ಮಂಗಳವಾರ, ಮಾರ್ಚ್ 2, 2021
26 °C
ನಡಾಲ್‌ಗೆ ಆಘಾತ ನೀಡಿದ ಜೊಕೊವಿಚ್‌

ಫ್ರೆಂಚ್‌ ಓಪನ್‌ ಟೆನಿಸ್‌: ಸೆಮಿಗೆ ಸೆರೆನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ರೆಂಚ್‌ ಓಪನ್‌ ಟೆನಿಸ್‌: ಸೆಮಿಗೆ ಸೆರೆನಾ

ಪ್ಯಾರಿಸ್‌ (ರಾಯಿಟರ್ಸ್‌/ಎಎಫ್‌ಪಿ): ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮೂರನೇ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌  ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಸೆರೆನಾ 6–1, 6–3ರ ನೇರ ಸೆಟ್‌ಗಳಿಂದ ಇಟಲಿಯ ಸಾರಾ ಎರಾನಿ ಎದುರು ಗೆಲುವಿನ ನಗೆ ಚೆಲ್ಲಿದರು.ವೃತ್ತಿಜೀವನದ 20ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಅಮೆರಿಕದ ಆಟಗಾರ್ತಿ ರೋಲಾಂಡ್‌ ಗ್ಯಾರೋಸ್‌ನಲ್ಲಿ ಮತ್ತೊಮ್ಮೆ ಪ್ರಭುತ್ವ ಮೆರೆದರು.ಹಿಂದಿನ ಮೂರು ಪಂದ್ಯಗಳಲ್ಲಿ  ಮೊದಲ ಸೆಟ್‌ನಲ್ಲಿ ಜಯ ಪಡೆಯಲು ವಿಫಲರಾಗಿದ್ದ ಸೆರೆನಾ ಈ ಪಂದ್ಯದಲ್ಲಿ ಹಿಂದಿನ ತಪ್ಪುಗಳು ಪುನರಾವರ್ತನೆ ಆಗದ ಹಾಗೆ ಬಹಳ ಎಚ್ಚರಿಕೆಯಿಂದ ಆಡಿದರು.ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲಿಯೇ ಎದುರಾಳಿ ಆಟಗಾರ್ತಿಯ ಸರ್ವ್‌ ಮುರಿದ ಸೆರೆನಾ ತಮ್ಮ ಸರ್ವ್‌ ಕಾಪಾಡಿಕೊಂಡು 2–0ರಲ್ಲಿ ಮುನ್ನಡೆ ಗಳಿಸಿದರು. ಆದರೆ 2012ರಲ್ಲಿ ರನ್ನರ್‌ ಅಪ್‌ ಆಗಿದ್ದ ಎರಾನಿ ನಾಲ್ಕನೇ ಗೇಮ್‌ನಲ್ಲಿ ಸೆರೆನಾ ಸರ್ವ್‌ ಮುರಿದರೂ ಕೂಡ ಮತ್ತೊಮ್ಮೆ ತಮ್ಮ ಸರ್ವ್‌ ಕಳೆದುಕೊಂಡು 1–3ರ ಹಿನ್ನಡೆ ಅನುಭವಿಸಿದರು. ಆ ಬಳಿಕ ಬಲಿಷ್ಠ ಸ್ಮ್ಯಾಷ್‌ ಮತ್ತು ರಿಟರ್ನ್‌ಗಳನ್ನು ಸಿಡಿಸಿ ಸತತ ಮೂರು ಗೇಮ್‌ ಗೆದ್ದುಕೊಂಡ ಅವರು 27ನೇ ನಿಮಿಷದಲ್ಲಿ ಸೆಟ್‌ ತಮ್ಮದಾಗಿಸಿಕೊಂಡರು.ಮೊದಲ ಸೆಟ್‌ನಲ್ಲಿ ಎದುರಾದ ಸೋಲಿನಿಂದ ಎರಾನಿ ವಿಶ್ವಾಸ ಕಳೆದುಕೊಳ್ಳಲಿಲ್ಲ. ಎರಡನೇ ಸೆಟ್‌ನ ಆರಂಭದಿಂದಲೇ ಅವರ ರ್‍ಯಾಕೆಟ್‌ನಿಂದ ಮನಮೋಹಕ ಸರ್ವ್‌ಗಳು ಹೊರಹೊ ಮ್ಮಿದವು. ಇನ್ನೊಂದೆಡೆ ಸೆರೆನಾ ಕೂಡಾ ಆಕ್ರಮಮಣಕಾರಿ ಆಟಕ್ಕೆ ಮುಂದಾಗಿದ್ದರಿಂದ ಆರನೇ ಗೇಮ್‌ ವರೆಗೂ ಉಭಯ ಆಟಗಾರ್ತಿಯರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿತ್ತು.