ಮಂಗಳವಾರ, ಮೇ 11, 2021
28 °C

ಪ್ರಶ್ನೋತ್ತರ

ಯು.ಪಿ.ಪುರಾಣಿಕ್ Updated:

ಅಕ್ಷರ ಗಾತ್ರ : | |

ಪ್ರೇಮಾ ಮೋಹನ್, ಬೆಂಗಳೂರು

ಪ್ರಶ್ನೆ:
ನಾವು ಕಷ್ಟಪಟ್ಟು ಉಳಿಸಿದ್ದ ರೂ.3 ಲಕ್ಷವನ್ನು ನಮ್ಮ ಮನೆಯವರು ಅವರ ಗೆಳೆಯರಿಗೆ 2011-12ರಲ್ಲಿ ಕೊಟ್ಟಿದ್ದರು. ಇತ್ತೀಚೆಗೆ ಹಣ ವಾಪಸ್ ಕೇಳಿದಾಗ ಇವತ್ತು-ನಾಳೆ ಎಂದು ಕೊಡದೆ ಸತಾಯಿಸುತ್ತಿದ್ದಾರೆ. ನಮ್ಮ ಹಣವನ್ನು ಅವರು ಷೇರು ವ್ಯವಹಾರದಲ್ಲಿ ತೊಡಗಿಸಿದ್ದಾರಂತೆ. ಹಣ ಪಡೆಯುವಾಗ `ಚೆಕ್ ಲೀಫ್' ಕೊಟ್ಟಿದ್ದಾರೆ. ಇದರಿಂದ ನಾವು ಹಣ ಹೇಗೆ ವಾಪಸ್ ಪಡೆಯಬಹುದು? ದಯಮಾಡಿ ತಿಳಿಸಿರಿ.ಉತ್ತರ: `ಪ್ರಸ್ತಕಂ, ವನಿತಾ, ವಿತ್ತಂ ಪರಹಸ್ತಂ ಗತಂ ಗತಃ' ಎನ್ನುವ ಮಾತು ಸಾರ್ವಕಾಲಿಕ ಸತ್ಯ. ಏನೂ ಬರೆಯದೆ ಚೆಕ್ ಹಳೆ ಪಡೆದಿದ್ದರೆ, ಆ ಚೆಕ್ಕಿನಲ್ಲಿ ಖಾತೆದಾರನ ಸಹಿ ಇದ್ದರೆ, ಆ ಚೆಕ್ಕಿನ ಹಣ ಸ್ವೀಕರಿಸಬೇಕಾದವರ ಹೆಸರು ನಮೂದಿಸಬೇಕಾದ ಜಾಗದಲ್ಲಿ ನಿಮ್ಮ ಹೆಸರು, ನಿಮಗೆ ಬರಬೇಕಾದ ಹಣ ಹಾಗೂ ತಾರೀಕು ಬರೆದು ನಿಮ್ಮ ಖಾತೆ ಇರುವ ಬ್ಯಾಂಕಿಗೆ ಕಲೆಕ್ಷನ್‌ಗಾಗಿ ಹಾಕಿರಿ. ನೀವು ಪಡೆದಿರುವ ಚೆಕ್ ಹಾಳೆಗೆ 30-6-2013ರವರೆಗೆ ಮಾತ್ರ ಆಧಾರ (ವೆಲಿಡಿಟಿ) ಇರುತ್ತದೆ. ಚೆಕ್‌ನ  ಹಣ ಬಾರದಿದ್ದರೆ `ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್   ಆಕ್ಟ್'ನ ಸೆಕ್ಷನ್ 138 ಆಧರಿಸಿ ನ್ಯಾಯಾಲಯದಲ್ಲಿ `ಚೆಕ್   ಬೌನ್ಸ್' ದಾವೆ ಹೂಡಬಹುದು. ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಪರಿಚಯದ ವಕೀಲರನ್ನು ಸಂಪರ್ಕಿಸಿರಿ.ಮಂಜುಶ್ರೀ, ಬೆಂಗಳೂರು

