ಭಾನುವಾರ, ಮೇ 22, 2022
22 °C

ಪ್ರಬುದ್ಧ ರಾಜಕಾರಣಿ ಮುರಾರಿರಾವ್ ಘೋರ್ಪಡೆ

ಪ್ರಜಾವಾಣಿ ವಾರ್ತೆ, ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಸಂಡೂರಿನ ರಾಜ ಮನೆತನದಲ್ಲಿ ಹುಟ್ಟುತ್ತಲೇ ಚಿನ್ನದ ಚಮಚ ಹಿಡಿದರೂ, ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮುರಾರಿರಾವ್ ಯಶವಂತರಾವ್ ಘೋರ್ಪಡೆ (1931- 2011) ಸ್ವತಃ ಗಣಿಗಾರಿಕೆ ನಡೆಸಿದ್ದರೂ, ಪರಿಸರದ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು.ಸಂಡೂರು ರಾಜಮನೆತನದ ಕೊನೆಯ ರಾಜ ವೆಂಕಟರಾವ್ ಅವರು ಗಂಡು ಸಂತಾನವಿಲ್ಲದೆ 1928ರಲ್ಲಿ ತೀರಿಕೊಂಡಾಗ, ಬ್ರಿಟಿಷರು ಸಂಡೂರು ಸಂಸ್ಥಾನಕ್ಕೆ ಯಶವಂತ್‌ರಾವ್ ಘೋರ್ಪಡೆ ಅವರನ್ನು ನೇಮಿಸಿದರು.

ಮುರಾರಿರಾವ್ ಹುಟ್ಟುತ್ತಲೇ ಯಶವಂತರಾವ್‌ಘೋರ್ಪಡೆ ಅವರು 1932ರಲ್ಲಿ  ಹರಿಜನರಿಗೆ ದೇವಾಲಯಗಳಿಗೆ ಪ್ರವೇಶದ ಘೋಷಣೆ ಮಾಡಿ, ಹೆಸರಾಗಿದ್ದರಲ್ಲದೆ, ಮಹಾತ್ಮ ಗಾಂಧೀಜಿ ಅವರನ್ನು ಸಂಡೂರಿಗೆ ಆಹ್ವಾನಿಸಿದ್ದರು.1934ರಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಿದ್ದ ಇವರು, ಸಂಡೂರು ಸಂಸ್ಥಾನದ ಮೂಲಕ ಕಾನೂನಿನ ಮಹತ್ವದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿಯೂ ಶ್ರಮಿಸಿದ್ದರು.ಸಮಾನತೆಗೆ ಹೆಸರಾಗಿದ್ದ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡ ಮುರಾರಿರಾವ್, ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ದೇಶ ಸ್ವತಂತ್ರವಾಯಿತು.ರಾಷ್ಟ್ರದೊಂದಿಗೆ ವಿಲೀನಗೊಂಡ ಮೊದಲ ರಾಜಮನೆತನ ಎಂಬ ಕೀರ್ತಿಗೆ ಸಂಡೂರು ಭಾಜನವಾಯಿತು.

ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಅಪಾರ ಗೌರವ ಹೊಂದಿದ್ದ ಘೋರ್ಪಡೆ, ಗಣಿಗಾರಿಕೆ ನಡೆಸಿದರೂ ಪರಿಸರ ಹಾನಿಗೆ ಅವಕಾಶ ನೀಡದೆ, ಅರಣ್ಯ ಭೂಮಿಯ ಸಂರಕ್ಷಣೆಗೂ ಒತ್ತು ನೀಡಿದ್ದರು.ಬೇಟೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಇವರು, ಕಾಲಾಂತರದಲ್ಲಿ ಛಾಯಾಗ್ರಹಣದತ್ತ ಮುಖಮಾಡಿ, ಬೇಟೆಯನ್ನು ಕೈಬಿಟ್ಟು, ವನ್ಯಜೀವಿಗಳ ಜೀವನಶೈಲಿ ಕುರಿತು ಅಭ್ಯಸಿಸಿ, ಅವುಗಳ ಅಪರೂಪದ ಚಿತ್ರ ತೆಗೆದು ಅಂತರರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರರಾಗಿದ್ದರು.ಸಂಡೂರು ತಾಲ್ಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಕುಮಾರರಾಮ ಕಟ್ಟಿಸಿದ್ದ ಪ್ರದೇಶದಲ್ಲೇ `ಬೇಸಿಗೆ ಧಾಮ~ ಕಟ್ಟಿಕೊಂಡು, ಬೇಸಿಗೆಯನ್ನು ಅಲ್ಲೇ ಕಳೆಯುತ್ತಿದ್ದ ಇವರು, ಕೆಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದರು. ಡೂನ್ ಮಾದರಿಯ ಶಾಲೆ ಆರಂಭಿಸಿ ಹೊರ ರಾಜ್ಯದ ವಿದ್ಯಾರ್ಥಿಗಳೂ ಸಂಡೂರಿಗೆ ಬಂದು ಕಲಿಯುವಂತೆ ಮಾಡಿದ್ದರು ಘೋರ್ಪಡೆ.ಬಿಸಿಲಿಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಹಸಿರನ್ನುಟ್ಟುಕೊಂಡು ನಳನಳಿಸುತ್ತಿದ್ದ ಸಂಡೂರಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದ ಇವರು, `ಸೀ ಸಂಡೂರ್ ಇನ್ ಸೆಪ್ಟೆಂಬರ್~ (ಸಂಡೂರನ್ನು ಸೆಪ್ಟೆಂಬರ್‌ನಲ್ಲಿ ನೋಡಿ) ಎಂದು ಅನೇಕರನ್ನು ಆಹ್ವಾನಿಸುತ್ತಿದ್ದರು.ಸ್ಥಳೀಯ ಕರಕುಶಲಕಲೆಯನ್ನು ಪೋಷಿಸಲೆಂದೇ `ಸಂಡೂರು ಕರಕುಶಲ ಕೇಂದ್ರ~  ಸ್ಥಾಪಿಸಿ ಬುಡಕಟ್ಟು ಜನರಿಗೆ ಅವಕಾಶ ಕಲ್ಪಿಸಿ, ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಿದ್ದರು.ಬುಡಕಟ್ಟು ಜನಾಂಗದ ಅನೇಕ ಕರಕುಶಲಕರ್ಮಿಗಳು ಘೋರ್ಪಡೆ ಅವರ ಸಹಕಾರ, ಪ್ರೋತ್ಸಾಹದಿಂದ ವಿದೇಶ ಪ್ರವಾಸಕ್ಕೂ ತೆರಳಿ, ಸಂಡೂರಿನ ಕರಕುಶಲ ಕಲೆಯನ್ನು ಪ್ರದರ್ಶಿಸಿ ಬರುವಂತಾಯಿತು.ಪರಿಸರ ಪ್ರೇಮಿ: ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆಯಿಂದಲೇ ಕುಖ್ಯಾತಿಗೆ ಒಳಗಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ದೊರೆಯುವ ಅಪಾರ ಪ್ರಮಾಣದ ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಅದಿರು ಸ್ಥಳೀಯವಾಗಿಯೇ ಬಳಕೆಯಾಗಬೇಕು ಎಂಬ ದೂರದೃಷ್ಟಿಯನ್ನು ದಶಕಗಳ ಹಿಂದೆಯೇ ಹೊಂದಿದ್ದ ಇವರು, ಮೌಲ್ಯ ವರ್ಧನೆಗೆ ಆದ್ಯತೆ ನೀಡಿದ್ದರು.1954ರಲ್ಲಿ ತಂದೆ ಸ್ಥಾಪಿಸಿದ್ದ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಕಂಪೆನಿಗೆ ನಿರ್ದೇಶಕರಾಗಿ, ಅದನ್ನು 1968ರಲ್ಲಿ ಸಾರ್ವಜನಿಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಮೂಲಕ ಕಾರ್ಮಿಕರಿಗೆ ಸಕಲ ಸೌಲಭ್ಯ ದೊರಕಿಸಿಕೊಟ್ಟರು.ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಸದ್ಬಳಕೆ ಮಾಡಿ, ಉದ್ಯೋಗ ಸೃಷ್ಟಿಸುವ ಮಹದಾಸೆಯಿಂದ ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಕನಸು ಕಂಡಿದ್ದರು.1971ರ ಸೆಪ್ಟೆಂಬರ್ 14ರಂದು ತೋರಣಗಲ್ ಬಳಿ ಇವರ ಕನಸಿನ ಕೂಸಾದ ವಿಜಯನಗರ ಉಕ್ಕು ಕಾರ್ಖಾನೆಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.ಶ್ರೀಮಂತಿಕೆಯ ಹಿನ್ನೆಲೆಯಿದ್ದರೂ ಅಹಂ, ಅಹಂಕಾರಗಳನ್ನು ರೂಢಿಸಿಕೊಳ್ಳದೆ ಜನನಾಯಕರಾಗಿ ಹೊರಹೊಮ್ಮಿದ ಘೋರ್ಪಡೆ, ಮಿತಭಾಷಿಯಾಗಿದ್ದರಲ್ಲದೆ, ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದಿದ್ದರು. ದರ್ಪ, ಐಷಾರಾಮಿ ಜೀವನಕ್ಕೆ ಗಮನ ನೀಡದೆ, ಸರ್ಕಾರಿ ಯೋಜನೆಗಳು ಈ ಭಾಗದ ಜನತೆಗೆ ಲಭಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು.2004ರಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಮುರಾರಿರಾವ್ ಘೋರ್ಪಡೆ, ಹಸನ್ಮುಖಿಯಾಗಿ, ಸರಳ ಸಜ್ಜನಿಕೆಯ ಜೀವನಕ್ಕೆ ಹೆಸರಾಗಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.