ಸೋಮವಾರ, ಜನವರಿ 20, 2020
29 °C

ಪ್ರಶ್ನೆ –ಉತ್ತರ

ಡಾ. ಎಚ್. ಎನ್. ಸುಬ್ರಹ್ಮಣ್ಯಂ,ಪ್ರೊಫೆಸರ್,ಬೇಸ್ ಎಜುಕೇಷನಲ್ ಸರ್ವೀಸ್ ಸಂಸ್ಥೆ Updated:

ಅಕ್ಷರ ಗಾತ್ರ : | |

ಪ್ರಕಾಶ್, ಶಿವಮೊಗ್ಗ

ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಜೀವಶಾಸ್ತ್ರದಲ್ಲಿ ಅತೀವ ಆಸಕ್ತಿ ಇದೆ. ಮುಂದೆ ಎಂ.ಬಿ.ಬಿ.ಎಸ್. ಮಾಡಬೇಕೆಂಬ ಹಂಬಲ ಇದೆ. ಆದರೆ ನಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.
-ಎಂ.ಬಿ.ಬಿ.ಎಸ್.ಗೆ ಹೋಗಬೇಕೆಂಬ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು, ನೀವು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಎರಡರಲ್ಲೂ ಉತ್ತಮ ಅಂಕಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಇದಕ್ಕೆ ಬೇರೆ ಬೇರೆ ವಿಷಯಗಳನ್ನು ಬೇರೆ ಬೇರೆ ರೀತಿ ಓದಬೇಕೆಂಬುದನ್ನು ತಿಳಿಯಬೇಕು. ಜೀವಶಾಸ್ತ್ರ ಹೆಚ್ಚು ವಿವರಣಾತ್ಮಕ ವಿಷಯವಾಗಿರುವುದರಿಂದ ಮತ್ತೆಮತ್ತೆ ಓದುವುದರಿಂದ ವಿಷಯಗಳನ್ನು ಜ್ಞಾಪಕ­ದಲ್ಲಿರಿಸಿಕೊಂಡು ಪರೀಕ್ಷೆಯಲ್ಲಿ ಉತ್ತರಿಸಬಹುದು.ಆದರೆ ಭೌತಶಾಸ್ತ್ರವನ್ನು ಹೀಗೆ ಓದಲಾಗುವುದಿಲ್ಲ. ಭೌತಶಾಸ್ತ್ರದ ನಿಯಮಗಳನ್ನು ಅರ್ಥಮಾಡಿಕೊಂಡು ಅವುಗಳ ಸಮಸ್ಯೆಯನ್ನು ಬಿಡಿಸುವುದರಲ್ಲಿ ಗಣಿತಾತ್ಮಕವಾಗಿ ಉಪಯೋಗಿಸಬೇಕು. ಈ ಕೌಶಲ್ಯವನ್ನು ಸಂಪಾದಿಸಲು ನೂರಾರು ಭೌತಶಾಸ್ತ್ರ ಸಮಸ್ಯೆಗಳನ್ನು ಬಿಡಿಸಬೇಕು. ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಬೇರೆ ಬೇರೆ ವಿಷಯಗಳನ್ನು ಹೇಗೆ ಅಧ್ಯಯನಮಾಡಿಕೊಂಡು ತಿಳಿದು ಎಲ್ಲ ವಿಷಯಗಳಲ್ಲೂ ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರಯತ್ನಿಸಿ.