ಪ್ರಶ್ನೆ:
ಸರ್ಕಾರಿ ನೌಕರಿಯಲ್ಲಿದ್ದೇನೆ. ಸಂಬಳ ರೂ. 36,000. ಎಲ್ಲಾ ಕಡಿತವಾಗಿ ಹಾಗೂ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಮನೆ ಖರ್ಚು ಕಳೆದು ಕೊನೆಗೆ ರೂ.3,000 ಉಳಿಸಬಹುದು. ಈ ಹಿಂದೆ ಎಸ್.ಬಿ.ಐ ಮ್ಯೂಚುವಲ್ ಫಂಡ್‌ನಲ್ಲಿ ಸ್ವಲ್ಪ ಹಣ ತೊಡಗಿಸಿದ್ದೆ. ಹೆಚ್ಚಿನ ಆದಾಯ ಬಾರದೆ ಇದ್ದುದರಿಂದ ನಿಲ್ಲಿಸಿದೆ. ಒಟ್ಟು ಆದಾಯದ ಎಷ್ಟು ಶೇಕಡಾ ಎಷ್ಟು ಉಳಿತಾಯ ಮಾಡಿದರೆ ನಿವೃತ್ತಿ ಜೀವನವನ್ನು ನೆಮ್ಮದಿಯಾಗಿ ಸಾಗಿಸಬಹುದು? ಮಾರ್ಗದರ್ಶನ ಮಾಡಿ.ಉತ್ತರ: ಪ್ರತಿ ವ್ಯಕ್ತಿಯೂ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದೇ ಸಂಬಳದ ಕನಿಷ್ಠ ಶೇ 25ರಷ್ಟು ಮೊತ್ತವನ್ನು ವೃತ್ತಿ ಬದುಕಿನ ಆರಂಭದಿಂದಲೇ ಉಳಿತಾಯ ಮಾಡುತ್ತಾ ಬರಬೇಕು. ಪ್ರತಿಯೊಂದು ಕಂಪೆನಿಯೂ ಸುದೀರ್ಘ ಕಾಲ ಸ್ಥಿರವಾಗಿ ಪ್ರಗತಿ ಕಾಣಲು ಲಾಭಾಂಶದ ಶೇ 25ರಷ್ಟು ಮೊತ್ತವನ್ನು ಪ್ರತಿವರ್ಷ ಆಪದ್ಧನ(ರಿಸರ್ವ್) ಲೆಕ್ಕಕ್ಕೆ ವರ್ಗಾಯಿಸುವುದು ಕಡ್ಡಾಯವಾಗಿದೆ.ಇದೇ ಸೂತ್ರ ಅಥವಾ ನಿಬಂಧನೆ ಪ್ರತಿ ವ್ಯಕ್ತಿಗೂ ಸದಾಕಾಲ ಅನ್ವಯಿಸುತ್ತದೆ. ನಿಮಗೆ ಪಿಂಚಣಿ ಸವಲತ್ತು ಇದ್ದರೂ ಹಣದುಬ್ಬರದ ನಾಗಾಲೋಟದಿಂದಾಗಿ ನೀವು ಕೂಡಾ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾದ ಅಗತ್ಯವಿದೆ. ನೀವು ಉಳಿಸಬಹುದಾದ ರೂ.3000 ಹಾಗೂ ನೀವು ಪಡೆಯುವ ವಾರ್ಷಿಕ ಇನ್‌ಕ್ರಿಮೆಂಟ್ ಮೊತ್ತವನ್ನು  ಪ್ರತಿವರ್ಷ ಆರ್.ಡಿ (10 ವರ್ಷಗಳ ಅವಧಿಗೆ) ಮಾಡುತ್ತಾ ಬನ್ನಿ. ಮಾಸಿಕ ರೂ.1000 ಆರ್.ಡಿ ಹೂಡಿಕೆ 10 ವರ್ಷಗಳಲ್ಲಿ ರೂ. 2 ಲಕ್ಷವನ್ನು ತಂದುಕೊಡುತ್ತದೆ.ರಾಜಣ್ಣ, ಯಲಹಂಕ, ಬೆಂಗಳೂರು

