ಗುರುವಾರ , ಮೇ 13, 2021
39 °C

ಪ್ರಶ್ನೋತ್ತರ?

ಯು.ಪಿ. ಪುರಾಣಿಕ್ (ಬ್ಯಾಂಕಿಂಗ್,ಹಣಕಾಸು ತಜ್ಞ) Updated:

ಅಕ್ಷರ ಗಾತ್ರ : | |

ವಿಶ್ವನಾಥ ಜಂಬಗಿ, ಕುಲಹಳ್ಳಿ, ಜಮಖಂಡಿ ತಾಲ್ಲೂಕು

ಪ್ರಶ್ನೆ: ನಾನು ಸರ್ಕಾರಿ ನೌಕರ. ವಯಸ್ಸು 24 ವರ್ಷ. ಸಂಬಳ ಮಾಸಿಕ ರೂ16,000.  ತಂದೆ-ತಾಯಿ ಹಾಗೂ ಇಬ್ಬರು ತಮ್ಮಂದಿರು ನನ್ನೊಡನಿದ್ದಾರೆ. ನನಗೆ ಮತ್ತು ಮನೆಯವರೆಲ್ಲರಿಗೂ ವಿಮೆ ಮಾಡಿಸಬೇಕೆಂದಿದ್ದೇನೆ. ಮನೆ ಕಟ್ಟಿಸಬೇಕು ಹಾಗೂ ಭೂಮಿ ಖರೀದಿಸಬೇಕು ಎನ್ನುವುದು ನನ್ನ ಮುಂದಿನ ಯೋಜನೆ. ಎಲ್‌ಐಸಿ, ಪಿಎಲ್‌ಐ, ಆರ್‌ಡಿ ಇವುಗಳಲ್ಲಿ ಯಾವುದು ಸೂಕ್ತ. ಹಣ ಉಳಿತಾಯದ ಇತರೆ ಮಾರ್ಗಗಳನ್ನು ತಿಳಿಸಿಕೊಡಿ.



ಉತ್ತರ: ನೀವು ತಂದೆ-ತಾಯಿ ಹಾಗೂ ತಮ್ಮಂದಿರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವೆ. ಸದ್ಯದ ಆದಾಯದಲ್ಲಿ ನಿಮ್ಮ ಹೆಸರಿನಲ್ಲಿ `ಎಲ್‌ಐಸಿ'ಯ ಜೀವನ್ ಆನಂದ್ ಜೀವವಿಮಾ ಪಾಲಿಸಿ ಮಾಡಿಸಿ ವಾರ್ಷಿಕವಾಗಿ ರೂ2000 ತುಂಬಿರಿ. ರೂ1000ಕ್ಕೆ 10 ವರ್ಷಗಳ ಅವಧಿಗೆ ಆರ್.ಡಿ. ಆರಂಭಿಸಿ. ಉಳಿತಾಯಕ್ಕೆ ನೂರಾರು ಮಾರ್ಗಗಳಿವೆ. ಮುಂದೆ ನಿಮ್ಮ ಆದಾಯ ಹೆಚ್ಚಿದಾಗ ಭೂಮಿ ಖರೀದಿ ಹಾಗೂ ಮನೆ ಕಟ್ಟುವ ಯೋಜನೆ ಕೈಗೆತ್ತಿಕೊಳ್ಳಿ. ಸಣ್ಣ ವಯಸ್ಸಿನಲ್ಲಿ ಹೆಚ್ಚಿನ ಉಳಿತಾಯ ಮಾಡಬೇಕು ಎನ್ನುವ ಆಕಾಂಕ್ಷೆ, ಜೀವನದಲ್ಲಿ ಹೆಚ್ಚಿನ ಸಾಧನೆಗೆ ದಿಕ್ಸೂಚಿಯಾಗುತ್ತದೆ. ನಿಮ್ಮ ಎಲ್ಲಾ ಆಸೆ-ಆಕಾಂಕ್ಷೆ ಭವಿಷ್ಯದಲ್ಲಿ ಈಡೇರಲಿ.



ಶಂಕರ್, ಕೊಳ್ಳೇಗಾಲ

ಪ್ರಶ್ನೆ: ನಾನು ಒಂದು ವರ್ಷದಿಂದ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ವೇತನ ರೂ 11,600. ಇದರಲ್ಲಿ ಎನ್‌ಸಿಎಸ್ ರೂ1160, ಕೆಜಿಐಡಿ ರೂ1200, ಎಲ್‌ಐಸಿ ರೂ 550 ಕಡಿತವಾಗುತ್ತದೆ. ನಮ್ಮ ಕುಟುಂಬದ ಸಾಲ ರೂ1 ಲಕ್ಷವಿದೆ. ಮುಂದಿನ ಆರು ತಿಂಗಳಲ್ಲಿ ಅಣ್ಣನ ವಿವಾಹವಿದ್ದು, ರೂ 2 ಲಕ್ಷ ಅಗತ್ಯವಾಗಿದೆ. ಇರುವ ಸಾಲ ತೀರಿಸಿ ಯಾವ ರೀತಿ ಉಳಿತಾಯ ಮಾಡಬಹುದು ಹಾಗೂ ನನಗೂ 2014ರಲ್ಲಿ ವಿವಾಹವಾಗಬೇಕಿದೆ. ದಯಮಾಡಿ ಉತ್ತಮ ಸಲಹೆ ನೀಡಿ.



ಉತ್ತರ: ನಿಮ್ಮ ಸಂಬಳ ರೂ11,600 ಹಾಗೂ ಕಡಿತ ರೂ2910. ಒಟ್ಟಿನಲ್ಲಿ ನೀವು ಕೊನೆಗೆ ರೂ8690  ಪಡೆಯುತ್ತೀರಿ. ನಿಮ್ಮ ಖರ್ಚಿಗೆ ಕನಿಷ್ಠ ರೂ5000ವಾದರೂ ಬೇಕಾದೀತು. ನೀವು ಗರಿಷ್ಠ ರೂ4000 ಉಳಿಸಬಹುದು. ನಿಮಗೆ ಈಗಿರುವ ರೂ1 ಲಕ್ಷ ಸಾಲ ತೀರಿಸಲು ನೀವು ಉಳಿಸಬಹುದಾದ ರೂ4000ದಿಂದಲೇ ಆರಂಭಿಸಿದರೆ, ಸಾಲ ತೀರಲು ಕನಿಷ್ಠ 30 ತಿಂಗಳಾದರೂ ಬೇಕಾದೀತು. ನಿಮ್ಮ ಮುಂದೆ ಕೆಲವು ಸಮಸ್ಯೆಗಳಿರುವುದರಿಂದ ಉಳಿತಾಯದ ಯೋಜನೆಯನ್ನು ಸ್ವಲ್ಪ ಮುಂದೂಡಬೇಕಾಗುತ್ತದೆ. ವಾರ್ಷಿಕ ಇನ್ಕ್ರಿಮೆಂಟ್ ಬಂದಾಗ ಆ ಮೊತ್ತಕ್ಕೆ ಸರಿಯಾಗಿ 10 ವರ್ಷಗಳ ಅವಧಿಗೆ ಆರ್.ಡಿ ಮಾಡಿರಿ ಹಾಗೂ ಪ್ರತಿ ವರ್ಷ ಹೀಗೆ ಉಳಿತಾಯ ಮಾಡುತ್ತಾ ಬನ್ನಿ.