ಮಂಜುಶ್ರೀ ಎಸ್., ಸಿಂಧನೂರು, ರಾಯಚೂರು ಜಿಲ್ಲೆ

ನಾನು ಹೈದರಾಬಾದಿನ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಮುಗಿಸಿದ್ದೇನೆ. ನನಗೆ ಮೊದಲ ವರ್ಷದಲ್ಲಿ ಇಂಗ್ಲಿಷ್, ಮಾಡರ್ನ್ ಇಂಡಿಯನ್ ಲಾಂಗ್ವೇಜ್, ಸೈನ್ & ಟೆಕ್ನಾಲಜಿ ಮತ್ತು ಸೋಶಿಯಲ್ ಸೈನ್ಸ್ ವಿಷಯಗಳು ಇದ್ದವು. ಎರಡನೇ ವರ್ಷದಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗ­ಳಿದ್ದವು. ನಾನು ಈ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ. ಮಾಡಿದರೆ ನನಗೆ ಪ್ರೌಢಶಾಲೆಯ ಸಹ ಶಿಕ್ಷಕರ ಹುದ್ದೆಗೆ ಭಡ್ತಿ ಮತ್ತು ನೇಮಕಾತಿಯಲ್ಲಿ ಅವಕಾಶ ಇರುತ್ತದೆಯೇ? ದಯವಿಟ್ಟು ಮಾರ್ಗದರ್ಶನ ಕೊಡಿ.
–ಮುಕ್ತವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಮಾಡಿದರೂ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನೌಕರಿ ಗಳಿಸಲು ಅರ್ಹರಾಗುತ್ತೀರಿ. ಆದರೆ ಬಿ.ಇಡಿ ಮಾಡುವಾಗ ಸೂಕ್ತ ವಿಷಯಗಳನ್ನು ಆಯ್ಕೆಮಾಡಿಕೊಳ್ಳಬೇಕು. ಬಿ.ಎಸ್ಸಿ.ಯಲ್ಲಿ ವಿಶಾಲವಾಗಿ ಅಧ್ಯಯನ ಮಾಡಿದ ವಿಷಯಗಳನ್ನೇ ಬಿ.ಇಡಿ.ಯಲ್ಲಿ ಆರಿಸಿಕೊಳ್ಳಬೇಕು. ವಿಜ್ಞಾನ, ಮಾನವಶಾಸ್ತ್ರ ಮತ್ತು ಆಂಗ್ಲ/ಕನ್ನಡ ಭಾಷೆ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಬಿ.ಇಡಿ ಮಾಡಿದರೆ ಪ್ರೌಢಶಾಲಾ ಬೋಧ­ನೆಗೆ ಸಹಾಯವಾಗು­ತ್ತದೆ. ತಾಂತ್ರಿಕ ಕಾರಣಗಳಿಂದ ಸರ್ಕಾರಿ ಉದ್ಯೋಗ ಸಿಗಲು ತೊಂದರೆಯಾ­ದರೂ ಖಾಸಗೀ ಪ್ರೌಢಶಾಲೆಗಳಲ್ಲಿ ಹೇರಳವಾಗಿ ಉದ್ಯೋಗಗಳು ಸಿಗುತ್ತವೆ.

ವೆಂಕಟೇಶ ಎಚ್.ಜಿ., ತುಮಕೂರು

ನಾನು ಮೆಕ್ಯಾನಿಕಲ್ ವಿಭಾಗಲದಲ್ಲಿ ೫ನೇ ಸೆಮಿಸ್ಟರ್ ಡಿಪ್ಲಮೋ ಓದುತ್ತಿದ್ದೇನೆ. ನನಗೆ ಬಿ.ಇ. ಮಾಡಬೇಕೆಂಬ ಕನಸು ಇದೆ. ಆದರೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಲ್ಲಿ ನಾನು ಉದ್ಯೋಗಕ್ಕೆ ಸೇರಲೇ ಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ನಾನು ಉದ್ಯೋಗಕ್ಕೆ ಸೇರಿಕೊಂಡು ಸಂಜೆ ಕಾಲೇಜಿನಲ್ಲಿ ಓದು ಮುಂದುವರೆಸಬೇಕೆಂದಿದ್ದೇನೆ. ಆದ್ದರಿಂದ ಬಿ.ಇ.ಗಾಗಿ ಸಂಜೆ ತರಗತಿಗಳನ್ನು ನಡೆಸುವ ಕಾಲೇಜುಗಳ ಬಗ್ಗೆ ತಿಳಿಸಿಕೊಡಿ. ಸಂಜೆ ಕಾಲೇಜಿಗೆ ಸೇರುವುದಾದರೂ ಸಿ.ಇ.ಟಿ. ಬರೆಯಬೇಕೆ? ನಾನು ಡಿಪ್ಲಮೋ ಓದಿರುವುದರಿಂದ ಎರಡನೇ ವರ್ಷಕ್ಕೆ ನೇರ ಪ್ರವೇಶ ಪಡೆಯಬಹುದೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.
-ಆರ್ಥಿಕ ತೊಂದರೆಯಿಂದ ಹಗಲಿನ ಕಾಲೇಜಿನಲ್ಲಿ ಬಿ.ಇ ಮಾಡಲಾರದವರಿ­ಗೋಸ್ಕರವೇ ಸಂಜೆ ಕಾಲೇಜುಗಳಿರುವುದು. ನೀವು ಡಿಪ್ಲಮೋ ಮುಗಿಸಿಕೊಂಡು ಉದ್ಯೋಗಕ್ಕೆ ಸೇರಿಕೊಂಡೇ ಸಂಜೆ ಕಾಲೇಜಿನಲ್ಲಿ ಬಿ.ಇ. ಮಾಡಬಹುದು. ಇದಕ್ಕಾಗಿ ನೀವು ಡಿಪ್ಲಮೋ ಮುಗಿದ ನಂತರ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಉತ್ತಮ ರ್‍ಯಾಂಕ್ ಪಡೆಯಬೇಕು. ಡಿಪ್ಲಮೋ ಮುಗಿಸಿರುವವರು ಬಿ.ಇ ಎರಡನೆಯ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆಯಬಹುದು.