ಪ್ರಶ್ನೆ:
ನನ್ನ ಸಂಬಂಧಿಯೊಬ್ಬರ ಒತ್ತಾಯಕ್ಕೆ ಮಣಿದು ಇನ್ಷೂರೆನ್ಸ್ ಎಂದು ತಿಳಿದು ರೂ. 12,000 ಮೊತ್ತವನ್ನು ಮೂರು ವರ್ಷಗಳಿಂದ `ಬಜಾಜ್ ಅಲಯನ್ಸ್' ಯೋಜನೆ ಯಲ್ಲಿ ಕಟ್ಟಿದೆ. ಹಣಕಾಸಿನ ಹೂಡಿಕೆ ಬಗ್ಗೆ ತಿಳಿಯದೇ ನಾನು ಮಾಡಿದ ಮೊದಲ ಹೂಡಿಕೆ ಇದು. ಈಗ ವಾಪಸ್ ಪಡೆಯಲು ವಿಚಾರಿಸಿದರೆ ಬರೇ ರೂ. 18,500 ಸಿಗುತ್ತದೆ ಎನ್ನುತ್ತಾರೆ. ಮುಂದೆ ನನ್ನ ಹಣ ಬೆಳೆಯುತ್ತದೆ ಎನ್ನುವ ಧೈರ್ಯವಿಲ್ಲ. ಸದ್ಯ ನನ್ನ ವಯಸ್ಸು 48 ವರ್ಷ. 13 ವರ್ಷದ ಮಗಳಿದ್ದಾಳೆ. ಇಬ್ಬರ ಭವಿಷ್ಯಕ್ಕಾಗಿ ಸರಿಯಾದ ಮಾರ್ಗದರ್ಶನ ಮಾಡಿ.ಉತ್ತರ: ಮ್ಯೂಚುವಲ್ ಫಂಡ್ ಹೂಡಿಕೆ ವಿಚಾರದಲ್ಲಿ ಸರಿಯಾದ ಮಾಹಿತಿ ಇಲ್ಲದಿರುವ ಬಹಳಷ್ಟು ವ್ಯಕ್ತಿಗಳು ನಷ್ಟ ಅನುಭವಿಸಿದ ಉದಾಹರಣೆಗಳಿವೆ. ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದಲ್ಲಿನ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್) 30,000 ಅಂಶಗಳ ಗಡಿ ದಾಟಬಹುದು ಎನ್ನುವುದು ಬಹಳಷ್ಟು ಜನರ ನಿರೀಕ್ಷೆಯಾಗಿದ್ದ ಕಾರಣ, ಮ್ಯೂಚುವಲ್ ಫಂಡ್ ಹೂಡಿಕೆ ಎಂಬುದು ಎಲ್ಲರ ಗಮನ ಸೆಳೆದಿತ್ತು. ಆದರೆ, 2008ರಿಂದ ಆರಂಭಗೊಂಡ ಜಾಗತಿಕ `ಆರ್ಥಿಕ ಹಿಂಜರಿತ' ಎಂಬ ಬಿಕ್ಕಟ್ಟು ಭಾರತದ ಷೇರುಪೇಟೆ ಮೇಲೂ ಪರಿಣಾಮ ಬೀರಿ ಜನರ ಆಸೆ ನೆರವೇರದಂತಾಯಿತು.ಸಂವೇದಿ ಸೂಚ್ಯಂಕ ಗಮನಿಸುತ್ತಿದ್ದು, ಅದು ಸ್ವಲ್ಪ ಮೇಲಕ್ಕೆ ಹೋದಾಗ ಬಜಾಜ್ ಅಲಯನ್ಸ್‌ನಲ್ಲಿನ ನಿಮ್ಮ ಹೂಡಿಕೆ ಮೊತ್ತವನ್ನು ವಾಪಸ್ ಪಡೆಯಿರಿ. ಇದರಿಂದ ಮುಂದೆ ಇನ್ನಷ್ಟು ನಷ್ಟ ಅನುಭವಿಸುವುದು ತಪ್ಪಿದಂತಾಗುತ್ತದೆ.ಗಜ, ತುರವೇಕೆರೆ