ದೀಪಕ್, ಬಳ್ಳಾರಿ

ಪ್ರಶ್ನೆ: ನಾನು ಭಾರತೀಯ ಅಂಚೆ ಕಚೇರಿ ನೌಕರ. ವಯಸ್ಸು 23. ನಾಲ್ಕು ವರ್ಷಗಳಿಂದ ನೌಕರಿ ಮಾಡುತ್ತಿದ್ದು, ಸಂಬಳ ರೂ20,500. ಪಿ.ಎಲ್.ಐ ರೂ1,950 ಹಾಗೂ ಅಂಚೆ ಕಚೇರಿ ಆರ್.ಡಿ.ಗೆ ರೂ 500 ಕಡಿತವಾಗುತ್ತದೆ. ತಿಂಗಳ ಖರ್ಚು ರೂ. 6,000. ಇದಿಷ್ಟು ಬಿಟ್ಟರೆ ಬೇರೆ ಉಳಿತಾಯ ಸಾಧ್ಯವಾಗಿಲ್ಲ. ನಿಮ್ಮ ಸಲಹೆ ಸಿಕ್ಕಿದ ತಕ್ಷಣ ಅವನ್ನು ಪಾಲಿಸುವೆ.



ಉತ್ತರ: ನೀವು ನಿಮ್ಮ 19ನೇ ವರ್ಷದಲ್ಲಿ ಅಂಚೆ ಕಚೇರಿ ನೌಕರಿಗೆ ಸೇರಿದ್ದೀರಿ. ನಿಮಗೆ 37 ವರ್ಷಗಳ ಸುದೀರ್ಘ ಸೇವೆಯ ಅವಕಾಶವಿದೆ. ಇನ್ನು 3-4 ವರ್ಷದಲ್ಲಿ ನಿಮಗೆ ಮದುವೆಯಾಗಬಹುದು. ಈ ಅವಧಿಗೆ ಹಾಗೂ ಮುಂದಿನ ಭವಿಷ್ಯಕ್ಕಾಗಿ ನೀವು ಹೆಚ್ಚಿನ ಉಳಿತಾಯ ಮಾಡಬೇಕಾದ ಅಗತ್ಯವಿದೆ. ಪಿ.ಎಲ್.ಐ ಹಾಗೂ ಆರ್.ಡಿ ಕಡಿತವಾದ ನಂತರ ರೂ18,050 ನಿಮ್ಮ ಕೈ ಸೇರುತ್ತದೆ. ನಿಮ್ಮ ಖರ್ಚಿಗೆ ಗರಿಷ್ಠ ರೂ5,000 ಇಟ್ಟುಕೊಂಡು ಬಾಕಿ ರೂ13,050 ಮೊತ್ತವನ್ನು ಈ ಕೆಳಗಿನಂತೆ ಉಳಿತಾಯ ಮಾಡಲು ಆರಂಭಿಸಿ.



ಐದು ವರ್ಷಗಳ ಅವಧಿಗೆ ರೂ 5,000 ಆರ್.ಡಿ. ಮಾಡಿ. ಈ ಅವಧಿಯಲ್ಲಿ ನಿಮ್ಮ ಮದುವೆಯಾದರೆ ಮಧ್ಯದಲ್ಲಿಯೇ ಆರ್.ಡಿ ನಿಲ್ಲಿಸಿ ಅಲ್ಲಿಯವರೆಗೆ ಕಟ್ಟಿದ ಹಣ ವಾಪಾಸ್ ಪಡೆದು ಮದುವೆ ಖರ್ಚಿಗೆ ಉಪಯೋಗಿಸಿ. ಇದೇ ವೇಳೆ ತಿಂಗಳಿಗೆ ಕನಿಷ್ಠ ರೂ 3,000 ಎನ್.ಪಿ.ಎಸ್‌ನಲ್ಲಿ ತೊಡಗಿಸಿ. ಇದರಿಂದ ನಿಮ್ಮ ನಿವೃತ್ತ ಜೀವನ ಸುಖಮಯವಾಗುತ್ತದೆ. ನೀವು ಈಗಾಗಲೇ ಪಿ.ಎಲ್.ಐನಲ್ಲಿ ರೂ1,950 ಹೂಡುತ್ತಿದ್ದು, ಎಲ್.ಐ.ಸಿಯ `ಜೀವನ್ ಆನಂದ್' ಎಂಬ ವಿಮಾ ಪಾಲಿಸಿಗೆ ತಿಂಗಳಿಗೆ ಕನಿಷ್ಠ ರೂ 4,000ರಂತೆ ಕಟ್ಟುವ ವ್ಯವಸ್ಥೆ ಮಾಡಿಕೊಳ್ಳಿ. ಹೀಗೆ ಆರಂಭಿಸಿದ ಯೋಜನೆಗಳನ್ನು ಮಧ್ಯದಲ್ಲಿ ಎಂದಿಗೂ ನಿಲ್ಲಿಸಬೇಡಿ. ಮುಂದೆ ನೀವು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ನಂತರ ಎಲ್ಲಾ ಖರ್ಚು ಕಳೆದು ಉಳಿಯುವ ಒಂದು ಮೊತ್ತ 10 ವರ್ಷಗಳ ಅವಧಿಗೆ ಆರ್.ಡಿ ಮಾಡುತ್ತಾ ಬನ್ನಿರಿ. ಇಂತಹ ಆರ್ಥಿಕ ಶಿಸ್ತು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಹಾಗೂ ಜೀವನವನ್ನು ಆನಂದಮಯವಾಗಿಡುತ್ತದೆ.



