ಸೋಮವಾರ, ಮೇ 17, 2021
23 °C

ಫೆಬ್ರುವರಿಯಲ್ಲಿ ವಿಶ್ವ ಜಲ ಶೃಂಗ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  2012ರ ಫೆಬ್ರುವರಿ 1ರಿಂದ 3ರವರೆಗೆ ನಗರದಲ್ಲಿ ಮೊಟ್ಟಮೊದಲ ವಿಶ್ವ ಜಲ ಶೃಂಗಸಭೆ ನಡೆಯಲಿದೆ. ನೀರಿಗೆ ಸಂಬಂಧಿಸಿದಂತೆ ವಿಶ್ವದ ಪ್ರಮುಖರು, ಹೂಡಿಕೆದಾರರು, ಚಿಂತಕರು, ತಂತ್ರಜ್ಞರು, ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಸಂಶೋಧಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್‌ಮೆಂಟ್, ಬೆಂಗಳೂರು ಜಲಮಂಡಲಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಭಾರತೀಯ ಜಲ ಕಾಮಗಾರಿ ಸಂಸ್ಥೆಗಳ ಸಹಯೋಗದಲ್ಲಿ ಸಮಾವೇಶ ಆಯೋಜಿಸಲಾಗಿದೆ.ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿಗಳ ಸಲಹೆಗಾರ ಡಾ.ಎ.ರವೀಂದ್ರ, `ಹೋಟೆಲ್ ಲಲಿತ್ ಅಶೋಕದಲ್ಲಿ ಶೃಂಗಸಭೆ ನಡೆಯಲಿದ್ದು `ನಗರ ನೀರು ನಿರ್ವಹಣೆ~ ಸಮಾವೇಶದ ಕೇಂದ್ರ ವಿಷಯವಾಗಿದೆ.ಜಲ ಸಂಪನ್ಮೂಲ ಹಾಗೂ ಸಂರಕ್ಷಣೆ, ನೀರಿನ ಗುಣಮಟ್ಟ ಹಾಗೂ ಆರೋಗ್ಯ, ಬೇಡಿಕೆ ನಿರ್ವಹಣೆ, ನೀರಿಗಾಗಿ ಮಾಹಿತಿ ಸಂಪರ್ಕ ತಂತ್ರಜ್ಞಾನ ಹಾಗೂ ಹವಾಮಾನ ವೈಪರೀತ್ಯದಿಂದ ನೀರಿನ ಮೇಲಾಗುವ ಬದಲಾವಣೆಗಳು ಕುರಿತಂತೆ ಚರ್ಚಿಸಲಾಗುವುದು~ ಎಂದರು.`ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಅಮೆರಿಕ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ಮಲೇಷ್ಯಾ ದೇಶಗಳ ತಜ್ಞರು ಕೂಡ ಪಾಲ್ಗೊಳ್ಳಲಿದ್ದಾರೆ. ಶೃಂಗಸಭೆಯಲ್ಲಿ ಬೆಂಗಳೂರು ಎಕ್ಸ್‌ಪೊ ಎಂಬ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಉತ್ತಮ ಸಾಧನೆ ಮಾಡಿದ ವ್ಯಕ್ತಿ, ಸರ್ಕಾರದ ಅಂಗಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಕೈಗಾರಿಕೆಗಳಿಗೆ ಜಲ ಪ್ರಶಸ್ತಿಗಳನ್ನು ಕೂಡ ನೀಡಲಾಗುವುದು. ವಿಶ್ವದ ಬೇರೆಡೆಯಿಂದ ಬಂದ ತಜ್ಞರಿಗೆ ನಗರ ಮತ್ತು ರಾಜ್ಯದ ವಿವಿಧಡೆ ಕೈಗೊಂಡಿರುವ ನೀರಿನ ತಂತ್ರಜ್ಞಾನ ಪರಿಚಯಿಸಲು ಜಲ ತಂತ್ರಜ್ಞಾನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದು ಮಾಹಿತಿ ನೀಡಿದರು.ಬೆಂಗಳೂರು ಜಲಮಂಡಲಿ ಅಧ್ಯಕ್ಷ ಪಿ.ಬಿ.ರಾಮಮೂರ್ತಿ ಮಾತನಾಡಿ, `ಪ್ರತಿ ನಗರವೂ ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿರುತ್ತದೆ. ಪ್ರತಿ ನಗರಕ್ಕೆ ಕೂಡ ಹಲವಾರು ಸೌಲಭ್ಯ-ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಶೃಂಗಸಭೆ ಯಲ್ಲಿ ನೀರಿಗೆ ಸಂಬಂಧಿಸಿದಂತೆ ಜಗತ್ತಿನ ವಿವಿಧೆಡೆ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿಯಬಹುದಾಗಿದೆ. ವಿವಿಧ ನಗರಗಳಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳನ್ನು ಕುರಿತು ಅರಿಯಬಹುದಾಗಿದೆ~ ಎಂದರು.`ಜಲಮಂಡಲಿ ಮಟ್ಟಿಗೆ ಹೇಳುವುದಾದರೆ ಅಧಿಕಾರಿಗಳು ಶೃಂಗಸಭೆಯಲ್ಲಿ ಭಾಗವಹಿಸಿ ನುರಿತ ತಜ್ಞರಿಂದ ಮಾಹಿತಿ ಪಡೆಯಬಹುದು. ಜಲ ಕ್ಷೇತ್ರದ ಮುತ್ಸದ್ದಿಗಳನ್ನು ಭೇಟಿ ಮಾಡಬಹುದಾಗಿದೆ. ತಜ್ಞರಿಂದ ನೇರವಾಗಿ ಮಾಹಿತಿ ದೊರೆಯುವುದರಿಂದ ಮಂಡಳಿ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯ~ ಎಂದು ಅಭಿಪ್ರಾಯಪಟ್ಟರು.ಸಮಾವೇಶದ ಸಂಘಟಕ ಶ್ಯಾಮಸುಂದರ್, ಶೃಂಗಸಭೆಯ ನಿರ್ದೇಶಕ ಶ್ರೀನಿವಾಸ್ ರವೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.