ಮಂಗಳವಾರ, ಏಪ್ರಿಲ್ 20, 2021
32 °C

ಪ್ರಾಯೋಗಿಕ ಮೋಡ ಬಿತ್ತನೆ: ಸಿಎಂ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ರಾಷ್ಟ್ರೀಯ ಬ್ಯಾಂಕುಗಳಲ್ಲಿ ರಾಜ್ಯದ ರೈತರು ಮಾಡಿರುವ ಸಾಲ ಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಇಳಕಲ್‌ನ ಶ್ರೀ ವಿಜಯ ಮಹಾಂತ ಸಂಸ್ಥಾನಮಠದಲ್ಲಿ `ಬಸವಣ್ಣನವರ ಜಯಂತಿ ಶತಮಾನೋತ್ಸವ ಮತ್ತು ಶರಣ ಸಂಸ್ಕೃತಿ ಮಹೋತ್ಸವ~ ಅಂಗವಾಗಿ ಭಾನುವಾರ ನಡೆದ `ಜಾನಪದ ಗೋಷ್ಠಿ~ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದ 18 ಲಕ್ಷ ರೈತರು ವಿವಿಧ ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೂ 19 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಬರದ ಹಿನ್ನೆಲೆಯಲ್ಲಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಕೇಂದ್ರ ಸರ್ಕಾರ ಈ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದರು.ಮೋಡ ಬಿತ್ತನೆ ನಿರ್ಧಾರ: ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ 10 ದಿನಗಳ ಒಳಗೆ ಮಳೆಯಾಗದಿದ್ದರೆ, ಮೋಡ ಬಿತ್ತನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.ಮೋಡ ಬಿತ್ತನೆ ಬಗ್ಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ವಾಗಿ ಮಾತ್ರ ಮೋಡ ಬಿತ್ತನೆ ಮಾಡಲಾಗುವುದು. ಮೋಡ ಬಿತ್ತನೆ ಕೈಗೊಳ್ಳುವ ಸಂಬಂಧ ರೂ 5 ಕೋಟಿಯನ್ನು  ಜಲಸಂಪನ್ಮೂಲ ಇಲಾಖೆಯಲ್ಲಿ ಕಾಯ್ದಿರಿಸಲಾಗಿದೆ ಎಂದರು.ನೇಕಾರ ಸಾಲ ಮನ್ನಾ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಧಕ್ಕೆ ಇಲ್ಲ: ಶಿವಮೊಗ್ಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.ಮಲೆನಾಡು ಮತ್ತು ಕರಾವಳಿ ಭಾಗದವರ ಅನುಕೂಲತೆಗಾಗಿ ಶಿವಮೊಗ್ಗದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಏಣಗಿ ಬಾಳಪ್ಪನವರಿಗೆ `ಬಸವತತ್ವ ಭೂಷಣ ರಂಗಕಲಾನಿಧಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಸಿ.ಎಂ.ಉದಾಸಿ, ಎಸ್.ಕೆ. ಬೆಳ್ಳುಬ್ಬಿ, ಸರ್ಕಾರದ ಮುಖ್ಯ ಸಚೇತಕ ಸಿದ್ದು ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.