ಶನಿವಾರ, ಫೆಬ್ರವರಿ 27, 2021
31 °C

ಬಟ್ಟೆ ಅಲ್ಲದ ಬಟ್ಟೆಗಳ ರ್‍ಯಾಂಪಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಟ್ಟೆ ಅಲ್ಲದ ಬಟ್ಟೆಗಳ ರ್‍ಯಾಂಪಾಟ

ನಾಳೆ ಸಂಜೆ ಪಾರ್ಟಿಗೆ ಹೋಗಬೇಕು. ಹೊಸ ಉಡುಗೆ ತೊಡುಗೆಗಳನ್ನು ಕಲೆಹಾಕಬೇಕಲ್ಲ ಎಂದು ಚಿಂತಿಸುತ್ತಿದ್ದೀರಾ? ‘ನಿಮ್ಮ ಮನೆಯಲ್ಲಿ ಸೊಳ್ಳೆ ಪರದೆ, ಕಸ ಹಾಕುವ ಕರಿ ಪ್ಲಾಸ್ಟಿಕ್‌ ಚೀಲ, ಮೂಲೆಗೆ ಬಿದ್ದಿರುವ ಸೀಡಿಗಳು ಇವೆಯಾ? ಪಾರ್ಟಿವೇರ್‌ ಸಿದ್ಧಪಡಿಸಿಕೊಳ್ಳಿ, ಇದೋ ನಾವು ಮಾಡಿದ್ದೇವಲ್ಲ ಹಾಗೆ’ ಎಂದು ಬಿಂಕದಿಂದ ಬೀಗುತ್ತಿದ್ದಾರೆ ಕೋರಮಂಗಲದ ಲಿಸಾ ಸ್ಕೂಲ್‌ ಆಫ್‌ ಫ್ಯಾಷನ್‌ನ ವಿದ್ಯಾರ್ಥಿಗಳು.ಶಾಲೆಯಲ್ಲಿ ಶನಿವಾರ ನಡೆದ ಫ್ಯಾಷನ್‌ ಶೋದಲ್ಲಿ ‘ಬಟ್ಟೆಯನ್ನು ಬಳಸದ ಉಡುಗೆ ತೊಡುಗೆ’ ಎಂಬ ಧ್ಯೇಯದಂತೆ ಹತ್ತಾರು ವಿದ್ಯಾರ್ಥಿಗಳು ಮನೆಯ ಗ್ಯಾರೇಜ್‌ನಿಂದ, ಹಿತ್ತಲಿನಿಂದ, ಮರುದಿನ ಕಸದ ಗಾಡಿಗೆ ಸೇರಬೇಕಾದ ಮನೆಯ ತೊಟ್ಟಿಯಿಂದ ಎತ್ತಿಕೊಂಡ ಕಚ್ಚಾ ವಸ್ತುಗಳನ್ನೇ ಬಳಸಿ ಆಕರ್ಷಕ ವಿನ್ಯಾಸಗಳನ್ನು ಪ್ರದರ್ಶಿಸಿದರು.ಸೀಡಿಗಳ ಕಾಲ ಹೋಯಿತು. ಈಗ ಏನಿದ್ದರೂ ಪೋರ್ಟಲ್‌ಗಳ ಕಾಲ. ಹೀಗಾಗಿ ಸೀಡಿಗಳನ್ನೇ ಬಳಸಿ ಪಾರ್ಟಿವೇರ್‌ ಸಿದ್ಧಪಡಿಸಿದ್ದ ವಿದ್ಯಾರ್ಥಿ ನಿಹಾಸ್‌. ಮೈಕೆಲ್‌ ಜಾಕ್ಸನ್‌ ಶೈಲಿಯ ಪ್ಯಾಂಟ್‌ ಮತ್ತು ಮೇಲುಡುಗೆಗೆ ಆತ ಬಳಸಿದ್ದು ರೆಗ್ಸಿನ್‌, ಸೀಡಿ ಮತ್ತು ಯಾವುದೋ ಬ್ಯಾನರ್‌ನ ತುಂಡು. ‘ಕ್ಯಾಸೆಟ್‌ನಿಂದ ಸೀಡಿಗಳ ಜಮಾನ ಶುರುವಾದಾಗ ಕ್ಯಾಸೆಟ್‌ಗಳನ್ನು ಕೇಳುವವರೇ ಇರಲಿಲ್ಲ. ಈಗ ಅಂತಹುದೇ ಸ್ಥಿತಿ ಸೀಡಿಗಳಿಗೆ ಬಂದಿದೆ. ಕಾಲಚಕ್ರ, ಜೀವನಶೈಲಿಯಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಾ ಹೋದಂತೆ ನಿನ್ನೆಯ ಅತಿಬೇಡಿಕೆಯ ವಸ್ತು ಇವತ್ತು ಮೂಲೆಗುಂಪಾಗುವ ಸಹಜ ಪ್ರಕ್ರಿಯೆಯನ್ನು ನಾನು ನನ್ನ ಥೀಮ್‌ನಲ್ಲಿ ಅಳವಡಿಸಿಕೊಂಡಿದ್ದೇನೆ. ಮನೆ ಹತ್ತಿರ ಯಾವುದೋ ಬ್ಯಾನರ್‌ ಇತ್ತು. ಅದರ ಒಳಭಾಗ ಬೆಳ್ಳಿ ಬಣ್ಣದಲ್ಲಿತ್ತು. ಕಪ್ಪು ರೆಗ್ಸಿನ್‌ಗೆ ಅದು ಒಳ್ಳೆಯ ಕಾಂಟ್ರಾಸ್ಟ್‌ ಅನ್ನಿಸಿತು. ಅದಕ್ಕೆ ಸೀಡಿ ಆಕಾರದಲ್ಲಿ ಅದನ್ನು ಕತ್ತರಿಸಿ, ರೆಗ್ಸಿನ್‌ಗೆ ಜೋಡಿಸಿ ಹೊಲಿಗೆ ಹಾಕಿದೆ.ಸಾಮಾನ್ಯ ಹೊಲಿಗೆ ಯಂತ್ರದಲ್ಲಿ ರೆಗ್ಸಿನ್‌ ಹೊಲಿಯುವುದು ಸುಲಭವಲ್ಲ ಅಂತ ಗೊತ್ತಾಗಿದ್ದೇ ಈಗ. ಆಮೇಲೆ ಸೀಡಿಗಳನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿ ಅದನ್ನು ರೆಗ್ಸಿನ್‌ ಬಟ್ಟೆಯಲ್ಲಿ ಅಂಟಿಸಿದೆ. ಟೀಶರ್ಟ್‌ನ ಎಡಭುಜದಿಂದ ದಟ್ಟವಾಗಿವೆ, ಕೆಳಗಿಳಿಯುತ್ತಾ ಪ್ಯಾಂಟ್ ದಾಟಿ ಬೂಟಿನವರೆಗೂ ವಿರಳವಾಗಿ ಸೀಡಿ ಚೂರುಗಳನ್ನು ಅಂಟಿಸಿದ್ದೇನೆ. ಇದು ಸೀಡಿಯ ಜಮಾನ ಕುಸಿದ ಬಗೆಯನ್ನು ನಾನು ಕಟ್ಟಿಕೊಟ್ಟ ರೀತಿ’ ಎಂಬುದು ನಿಹಾಸ್ ವಿವರಣೆ.ದಪ್ಪನೆಯ ಕಾಗದವನ್ನೇ ಬಳಸಿ ಮಂಡಿಯಿಂದ ಮೇಲಿನ ಪಾರ್ಟಿ ಉಡುಪು ಸಿದ್ಧಪಡಿಸಿದ ವಿದ್ಯಾರ್ಥಿನಿ, ಶೋಗೂ ಮುನ್ನ ರ್‍್ಯಾಂಪ್‌ ಮೇಲೆ ಟ್ರಯಲ್‌ ಅಂಡ್‌ ಎರರ್ ಮಾಡುವುದರಲ್ಲೇ ಬ್ಯುಸಿಯಾಗಿದ್ದಳು.ಸೊಳ್ಳೆ ಪರದೆ ಮೇಲೆ ಕೀಬೋರ್ಡ್

ಅಮೆರಿಕ ಮೂಲದ ವಿದ್ಯಾರ್ಥಿನಿ ಮಾರಿಯಾ ಮತ್ತವಳ ಗೆಳತಿ ಕಂಪ್ಯೂಟರ್ ಕೀಬೋರ್ಡ್‌ ಮತ್ತು ಸೊಳ್ಳೆ ಪರದೆಯನ್ನು ಪಾರ್ಟಿವೇರ್‌ ಆಗಿಸಿದ ರೀತಿ ಬೆರಗು ಮೂಡಿಸುವಂತಿತ್ತು.