ಗುರುವಾರ , ಮೇ 13, 2021
39 °C

ಬಡವರಿಗೆ ನೀರೂ ದುಬಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆ ೀಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ (ಸಿದ್ಧ ಉಡುಪು) ಉದ್ಯಮದ ಯಶಸ್ಸಿನ ಹಿಂದೆ 5 ಲಕ್ಷಕ್ಕೂ ಅಧಿಕ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85 ಕಾರ್ಮಿಕರು ಮಹಿಳೆಯರು ಎಂಬುದು ಗಮನಾರ್ಹ.ಪೀಣ್ಯ ಮತ್ತು ಯಶವಂತಪುರ ಕೈಗಾರಿಕ ಪ್ರದೇಶ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಅಷ್ಟೇನೂ ಸುಶಿಕ್ಷಿತರಲ್ಲ;  ಹಳ್ಳಿಗಳಿಂದ ವಲಸೆ ಬಂದವರು.ನೋಡಲು ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಕಾರ್ಖಾನೆಗಳಲ್ಲಿ ಯಂತ್ರಗಳ ಜೊತೆ ಪೈಪೋಟಿಗೆ ಬಿದ್ದವರಂತೆ ದುಡಿಯುವ ಇವರ ಸಮಸ್ಯೆ ಕೇಳುವ ಕಾಳಜಿಯಾಗಲಿ, ಜವಾಬ್ದಾರಿಯಾಗಲೀ ಮಾಲೀಕ ವರ್ಗಕ್ಕೆ ಇದ್ದಂತಿಲ್ಲ.ಮಹಿಳೆಯರಾಗಿ ಅನೇಕ ರೀತಿಯಲ್ಲಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಅವಾಚ್ಯ ನಿಂದನೆ, ಮುಖದ ಮೇಲೆ ಪೀಸ್ ಎಸೆಯುವುದು, ಕತ್ತು ಹಿಡಿದು ತಳ್ಳುವುದು,  ಕತ್ತೆ, ಗೂಬೆ, ನಾಯಿ ಎಂದು ಬೈಯುವುದು, ಅಪ್ಪೀತಪ್ಪಿ ಪ್ರಶ್ನಿಸಿದರೆ ಎಲ್ಲ ಕಾರ್ಮಿಕರ ಎದುರಿಗೆ ದಿನವಿಡೀ ನಿಲ್ಲಿಸುವುದು, ಕೆಲಸ ಕೊಡದೆ ಅವಮಾನ ಮಾಡುವುದು ಇತ್ಯಾದಿ ಪ್ರತಿ ದಿನ ಕಾರ್ಖಾನೆಗಳಲ್ಲಿ ಪುರುಷ ಮ್ಯೋನೇಜರ್‌ಗಳು, ಸೂಪರ್‌ವೈಸರ್‌ಗಳು ಎಸಗುವ ದೌರ್ಜನ್ಯಕ್ಕೆ ಕೆಲವು ಉದಾಹರಣೆಗಳು.ಇಂತಹ ಗಾರ್ಮೆಂಟ್ಸ್ ಕಾರ್ಮಿಕರು ತಮ್ಮ ಎಲ್ಲಾ ಸಮಸ್ಯೆಗಳಿಂದ ಹೊರಬರಬೇಕಾದರೆ ಸಂಘಟಿತರಾಗುವುದೊಂದೇ ಪರಿಹಾರ. ತಮ್ಮ ಹಕ್ಕುಗಳಿಗಾಗಿ ದನಿ ಎತ್ತಿ ಕೇಳಲು ಅವರಿಗೆ ಸಂವಿಧಾನಾತ್ಮಕವಾಗಿ ಇರುವ ಕಾನೂನು ಮತ್ತು ಸೌಲಭ್ಯಗಳ ಬಗ್ಗೆ ತಿಳಿಸುವುದು ಮುಖ್ಯ.ಅದಕ್ಕಾಗಿ ಅವರು ವಾಸಿಸುವ ಪ್ರದೇಶಗಳಲ್ಲಿ  ಕಾರ್ಮಿಕ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆವು. ಅದರಂತೆ ಲಗ್ಗೆರೆ ಪ್ರದೇಶದಲ್ಲಿ ತರಬೇತಿ ಆಯೋಜಿಸಿದೆವು.ಸಾಕಷ್ಟು ಬಾರಿ ಕಾರ್ಮಿಕರ ಮನೆ ಮನೆ ಭೇಟಿ ಮಾಡಿ, ಅಗತ್ಯ ಪ್ರಚಾರ ಕೈಗೊಂಡ ನಂತರವೂ ತರಬೇತಿಯಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯೇ ಇರಲಿಲ್ಲ. ಅದಕ್ಕೆ ಕಾರಣ ತಿಳಿದು ಅಚ್ಚರಿಯಾಯಿತು.