ಪ್ರಶ್ನೆ:
ನಾನು ಪ್ರಾಥಮಿಕ ಶಾಲಾ ಶಿಕ್ಷಕ. ಸಂಬಳ ರೂ.15,000. ಎಲ್ಲಾ ಕಡಿತವಾಗಿ ರೂ.12,000 ಸಿಗುತ್ತದೆ. ಊರ ಹೊರ ವಲಯದಲ್ಲಿ ರೂ.3 ಲಕ್ಷಕ್ಕೆ ನಿವೇಶನ ಖರೀದಿಸಬೇಕೆಂದಿದ್ದೇನೆ. ಯಾವ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ನನ್ನ ಸಂಬಳವನ್ನು ಸಿಂಡಿಕೇಟ್ ಬ್ಯಾಂಕ್ ಖಾತೆ ಮೂಲಕ ಪಡೆಯುತ್ತಿದ್ದೇನೆ. ನನ್ನ ತಾಯಿ ಬಳಿ ಚಿನ್ನಾಭರಣಗಳಿವೆ. ನಿವೇಶನ ಖರೀದಿಸಲು ಒಡವೆ ಸಾಲ ಪಡೆಯಬಹುದೇ? ಯಾವ ರೀತಿ ಸಾಲ ಪಡೆಯಬಹುದು? ದಯಮಾಡಿ ತಿಳಿಸಿರಿ.ಉತ್ತರ: ನೀವು ಸಂಬಳ ಪಡೆಯುವ ಸಿಂಡಿಕೇಟ್ ಬ್ಯಾಂಕಿನಿಂದಲೇ ಒಡವೆಗಳ ಮೇಲೆ ಸಾಲ ಪಡೆದು ನಿವೇಶನ ಖರೀದಿಸಿರಿ. ಈ ಸಾಲಕ್ಕಾದರೆ ಬೇರೆಯವರ ಜಾಮೀನು ನೀಡಬೇಕಿಲ್ಲ. ಅಲ್ಲದೆ, ಈ ಸಾಲಕ್ಕೆ ಪ್ರತಿ ತಿಂಗಳೂ ಅಸಲು ಮತ್ತು ಬಡ್ಡಿಗೆ ಸೇರಿಸಿ ಎಷ್ಟಾದರಷ್ಟು ಹಣವನ್ನು ತುಂಬಬಹುದು. ಒಡವೆ ಸಾಲದ ಬಡ್ಡಿ ದರ ಸಿಂಡಿಕೇಟ್ ಬ್ಯಾಂಕಿನಲ್ಲಿ ಉಳಿದ ಬ್ಯಾಂಕುಗಳಿಗಿಂತ ಹೆಚ್ಚಿಗೆ ಇರುವುದಿಲ್ಲ. ಜತೆಗೆ ನಿಮ್ಮ ಎಲ್ಲಾ ಹಣಕಾಸಿನ ವ್ಯವಹಾರವೂ ಒಂದೇ ಕಡೆ ಇದ್ದಂತಾಗುತ್ತದೆ. ಆದಷ್ಟು ಬೇಗ ನಿವೇಶನ ಖರೀದಿಸಿರಿ. ಸ್ಥಿರ ಆಸ್ತಿ ಹೂಡಿಕೆಯಿಂದ ಮುಂದೆ ಹೆಚ್ಚಿನ ಲಾಭ ಗಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ.ಸತೀಶ್, ಊರು ಬೇಡ

ಪ್ರಶ್ನೆ:
ನಾನು ಎಸ್.ಬಿ.ಐನಲ್ಲಿ ಫ್ಲೋಟಿಂಗ್(ಬದಲಾಗುವ) ಬಡ್ಡಿದರದಲ್ಲಿ ಗೃಹ ಸಾಲ ಪಡೆಯಬೇಕೆಂದಿದ್ದೇನೆ. ಬಡ್ಡಿ ದರ ಏರಿದರೆ ಇ.ಎಂ.ಐ (ಈಕ್ವೇಟೆಡ್ ಮಂತ್ಲಿ ಇನ್‌ಸ್ಟಾಲ್‌ಮೆಂಟ್) ಸಹ ಏರಿಕೆ ಆಗುತ್ತದೆ. ಬಡ್ಡಿದರ ತಗ್ಗಿದರೆ ಇ.ಎಂ.ಐ ಸಹ ಇಳಿಯುತ್ತದೆ. ನಾನು ಇ.ಎಂ.ಐ ಹೊರತುಪಡಿಸಿ ಒಂದು ನಿರ್ದಿಷ್ಟ ಮೊತ್ತವನ್ನು ಸಾಲಕ್ಕೆ ಕಟ್ಟಿದರೆ ಬಡ್ಡಿ ಹಾಗೂ ಇ.ಎಂ.ಐ ಕಡಿಮೆ ಆಗುತ್ತದೆಯೇ? ಎಸ್.ಬಿ.ಐನಲ್ಲಿ ಗೃಹ ಸಾಲ ಪಡೆಯುವುದು ಉತ್ತಮವೇ?ಉತ್ತರ: ಯಾವುದೇ ಬ್ಯಾಂಕಿನಲ್ಲಿ ಫ್ಲೋಟಿಂಗ್ ಬಡ್ಡಿ ದರ ಒಡೆದಲ್ಲಿ ಬಡ್ಡಿ ದರ ಹೆಚ್ಚಾದಾಗ ಇ.ಎಂ.ಐ ಸಹ ಹೆಚ್ಚುತ್ತದೆ, ಬಡ್ಡಿದರ ತಗ್ಗಿದಾಗ ಇಎಂಐ ಸಹ ಕಡಿಮೆ ಆಗುತ್ತದೆ. ಗೃಹ ಸಾಲ ಪಡೆದ ವ್ಯಕ್ತಿ ಯಾವುದೇ ಬ್ಯಾಂಕಿನಲ್ಲಿ, ಇ.ಎಂ.ಐ ಹೊರತುಪಡಿಸಿ, ಯಾವುದೇ ದಂಡ ತೆರದೆ, ಒಂದು ನಿರ್ದಿಷ್ಟ ಮೊತ್ತವನ್ನು(ಲಮ್‌ಸಮ್) ಗೃಹಸಾಲಕ್ಕೆ ಕಟ್ಟಿ ಸಾಲದ ಮೊತ್ತ ಕಡಿಮೆ ಮಾಡಿಕೊಳ್ಳಬಹುದು. ಇ.ಎಂ.ಐ ಕೂಡಾ ಕಡಿಮೆ ಮಾಡಿಸಿಕೊಳ್ಳಬಹುದು. ಎಸ್.ಬಿ.ಐ ಭಾರತದ ಅತಿ ದೊಡ್ಡ ಹಾಗೂ ಉತ್ಕೃಷ್ಟ ಬ್ಯಾಂಕ್. ಇಲ್ಲಿ ನೀವು ಸಾಲ ಪಡೆಯಿರಿ.ಫಿಜಾ, ಮಾಲೂರು ಕೋಲಾರ ಜಿಲ್ಲೆ

