ಬುಧವಾರ, ಏಪ್ರಿಲ್ 14, 2021
29 °C

ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ 2011-12ನೇ ಸಾಲಿನಿಂದ ಶೇ 5ರಷ್ಟು ಸೀಟುಗಳು ಉಚಿತವಾಗಿ ದೊರೆಯಲಿವೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಈ ವರ್ಷದಿಂದ ಹೊಸದಾಗಿ ಸೂಪರ್ ನ್ಯೂಮರರಿ ಕೋಟಾ ಸೃಷ್ಟಿಸಿದ್ದು, ಇದರ ಅಡಿ ಸೇರ್ಪಡೆಯಾಗುವ ವಿದ್ಯಾರ್ಥಿಗಳು ಶುಲ್ಕ

ಭರಿಸುವ ಅಗತ್ಯವಿಲ್ಲ.ವಾರ್ಷಿಕ ಆದಾಯ ರೂ 2.5 ಲಕ್ಷಕ್ಕಿಂತ ಕಡಿಮೆ ಇರುವ ಪೋಷಕರ ಮಕ್ಕಳು ಈ ಕೋಟಾದ ಅಡಿ ಸೀಟು ಪಡೆಯಲು ಅರ್ಹರಾಗಿದ್ದು, ಅಂತಹವರ ಸಂಖ್ಯೆ ಹೆಚ್ಚಿದ್ದರೆ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಉಚಿತವಾಗಿ ಹಂಚುವ ಸೀಟುಗಳು ಹೊಸದಾಗಿ ಸೃಷ್ಟಿಯಾಗಲಿವೆ. ಹೀಗಾಗಿ ಹಾಲಿ ಇರುವ ಸೀಟುಗಳ ಮೀಸಲಾತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.ಉದಾಹರಣೆಗೆ ಒಂದು ವಿಭಾಗದಲ್ಲಿ ಸದ್ಯ 60 ಸೀಟುಗಳು ಇದ್ದರೆ ಸೂಪರ್ ನ್ಯೂಮರರಿ ಕೋಟಾದಡಿ ಹೊಸದಾಗಿ ಮೂರು ಸೀಟುಗಳು ಸೃಷ್ಟಿಯಾಗಲಿದ್ದು, ಅವನ್ನು ಉಚಿತವಾಗಿ ಹಂಚಲಾಗುತ್ತದೆ. ಶೇ 5ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡುವುದೋ ಅಥವಾ ‘ಕಾಮೆಡ್- ಕೆ’ಗೆ ಬಿಟ್ಟು ಕೊಡುವುದೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈಗಿನ ಲೆಕ್ಕಾಚಾರದ ಪ್ರಕಾರ ಪ್ರಾಧಿಕಾರದ ಮೂಲಕವೇ ಹಂಚಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಸೂಪರ್ ನ್ಯೂಮರರಿ ಕೋಟಾ ಬಗ್ಗೆಯೂ ಚರ್ಚೆಯಾಗಲಿದ್ದು, ಆಗ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಎಐಸಿಟಿಇ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನದಿಂದಾಗಿ ಮೊದಲ ಬಾರಿಗೆ ದೇಶದ ಎಲ್ಲ ಕಡೆ ಸೂಪರ್ ನ್ಯೂಮರರಿ ಕೋಟಾ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದಾಗಿ ಶುಲ್ಕ ಭರಿಸಲು ಸಾಧ್ಯವಾಗದ ಕೆಲವರಿಗಾದರೂ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡಲು ಅನುಕೂಲವಾಗಲಿದೆ.