ಶುಕ್ರವಾರ, ಮೇ 20, 2022
21 °C

ಪ್ರೀತಿಗಲ್ಲ, ಆಚರಣೆಗೆ ವಿರೋಧ: ಮುತಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ಪ್ರೇಮಕ್ಕೆ ವಿರೋಧವಿಲ್ಲ. ನಿರ್ದಿಷ್ಟ ದಿನದಂದು ಪ್ರೇಮ ಆಚರಣೆಗೆ ನಮ್ಮ ವಿರೋಧ. ಪ್ರೇಮಿಗಳ ದಿನಾಚರಣೆ(ವ್ಯಾಲೆಂಟೈನ್ಸ್ ಡೇ) ಹಿಂದೆ ಡ್ರಗ್ಸ್, ಸೆಕ್ಸ್ ಮಾಫಿಯಾ ಕೆಲಸ ಮಾಡುತ್ತಿದೆ. ನಮ್ಮ ದೇಶದ ಮಾತೃದೇವೋಭವ ಸಂಸ್ಕೃತಿಯನ್ನು ಕುಲಗೆಡಿಸುವ ಷಡ್ಯಂತ್ರ ಇದರ ಹಿಂದಿದೆ’...ಹೀಗೆ ಪ್ರೇಮಿಗಳ ದಿನಾಚರಣೆ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದವರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.ಇಲ್ಲಿನ ಪತ್ರಕರ್ತರ ಅಧ್ಯಯನ ಕೇಂದ್ರ ಮಂಗಳೂರು ಬಿಜಿನೆಸ್ ಸ್ಕೂಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಪ್ರೇಮಿಗಳ ದಿನ-ಮಾನವ ಹಕ್ಕುಗಳು’ ವಿಷಯವಾಗಿ ಅವರು ಸಂವಾದ ನಡೆಸಿದರು.ವ್ಯಾಲೆಂಟೈನ್ ಸಂತ ಎನ್ನಲಾಗುತ್ತಿದೆ. ಆದರೆ ರಷ್ಯಾದಲ್ಲಿ ಪ್ರೇಮಿಗಳ ದಿನ ನಿಷೇಧಿಸಲಾಗಿದೆ. ಯಾವುದೇ ಚರ್ಚ್‌ನಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ತನ್ನ ಮಾರುಕಟ್ಟೆ ವಿಸ್ತರಣೆಗೆ ಇಂತಹ ದಿನಾಚರಣೆ ಪ್ರಚುರಪಡಿಸುತ್ತಿದೆ. ಪ್ರೇಮಿಗಳ ದಿನ ಹೆಸರಿನಲ್ಲಿ ನಡೆಯುವ ಅನಾಚಾರವನ್ನು ಶ್ರೀರಾಮ ಸೇನೆ ವಿರೋಧಿಸುತ್ತದೆ.ಕಳೆದ ವರ್ಷ ಪ್ರೇಮಿಗಳ ದಿನಾಚರಣೆಯಂದು ದೇಶದ 5 ನಗರಗಳಲ್ಲಿ 318 ಬಲಾತ್ಕಾರ, 98 ಕೊಲೆ ನಡೆದಿವೆ. ಇದು ಪ್ರೇಮಿಗಳ ದಿನದ ಪರಿಣಾಮ ಎಂದು ಗಮನ ಸೆಳೆದರು.