ಪ್ರಶ್ನೆ:
ನನ್ನ ವಯಸ್ಸು 31 ವರ್ಷ. ಪತಿ ವಯಸ್ಸು 36 ವರ್ಷ. ಇಬ್ಬರೂ ಸರ್ಕಾರಿ ನೌಕರರು. ಪತಿಯ ಸಂಬಳ ರೂ. 23840 ಹಾಗೂ ನನ್ನ ಸಂಬಳ ರೂ. 23840. ನಾವು ರೂ.3500 ಬಾಡಿಗೆಯ ಮನೆಯಲ್ಲಿದ್ದೇವೆ. ಮನೆ ತಿಂಗಳ ಖರ್ಚು ರೂ.7000. ನನ್ನ ಸಂಬಳದಲ್ಲಿ ತಿಂಗಳ ಕಡಿತ ರೂ.10815 ಹಾಗೂ ಪತಿಯ ಸಂಬಳದಲ್ಲಿ ತಿಂಗಳ ಕಡಿತ ರೂ.13656. ಇವುಗಳ ಹೊರತಾಗಿ ಪ್ರತಿ ತಿಂಗಳೂ ಸರ್ಕಾರಿ ಚಿಟ್‌ಫಂಡ್‌ಗೆ ರೂ. 3000 ಕಟ್ಟುತ್ತಿದ್ದೇವೆ. ನಮಗೆ 30'/40' ನಿವೇಶನ ಇದೆ. ನಾವು ಸಾಲ ಪಡೆಯದೇ ಮನೆ ಕಟ್ಟುವ ಮಾರ್ಗದ ಬಗ್ಗೆ ನಮಗೆ ಸಲಹೆ ನೀಡಿರಿ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ವಿಚಾರವಾಗಿಯೂ ಮಾರ್ಗದರ್ಶನ ಮಾಡಿರಿ.ಉತ್ತರ: ನಿಮ್ಮಿಬ್ಬರ ಒಟ್ಟು ತಿಂಗಳ ಸಂಬಳ ರೂ. 47,680. ಸಂಬಳದಲ್ಲಿನ ಒಟ್ಟು ಕಡಿತ ರೂ.24,471. ಮನೆ ಖರ್ಚು, ಬಾಡಿಗೆ ಸೇರಿ ರೂ. 10,500. ಇದಿಷ್ಟೂ ಕಳೆದ ನಂತರ ನಿಮ್ಮಲ್ಲಿ ತಿಂಗಳಿಗೆ ರೂ.12,709 ಇರುತ್ತದೆ.