ಶುಲ್ಕ ಹೆಚ್ಚಳ: ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಳದ ಜೊತೆಗೆ ಹೆಚ್ಚಿನ ಸೀಟುಗಳಿಗೆ ಬೇಡಿಕೆ ಇಟ್ಟಿದ್ದು, ಸರ್ಕಾರ ಇದಕ್ಕೆ ಬಹುತೇಕ ಸಮ್ಮತಿಸಿದೆ. ಮುಂದಿನ ವಾರ ನಡೆಯುವ ಎರಡನೇ ಸುತ್ತಿನ ಮಾತುಕತೆ ಸಂದರ್ಭದಲ್ಲಿ ಇದಕ್ಕೆ ಅಂತಿಮ ಮುದ್ರೆ ಒತ್ತುವ ಸಾಧ್ಯತೆಗಳಿವೆ. ಸದ್ಯ ಸರ್ಕಾರಿ ಕೋಟಾದ ಒಟ್ಟು ಶೇ 50ರಷ್ಟು ಎಂಜಿನಿಯರಿಂಗ್ ಸೀಟುಗಳ ಪೈಕಿ ಶೇ 25ರಷ್ಟು ಸೀಟುಗಳಿಗೆ 15 ಸಾವಿರ ರೂಪಾಯಿ ಮತ್ತು ಇನ್ನುಳಿದ ಶೇ 25ರಷ್ಟು ಸೀಟುಗಳಿಗೆ 25 ಸಾವಿರ ರೂಪಾಯಿ ಶುಲ್ಕವಿದೆ. ಇದನ್ನು 35 ಸಾವಿರಕ್ಕೆ ಏರಿಸುವ ಸಂಭವವಿದೆ.ಖಾಸಗಿಯವರು 50 ಸಾವಿರಕ್ಕೆ ಏರಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ ಸರ್ಕಾರ 5ರಿಂದ 10 ಸಾವಿರ ರೂಪಾಯಿ ಏರಿಸುವುದಕ್ಕೆ ಒಲವು ತೋರಿದೆ. ಕಾಮೆಡ್-ಕೆ ಕೋಟಾದ ಸೀಟುಗಳ ಶುಲ್ಕ 1.25 ಲಕ್ಷದಿಂದ 1.50 ಲಕ್ಷಕ್ಕೆ ಹೆಚ್ಚಾಗುವ ಸಂಭವವಿದೆ. ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ಕಳೆದ ವರ್ಷ ಶೇ 50: 50ರ ಪ್ರಮಾಣದಲ್ಲಿ ಸೀಟು ಹಂಚಿಕೆಯಾಗಿದ್ದು, ಈ ವರ್ಷ ಕಾಮೆಡ್- ಕೆ ಶೇ 60ರಷ್ಟು ಸೀಟುಗಳಿಗೆ ಪಟ್ಟು ಹಿಡಿದಿದೆ. ಸರ್ಕಾರಿ ಕೋಟಾದಡಿ ಹಿಂದಿನ ವರ್ಷ ಸುಮಾರು ಮೂರು ಸಾವಿರ ಸೀಟುಗಳು ಖಾಲಿ ಉಳಿದಿದ್ದವು. ಹೀಗಾಗಿ ಸೀಟುಗಳನ್ನು ಬಿಟ್ಟುಕೊಡಲು ಸರ್ಕಾರ ಮುಂದಾಗಿದೆ.ವೈದ್ಯಕೀಯ ವಿಭಾಗದಲ್ಲಿ ಸರ್ಕಾರ ಮತ್ತು ಕಾಮೆಡ್ ಕೆ ನಡುವೆ ಶೇ 42:58ರ ಪ್ರಮಾಣದಲ್ಲಿ ಸೀಟು ಹಂಚಿಕೆಯಾಗಿತ್ತು. ಈ ವರ್ಷ ಶೇ 60ರಷ್ಟು ಸೀಟುಗಳಿಗೆ ಪಟ್ಟು ಹಿಡಿದಿದ್ದಾರೆ. ಸರ್ಕಾರಿ ಕೋಟಾದ ಸೀಟುಗಳ ಶುಲ್ಕ 42 ಸಾವಿರದಿಂದ 80 ಸಾವಿರಕ್ಕೆ ಏರಿಸಬೇಕು ಎಂಬ ಒತ್ತಡವಿದೆ. ಆಡಳಿತ ಮಂಡಳಿ ಕೋಟಾದ ಸೀಟುಗಳ ಶುಲ್ಕದಲ್ಲೂ 25 ಸಾವಿರ ರೂಪಾಯಿ ಹೆಚ್ಚಳವಾಗುವ ಸಂಭವವಿದೆ.ಕಾಲೇಜುವಾರು ಪ್ರತ್ಯೇಕ ಶುಲ್ಕ ನಿಗದಿ ಸಂಬಂಧ ರಚಿಸಿರುವ ನ್ಯಾಯಮೂರ್ತಿ ಪದ್ಮರಾಜ ಸಮಿತಿ ಈಗಾಗಲೇ ತನ್ನ ವರದಿಯನ್ನು ನೀಡಿದೆ. ಆದರೆ ಆ ಪ್ರಕಾರ ಮಾಡುವ ಲಕ್ಷಣಗಳು ಕಂಡುಬರುತ್ತಿಲ್ಲ. ಹಿಂದಿನ ವರ್ಷಗಳ ಹಾಗೆ ಪರಸ್ಪರ ಮಾತುಕತೆ ಮೂಲಕವೇ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಲು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಒಲವು ತೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.