ಸತೀಶ, ಧಾರವಾಡ

ಪ್ರಶೆ: ನಾನು ಸೆಪ್ಟೆಂಬರ್ 2008 ರಿಂದ ಜೂನ್ 2011ರವರೆಗೆ ರಾಜ್ಯ ಸರ್ಕಾರಿ ನೌಕರನಾಗಿದ್ದೆ. ನಂತರ ಬೇರೆ ಕೆಲಸಕ್ಕೆ ಸೇರಿಕೊಂಡೆ. ಆ ಅವಧಿಯಲ್ಲಿ ಎಚ್.ಆರ್.ಎಂ.ಎಸ್ ಮೂಲಕ ಎನ್.ಪಿ.ಎಸ್‌ಗೆ ಪ್ರತಿ ತಿಂಗಳು ಹಣ ಪಾವತಿಯಾಗುತ್ತಿತ್ತು. ಈ ಹೊಸ ಕೆಲಸ ಸರ್ಕಾರದ್ದೇ ಆಗಿದ್ದರೂ ಇಲ್ಲಿ ಎನ್.ಪಿ.ಎಸ್ ಸೌಲಭ್ಯವಿಲ್ಲ. ಈ ಹಿಂದೆ ಎನ್.ಪಿ.ಎಸ್‌ನಲ್ಲಿ ಹೂಡಿದ ಹಣ ವಾಪಸ್ ಪಡೆಯಲು ಏನು ಮಾಡಬೇಕು? ಎಲ್ಲಿ ಕೇಳಿದರೂ ಮಾಹಿತಿ ಸಿಗುತ್ತಿಲ್ಲ, ದಯವಿಟ್ಟು ಮಾರ್ಗದರ್ಶನ ಮಾಡಿ.



ಉತ್ತರ: ಎನ್.ಪಿ.ಎಸ್ ಯೋಜನೆಯಲ್ಲಿ ನೀವು ದುಡಿಯುವ ಸಂಸ್ಥೆ ಮೂಲಕ ಅಥವಾ ನೀವು ನೇರವಾಗಿ ಕೂಡಾ ಕಾಲಕಾಲಕ್ಕೆ ಹಣ ಹೂಡಬಹುದು. ಇದೊಂದು ದೀರ್ಘಾವಧಿ ಯೋಜನೆ ಹಾಗೂ ನಿವೃತ್ತಿ ನಂತರ ಪಿಂಚಣಿ ಪಡೆಯಲು ಉತ್ತಮವಾದ ಇದು ಸರ್ಕಾರಿ ಉಳಿತಾಯ ಯೋಜನೆ. ನೀವು ಎನ್.ಪಿ.ಎಸ್ ಯೋಜನೆ ಪ್ರಾರಂಭಿಸಿದ ಸಂಸ್ಥೆ ಮುಖಾಂತರ ನಿಮ್ಮ ಖಾತೆಯನ್ನು ಪುನರುಜ್ಜೀವನಗೊಳಿಸಲು ಮಾಹಿತಿಯನ್ನು ಕೇಳಿ ಅಥವಾ `ಪೆನ್‌ಷನ್ ಫಂಡ್ ರೆಗ್ಯುಲಾರಿಟಿ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ(ಪಿಎಫ್‌ಆರ್‌ಡಿಎ) ನವದೆಹಲಿ ವಿಳಾಸವನ್ನು ಸಂಪರ್ಕಿಸಿರಿ. ದೂರವಾಣಿ ಕರೆ ಸಂಖ್ಯೆ 1800110708. ಈ ಸಂಖ್ಯೆಗೆ ಕರೆ ಮಾಡಲು ಯಾವುದೇ ಶುಲ್ಕವಿಲ್ಲ.