ಪ್ರೇಮಿಗಳ ದಿನ ವಿರುದ್ಧ ಶ್ರೀರಾಮ ಸೇನೆಯ ಹೋರಾಟದಿಂದಾಗಿಯೇ ಇಂದು ಈ ದಿನಾಚರಣೆ ವ್ಯಾಪಕ ಪ್ರಚಾರ ಪಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್, ‘ನಮ್ಮ ಹೋರಾಟದಿಂದಾಗಿ ಹಲವು ವಿದ್ಯಾರ್ಥಿನಿಯರು ಅಂದು ನೆಮ್ಮದಿಯಿಂದ ಕಾಲೇಜಿಗೆ ತೆರಳುವಂತಾಗಿದೆ. ಸೇನೆ ಭಯದಿಂದ ಹಲವು ಕಾಲೇಜು ಕ್ಯಾಂಪಸ್‌ಗಳಲ್ಲಿ ಆಚರಣೆ  ನಿಂತಿದೆ’ ಎಂದು ಸಮರ್ಥಿಸಿಕೊಂಡರು.‘ರಾಜ್ಯ ಸರ್ಕಾರ ಪ್ರೇಮಿಗಳ ದಿನ ಆಚರಿಸುವವರಿಗೆ ಭದ್ರತೆ ನೀಡುವುದಾಗಿ ಹೇಳಿರುವುದನ್ನು ಖಂಡಿಸುವೆ’ ಎಂದ ಮುತಾಲಿಕ್, ಈ ಬಾರಿ ಪ್ರೇಮಿಗಳು ತಮ್ಮೆದುರಿಗೆ ಬಂದರೆ ಅವರಿಗೆ ಆಶೀರ್ವಾದ ಮಾಡುವೆ. ಏಕೆಂದರೆ ನಿಜವಾದ ಪ್ರೇಮಿಗಳು ಮಾತ್ರ ನನ್ನ ಬಳಿ ಬರುತ್ತಾರೆ ಎಂದರು.ಇದುವರೆಗೆ 132 ಗ್ರಾಮಗಳನ್ನು ಪಾನಮುಕ್ತಗೊಳಿಸಲಾಗಿದೆ. ದಲಿತ ಮತ್ತು ಮೇಲ್ವರ್ಗದ ಜನರ ನಡುವೆ  700 ವಿವಾಹ ನಡೆಸಲಾಗಿದೆ ಎಂದು ಶ್ರೀರಾಮ ಸೇನೆ ಕೆಲಸಗಳ ವಿವರ ನೀಡಿದರು.ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ‘ಸರ್ಕಾರದ ನವ ಉದಾರವಾದಿ ನೀತಿಯಿಂದಾಗಿ ಪ್ರೇಮಿಗಳ ದಿನದಂತಹ ಆಚರಣೆ ಪ್ರಸಿದ್ಧಿ ಪಡೆದಿವೆ. ಸಾಂಸ್ಕೃತಿಕ ಅಧಃಪತನವಾಗುತ್ತಿದೆ. ಮನಪರಿರ್ವನೆ ಮೂಲಕ ಇಂಥ ದಿನಾಚರಣೆ ನಿಯಂತ್ರಿಸಬಹುದು. ಈ ವಿಚಾರದಲ್ಲಿ ಶ್ರೀರಾಮ ಸೇನೆ ವಿರೋಧ ‘ಬೇರು ಕಡಿಯುವ ಬದಲು, ಎಲೆ ತುಂಡರಿಸಿದಂತಾಗಿದೆ’. ಈ ಬಾರಿ ಪ್ರೇಮಿಗಳಿಗೆ ಶ್ರೀರಾಮ ಸೇನೆ ಅಡ್ಡಿಪಡಿಸಿದರೆ, ಡಿವೈಎಫ್‌ಐ ಭದ್ರತೆ ನೀಡಲಿದೆ’ ಎಂದರು.‘ಯಾವುದಕ್ಕೂ ಮಿತಿ, ನೈತಿಕತೆ ಇರಬೇಕು. ಪ್ರೇಮಿಗಳ ದಿನಕ್ಕೆ ಪ್ರಚಾರ ಕೊಡುವುದಕ್ಕೆ ನಿಯಂತ್ರಣ ಹೇರಬೇಕು, ಜನಾಂದೋಲನ, ರಚನಾತ್ಮಕ ಕಾರ್ಯಗಳ ಮೂಲಕ ಮನುಷ್ಯನ ಮನಸ್ಸನ್ನು ಬದಲಾಯಿಸಿದಲ್ಲಿ ಇಂತಹ ಆಚರಣೆ ತಡೆಯಬಹುದು’ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ಮಹಮ್ಮದ್ ಕುಞಿ ಅಭಿಪ್ರಾಯಪಟ್ಟರು. ಪತ್ರಕರ್ತ ಪುಷ್ಪರಾಜ್ ಸಮನ್ವಯಕಾರರಾಗಿದ್ದರು.‘ಮುತಾಲಿಕ್ ಬದಲಾದರೆ?’


