ಫುಟ್ಪಾತ್ಗಳಿಗೆ ದಿಢೀರ್ ಹೊಸರೂಪ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ರಸ್ತೆ ಮೂಲಸೌಕರ್ಯ ವಿಭಾಗದಿಂದ ನಗರದ ಪ್ರಮುಖ ರಸ್ತೆಗಳಲ್ಲಿನ ಫುಟ್ಪಾತ್ಗಳ ದುರಸ್ತಿ ಕಾರ್ಯವನ್ನು ದಿಢೀರ್ ಆಗಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಗುಣಮಟ್ಟದಲ್ಲಿ ಅಪಸ್ವರ ಕೇಳಿಬಂದಿದೆ.
ನಗರದ ಹೃದಯಭಾಗದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರಾಜಭವನ ರಸ್ತೆ, ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಹಲಸೂರು ರಸ್ತೆ, ಮಿಲ್ಲರ್ಸ್ ರಸ್ತೆ, ಆಸ್ಪತ್ರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಫುಟ್ಪಾತ್ ದುರಸ್ತಿ ಕಾರ್ಯ ಆರಂಭವಾಗಿದೆ. ಈ ಉದ್ದೇಶಕ್ಕಾಗಿ ₹ 20.5 ಕೋಟಿ ವ್ಯಯಿಸಲಾಗುತ್ತಿದೆ.
ಮುಂದಿನ ತಿಂಗಳು ನಗರದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿರುವ ಕಾರಣ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ತರಾತುರಿಯಲ್ಲಿ ನಡೆದಿರುವ ಈ ಕಾಮಗಾರಿ, ಗುಣಮಟ್ಟದಿಂದ ಕೂಡಿಲ್ಲ ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳು ಮಾತ್ರವಲ್ಲದೆ ಸ್ವತಃ ಬಿಬಿಎಂಪಿ ಸದಸ್ಯರೂ ಆಕ್ಷೇಪ ಎತ್ತಿದ್ದಾರೆ.
‘ಕಾಮಗಾರಿ ನಡೆಸುವ ವಿಷಯವಾಗಿ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಕೆಲಸದ ಗುಣಮಟ್ಟ ಕಳಪೆ ಆಗಿರುವ ಸಂಬಂಧ ದೂರುಗಳು ಇರುವುದು ನಿಜ. ಕೌನ್ಸಿಲ್ ಸಭೆಯಲ್ಲಿ ನಾನು ಈ ಕುರಿತು ಪ್ರಶ್ನೆ ಮಾಡಲಿದ್ದೇನೆ’ ಎನ್ನುತ್ತಾರೆ ಶಾಂತಲಾನಗರ ವಾರ್ಡ್ ಸದಸ್ಯ ಎಂ.ಬಿ. ದ್ವಾರಕಾನಾಥ್.
‘ಬಿಬಿಎಂಪಿ ಕೈಗೊಳ್ಳುವ ಕಾಮಗಾರಿಗಳ ಮೇಲೆ ಕಣ್ಗಾವಲು ಇಡಲು ವಾರ್ಡ್ ಸಮಿತಿಗಳು ಇಲ್ಲದಿರುವುದೇ ಇಂತಹ ಕಳಪೆ ಕೆಲಸಗಳಿಗೆ ಕಾರಣವಾಗುತ್ತಿದೆ’ ಎಂದು ಸಿಟಿಜನ್ ಆ್ಯಕ್ಷನ್ ಫೋರಂ ಅಧ್ಯಕ್ಷ ಡಿ.ಎಸ್. ರಾಜಶೇಖರ್ ಹೇಳುತ್ತಾರೆ.
‘ಸ್ವಯಂಸೇವಾ ಸಂಸ್ಥೆಗಳು ಹಾಗೂ ಬಡಾವಣೆ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳನ್ನೂ ವಿಶ್ವಾಸಕ್ಕೆ ಪಡೆದು ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಅಂತಹ ಯಾವ ಕ್ರಮ ಕೈಗೊಳ್ಳದೆ ಫುಟ್ಪಾತ್ ದುರಸ್ತಿಗೆ ಚಾಲನೆ ನೀಡಲಾಗಿದೆ. ತೆರಿಗೆದಾತರ ಹಣ ಪೋಲಾಗುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಫುಟ್ಪಾತ್ಗೆ ಈ ಹಿಂದೆ ಹಾಕಿದ್ದ ಇಂಟರ್ಲಾಕಿಂಗ್ ಟೈಲ್ಗಳು ಉತ್ತಮ ಸ್ಥಿತಿಯಲ್ಲಿದ್ದರೂ ಅವುಗಳನ್ನು ಬದಲು ಮಾಡಲಾಗುತ್ತಿದೆ. ಒಂದು ಕಡೆ ತೆಗೆದ ಟೈಲ್ಗಳನ್ನೇ ಮತ್ತೊಂದು ಕಡೆ ಅಳವಡಿಸಲು ಒಯ್ಯಲಾಗುತ್ತಿದೆ’ ಎಂಬ ಆರೋಪ ಸಹ ಕೇಳಿಬಂದಿದೆ.