 

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡ ಲಗ್ಗೆರೆ, ರಾಜಗೋಪಾಲನಗರ, ಹೆಗ್ಗನಳ್ಳಿ, ಭೈರವೇಶ್ವರ ನಗರಗಳಲ್ಲಿ ಹೆಚ್ಚಾಗಿ ಗಾರ್ಮೆಂಟ್ಸ್ ಕಾರ್ಮಿಕರಿದ್ದಾರೆ. ಇವರೆಲ್ಲ ಉದ್ಯೋಗ ಅರಸಿ ಹಳ್ಳಿಗಳಿಂದ ವಲಸೆ ಬಂದವರು. ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆಂದು ಹೊರಟು ಸಂಜೆ ಮನೆ ತಲುಪುವುದು 7 ಗಂಟೆ ನಂತರವೇ.ಬದುಕಿಗೆ ಅತ್ಯಗತ್ಯವಾದ ದಿನಬಳಕೆ ಹಾಗೂ ಕುಡಿವ ನೀರಿಗೆ ಇಲ್ಲಿ ಬಹಳ ಪಡಿಪಾಟಲು ಪಡಬೇಕು.  ಇಡೀ ವಾರದ ಕುಡಿವ ಹಾಗೂ ದಿನಬಳಕೆ ನೀರನ್ನು ಭಾನುವಾರ ಮಾತ್ರ ಹಿಡಿದಿಟ್ಟುಕೊಳ್ಳಬೇಕು. ಸಾರ್ವಜನಿಕ ನೀರು ಸರಬರಾಜು  ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಾಯಿಯೇ ಇಲ್ಲದ, ತುಕ್ಕು ಹಿಡಿದು ನಾರುವ ಪೈಪುಗಳಲ್ಲಿ ನೀರೇ ಅಪರೂಪ.ನೀರು ಬಂದ ಕುರುಹೇ ಇಲ್ಲದ, ಆದರೆ ಕಾಲಾನುಕಾಲಕ್ಕೆ ಹೊಸದಾಗಿ ಬಣ್ಣ ಬಳಿಸಿಕೊಂಡು ಕಾರ್ಪೊರೇಟರ್ ಹಾಗೂ ಶಾಸಕರ ನಾಮಾಂಕಿತ ಹೊತ್ತ ಬೋಳು ನೀರಿನ ಟ್ಯಾಂಕುಗಳು ಮಾತ್ರ ರಸ್ತೆಗೊಂದರಂತೆ ಬೆರ್ಚಪ್ಪನಂತೆ ನಿಂತಿವೆ.ಇನ್ನು ಬಿಬಿಎಂಪಿಯಿಂದ ವ್ಯವಸ್ಥೆ ಮಾಡಿರುವ ಉಚಿತ ನೀರು ಸರಬರಾಜು ಟ್ಯಾಂಕರ್ ಪ್ರತಿ ಭಾನುವಾರ ನಿಗದಿತ ಸ್ಥಳದಲ್ಲಿ ನಿಲ್ಲುತ್ತದೆ ಎಂದಿದ್ದರೂ, ಅದು ಆ ಸಮಯ ಪಾಲಿಸಿದರೆ ಅಲ್ಲಿನವರ ಪುಣ್ಯ. ಅದಕ್ಕೂ ಸಹ 10-20 ರೂಪಾಯಿಯನ್ನು ಡ್ರೈವರ್‌ಗೆ ನೀಡಲೇಬೇಕು. ಹಾಗೇ ನೀಡಿದರೂ 5 ಕೊಡ ಹಿಡಿಯುವುದರೊಳಗಾಗಿ ಏಳು ಕೆರೆ ನೀರು ಕುಡಿಯಬೇಕು.ಚಿಕ್ಕ ಚಿಕ್ಕ ಬೆಂಕಿಪೊಟ್ಟಣ ಆಕಾರದ ಮನೆಗಳನ್ನು ಕಟ್ಟಿ ಕಾರ್ಮಿಕರಿಗೆ ನೀಡಿರುವ ಬಹುತೇಕ ಮನೆ ಮಾಲೀಕರು ಅಲ್ಲಿರುವ ಬಾಡಿಗೆದಾರರಿಗೆ ಕನಿಷ್ಠ ನೀರಿನ ವ್ಯವಸ್ಥೆ ಕಲ್ಪಿಸಿಯೇ ಇಲ್ಲ. ನೀರಿನ ವ್ಯವಸ್ಥೆ ಮಾಡಿಕೊಂಡಿರುವ ಸ್ವಂತ ಮನೆಯವರು ಇದನ್ನೊಂದು ಸೈಡ್ ಬಿಜಿನೆಸ್ ಮಾಡಿಕೊಂಡಿದ್ದಾರೆ.