ಆಂಜನೇಯ ಯರಮರಸ್, ರಾಯಚೂರು

ನಮ್ಮ ಮಗಳನ್ನು ಈ ವರ್ಷ ಬಿ.ಇ. ಕಂಪ್ಯೂಟರ್ ಸೈನ್ಸ್‌ಗೆ ಸರ್ಕಾರಿ ಇಂಜನಿಯರಿಂಗ್ ಕಾಲೇಜಿಗೆ ಸೇರಿಸಿದ್ದೇವೆ. ಆದರೆ ನಮ್ಮ ಹಿತೈಷಿಗಳು ಕಂಪ್ಯೂಟರ್ ಸೈನ್ಸ್‌ಗೆ ಯಾಕೆ ಸೇರಿಸಿದ್ರಿ. ಬೇರೆ ವಿಭಾಗಗಳಾದ ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಾನಿಕ್ಸ್ ಇನ್ನಿತರ ಯಾವುದಾದರೂ ಒಂದಕ್ಕೆ ಸೇರಿಸಬೇಕಿತ್ತು. ಕಂಪ್ಯೂಟರ್ ಸೈನ್ಸ್‌ಗೆ ತಕ್ಷಣವೇ ಸರ್ಕಾರಿ ಅಥವಾ ಖಾಸಗೀ ಕಂಪನಿಗಳಲ್ಲಿ ನೌಕರಿ ಸಿಗುವುದಿಲ್ಲ ಎನ್ನುತ್ತಿದ್ದಾರೆ. ತುಂಬಾ ಗೊಂದಲವಾಗಿದೆ. ಹಾಗೇನಾದರೂ ಇದ್ದರೆ ನಾವು ದ್ವಿತೀಯ ಸೆಮಿಸ್ಟರ್‌ನಲ್ಲಿ ನಾವು ಸಿವಿಲ್ ಅಥವಾ ಬೇರೆ ವಿಭಾಗಕ್ಕೆ ಬದಲಾಯಿಸಿಕೊಳ್ಳಬಹುದಲ್ಲವೇ? ದಯಮಾಡಿ ಸೂಕ್ತ ಸಲಹೆ ಕೊಡಿ.
- ನಿಮ್ಮ ಮಗಳು ಯಾವ ವಿಭಾಗದಲ್ಲಿ ಬಿ.ಇ ಓದಬೇಕೆಂಬುದನ್ನು ನಿಮ್ಮ ಮಗಳ ಆಸಕ್ತಿಗೇ ಬಿಡುವುದು ಒಳ್ಳೆಯದು. ಎಲ್ಲ ವಿಭಾಗಗಳಿಗೂ ಉದ್ಯೋಗಾವಕಾಶಗಳು ಇವೆ. ಉಳಿದ ವಿಭಾಗಗಳಿಗೆ ಹೋಲಿಸಿದರೆ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ ನೀವು ಆತಂಕ ಪಡುವ ಅಗತ್ಯವಿಲ್ಲ ಮತ್ತು ನಿಮ್ಮ ಹಿತೈಷಿಗಳ ಮಾತುಗಳನ್ನು ಕೇಳುವ ಅಗತ್ಯವೂ ಇಲ್ಲ. ನಿಮ್ಮ ಮಗಳ ಆಸಕ್ತಿ ಯಾವ ವಿಭಾಗದ ಕಡೆ ಇದೆ ಎಂಬುದನ್ನು ತಿಳಿದು ಮುಂದುವರಿಯಿರಿ.  ಯಾವ ವಿಭಾಗವನ್ನು ಆರಿಸಿಕೊಂಡರೂ ಅದರಲ್ಲಿ ಉತ್ತಮ ಜ್ಞಾನವನ್ನು ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು. ಆಸಕ್ತಿ ಇದ್ದರೆ ಮಾತ್ರ ಇದೆಲ್ಲಾ ಸಾಧ್ಯ.

