ಸೋಮವಾರ, ಜೂನ್ 21, 2021
29 °C
ಅರಿವೆಯ ಹರವು

ಬಣ್ಣದ ಮ್ಯಾಲೆ ಕಣ್ಣ...

ನಿಷ್ಕಾ Updated:

ಅಕ್ಷರ ಗಾತ್ರ : | |

ಆ ಬ್ರಹ್ಮ ಕುರಿಯ ಉಣ್ಣೆಗೆ ಬಣ್ಣ ಹಾಕಲಿಲ್ಲ, ರೇಷ್ಮೆ ಗೂಡಿಗೂ ಬಣ್ಣವೆರಚಲಿಲ್ಲ, ಹೊಲದಲ್ಲಿನ ಹತ್ತಿ ಗಿಡದ ನೆತ್ತಿ ಕೂಡ ಬಣ್ಣ ಕೇಳಿಕೊಂಡು ಬರಲಿಲ್ಲ. ಅಯ್ಯೋ ಪಾಪ. ಬಣ್ಣಗೇಡಿಗಳು.ಅಂದ ಮೇಲೆ ನಮ್ಮ  ಸ್ವೆಟರ್‌ಗಳು, ರೇಷ್ಮೆ ಸೀರೆ, ಅಪ್ಪಟ ಹತ್ತಿಯ ಬಟ್ಟೆಗಳು ದೈವ ನಿಯಾಮಕವಲ್ಲ. ಹಾಗಾದರೆ ದೇವರಿಗೆ ಅಪ್ರಿಯವೆ ಬಣ್ಣ? ಏನೋ, ಅಂತೂ  ನೈಜವಂತೂ ಅಲ್ಲ. ಬಣ್ಣವೇನಿದ್ದರೂ ಕೃತಕ ಎಂದುಬಿಡುತ್ತಾರೆ ಬಣ್ಣಗಾಣದ ಹಲವರು. ಅದ್ಯಾಕಾದೀತು, ಗಿಡದ ಎಲೆ, ಹೂವು, ಕಾಯಿ, ಕಾಮನಬಿಲ್ಲು ಎಲ್ಲೆಲ್ಲೂ ಬಣ್ಣಗಳಿವೆಯಲ್ಲ, ಅವೆಲ್ಲ ಕೃತಕವೆ? ಅವೂ ದೇವನಿರ್ಮಿತವೆ ತಾನೆ ಎನ್ನುವವರು ವರ್ಣಪ್ರಿಯರು.ನೈಸರ್ಗಿಕ ಬಣ್ಣಗಳಿರಬಹುದು, ಆದರೆ ಧರಿಸುವ ಬಟ್ಟೆ ಬಣ್ಣ ಬಣ್ಣವಾದರೆ ಏನು ಚೆನ್ನ ಎನ್ನುವ ಗಾಂಭೀರ್ಯ ಗಂಡಸರದು. ಇವರ  ಬಟ್ಟೆಗಳಿಗೆ  ಹೋಳೀ ಹಬ್ಬಕ್ಕೊಮ್ಮೆ ಆದರೂ ಬಿಂದಾಸ್‌ ಆಗಿ ಮೆತ್ತಿಕೊಳ್ಳುತ್ತವೆ ಬಣ್ಣಗಳು. ಹೋಳಿಯ ಬಣ್ಣಗಳಲ್ಲಿ ನಲಿದವರು ಹೆಣ್ಮಕ್ಕಳೂ. ಆದರೆ ಗಂಡುಮಕ್ಕಳಂತೆ ಹೆಣ್ಮಕ್ಕಳು ಬಣ್ಣ ಧರಿಸಲು ಹೋಳಿವರೆಗೆ ಕಾಯಬೇಕಾಗಿಲ್ಲ. ದಿನವೂ ಮೈಮೇಲಿನ ಉಡುಪುಗಳು ಬಣ್ಣ ಬದಲಿಸುತ್ತಲೇ ಇರುತ್ತವೆ. ಆದರೆ ಅವರು ಊಸರವಳ್ಳಿಯರಲ್ಲ, ಮಿಂಚುಳ್ಳಿಯರು. ಬಳ್ಳಿಯಂಥವರಷ್ಟೇ ಮಿಂಚುವವರಲ್ಲ, ಮಿಂಚಲು ವಯಸ್ಸಿನ ಹಂಗಿಲ್ಲ. ಬಣ್ಣಗಳಿಗಂತೂ ಮೊದಲೇ ಇಲ್ಲ.