ನಿಮ್ಮಿಬ್ಬರ ಸಂಬಳದಲ್ಲಿನ ಕಡಿತದಲ್ಲಿ ಹೆಚ್ಚಿನ ಭಾಗ ಉಳಿತಾಯಕ್ಕೇ ಮುಡುಪಾಗಿರುವುದರಿಂದ ನಿಮ್ಮ ಮುಂದಿನ ಜೀವನ ಹಾಗೂ ಮಕ್ಕಳ ಭವಿಷ್ಯ ಉಜ್ವಲವಾಗಿಯೇ ಇರುತ್ತದೆ.ನಿಮಗೆ ನಿವೇಶನ ಇದ್ದರೂ ಮನೆ ಕಟ್ಟಲು ಕನಿಷ್ಠ ರೂ.10 ಲಕ್ಷ ಬೇಕಾಗುತ್ತದೆ. ಬ್ಯಾಂಕ್ ಸಾಲ ಪಡೆಯದೇ ಗೃಹ ನಿರ್ಮಾಣ ಮಾಡುವುದು ಸುಲಭದ ಕೆಲಸವಲ್ಲ. ಇದೇ ವೇಳೆ ನೀವು ಉಳಿಸಬಹುದಾದ ರೂ. 12,709 ಗೃಹ ಸಾಲದ ಇ.ಎಂ.ಐಗೆ ಮೀಸಲಿಡುವಿರಾದರೆ, ಬ್ಯಾಂಕಿನಲ್ಲಿ ಸುಲಭವಾಗಿ ರೂ.10 ಲಕ್ಷ ಪಡೆಯಬಹುದು. ಮನೆ ಕಟ್ಟುವ ಸಾಮಗ್ರಿಗಳು ದಿನೇ ದಿನೇ ಗಗನಕ್ಕೇರುತ್ತಿವೆ. ಸ್ಥಿರ ಆಸ್ತಿ ಮಾಡುವಾಗ ಸಾಲ ಮಾಡುವುದು ತಪ್ಪೇನೂ ಅಲ್ಲ.ಹೆಸರು: ಬೇಡ, ಊರು: ಮಾನ್ವಿ, ರಾಯಚೂರು

ಪ್ರಶ್ನೆ:
ಸರ್ಕಾರಿ ನೌಕರ. ವಯಸ್ಸು 25 ವರ್ಷ. ನನ್ನ ತಿಂಗಳ ಸಂಬಳ ಎಲ್ಲಾ ಕಡಿತದ ನಂತರ ರೂ. 13,000. ಈ ವರ್ಷ ಮದುವೆಯಾಗಬೇಕೆಂದಿದ್ದೇನೆ. ಮನೆ ಕಟ್ಟುವ ವಿಚಾರ ಕೂಡಾ ಇದೆ. 30'/40'ರ ನಿವೇಶನ ಇದೆ. ಇವೆರಡರಲ್ಲಿ ಯಾವುದನ್ನು ಮೊದಲು ಮಾಡಲಿ? ಎಸ್.ಬಿ.ಐನಲ್ಲಿರುವ ಖಾತೆ ಮೂಲಕ ಸಂಬಳ ಪಡೆಯುತ್ತಿರುವೆ. ನನಗೆ ಎಷ್ಟು ಗೃಹ ಸಾಲ ಸಿಗಬಹುದು? ಉಳಿತಾಯ ಹಾಗೂ ಆರ್.ಡಿ ಬಗ್ಗೆ ಮಾಹಿತಿ ನೀಡಿರಿ.ಉತ್ತರ: ನಿಮ್ಮ ವಯಸ್ಸು ಹಾಗೂ ಮಾಸಿಕ ವೇತನ ಪರಿಗಣಿಸಿದಾಗ ಮದುವೆ ಹಾಗೂ ಮನೆ ಕಟ್ಟುವ ಎರಡು ಯೋಜನೆಗಳಲ್ಲಿ ಮದುವೆಯನ್ನೇ ಮೊದಲ ಆಯ್ಕೆಯಾಗಿ ಇಟ್ಟುಕೊಳ್ಳಿ. ಮನೆ ಕಟ್ಟಲು ನಿವೇಶನ ನಿಮ್ಮಡನೆ ಈಗಾಗಲೇ ಇರುವುದರಿಂದ, ಯಾವಾಗ ಬೇಕಾದರೂ ಮನೆ ಕಟ್ಟುವ ಆ ಮಹತ್ವದ ಕೆಲಸ ನಿರ್ವಹಿಸಬಹುದು.

