ಶುಕ್ರವಾರ, ಮಾರ್ಚ್ 5, 2021
23 °C
ಈಜು: ಕೇಟಿ ಲೆಡೆಕಿಗೆ ವಿಶ್ವ ದಾಖಲೆಯ ಚಿನ್ನ

ಫೆಲ್ಪ್ಸ್‌ಗೆ ಸೋಲುಣಿಸಿದ ಸ್ಕೂಲಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆಲ್ಪ್ಸ್‌ಗೆ ಸೋಲುಣಿಸಿದ ಸ್ಕೂಲಿಂಗ್‌

ರಿಯೊ ಡಿ ಜನೈರೊ (ಎಎಫ್‌ಪಿ): ರಿಯೊ ಈಜುಕೊಳದಲ್ಲಿ ಅಧಿಪತ್ಯ ಮುಂದುವರಿಸಿರುವ ಅಮೆರಿಕದ ಕೇಟಿ ಲೆಡೆಕಿ 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಕೇಟಿ ಅವರು ರಿಯೊದಲ್ಲಿ ಗೆದ್ದ ಒಟ್ಟಾರೆ ಐದನೇ ಹಾಗೂ ನಾಲ್ಕನೇ ಚಿನ್ನ  ಇದಾಗಿದೆ. ಇದಕ್ಕೂ ಮುನ್ನ ಅವರು 200, 400  ಹಾಗೂ 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೇಯಲ್ಲಿ ಚಿನ್ನ ಗೆದ್ದಿದ್ದರೆ, 4X100 ಮೀಟರ್ಸ್‌ ರಿಲೇಯಲ್ಲಿ ಬೆಳ್ಳಿಗೆ ಕೊರಳೊಡ್ಡಿದ್ದರು.ಇದರೊಂದಿಗೆ ಒಂದೇ ಕೂಟದ ಮೂರು ವೈಯಕ್ತಿಕ ವಿಭಾಗಗಳಲ್ಲಿ ಚಿನ್ನ ಗೆದ್ದ ವಿಶ್ವದ ಎರಡನೇ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ  ಕೇಟಿ ಪಾತ್ರರಾದರು.

ಅಮೆರಿಕದ ಡೆಬ್ಬಿ ಮೇಯರ್‌ ಅವರು ಮೊದಲು ಈ ಸಾಧನೆ ಮಾಡಿದ್ದರು. ಡೆಬ್ಬಿ 1968ರ ಒಲಿಂಪಿಕ್ಸ್‌ನ 200, 400 ಮತ್ತು 800 ಮೀಟರ್ಸ್‌ ಫ್ರೀಸ್ಟೈಲ್‌ ವಿಭಾಗಗಳಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದರು.19 ವರ್ಷದ ಲೆಡೆಕಿ ಈಜುಕೊಳಕ್ಕೆ ಧುಮುಕಿದ ಕ್ಷಣದಿಂದಲೇ ವೇಗವಾಗಿ ಈಜಲು ಶುರುಮಾಡಿದರು. ಇನ್ನೊಂದೆಡೆ ಬ್ರಿಟನ್‌ನ ಜಾನ್‌ ಕಾರ್ಲಿನ್‌ ಮತ್ತು ಹಂಗರಿಯ ಬೊಗಲಾರ್ಕ ಕಪಾಸ್‌ ಅವರೂ ಮಿಂಚಿನ ಗತಿಯಲ್ಲಿ ಗುರಿಯತ್ತ ಮುನ್ನುಗ್ಗುತ್ತಿದ್ದರು.ಗುರಿ ಮುಟ್ಟಲು  100 ಮೀಟರ್ಸ್‌ ಬಾಕಿ ಇದ್ದಾಗ ವೇಗ ಹೆಚ್ಚಿಸಿಕೊಂಡ  ಲೆಡೆಕಿ 8 ನಿಮಿಷ 04.79 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದರೊಂದಿಗೆ ತಮ್ಮ ಹೆಸರಿಲ್ಲಿದ್ದ ವಿಶ್ವ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಈ ವರ್ಷದ ಜನವರಿಯಲ್ಲಿ ನಡೆದಿದ್ದ ಕೂಟದಲ್ಲಿ ಲೆಡೆಕಿ 8 ನಿಮಿಷ 06.68ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.ಬ್ರಿಟನ್‌ನ ಕಾರ್ಲಿನ್‌ 8 ನಿಮಿಷ 16.17 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಈ ವಿಭಾಗದ ಕಂಚು ಕಾಪಸ್‌ ಅವರ ಪಾಲಾಯಿತು. ಹಂಗರಿಯ ಕಾಪಸ್‌ ಅಂತಿಮ ಗೆರೆ ಮುಟ್ಟಲು 8 ನಿಮಿಷ 16.37 ಸೆಕೆಂಡುಗಳನ್ನು ತೆಗೆದುಕೊಂಡರು.ಇರ್ವಿನ್‌ಗೆ ಚಿನ್ನ: ಪುರುಷರ 50 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಅಮೆರಿಕದ ಅಂಥೋಣಿ ಇರ್ವಿನ್‌ ಚಿನ್ನಕ್ಕೆ ಕೊರಳೊಡ್ಡಿದರು. 35 ವರ್ಷದ ಇರ್ವಿನ್‌ ನಿಗದಿತ ದೂರ ಕ್ರಮಿಸಲು 21.40 ಸೆಕೆಂಡು ತೆಗೆದುಕೊಂಡರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಫ್ರಾನ್ಸ್‌ನ ಫ್ಲೋರೆಂಟ್‌ ಮನಾವುಡೌ  ಬೆಳ್ಳಿಗೆ ತೃಪ್ತಿಪಟ್ಟರು.ಆರಂಭದಿಂದಲೇ ಮುನ್ನಡೆಯಲ್ಲಿ ಸಾಗುತ್ತಿದ್ದ ಅವರು ಅಂತಿಮ ಕ್ಷಣದಲ್ಲಿ  ಹಿಂದೆ ಬಿದ್ದರು. ಹೀಗಾಗಿ 21.41ಸೆಕೆಂಡುಗಳಲ್ಲಿ ಗುರಿ ಸೇರಿ ಸ್ಪರ್ಧೆ ಕೊನೆಗೊಳಿಸಿದರು.

