ಬುಧವಾರ, ಏಪ್ರಿಲ್ 14, 2021
24 °C

ಪ್ರಬೋಧ ಚಂದ್ರೋದಯದ ಮರು ಉದಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸ್ಕೃತ ಸಾಹಿತ್ಯವು ಸಾವಿರಾರು ವರ್ಷಗಳಿಂದ ಕನ್ನಡವೂ ಸೇರಿ ಭಾರತದ ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚನೆಗೆ ಪ್ರೇರಣೆ ಮತ್ತು ಆಕರವನ್ನು ಒದಗಿಸಿದೆ. ಸಂಸ್ಕೃತದ ಸತ್ವಯುತ ಕೃತಿಗಳು ಶತಮಾನಗಳ ನಂತರವೂ ಕನ್ನಡದ ಕವಿಗಳಿಗೆ ಮೆಚ್ಚುಗೆಯಾಗಿ ಅವರು ಅವುಗಳನ್ನು ಉತ್ಸಾಹದಿಂದ ಕನ್ನಡಕ್ಕೆ ತಂದಿದ್ದಾರೆ.

 

ಹಾಗೆ ಕನ್ನಡಕ್ಕೆ ಬಂದ ಗಮನಾರ್ಹ ಕೃತಿಗಳಲ್ಲಿ 11ನೇ ಶತಮಾನದಲ್ಲಿ ಕೃಷ್ಣ ಮಿಶ್ರನು ರಚಿಸಿದ `ಪ್ರಬೋಧ ಚಂದ್ರೋದಯ~ ಎಂಬ ಸಂಸ್ಕೃತ ನಾಟಕವೂ ಸೇರಿದೆ. ಈ ನಾಟಕ ಶತಮಾನಗಳ ಅಂತರದ ನಂತರ 17ನೇ ಶತಮಾನದಲ್ಲಿ `ಪ್ರಬೋಧ ಚಂದ್ರೋದಯ~ ಹೆಸರಿನಲ್ಲೇ ಷಟ್ಪದಿ ಕಾವ್ಯವಾಗಿ ಕನ್ನಡಕ್ಕೆ ಬಂದಿದೆ.

 

ಈ ಕಾವ್ಯವನ್ನು ರಚಿಸಿದ್ದು ತಿಪಟೂರು ಸಮೀಪ ಹೊನ್ನವಳ್ಳಿಯ ಮಠಾಧೀಶರಾಗಿದ್ದ ಶ್ರಿ ಕರಿಯ ಸಿದ್ಧೇಶ ಎಂಬ ಕವಿ. ರಚನೆಯಾಗಿ ಶತಮಾನಗಳ ಅನಂತರ `ಪ್ರಬೋಧ ಚಂದ್ರೋದಯ~ ಕಾವ್ಯ ಈಗ ಪ್ರಕಟಣೆಯ ಭಾಗ್ಯ ಕಾಣುತ್ತಿದೆ.ಶ್ರಿ ಕರಿಯಸಿದ್ಧೇಶರು ಕವಿಮನಸ್ಸಿನ ಅಧ್ಯಾತ್ಮ ಸಾಧಕರು. ಅವರ ಕಾವ್ಯದಲ್ಲಿ ಹನ್ನೊಂದು ಸಂಧಿಗಳಿದ್ದು ಸಾವಿರದ ತೊಂಬತ್ತೊಂಬತ್ತು ಪದ್ಯಗಳಿವೆ. ಚಾರಿತ್ರಿಕ ಸಂಗತಿಗಳ ಸಾಕ್ಷ್ಯದಿಂದ ಈ ಕಾವ್ಯದ ರಚನೆ ಸುಮಾರು 1650ರಲ್ಲಿ ಆಗಿದೆ ಎಂದು ಹೇಳಬಹುದು. ಸಂಸ್ಕೃತ ನಾಟಕವನ್ನು ಕನ್ನಡದಲ್ಲಿ ಕಾವ್ಯರೂಪದಲ್ಲಿ ತಂದಿದ್ದರೂ ಅದರೊಳಗೆ ಅರಿಷಡ್ವರ್ಗಗಳು, ನವರಸಗಳು, ಗುಣಗಳು ಮುಂತಾದುವೇ ಪಾತ್ರಧಾರಿಗಳಾಗಿರುವ ಒಂದು ಕಲ್ಪಿತ ನಾಟಕವೇ ನಡೆದುಹೋಗುತ್ತದೆ.ಕೊನೆಯಲ್ಲಿ ಮನುಷ್ಯನ ಒಳ್ಳೆಯ ಗುಣಗಳಿಗೇ ವಿಜಯ ಎಂಬುದು ಕಾವ್ಯನೀತಿಯಾಗಿದೆ.