ಮನೆ ಕಟ್ಟಲು ನಿಮ್ಮ ಸಂಬಳ ಮತ್ತು ಸೇವಾವಧಿ ಆಧರಿಸಿ ರೂ. 5 ಲಕ್ಷಗಳವರೆಗೆ ಬ್ಯಾಂಕಿನಲ್ಲಿ ಗೃಹ ಸಾಲ ಸಿಗಬಹುದು. ಇದಕ್ಕೆ ತಿಂಗಳಿಗೆ (ಇ.ಎಂ.ಐ) ರೂ. 5000 ಪಾವತಿಸಿದರೆ ನಿಮಗೆ ಉಳಿಯುವ ಹಣ ರೂ. 8000 ಮಾತ್ರ. ಉಳಿತಾಯಕ್ಕೆ ನೂರಾರು ದಾರಿಗಳಿವೆ.ಆರ್.ಡಿ ಎಂಬುದು ವರ್ಷದಿಂದ 10 ವರ್ಷಗಳವರೆಗೆ ಒಂದು ನಿಖರವಾದ ಮೊತ್ತವನ್ನು ಪ್ರತಿ ತಿಂಗಳೂ ತುಂಬುವ ಯೋಜನೆ. 5 ವರ್ಷಗಳ ಕಾಲ ಪ್ರತಿ ತಿಂಗಳೂ ರೂ.1000 ಕಟ್ಟಿದರೆ ಅವಧಿಯ ಕೊನೆಗೆ ರೂ.75,848 ನಿಮ್ಮ ಕೈ ಸೇರುತ್ತದೆ. ಹಾಗೆಯೇ ರೂ. 10 ವರ್ಷ ರೂ.1000 ಕಟ್ಟಿದರೆ ಅವಧಿ ಮುಗಿದ ನಂತರ ಬಡ್ಡಿ ಸಹಿತ ಒಟ್ಟು ರೂ.1,94,212 ನಿಮ್ಮದಾಗುತ್ತದೆ.ಅನುಶಾ ನಾಯಕ್, ವಿದ್ಯಾ ನಗರ, ಶಿವಮೊಗ್ಗ

ಪ್ರಶ್ನೆ:
ನಾನು ಖಾಸಗಿ ಶಾಲೆ ಶಿಕ್ಷಕಿ. ಸಂಬಳ ರೂ.12000. ಇದರಲ್ಲಿ ರೂ.5000 ಉಳಿಯುತ್ತದೆ. ಈ ಹಣ ಎಲ್ಲಿ ತೊಡಗಿಸಲಿ? ಮಾರ್ಗದರ್ಶನ ಮಾಡಿ.ಉತ್ತರ: ನಿಮ್ಮ ಪ್ರಶ್ನೆಯಲ್ಲಿ ಕುಟುಂಬ ಕುರಿತ ವಿವರ ಇಲ್ಲ. ಹಾಗೂ ನಿಮಗೆ ಯಾವಾಗ ಹಣ ಬೇಕಾಗಬಹುದು ಎನ್ನುವ ವಿಚಾರ ಕೂಡಾ ತಿಳಿಯಲಿಲ್ಲ. ನಿಮ್ಮ ಮನೆ ಅಥವಾ ಶಾಲೆಗೆ ಸಮೀಪದಲ್ಲಿರುವ ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಆರ್.ಡಿ ಆರಂಭಿಸಿ ನೀವು ಉಳಿಸಬಹುದಾದ ರೂ. 5000ವನ್ನು ಪ್ರತಿ ತಿಂಗಳೂ ತುಂಬುತ್ತಾ ಬನ್ನಿ. ಅವಧಿ ಅಂತ್ಯಕ್ಕೆ ಬಡ್ಡಿ ಸೇರಿಸಿ ರೂ. 3,79,240 ಪಡೆಯುವಿರಿ. ಹೆಚ್ಚಿನ ಬಡ್ಡಿ, ಉಡುಗೊರೆ ಅಥವಾ ಕಮಿಷನ್ ಆಸೆಯಿಂದ ಬೇರಾವುದೇ ಠೇವಣಿ ಅಥವಾ ಯೋಜನೆಗಳಲ್ಲಿ ಉಳಿತಾಯದ ಹಣ ತೊಡಗಿಸುವ ಮನಸ್ಸು ಮಾಡಬೇಡಿ.ಗಿರೀಶ್, ಮಾನ್ವಿ (ರಾಯಚೂರು ಜಿಲ್ಲೆ)