ಗೀತಾ, ಬೆಂಗಳೂರು

ಪ್ರಶ್ನೆ: ನಾನು ರಾಜ್ಯ ಸರ್ಕಾರದ ನೌಕರಿಯಲ್ಲಿದ್ದು ಎನ್.ಪಿ.ಎಸ್.ಗೆ ಒಳಪಟ್ಟಿರುತ್ತೇನೆ. ನನಗೆ ಒಬ್ಬಳೇ ಮಗಳು. ಎನ್.ಪಿ.ಎಸ್ ಹಾಗೂ ಗ್ರಾಚ್ಯುಯಿಟಿಗೆ  ಮಗಳ ನಾಮ ನಿರ್ದೇಶನ ಮಾಡಿದ್ದೇನೆ. ನಾನು ಸೇವೆಯಲ್ಲಿದ್ದಾಗ ಅಥವಾ ನಿವೃತ್ತಿಯಾದ ನಂತರ ನಿಧನ ಹೊಂದಿದರೆ ಇದರ ಲಾಭ ನನ್ನ ಮಗಳಿಗೇ ಸಿಗಬೇಕೆನ್ನುವುದು ನನ್ನ ಆಸೆ. ಇದಕ್ಕೆ ಕಾನೂನಿನ ತೊಡಕು ಇದೆಯೇ ಎನ್ನುವುದನ್ನು ತಿಳಿಸಬೇಕಾಗಿ ವಿನಂತಿ.



ಉತ್ತರ: ಚರ ಆಸ್ತಿಗೆ ನಾಮ ನಿರ್ದೇಶನ ಹಾಗೂ ಸ್ಥಿರ ಆಸ್ತಿಗೆ ಉಯಿಲು(ವಿಲ್) ಮಾಡುವುದು ಕಾನೂನಿನಲ್ಲಿಯೇ ಸೂಚಿತವಾದ ವಿಚಾರ. ನಿಮ್ಮ ಎನ್.ಪಿ.ಎಸ್ ಹಾಗೂ ನೀವು ಮುಂದೆ ಪಡೆಯಲಿರುವ ಗ್ರಾಚ್ಯುಯಿಟಿ ಎರಡಕ್ಕೂ ಮಗಳ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿರುವುದು ಕಾನೂನಿನನ್ವಯ ಸರಿ ಇದೆ. ನಿಮ್ಮ ಕಾಲಾನಂತರ ಈ ಎರಡೂ ಯೋಜನೆಗಳಿಂದ ಬರುವ ಹಣ ನಿಮ್ಮ ಮಗಳ ಹೊರತಾಗಿ ಬೇರಾರಿಗೂ ಸಿಗದು. ಇದರಲ್ಲಿ ಯಾವುದೇ ಕಾನೂನಿನ ತೊಡಕು ಇಲ್ಲ. ನೀವು ಧೈರ್ಯವಾಗಿರಿ.