ಪ್ರಿಯಾ, ಮೈಸೂರು

ನಾನು ಈಗ ಗೃಹಿಣಿ. ೧೯೯೭ರಲ್ಲಿ ಬಿ.ಎಸ್ಸಿ. (ಸಿ.ಬಿ.ಝೆಡ್) ಯನ್ನು ಬೆಂಗಳೂರಿನ ಕಾಲೇಜಿನಲ್ಲಿ ಮುಗಿಸಿದ್ದೆ. ಆದರೆ ದ್ವಿತೀಯ ಹಾಗೂ ತೃತೀಯ ವರ್ಷದಲ್ಲಿ ಕೆಲವು ವಿಷಯಗಳು ಅನುತ್ತೀರ್ಣವಾಗಿವೆ. ಆದ್ದರಿಂದ ಈಗ ನಾನು ಅದನ್ನು ಓದಿ ಬರೆಯಬಹುದೇ? ಅಂದಿನ ಪಠ್ಯಕ್ರಮ ಆಗುತ್ತದೋ ಅಥವಾ ಹೊಸ ಪಠ್ಯಕ್ರಮ ಓದಬೇಕೋ? ಅಂತೆಯೇ ನಾನು ಈಗ ಮೈಸೂರಿನಲ್ಲಿರುವುದರಿಂದ ಪರೀಕ್ಷಾ ಕೇಂದ್ರವನ್ನು ಅಲ್ಲಿಗೇ ಬದಲಾಯಿಸಿಕೊಳ್ಳಬಹುದೇ? ನನಗೆ ಮುಂದೆ ಬಿ.ಇಡಿ. ಮಾಡಬೇಕೆಂಬ ಅಸೆ. ಆದರೆ. ದಯಮಾಡಿ ಸೂಕ್ತ ಲಸಹೆ ಮತ್ತು ಮಾರ್ಗದರ್ಶನ ಕೊಡಿ.
– ನೀವು ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಂಡು ಬಿ.ಎಸ್ಸಿ. ಮುಗಿಸಬಹುದು. ಇದಕ್ಕೆ ವಿಶ್ವವಿದ್ಯಾಲಯದ ಅನುಮತಿ ಅಗತ್ಯ. ಆದರೆ ಪದವಿಗೆ ಪ್ರವೇಶ ಪಡೆದ ಇಂತಿಷ್ಟೇ ವರ್ಷಗಳಲ್ಲಿ ಮುಗಿಸಿಕೊಳ್ಳಬೇಕು ಎಂಬ ನಿಯಮಗಳಿರುತ್ತವೆ. ಆದ್ದರಿಂದ ನೀವು ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸಿ, ಅವಕಾಶವಿದ್ದರೆ ದಂಡಶುಲ್ಕ ನೀಡಿ ಅರ್ಜಿ ಹಾಕಿ. ಬದಲಾಗಿರುವ ಈಗಿನ ಪಠ್ಯಕ್ರಮವನ್ನು ತಿಳಿದುಕೊಂಡು ಸೂಕ್ತ ಸಿದ್ಧತೆ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಮತ್ತೆ ಪ್ರವೇಶ ಪಡೆದು ಓದಲು ಅವಕಾಶಗಳಿರುತ್ತವೆ. ಬಿ.ಎಸ್ಸಿ. ನಂತರ ಬಿ.ಎಡ್ ಅನ್ನು ನೀವು ಮುಕ್ತ ವಿಶ್ವವಿದ್ಯಾಲಯಗಳ ಮುಖಾಂತರ ಮಾಡಬಹುದು.