‘ಫುಟ್ಪಾತ್ ಮೇಲೆ ಜೋಡಿಸಿದ ಟೈಲ್ಗಳು ಕುಸಿಯದಂತೆ ಕೆಳಗೆ ಮರಳು ಹಾಕಬೇಕು. ಆದರೆ, ಮಣ್ಣಿನ ಮೇಲೇ ಅವುಗಳನ್ನು ಜೋಡಿಸ ಲಾಗುತ್ತಿದೆ. ಕೆಲವೆಡೆ ಸುಸ್ಥಿತಿಯಲ್ಲಿದ್ದ ಫುಟ್ಪಾತ್ನ ಟೈಲ್ಗಳನ್ನೂ ತೆಗೆಯಲಾಗಿದೆ’ ಎಂದು ದೂರಲಾಗಿದೆ.
‘ಒಂದೆಡೆ ಇಂಟರ್ಲಾಕಿಂಗ್ ಟೈಲ್ಗಳನ್ನು ಹಾಕಿದ್ದರೆ, ಇನ್ನೊಂದೆಡೆ ಕಾಂಕ್ರಿಟ್ ಹಾಕಲಾಗಿದೆ. ಮತ್ತೊಂದೆಡೆ ಕಲ್ಲುಗಳ ಹೊದಿಕೆ ಇದೆ. ನಗರದ ಸೌಂದರ್ಯದ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವ ಬಿಬಿಎಂಪಿ, ಹೀಗೆ ಒಂದೊಂದು ರಸ್ತೆಯಲ್ಲಿ ಒಂದೊಂದು ವಿಧದ ಫುಟ್ಪಾತ್ ನಿರ್ಮಾಣ ಮಾಡಿದ್ದೇಕೆ’ ಎಂಬ ಪ್ರಶ್ನೆ ಸಹ ಎತ್ತಲಾಗಿದೆ.
‘ಇದೊಂದೇ ಅಲ್ಲ. ಈ ಹಿಂದೆ ಕಳಪೆ ಕಾಮಗಾರಿ ನಡೆದಾಗಲೂ ಕೌನ್ಸಿಲ್ ಸಭೆಯಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದೇನೆ. ಆದರೆ, ಭ್ರಷ್ಟರನ್ನು ಶಿಕ್ಷಿಸುವ ಕೆಲಸ ಆಗುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ವನ್ನಾರ್ಪೇಟೆ ವಾರ್ಡ್ ಸದಸ್ಯ ಕೆ.ಶಿವಕುಮಾರ್.
ಎಂ.ಜಿ. ರಸ್ತೆಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ಫುಟ್ಪಾತ್ ಒಂದೆರಡು ಕಡೆ ಶಿಥಿಲ ಗೊಂಡಿದ್ದನ್ನು ಬಿಟ್ಟರೆ ಚೆನ್ನಾಗಿತ್ತು. ಈ ರಸ್ತೆಯ ಫುಟ್ಪಾತ್ಅನ್ನೂ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಈಗ ನಡೆದಿದೆ.
ಎಂ.ಜಿ. ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದ್ದನ್ನು ಕಂಡು ಸಾರ್ವಜನಿಕರು ‘ಟೆಂಡರ್ ಶ್ಯೂರ್ ಯೋಜನೆ ಇಲ್ಲಿಗೂ ಬಂತೇ’ ಎಂದು ಆಶ್ಚರ್ಯದಿಂದ ಪ್ರಶ್ನಿಸುತ್ತಿದ್ದಾರೆ. ‘ಟೆಂಡರ್ ಶ್ಯೂರ್ ಯೋಜನೆ ಎಂ.ಜಿ. ರಸ್ತೆಗೆ ಬರಲು ಇನ್ನೂ ಕನಿಷ್ಠ ಐದು ವರ್ಷಬೇಕು. ಸದ್ಯ ಫುಟ್ಪಾತ್ ಮೇಲ್ದರ್ಜೆಗೆ ಏರಿಸುವ ಜತೆಗೆ ಸಣ್ಣ–ಪುಟ್ಟ ದುರಸ್ತಿ ಕಾರ್ಯ ನಡೆಸಲಾಗುತ್ತದೆ’ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.