ಬೆಂಗಳೂರಿನ ಹುಡುಗಿ ಟ್ರಿಸಾ, ಸ್ಪಂಜು ಮತ್ತು ಸೊಳ್ಳೆ ಪರದೆಯಿಂದ ಮೋಹಕವಾದ ಲಾಂಗ್‌ ಗೌನ್‌ ಸಿದ್ಧಪಡಿಸಿದ್ದಳು. ‘ಬಿಳಿ ಸ್ಪಂಜ್‌ಗೆ ಕಪ್ಪು ಡೈ ಮಾಡಿ ಅದನ್ನು ತಾರಸಿ ಮೇಲೆ ಒಂದು ವಾರ ಒಣಗಲು ಬಿಟ್ಟಿದ್ದೆ. ಬಣ್ಣ ದಟ್ಟವಾಗಲೆಂದು ಮಧ್ಯೆ ಮಧ್ಯೆ ಡೈ ಮಾಡುತ್ತಿದ್ದೆ. ಒಂದು ದಿನ ನೋಡ್ತೀನಿ ಯಾರೋ ತಾರಸಿಗೆ ನೀರು ಹಾಕಿ ಈ ಸ್ಪಂಜುಗಳನ್ನೆಲ್ಲ ಬಣ್ಣಗೆಡಿಸಿದ್ದರು. ಮತ್ತೆ ಹೊಸದಾಗಿ ಸ್ಪಂಜ್ ತಂದು ಕ್ಯೂಬ್‌ಗಳಾಗಿ ಕತ್ತರಿಸಿ ಡೈ ಮಾಡಿ ಸೊಳ್ಳೆ ಪರದೆಗೆ ಕ್ರಮಬದ್ಧವಾಗಿ ಜೋಡಿಸಿ ಹೊಲಿಗೆ ಹಾಕಿದೆ. ಕಷ್ಟವಾದ್ರೂ ವಿಶಿಷ್ಟವಾದ ‘ಫ್ಯಾಬ್ರಿಕ್‌’ನಿಂದ ಪಾರ್ಟಿವೇರ್‌ ತಯಾರಿಸಿದ ಖುಷಿಯಿದೆ’ ಎಂದು ನಕ್ಕಳು ಟ್ರಿಸಾ.ಜವಳಿಯನ್ನೇ ಬಳಸದ ಉಡುಗೆ ಸಿದ್ಧಪಡಿಸುವ ಸವಾಲನ್ನು ವಿದ್ಯಾರ್ಥಿಗಳು ಸಮರ್ಥವಾಗಿಯೇ ಸ್ವೀಕರಿಸಿದ್ದಕ್ಕೆ ಶೋದಲ್ಲಿ ತೋರಿಸಲಾದ ಒಂದೊಂದೂ ವೈಶಿಷ್ಟ್ಯಪೂರ್ಣ ಉಡುಗೆಯೇ ಸಾಕ್ಷಿ.ಥರ್ಮೋಕೋಲ್‌ನ ಪುಟಾಣಿ ಉಂಡೆಗಳನ್ನು ದಪ್ಪದ ಕಾಗದದ ಮೇಲೆ ಅಂಟಿಸಿದ ಛತ್ರಿಯಂತಹ ಸ್ಕರ್ಟ್‌, ಪ್ಲಾಸ್ಟಿಕ್‌ನ ಕಪ್ಪು ಗಾರ್ಬೇಜ್‌ ಬ್ಯಾಗ್‌ಗಳನ್ನು ಫ್ರಿಲ್‌ ಮತ್ತು ಅನಾರ್ಕಲಿ ಮಾದರಿಯಲ್ಲಿ ಜೋಡಿಸಿದ್ದ ಫ್ರಾಕ್‌, ದಪ್ಪವಾದ ಪ್ಲಾಸ್ಟಿಕ್‌ ಶೀಟ್‌ಗಳನ್ನೇ ಉದ್ದುದ್ದ ಸೀಳಿ ತೆಳ್ಳನೆಯ ಕಂಬಿಗೆ ವೃತ್ತಾಕಾರದಲ್ಲಿ ಅಂಟಿಸಿ ಅದಕ್ಕೆ ಪುಟಾಣಿ ಬಲ್ಬುಗಳನ್ನೂ ಜೋಡಿಸಿದ್ದ ಉಡುಗೆ ಆಕರ್ಷಕವಾಗಿತ್ತು.ಹೀಗೆ, ಬಟ್ಟೆಯಲ್ಲದ ಬಟ್ಟೆಗಳನ್ನು ಧರಿಸಿದ ರೂಪದರ್ಶಿಗಳು ರ್‍ಯಾಂಪಾಟ ಮೇಲೆ ಬಂದಾಗ ವಿನ್ಯಾಸಕ್ಕೆ ಸಹಕರಿಸಿದ ಅವರ ಸಹಪಾಠಿಗಳೂ ಹೆಜ್ಜೆ ಹಾಕಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.