ಸುಮ

ನಾನು ಪಿ.ಯು.ಸಿ. ವಿಜ್ಞಾನ ಮುಗಿಸಿ ೪ ವರ್ಷಗಳು ಕಳೆದಿವೆ. ಮನೆಯಲ್ಲಿನ ಆರ್ಥಿಕ ಸ್ಥಿತಿಯಲ್ಲಿ ಮುಂದೆ ಓದಲು ಸಾಧ್ಯವಾಗಲಿಲ್ಲ. ನನಗೆ ಕೆ.ಎ.ಎಸ್ / ಐ.ಎ.ಎಸ್ ನಂತಹ ಪರೀಕ್ಷೆಗಳನ್ನ ಬರೆಯಬೇಕೆಂಬ ಆಶೆ ಇದೆ. ಪಯೋನಿಯರ್ ವಿಶ್ವವಿದ್ಯಾಲಯದ ಮೂಲಕ ಅಂತಿಮ ವರ್ಷದ ಬಿ.ಎಸ್ಸಿ. ಪಡೆದರೆ ಅದಕ್ಕೆ ಮಾನ್ಯತೆ ಇದರುತ್ತದೆಯೇ? ಈ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ. ಮಾನ್ಯತೆ ಪಡೆದಿದೆಯೇ? ಏನು ಮಾಡಬೇಕೆಂದು ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಮತ್ತು ಆರ್ಗದರ್ಶನ ಕೊಡಿ.
-ಆರ್ಥಿಕ ಸಂಕಷ್ಟಗಳ ಕಾರಣದಿಂದ ನೀವು ವಿದ್ಯಾಭ್ಯಾಸವನ್ನು ಮುಂದುವರಿಸಲಾಗದಿದ್ದುದು ಅತ್ಯಂತ ಖೇದಕರ. ಆದರೆ ನಿಮ್ಮಂತಹ ದುರದೃಷ್ಟಶಾಲಿಗಳಿಗಾಗಿಯೇ ಮುಕ್ತ ವಿಶ್ವವಿದ್ಯಾಲಯದ ಬಾಗಿಲುಗಳು ತೆರೆದಿವೆ. ಈ ವಿಶ್ವವಿದ್ಯಾಲಯಗಳ ಮೂಲಕ ನೀವು ಪದವೀಧರರಾಗಬಹುದು. ಪದವಿಯನ್ನು ಪಡೆದ ನಂತರ ನೀವು ಕೆ.ಎ.ಎಸ್/ಐ.ಎ.ಸ್ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಆಯ್ಕೆ ಪರೀಕ್ಷೆಗಳಿಗೆ ಅಗತ್ಯವಾದ ಮನೋಧರ್ಮವನ್ನು ನೀವು ಈಗಿನಿಂದಲೇ ರೂಢಿಸಿಕೊಳ್ಳಲು ಪ್ರಾರಂಭಿಸಿ. ವೃತ್ತ ಪತ್ರಿಕೆಗಳನ್ನು ನಿಯತವಾಗಿ ಓದಿ ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಕಲೆ, ಸಂಸ್ಕೃತಿ, ವಿಜ್ಞಾನ, ಕ್ರೀಡೆ, ರಾಜನೀತಿ- ಇವುಗಳ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳಿ.  ದೀರ್ಘಕಾಲೀನ ಸಿದ್ಧತೆ ಮಾತ್ರ ಆಯ್ಕೆ ಪರೀಕ್ಷೆಗಳಲ್ಲಿ ನಿಮಗೆ ಯಶಸ್ಸನ್ನು ತರುತ್ತದೆ. ಒಂದೇ ವರ್ಷದಲ್ಲಿ ಪದವಿ ಪಡೆಯಲು ಸಾಧ್ಯವಿಲ್ಲ. ಹಾಗೆ ಪಡೆಯುವ ಪದವಿಗೆ ಸೂಕ್ತ ಮಾನ್ಯತೆ ಇರುವುದಿಲ್ಲ.

ಪ್ರತಿಕ್ರಿಯಿಸಿ (+)