ಕ್ರಿ.ಶ. 1060ರ ಸುಮಾರಿಗೆ ರಚಿತವಾದ `ಪ್ರಬೋಧ ಚಂದ್ರೋದಯ~ ಒಂದು ವಿಶಿಷ್ಟ ರೂಪಕಾತ್ಮಕ ರಚನೆ. ಕೀರ್ತಿವರ್ಮ ಎಂಬ ರಾಜನು ಕರ್ಣದೇವ ಎಂಬುವನ ಮೇಲೆ ಸಾಧಿಸಿದ ವಿಜಯದ ನೆನಪಿಗೆ ಕೃಷ್ಣ ಮಿಶ್ರ ಎಂಬ ನಾಟಕಕಾರನು ಈ ರೂಪಕ ಪ್ರಧಾನ ನಾಟಕವನ್ನು ರಚಿಸಿದನೆಂದು ಹೇಳಲಾಗಿದೆ.ಈ ನಾಟಕದ ಮುಖ್ಯ ಉದ್ದೇಶ ಅದ್ವೈತ ಸಿದ್ಧಾಂತದ ಪ್ರಚಾರ. ಮನುಷ್ಯನ ಪರಸ್ಪರ ವಿರುದ್ಧ ಗುಣಗಳನ್ನೇ ಪಾತ್ರಗಳನ್ನಾಗಿ ಮಾಡಿ, ದುಷ್ಟ ಗುಣಗಳ ಮೇಲೆ ಶಿಷ್ಟ ಗುಣಗಳು ವಿಜಯ ಸಾಧಿಸುವುದನ್ನು, ಅದರಿಂದ ಜ್ಞಾನದ ಉದಯವಾಗುವುದನ್ನು ಸಂಕೇತಿಸುವುದು ಆ ನಾಟಕದ ವಸ್ತು. ಕರಿಯ ಸಿದ್ಧೇಶರ ಕಾವ್ಯದಲ್ಲೂ ಅದು ಸಾಧಿತವಾಗಿದೆ. ಕೃಷ್ಣ ಮಿಶ್ರನ ಸಂಸ್ಕೃತ ನಾಟಕ ಮುಂದಿನ ಶತಮಾನಗಳಲ್ಲಿ ಅನೇಕ ಕವಿಗಳು, ನಾಟಕಕಾರರನ್ನು ಆಕರ್ಷಿಸಿದೆ. ಸುಮಾರು 13ನೆಯ ಶತಮಾನದಲ್ಲೇ ವೇದಾಂತ ದೇಶಿಕನೆಂಬ ನಾಟಕಕಾರ ಇದೇ ನಾಟಕದ ವಸ್ತುವನ್ನು ಸ್ವಲ್ಪ ಬದಲಾಯಿಸಿಕೊಂಡು ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ್ಕಾಗಿ `ಸಂಕಲ್ಪ ಸೂರ್ಯೋದಯ~ ಎಂಬ ನಾಟಕ ಬರೆದಿದ್ದಾನೆ.ನಂತರದಲ್ಲಿ ಸಂಸ್ಕೃತ `ಪ್ರಬೋಧ ಚಂದ್ರೋದಯ~ ನಾಟಕವನ್ನು ಷಹಜಹಾನನ ಮಗ ದಾರಾ ಷುಕೋ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾನೆ. ಕ್ರಿ.ಶ. 1812ರಲ್ಲಿ ಜೆ. ಟೇಲರ್ ಎಂಬಾತ ಇದನ್ನು ಇಂಗ್ಲಿಷ್‌ಗೆ, ಕ್ರಿ.