‘ಪ್ರಮೋದ್ ಮುತಾಲಿಕ್ ಬದಲಾಗಿದ್ದಾರೆ. 2 ವರ್ಷಗಳ ಹಿಂದಿನ ಕೆಚ್ಚು, ವರಸೆ ಇಂದಿಲ್ಲ. ಮಾತಿನಲ್ಲಿ ಮೃದುತ್ವ. ಇದೇ ಪ್ರವೃತ್ತಿ 3 ವರ್ಷಗಳ ಹಿಂದೆ ಇದ್ದಿದ್ದರೆ ಇಂದು ಪ್ರೇಮಿಗಳ ದಿನಾಚರಣೆ ಬಗ್ಗೆ ಚರ್ಚೆ ನಡೆಸುವ ಪ್ರಸಂಗವೇ ಬರುತ್ತಿರಲಿಲ್ಲ’ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದು ಕೆಲವರಲ್ಲಿ ನಗೆ ಮೂಡಿಸಿತು.ಆದರೆ, ‘ಬದಲಾಗಿಲ್ಲ. ಹಿಂದಿನಂತೆಯೇ ಇದ್ದೇನೆ’ ಎಂದು ಮುತಾಲಿಕ್ ಸಮರ್ಥಿಸಿಕೊಂಡರು.‘ಪ್ರೇಮಿಗಳ ದಿನ ಆಚರಣೆ ಸಲ್ಲ’ : ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: ವೆಲೆಂಟೈನ್ ಹೆಸರಿನಲ್ಲಿ ಪ್ರೇಮಿಗಳ ದಿನ ಆಚರಿಸುವ ಬದಲು ಫೆ. 14ರಂದು ರಾಷ್ಟ್ರ ಪುರುಷರ ಸ್ಮರಣೆಯ ದಿನವನ್ನಾಗಿ ಆಚರಿಸಲು ಹಿಂದೂ ಜನಜಾಗೃತಿ ಸಮಿತಿ ಯುವಜನರಲ್ಲಿ ಮನವಿ ಮಾಡಿದೆ.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿ ಮುಖಂಡ ರಮೇಶ್ ನಾಯಕ, ವೆಲೆಂಟೈನ್ ಡೇ ಪಾಶ್ಚಾತ್ಯರ ಅನೈತಿಕ ಭೋಗವಾದದ ಅನುಕರಣೆ. ಇದು ಹಿಂದೂಗಳ ಸಾಂಸ್ಕ್ರತಿಕ ಮತಾಂತರಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪ್ರೇಮಿಗಳ ದಿನವನ್ನು ವಿದೇಶಿ ಬಂಡವಾಳಶಾಹಿ ಶಕ್ತಿಗಳು ಶುಭಾಷಯ ಪತ್ರ ಹಾಗೂ ಉಡುಗೊರೆ ಮಾರಿ ಹಣ ಗಳಿಸುವ ತಂತ್ರವಾಗಿ ಬಳಸುತ್ತಿವೆ. ಇದು ಹೆಣ್ಣು ಮಕ್ಕಳನ್ನು ಪೀಡನೆ, ಮಾದಕ ವ್ಯಸನ, ಪಬ್, ಬಾರ್‌ಗಳಲ್ಲಿ ಮದ್ಯ ಸೇವಿಸಿ ಲಿಂಗಬೇಧವಿಲ್ಲದೆ ಕುಣಿಯುವುದು ಮೊದಲಾದ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಹಿಂದೂ ಸಮಾಜದ ನೈತಿಕ ಅಧಃಪತನಕ್ಕೆ ಕಾರಣವಾಗಿದೆ ಎಂದು ಪ್ರತಿಪಾದಿಸಿದರು.ಜನಾಂದೋಲನ: ಪ್ರೇಮಿಗಳ ದಿನ ಆಚರಣೆ ವಿರುದ್ಧ ಸಮಿತಿ ರಾಜ್ಯವ್ಯಾಪಿ ಜನಾಂದೋಲನ ಹಮ್ಮಿಕೊಂಡಿದ್ದು, ಮಂಗಳೂರಿನ ಕೆನರಾ, ಗೋಕರ್ಣನಾಥೇಶ್ವರ, ಎಸ್‌ಡಿಎಂ ಕಾನೂನು ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದೆ. ಸೋಮವಾರ ಸಂತ ಅಲೋಶಿಯಸ್ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಆದರೆ, ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸಮಿತಿ ಮುಖಂಡರಾದ ಅರುಣ್ ಆಚಾರ್ಯ, ಸಂಗೀತಾ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.ಬಜರಂಗ ದಳ ವಿರೋಧ

ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿರುವ ಬಜರಂಗ ದಳ ಜಿಲ್ಲಾ ಘಟಕ, ಉದ್ಯಾನವನ, ಶಾಪಿಂಗ್ ಮಾಲ್, ಪಬ್ ಮುಂತಾದೆಡೆ ಅಶ್ಲೀಲ, ಅಸಭ್ಯ ವರ್ತನೆ ದೇಶದ ಸಂಸ್ಕೃತಿಗೆ ಮಾಡುವ ಅವಮಾನ ಎಂದಿದೆ. ಇಂಥ ಘಟನೆ ನಡೆಯದಂತೆ ಪೊಲೀಸರು ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.