ಪ್ರತಿ ಕೊಡ ಕುಡಿವ ನೀರಿಗೆ 2 ರೂ, ಕೊಡ ದಿನಬಳಕೆ ನೀರಿಗೆ 1.5 ರೂಪಾಯಿ ವಸೂಲಿ ಮಾಡುತ್ತಾರೆ. ಹಾಗೆ ಹಣಕೊಟ್ಟು ಕೊಳ್ಳಲೂ ಸರತಿಯಲ್ಲಿ ಗಂಟೆಗಟ್ಟಲೆ ಕಾಯಬೇಕು.ಹೀಗಾಗಿ ಈ ಜನ ತಿಂಗಳಿಗೆ ಸಿಗುವ 3 ಸಾವಿರ ಸಂಬಳದಲ್ಲಿ 600 ರಿಂದ 700 ರೂಪಾಯಿಗಳನ್ನು ನೀರು ಕೊಳ್ಳಲು ಮೀಸಲಿಡುತ್ತಾರೆ. ಸೈಕಲ್, ಆಟೋರಿಕ್ಷಾ ಮತ್ತು ಕಾಲ್ನಡಿಗೆಯಲ್ಲಿ ಒಂದು-ಒಂದೂವರೆ ಕಿ.ಮೀ ದೂರದಿಂದ ನೀರು  ತರುತ್ತಾರೆ.ಅದಕ್ಕೂ ನಿಗದಿತ ಸಮಯ ಏನೂ ಇಲ್ಲ. ಬೆಳಿಗ್ಗೆ 8.30ರಿಂದ ಕೊಡ ಹಿಡಿದು ಕ್ಯೂನಲ್ಲಿ ನಿಂತರೆ, ನೀರು ಬಂದಾಗ ತುಂಬಿಕೊಳ್ಳಬೇಕು. ಒಂದು ದಿನ 9ಕ್ಕೆ ಬಿಟ್ಟರೆ, ಮತ್ತೊಂದು ದಿನ 12. ಹೀಗೇ ನೀರಿನ ಹೋರಾಟದಲ್ಲಿ, ಅನಿಶ್ಚಯದಲ್ಲಿ ಇಡೀ ವಾರದ ದೈಹಿಕ ಮಾನಸಿಕ ಶ್ರಮವನ್ನೆಲ್ಲಾ ಕಳೆಯಬೇಕಾದ ಭಾನುವಾರ ಕಳೆದೇ ಹೋಗುತ್ತದೆ.ಇಂಥ ಭಾನುವಾರದಂದು ಕಾರ್ಮಿಕರನ್ನು ತರಬೇತಿಗೆ ಬನ್ನಿರೆಂದು ಕರೆದರೆ, ಹೌಹಾರಿ ಬೀಳುತ್ತಾರೆ. ಅಷ್ಟೇ ಏಕೆ? ಕುಡಿಯಲು 2ನೇ ಲೋಟ ನೀರು ಕೇಳಿದರೆ,  `ಒಂದು ಹೊತ್ತು ಉಂಡು ಹೋಗಿ.. ನೀರನ್ನು ಮಾತ್ರ ಕೇಳಬೇಡಿ~.. ಎನ್ನುತ್ತಾರೆ..! `ನೀರಿನ ಬವಣೆ ತೀರುವುದೇ ಆದರೆ ಎಲ್ಲಿಗಾದರೂ ಬರುತ್ತೇವೆ, ಬದುಕಲು ನೀರು ಸಿಕ್ಕರೆ, ಕಾರ್ಮಿಕ ಹೋರಾಟಕ್ಕೆ ನಾವು ಸೈ~ ಎನ್ನುತ್ತಾರೆ.

 

ಸಿಂಕಿನಲ್ಲಿ ಕೊಳಾಯಿ ತಿರುಗಿಸಿ, ಗಂಟೆಗಟ್ಟಲೆ ಗಡ್ಡ ಕೆರೆಯುವ ಮಂದಿ ಇವರ ಮಾತಿನ ಹಿಂದಿನ ನೋವು, ಜೀವಜಲದ ಬೆಲೆ ಅರಿತರೆ ಲೇಸು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.