ಶ. 1835ರಲ್ಲಿ ಹರ್ಮನ್ ಬ್ರೂಕ್ಲಿಂಗ್ ಜರ್ಮನ್‌ಗೆ ಅನುವಾದಿಸಿದ್ದಾರೆ.ಸಂಸ್ಕೃತದ ನಾಟಕ `ಪ್ರಬೋಧ ಚಂದ್ರೋದಯ~ ತಮಿಳು, ತೆಲುಗು ಮುಂತಾದ ದೇಶೀ ಭಾಷೆಗಳಿಗೂ ನಾಟಕ ರೂಪದಲ್ಲಿಯೇ ಅನುವಾದಗೊಂಡಿದೆ. ಆದರೆ ಕನ್ನಡಕ್ಕೆ ಮಾತ್ರ ನಾಟಕವಾಗಿ ಅನುವಾದಗೊಳ್ಳದೆ ಕಾವ್ಯವಾಗಿ ಮೂಡಿ ಬಂದಿದೆ. ಇದೊಂದು ವಿಶೇಷ ಸಂಗತಿ.ಈ ಅಪೂರ್ವ ಕೃತಿಯ ಹಸ್ತಪ್ರತಿಯನ್ನು ತಮ್ಮ ಗುರುಗಳಾದ ಪ್ರೊ ಡಿ.ಎಲ್. ನರಸಿಂಹಾಚಾರ್ಯರಿಂದ ಪಡೆದಿದ್ದ ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಎನ್. ಬಸವಾರಾಧ್ಯ ಅವರು ಜೋಪಾನವಾಗಿ ಇಟ್ಟುಕೊಂಡಿದ್ದರು. ಈ ಕಾವ್ಯಕ್ಕೆ ಇದುವರೆಗೆ ಸಿಕ್ಕಿರುವುದು ಒಂದೇ ಹಸ್ತಪ್ರತಿ. ಪ್ರತಿಕಾರನ ದೋಷಗಳೂ ಸೇರಿಕೊಂಡು ಕಾವ್ಯ ಅನೇಕ ಕಡೆ ಕ್ಲಿಷ್ಟವಾಗಿದೆ.ಈ ಏಕೈಕ ಹಸ್ತಪ್ರತಿಯನ್ನು ಬಹಳ ಕಷ್ಟಪಟ್ಟು ಗ್ರಂಥಸಂಪಾದನೆ ಮಾಡಿ ಪ್ರಕಟನೆಗೆ ಸಿದ್ಧಪಡಿಸಿಕೊಟ್ಟು ಬಸವಾರಾಧ್ಯ ಅವರು ಕನ್ನಡ ಕಾವ್ಯಲೋಕಕ್ಕೆ ಗಮನಾರ್ಹ ಕಾಣಿಕೆ ನೀಡಿದ್ದಾರೆ. ಮುಂದೆ ಇದರ ಇನ್ನಷ್ಟು ಪ್ರತಿಗಳು ದೊರೆಯಬಹುದೆಂಬ ಆಶಾಭಾವನೆಯೊಡನೆ ಡಾ. ಸಿ. ವೀರಣ್ಣ ಅವರು ಈ ಕಾವ್ಯವನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದ್ದಾರೆ.ಇಂದು ಬೆಂಗಳೂರಿನಲ್ಲಿ `ಪ್ರಬೋಧ ಚಂದ್ರೋದಯ~ ಕೃತಿಯ ಬಿಡುಗಡೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.