ಪ್ರವೀಣ್, ಅರಸೀಕೆರೆ

ಪ್ರಶ್ನೆ: ನಾನು ಪ್ರೌಢಶಾಲಾ ಶಿಕ್ಷಕ. ಎಲ್ಲಾ ಕಡಿತವಾಗಿ ರೂ 17,000 ಸಂಬಳ ಬರುತ್ತದೆ. ಪತ್ನಿ ಪ್ರಾಥಮಿಕ ಶಾಲೆ ಶಿಕ್ಷಕಿ. ಎಲ್ಲಾ ಕಡಿತವಾದ ನಂತರ ಆಕೆ ರೂ11,000 ಪಡೆಯುತ್ತಾಳೆ. ನಮಗೆ ಏಳು ತಿಂಗಳ ಮಗು ಇದೆ. ಮಗಳ ಭವಿಷ್ಯಕ್ಕಾಗಿ ಹಾಗೂ ನಾವು ಪಿಂಚಣಿದಾರರಲ್ಲವಾದ್ದರಿಂದ ನಿವೃತ್ತ ಜೀವನಕ್ಕೆ ಉತ್ತಮ ಉಳಿತಾಯ ಮಾರ್ಗ ತಿಳಿಸಿಕೊಡಿ.



ಉತ್ತರ: ಎಲ್ಲಾ ಕಡಿತವಾದ ನಂತರ ನಿಮ್ಮಿಬ್ಬರ ತಿಂಗಳ ಆದಾಯ ರೂ. 28,000. ಇದು ನಿಜವಾಗಿ ನಿಮ್ಮ ವಯಸ್ಸಿಗೆ ಉತ್ತಮವಾದ ಆದಾಯವೆ ಎಂದರೆ ತಪ್ಪಾಗಲಾರದು. ಅರಸೀಕೆರೆ ತಾಲ್ಲೂಕು ಕೇಂದ್ರ. ನೀವು ಸಂಬಳ ಪಡೆಯುವ ಬ್ಯಾಂಕಿನಿಂದ ಸಾಲ ಪಡೆದು ಕನಿಷ್ಠ 40x60 ಉದ್ದ-ಅಗಲದ ನಿವೇಶನ ಖರೀದಿಸಿ. ಉಳಿತಾಯಕ್ಕೆ ಸ್ಥಿರ ಆಸ್ತಿಗಿಂತ ಮಿಗಿಲಾದ ಮಾರ್ಗ ಬೇರೊಂದಿಲ್ಲ. ಮಗಳ ಭವಿಷ್ಯಕ್ಕಾಗಿ 20 ವರ್ಷಅವಧಿಗೆ ಎಲ್.ಐ.ಸಿಯ `ಜೀವನ್ ಅಂಕುರ್' ವಿಮಾ ಪಾಲಿಸಿ ಮಾಡಿಸಿರಿ. ಪ್ರತಿ ತಿಂಗಳೂ ರೂ 2,000 ತುಂಬಿರಿ. ನಿಮಗಿಬ್ಬರಿಗೂ ಸುದೀರ್ಘ ಸೇವಾವಧಿ ಇರುವುದರಿಂದ ಯಾರಾದರೊಬ್ಬರು ಕನಿಷ್ಠ ರೂ5,000ಕ್ಕೆ ಬ್ಯಾಂಕ್‌ನಲ್ಲಿ ಆರ್.ಡಿ ಖಾತೆ ತೆರೆದರೆ ಉತ್ತಮ. ಅವಧಿ ನಂತರ ಇದರಿಂದ ಬರುವ ಮೊತ್ತವನ್ನು ಮತ್ತೆ ನಿಶ್ಚಿತ ಠೇವಣಿಯಲ್ಲಿ ಮರುಹೂಡಿಕೆ ಮಾಡುತ್ತಾ ಬಂದರೆ 20 ವರ್ಷಗಳಲ್ಲಿ ಇದು (ಇಂದಿನ ಶೇ 9 ಬಡ್ಡಿ ದರದಲ್ಲಿ) ರೂ33.36 ಲಕ್ಷವಾಗುತ್ತದೆ. ಈ ಬಗೆಯ ಉತ್ತಮ ಉಳಿತಾತ ಯೋಜನೆ ನಿವೃತ್ತ ಜೀವನಕ್ಕೆ ಸಹಾಯಕ.