ಫುಟ್ಪಾತ್ ಅಂಚಿನ ಕಲ್ಲುಗಳನ್ನು (ಕರ್ಬ್) ತೆಗೆದು ಸಿಮೆಂಟ್ ಬ್ಲಾಕ್ ಗಳನ್ನು ಜೋಡಣೆ ಮಾಡಲಾಗುತ್ತಿದೆ. ಆದರೆ, ಇಳಿಜಾರಿನಲ್ಲಿ ಜೋಡಿಸಿರುವ ಆ ಬ್ಲಾಕ್ಗಳು ರಸ್ತೆಯ ಮೇಲ್ಮೈಗೆ ಸಮಾನ ಎತ್ತರದಲ್ಲಿವೆ. ಇದರಿಂದ ವಾಹನಗಳು ಫುಟ್ಪಾತ್ಗೆ ಸುಲಭ ವಾಗಿ ನುಗ್ಗಲಿವೆ ಎಂಬ ಭೀತಿ ವ್ಯಕ್ತವಾಗಿದೆ.
ಎಂ.ಜಿ. ರಸ್ತೆಯ ಕ್ವೀನ್ಸ್ ವೃತ್ತದಿಂದ ಡಿಕೆನ್ಶನ್ ಜಂಕ್ಷನ್ವರೆಗೆ (1,665 ಮೀಟರ್) ಫುಟ್ಪಾತ್ ದುರಸ್ತಿಯೂ ಸೇರಿದಂತೆ ರಸ್ತೆ ಮೇಲ್ದರ್ಜೆಗೆ ಏರಿಸಲು ₹ 3 ಕೋಟಿ ನಿಗದಿಮಾಡಲಾಗಿದೆ. ಫುಟ್ಪಾತ್ ಅಂಚಿನಲ್ಲಿ ಜೋಡಿಸುವ ಸಿಮೆಂಟ್ ಬ್ಲಾಕ್ಗಳಿಗಾಗಿಯೇ ₹ 7.79 ಲಕ್ಷ ವ್ಯಯಿಸಲಾಗುತ್ತಿದೆ.
ಎಂ.ಜಿ. ರಸ್ತೆಯಲ್ಲಿ ಕಾಂಕ್ರಿಟ್ ತಳಪಾಯ ಹಾಕದೆ ಸಿಮೆಂಟ್ ಬ್ಲಾಕ್ಗಳನ್ನು ನಿಲ್ಲಿಸಲಾಗಿದೆ. ಟ್ರಿನಿಟಿ ಚರ್ಚ್ ರಸ್ತೆಯಲ್ಲಿ ಸಹ ವಿಭಜಕದ ನಿರ್ಮಾಣ ಮಾಡಲಾಗುತ್ತಿದ್ದು ತಳಪಾಯ ಹಾಕಿಯೇ ಸಿಮೆಂಟ್ ಬ್ಲಾಕ್ ನಿಲ್ಲಿಸಲಾಗುತ್ತಿದೆ. ಅದೇ ಪಕ್ಕದ ರಸ್ತೆಯಲ್ಲಿ ಹೀಗೇಕೆ ಎಂಬ ಪ್ರಶ್ನೆಯನ್ನೂ ಎತ್ತಲಾಗಿದೆ.
ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ನಡುವಿನ ಸ್ನೇಹ ಗುಟ್ಟಿನ ಸಂಗತಿ ಏನಲ್ಲ. ಅವರಿಬ್ಬರೂ ಒಟ್ಟಾಗಿ ನಾಗರಿಕ ಸಂಘಟನೆಗಳನ್ನು ಕಾಮಗಾರಿ ಮೇಲೆ ನಿಗಾ ಇಡದಂತೆ ದೂರ ಇಡುತ್ತಾರೆ
– ಡಿ.ಎಸ್. ರಾಜಶೇಖರ್,
ಸಿಟಿಜನ್ ಆ್ಯಕ್ಷನ್ ಫೋರಂ ಅಧ್ಯಕ್ಷ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.