ಆದರೆ ಏಳನೇ ಗೇಮ್‌ನಲ್ಲಿ ಎರಾನಿಯ ಸರ್ವ್‌ ಮುರಿಯುವಲ್ಲಿ ಯಶಸ್ವಿಯಾದ ಸೆರೆನಾ 4–1ರಲ್ಲಿ ಮುನ್ನಡೆ ಕಂಡುಕೊಂಡು ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿಕೊಂಡರು. ಆ ಬಳಿಕವೂ ಗುಣಮಟ್ಟದ ಆಟ ಆಡಿದ ಅಮೆರಿಕದ ಆಟಗಾರ್ತಿ ಒಂದು ಗಂಟೆ ಐದು ನಿಮಿಷಗಳಲ್ಲಿ ಜಯದ ಸವಿಕಂಡರು.ಇದರೊಂದಿಗೆ ಸೆರೆನಾ ಇಟಲಿಯಾ ಆಟಗಾರ್ತಿ ಯ ಎದುರಿನ ತಮ್ಮ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದರು. ಉಭಯ ಆಟಗಾರ್ತಿಯರು ಇದುವರೆಗೂ ಒಂಬತ್ತು ಬಾರಿ ಎದುರಾಗಿದ್ದು ಎರಾನಿ ಒಮ್ಮೆಯೂ ಗೆದ್ದಿಲ್ಲ.ಇನ್ನೊಂದು ಕ್ವಾರ್ಟರ್ ಫೈನಲ್‌ ಹೋರಾಟ ದಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಟೈಮಿ 6–4, 7–5ರಲ್ಲಿ ಬೆಲ್ಜಿಯಂನ ಅಲಿಸನ್‌ ವಾನ್‌ ಉಯೆತ್ವಾನ್ಕ್‌ ಎದುರು ವಿಜಯಿಯಾದರು. ಟೈಮಿ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿ ಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.ಆಘಾತ: ಒಂಬತ್ತು ಬಾರಿಯ ಚಾಂಪಿಯನ್‌ ಸ್ಪೇನ್‌ನ ರಫೆಲ್‌ ನಡಾಲ್‌ ಟೂರ್ನಿಯಲ್ಲಿ ಆಘಾತ ಅನುಭವಿಸಿದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಹೊಂದಿರುವ ಸರ್ಬಿ ಯಾದ ನೊವಾಕ್‌  ಜೊಕೊವಿಚ್‌  ಸಿಂಗಲ್ಸ್‌  ವಿಭಾಗದ  ಕ್ವಾರ್ಟರ್  ಫೈನಲ್‌ನಲ್ಲಿ 7–5, 6–3, 6–1ರಲ್ಲಿ ನಡಾಲ್‌ಗೆ ಸೋಲುಣಿಸಿ ಸೆಮಿಫೈನಲ್‌ ತಲು ಪಿದ ರು. ರೋಲಾಂಡ್  ಗ್ಯಾರೋಸ್‌ನಲ್ಲಿ  ಸರ್ಬಿಯಾದ  ಆಟಗಾರನಿಗೆ  ನಡಾಲ್‌  ಎದುರು ಸಿಕ್ಕ ಎರಡನೇ  ಗೆಲುವು  ಇದಾಗಿದೆ.

ಸಾನಿಯಾ ಜೋಡಿಗೆ ಸೋಲು

ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಸಾನಿಯಾ–ಹಿಂಗಿಸ್‌ ಜೋಡಿ 5–7, 2–6ರಲ್ಲಿ ಅಮೆರಿಕದ ಬೆಥನಿ ಮಟೆಕ್‌ ಸ್ಯಾಂಡ್ಸ್‌ ಮತ್ತು ಜೆಕ್‌ ಗಣರಾಜ್ಯದ ಲೂಸಿ ಸಫರೋವಾ ಎದುರು ಸುಲಭವಾಗಿ ಶರಣಾಯಿತು.ಇನ್ನೊಂದು ಪಂದ್ಯದಲ್ಲಿ ಆ್ಯಂಡ್ರೆಯಿ ಹ್ಲಾವಕೋವಾ ಮತ್ತು ಲೂಸಿ ಹ್ರಾಡೆಕಾ 7–5, 3–6, 7–5ರಲ್ಲಿ ಹ್ಸೀ ಸು ವೀ ಮತ್ತು ಫ್ಲೇವಿಯಾ ಪೆನೆಟ್ಟಾ ವಿರುದ್ಧ  ಗೆಲುವು ತಮ್ಮದಾಗಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.