್ ಅವರ ಭೇಟಿಗೂ ಸುಶೀಲ್ ಕುಮಾರ್ ಅವಕಾಶ ಕೋರಿದ್ದಾರೆ.2010-11ರ ನಂತರದಲ್ಲಿ ಕೇಂದ್ರ ಮಾರಾಟ ತೆರಿಗೆ ಪ್ರಮಾಣ ತಗ್ಗಿಸಿದ್ದರಿಂದ ರಾಜ್ಯಗಳ ಆದಾಯದ ಪಾಲು ಕಡಿಮೆ ಆಯಿತು. ಈಗ ಅದಕ್ಕೆ ಪರಿಹಾರ ನೀಡದೇ ಇರಲು ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಇದರಿಂದ ದೇಶದಲ್ಲಿ ತೆರಿಗೆ ನೀತಿ ಸುಧಾರಣೆ ಕ್ರಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಜತೆಗೆ `ಜಿಎಸ್‌ಟಿ~ ಜಾರಿಯೂ ಕಷ್ಟವಾಗಲಿದೆ ಎಂದು ಮೋದಿ ಹೇಳಿದ್ದಾರೆ.`ರಾಜ್ಯಗಳಿಗೆ ಸಿಎಸ್‌ಟಿ ಕೊರತೆಯ ಪರಿಹಾರವನ್ನು ನೀಡಬಾರದು ಎಂಬ ನಿರ್ಧಾರವನ್ನು ಅರ್ಥಶಾಸ್ತ್ರಜ್ಞರೂ ಆದ ತಾವು ದಯಮಾಡಿ ಮರು ಪರಿಶೀಲಿಸಲೇಬೇಕು ಎಂದು ಬಹಳ ಕಳಕಳಿಯಿಂದ ಮನವಿ ಮಾಡುವೆ~ ಎಂದೂ ಅವರು ಗಮನ ಸೆಳೆಯಲೆತ್ನಿಸಿದ್ದಾರೆ.ಕೇಂದ್ರ ಮಾರಾಟ ತೆರಿಗೆ ಮೂಲಕ ಸಂಗ್ರಹವಾಗುವ ಹಣ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಿಕೆಯಾಗುತ್ತದೆ. 2007ರ ಏಪ್ರಿಲ್‌ನಲ್ಲಿ ನಡೆದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಮಾತುಕತೆಯಂತೆ ಜಿಎಸ್‌ಟಿ ಜಾರಿಗೂ ಮುನ್ನವೇ ಮುಂದಿನ ಮೂರು ವರ್ಷಗಳಲ್ಲಿ ಸಿಎಸ್‌ಟಿಯನ್ನು ಅನೂರ್ಜಿತಗೊಳಿಸುವುದು. ಈ ಮೂರು ವರ್ಷಗಳಲ್ಲಿ ತೆರಿಗೆ ಪ್ರಮಾಣವನ್ನು ಶೇ 3, ನಂತರ 2ಕ್ಕೆ ಹಂತ ಹಂತವಾಗಿ ಇಳಿಸುವುದು. ಇದರಿಂದ ರಾಜ್ಯಗಳಿಗೆ ಕೊರತೆ ಬೀಳುವ ತೆರಿಗೆ ಸಂಪನ್ಮೂಲಕ್ಕೆ ಕೇಂದ್ರ ಪರಿಹಾರ ನೀಡುವುದು ಎಂದು ನಿರ್ಧರಿಸಲಾಗಿದೆ. ಆ ಲೆಕ್ಕದಲ್ಲಿ 2010-11ರವರೆಗೆ ರಾಜ್ಯಗಳಿಗೆ ಆಗಿರುವ ತೆರಿಗೆ ನಷ್ಟಕ್ಕೆ ಕೇಂದ್ರ ಈಗಾಗಲೇ ಪರಿಹಾರ ಮೊತ್ತ ನೀಡಿದೆ.ಆದರೆ, ಜಿಎಸ್‌ಟಿ ಜಾರಿ 2010ರ ಏಪ್ರಿಲ್‌ನಲ್ಲಿ ಆಗಬೇಕಿದ್ದುದು ಮುಂದೆ ಹೋಗಿದೆ. ಹಾಗಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಇನ್ನೂ ತೆರಿಗೆ ನಷ್ಟದ ಪರಿಹಾರ ಒದಗಿಸಬೇಕು~ ಎಂಬುದೇ ಮೋದಿ ಅವರ ಮನವಿಯಾಗಿದೆ.

ಸಂಸತ್ತಿನಲ್ಲಿ ಮಂಡನೆ: ಇದೇ ವೇಳೆ, ಸಂಸದೀಯ ಸಮಿತಿಯೊಂದು `ಜಿಎಸ್‌ಟಿ~ಗೆ ಸಂಬಂಧಿಸಿದ ಸಂವಿಧಾನದ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿದೆ. ಈ ಹೊಸ ಮಸೂದೆಯಿಂದ `ಪರೋಕ್ಷ ತೆರಿಗೆ~ಯ ಕಾಲ ಚಾಲ್ತಿಗೆ ಬರಲಿದೆ ಎಂಬ ನಿರೀಕ್ಷೆಯೂ ಇದೆ. ಸಂಸದೀಯ ಸಮಿತಿ ತನ್ನ ವರದಿಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ನಂತರದಲ್ಲಿ ಈ ಹೊಸ ತೆರಿಗೆ ಪದ್ಧತಿ ದೇಶಾದ್ಯಂತ ಜಾರಿಗೆ ಬರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.