ಲಕ್ಷ್ಮಿ, ಕೋಲಾರ

ಪ್ರಶ್ನೆ: ನಾನು ನಿವೃತ್ತ ಶಿಕ್ಷಕಿ. ನಿವೃತ್ತಿ ವೇತನ ರೂ12,500. ನಿವೃತ್ತಿ ವೇಳೆ ಬಂದ ಹಣದಲ್ಲಿ ರೂ 5 ಲಕ್ಷವನ್ನು 500 ದಿವಸಗಳ ಅವಧಿಗೆ ಎಸ್.ಬಿ.ಎಂ ನಲ್ಲಿ ಠೇವಣಿ ಮಾಡಿರುತ್ತೇನೆ. ಅಲ್ಲದೆ, ರೂ1 ಲಕ್ಷದ ಇನ್ನೊಂದು ಠೇವಣಿಯಿಂದ ತಿಂಗಳಿಗೆ ರೂ. 833 ಬಡ್ಡಿ ಪಡೆಯುತ್ತಿದ್ದೇನೆ. ಬೇರೆ ಊರಿನಲ್ಲಿರುವ ನನ್ನ ಮನೆ ಮಾರಿದರೆ ರೂ7 ಲಕ್ಷ ಬರುತ್ತದೆ. ನನಗೆ ಇಲ್ಲಿ ಸ್ವಂತ ಮನೆ ಇದೆ. ಮನೆ ಮಾರಿದ್ದರಿಂದ ಬರುವ ಹಣವನ್ನು ಯಾವ ರೀತಿಯಲ್ಲಿ ಬ್ಯಾಂಕಿನಲ್ಲಿ ಇಟ್ಟರೆ ತೆರಿಗೆ ವಿನಾಯಿತಿ ಅನುಕೂಲ ಪಡೆಯಬಹುದು? ದಯವಿಟ್ಟು ತಿಳಿಸಿ.



ಉತ್ತರ: ನೀವು ಮನೆ ಮಾರಾಟ ಮಾಡಿದ್ದರಿಂದ ಪಡೆಯುವ ಹಣಕ್ಕೆ `ಕ್ಯಾಪಿಟಲ್ ಗೇನ್' ತೆರಿಗೆಯಿಂದ ವಿನಾಯತಿ ಪಡೆಯಲು ಮೂರು ವರ್ಷಗಳ ಅವಧಿಗೆ ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾ ಅಥವಾ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಎಂಬ ಸಂಸ್ಥೆಗಳಲ್ಲಿ ಯಾವುದಾದರೂ ಒಂದರಲ್ಲಿ ಠೇವಣಿ ಇರಿಸಬಹುದು. ಇವೆರಡೂ ಸರ್ಕಾರಿ ಸ್ವಾಮ್ಯದ ಕಂಪೆನಿಗಳು. ಮೂರು ವರ್ಷದ ನಂತರ ಇದೇ ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿರಿ. ಮುಂದೆ ಇಲ್ಲಿ ಬರುವ ಬಡ್ಡಿ ಹಾಗೂ ಪಿಂಚಣಿ ಆದಾಯ ವಾರ್ಷಿಕವಾಗಿ ರೂ2.50 ಲಕ್ಷ ದಾಟಿದಲ್ಲಿ, ಮಿಕ್ಕಿದ ಮೊತ್ತಕ್ಕೆ ತೆರಿಗೆ ಕೊಡಬೇಕಾಗುತ್ತದೆ.



ಹಣ, ತೆರಿಗೆ ಸಮಸ್ಯೆಗೆ ಪರಿಹಾರ

ಓದುಗರು ಹಣಕಾಸು ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ರದಲ್ಲಿ ಬರೆದು ಕಳುಹಿಸಿ ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ಪ್ರಶ್ನೆಗಳನ್ನು ಕಳಿಸುವ ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001. ಇ-ಮೇಲ್ ವಿಳಾಸಕ್ಕೂ ಕಳುಹಿಸಬಹುದು. businessdesk@prajavani.co.in  

-ಸಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.