ಅಮೆರಿಕದ ನಥಾನ್‌ ಆಡ್ರಿಯನ್‌ (21.49 ಸೆಕೆಂಡು) ಕಂಚಿನ ಸಾಧನೆ ಮಾಡಿದರು.ಮೆಡೆಲಿನೆ ಮಿಂಚು: ಮಹಿಳೆಯರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅಮೆರಿಕದ ಮೆಡೆಲಿನೆ ಡಿರಾಡೊ ಚಿನ್ನದ ಸಾಧನೆ ಮಾಡಿದರು. ಹಂಗರಿಯ ಕತಿಂಕಾ ಹೊಸಜು ಮತ್ತು ಮೆಡೆಲಿನೆ ಅವರ ನಡುವೆ ಆರಂಭದಿಂದಲೂ ನೇರ ಸ್ಪರ್ಧೆ ಕಂಡುಬಂತು.100ಮೀಟರ್ಸ್‌ ಬಳಿಕ ವೇಗ ಹೆಚ್ಚಿಸಿಕೊಂಡ ಕತಿಂಕಾ ಮುನ್ನಡೆಯಲ್ಲಿದ್ದರು.  ಸ್ಪರ್ಧೆ ಕೊನೆಗೊಳಿ ಸಲು 50 ಮೀಟರ್ಸ್‌ ದೂರ ಬಾಕಿ ಇದ್ದಾಗ   ಮಿಂಚಿನಂತೆ ಸಾಗಿದ ಮೆಡೆಲಿನೆ 2 ನಿಮಿಷ 05.99ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.ಕತಿಂಕಾ 2 ನಿಮಿಷ 06.05 ಸೆಕೆಂಡುಗಳಲ್ಲಿ  ಅಂತಿಮ ರೇಖೆ ಮುಟ್ಟಿದರು. ಕೆನಡಾದ ಹಿಲರಿ ಕಾಲ್ಡ್‌ವೆಲ್‌ (2ನಿ.07.54ಸೆ.) ಕಂಚು ಗೆದ್ದರು.

ಸ್ಕೂಲಿಂಗ್‌ ಒಲಿಂಪಿಕ್ಸ್‌ ದಾಖಲೆಸಿಂಗಪುರದ ಜೋಸೆಫ್‌ ಸ್ಕೂಲಿಂಗ್‌ ಪುರುಷರ 100 ಮೀಟರ್ಸ್‌ ಬಟರ್‌ಫ್ಲೈನಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. 21 ವರ್ಷದ ಸ್ಕೂಲಿಂಗ್‌, ಅಮೆರಿಕದ ‘ಚಿನ್ನದ ಮೀನು’ ಮೈಕಲ್‌ ಫೆಲ್ಪ್ಸ್‌ಗೆ ಆಘಾತ ನೀಡಿ ಒಲಿಂಪಿಕ್ಸ್‌ ದಾಖಲೆಯೊಂದಿಗೆ ಚಿನ್ನ ಗೆದ್ದರು. ಇದರೊಂದಿಗೆ ರಿಯೊ ಕೂಟದ ವೈಯಕ್ತಿಕ ವಿಭಾಗದಲ್ಲಿ  ಸತತ ನಾಲ್ಕು ಚಿನ್ನ ಜಯಿಸುವ ಫೆಲ್ಪ್ಸ್‌ ಕನಸನ್ನು ನುಚ್ಚು ನೂರು ಮಾಡಿದರು.ಅಷ್ಟೇ ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಸಿಂಗಪುರಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಕೀರ್ತಿಗೆ ಪಾತ್ರರಾದರು. ಆರಂಭದಿಂದ ಅಂತಿಮ ಹಂತದ ವರೆಗೂ ವೇಗ ಕಾಯ್ದುಕೊಂಡು ಈಜಿದ ಸ್ಕೂಲಿಂಗ್‌ 50.39 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಫೆಲ್ಪ್ಸ್‌, ದಕ್ಷಿಣ ಆಫ್ರಿಕಾದ ಚಾಡ್‌ ಲೆ ಕ್ಲೊಸ್‌ ಮತ್ತು ಹಂಗರಿಯ ಲಾಸಜ್ಲೊ ಶೆ ಅವರು ನಿಗದಿತ ದೂರ ಕ್ರಮಿಸಲು 51.14ಸೆಕೆಂಡು ತೆಗೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.