ಪ್ರಶ್ನೆ:
ನನ್ನ ತಮ್ಮ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಎಂಜಿನಿಯರಿಂಗ್  ಪದವಿಯಲ್ಲಿ ಪ್ರಥಮ ಸೆಮಿಸ್ಟರ್ ಓದುತ್ತಿದ್ದಾನೆ. ತಂದೆ ಖಾನಾವಳಿ ನಡೆಸುತ್ತಿದ್ದು, ನಾವು ಆರ್ಥಿಕವಾಗಿ ಹಿಂದುಳಿದವರಾಗಿದ್ದೇವೆ. ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಶಿಕ್ಷಣ ಸಾಲ ಕೇಳಿದರೆ ಸಾಲಕ್ಕೆ ಆಧಾರ ಕೇಳುತ್ತಿದ್ದಾರೆ.ಆದರೆ, ಆಧಾರವಾಗಿ ತೋರಿಸಲು ನಮಗೆ ಹೊಲ, ಮನೆ ಅಥವಾ ಬೇರೆ ಯಾವುದೇ ಸ್ಥಿರಾಸ್ತಿ ಇಲ್ಲ. ರೂ.4.50 ಲಕ್ಷದವರೆಗಿನ ಶಿಕ್ಷಣ ಸಾಲಕ್ಕೆ ಬ್ಯಾಂಕುಗಳಿಗೆ ಆಧಾರ ಕೊಡುವ ಅವಶ್ಯವಿಲ್ಲ ಎಂದು ಯು.ಪಿ.ಪುರಾಣಿಕ್ ಅವರ ಲೇಖನದಿಂದ ನಮಗೆ ಸ್ಪಷ್ಟವಾಗಿದೆ. ಆದರೆ ಈಗ ನಮ್ಮ ಪರಿಸ್ಥಿತಿ `ದೇವರು ಕೊಟ್ಟರೂ ಪೂಜಾರಿ ಕೊಡ' ಎನ್ನುವ ಗಾದೆ ಮಾತಿನಂತೆ ಆಗಿದೆ. ದಯಮಾಡಿ ಮಾರ್ಗದರ್ಶನ ಮಾಡಿರಿ.ಉತ್ತರ: ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಸಾದರಪಡಿಸಿದ `ಮಾಡಲ್ ಎಜುಕೇಷನ್ ಲೋನ್ ಸ್ಕೀಮ್'ನಂತೆ, ವಾರ್ಷಿಕ ರೂ.4.50 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬದಲ್ಲಿ ಜನಿಸಿದ ಮಕ್ಕಳು ವೃತ್ತಿಪರ ಶಿಕ್ಷಣಕ್ಕಾಗಿ ರೂ.10 ಲಕ್ಷದವರೆಗೂ ಬಡ್ಡಿ ಅನುದಾನಿತ ರೂಪದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಬಹುದಾಗಿದೆ ಇದು 2009ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ.ಈ ಹಿಂದೆ ತಿಳಿಸಿದಂತೆ ರೂ.4.50 ಲಕ್ಷ ಸಾಲದವರೆಗೆ ಆಧಾರ (ಸೆಕ್ಯುರಿಟಿ) ಕೊಡಬೇಕಾದ ಅಗತ್ಯವೇ ಇಲ್ಲ.

`ಪ್ರಗತಿ ಗ್ರಾಮೀಣ ಬ್ಯಾಂಕ್' ಒಂದು ಉತ್ತಮ ಗ್ರಾಮೀಣ ಬ್ಯಾಂಕ್. ಅವರು ನಿಮಗೆ ಸಾಲ ನಿರಾಕರಿಸುವುದಿಲ್ಲ. ಅವಶ್ಯ ಬಿದ್ದಲ್ಲಿ ಅವರ ಮುಖ್ಯ ಕಚೇರಿಗೆ ಮನವಿ ಪತ್ರ ಬರೆಯಿರಿ.

.....ಹಣ, ತೆರಿಗೆ ಸಮಸ್ಯೆಗೆ ಪರಿಹಾರ

ಓದುಗರು ಹಣಕಾಸು ವಹಿವಾಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ರದಲ್ಲಿ ಬರೆದು ಕಳುಹಿಸಿ ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ಪ್ರಶ್ನೆಗಳನ್ನು ಕಳಿಸುವ ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು- 560 001. ಇ-ಮೇಲ್ ವಿಳಾಸಕ್ಕೂ ಕಳುಹಿಸಬಹುದು.

sdesk@prajavani.co.in  -ಸಂ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.