ಆದರೆ ಸದ್ಯದ ಟ್ರೆಂಡ್‌ ಜತೆ ಸಾಗುತ್ತಲೇ ‘ಎನ್ನ ಮೇಲಣ ಬಣ್ಣ ನಿಜವಲ್ಲ ತಿಳಿಯೆ’ ಎಂದು ಗುನುಗುತ್ತದೆ ಮನ. ಕರಿಯ ಮತ್ತು ಬಿಳಿಯ ಬಣ್ಣವೇ ಸಾಧು ಎನ್ನುವವರ ಗುಂಪು ಒಂದು ಕಡೆ. ಬಣ್ಣಗಳನ್ನು ಪ್ರೀತಿಸುವ ಹೆಣ್ಮಕ್ಕಳನ್ನು ಕಂಡು ಈ ಹೆಣ್ಣಿಗೂ ಬಣ್ಣಕೂ ಏನು ಬಂಧವೊ ಎಂದು ಯೋಚಿಸುವವರು ಇದ್ದಾರೆ. ಬಣ್ಣಬಣ್ಣದಲ್ಲೇ  ನೀ ಕಾಡಬೇಡ ನನ್ನ, ನಾಜೂಕು ನನ್ನ ಮನವಿದು ಎಂದು ಮೌನದಲ್ಲೇ ಕೋರುವವರು ಇದ್ದಾರೆ. ಈಗಂತೂ ಮಕ್ಕಳ ಉಡುಪುಗಳಂತೆ, ಅಸಾಂಪ್ರದಾಯಿಕ, ಹೊಳಪಿನ ಬಣ್ಣಗಳ ಸಮಯ. ಕೆಲವೊಮ್ಮೆ ಅಪ್ರಬುದ್ಧ ಒಂಚೂರೇ ಚೂರು ಸಿಲ್ಲಿ ಎನಿಸುವಂತೆಯೂ ಇರುವ ಬಣ್ಣಗಳಿವು. ನೋಡಿದವರಿಗೆ ಎಕ್ಸೈಟಿಂಗ್‌ ಮಜವೆನಿಸುವ ಬಣ್ಣಗಳು. ಫ್ಲೋರೋಸೆಂಟ್‌, ರೇಡಿಯಂ ಹೀಗೆ ಕರೆಯಬಹುದು.ಗಾಢ ಬಣ್ಣಗಳು, ಅದರಲ್ಲೂ ತಿಳಿ ಹಸಿರು, ಸೂರ್ಯಾಸ್ತದ ಕಿತ್ತಳೆಗೆ ಗಾಢ ಕೇಸರಿ, ಗಾಢ ಹಳದಿಗೆ ಲಿಂಬೆ ಹಳದಿ ಸೇರಿದ ಒಂಥರಾ ಹಳದಿ, ಹುಚ್ಚು ಪಿಂಕ್‌ ಎನ್ನುವ ರಾಣಿ ಪಿಂಕ್‌ಗಿಂತಲೂ ದಟ್ಟ ಛಾಯೆಯ ಗುಲಾಬಿ, ಅದರಲ್ಲೇ ತಿಳಿ ಗುಲಾಬಿಯಾದರೂ ಬಿಸಿಲಿಗಿಂತ ಪ್ರಖರವಾಗಿ ಕಣ್ಣು ಕೋರೈಸುವ ಬಣ್ಣಗಳ ಟ್ರೆಂಡ್‌ ನಡೀತಿದೆ. ಇವುಗಳೆದುರು ಕಣ್ಣಿಗೆ ತಂಪೆನಿಸಿದರೂ ತೀರಾ ತಿಳಿಯಾದ ಬಣ್ಣಗಳೆಲ್ಲ ಪೇಲವ ಎನಿಸುವಂತಿವೆ.ಮನೆಯ ಹೊರಗೋಡೆ ಬಣ್ಣವೂ ಇದರಿಂದ ತಪ್ಪಿಸಿಕೊಂಡಿಲ್ಲ. ಹಳ್ಳಿಯಿರಲಿ, ಪೇಟೆಯಿರಲಿ, ಪ್ಲಾಸ್ಟಿಕ್‌ ಪೈಪು, ಕೊಡ, ವೈರ್‌, ರುಮಾಲು, ರಿಬ್ಬನ್ನು, ಹೇರ್‌ಬ್ಯಾಂಡ್‌ ಕ್ಲಿಪ್‌, ಹಳ್ಳಿ ಹಳ್ಳಿಯ ಗೋಡೆಯ ಮೇಲೆ ರಾರಾಜಿಸುವ ಬೀಜದ ಕಂಪೆನಿಯ ಜಾಹೀರಾತಿನ ಹಾಳೆಗಳೆಲ್ಲ ಫ್ಲೋರೋಸೆಂಟ್‌ ಬಣ್ಣದವು. ಆಫೀಸು, ಶೋರೂಮ್‌ಗಳ ಮೂಲೆಗಳಲ್ಲಿ ಪುಟ್ಟ ಆಕರ್ಷಕ ಕಸದ ಡಬ್ಬಿಗಳಿಗೂ ಇಂಥ ಬಣ್ಣ, ಶೋರೂಮಿನ ಗಾಜಿನೊಳಗೆ ಹಬ್ಬದ ಶುಭಾಶಯ ಹೇಳುವ ಬಣ್ಣ, ಪರಪರಿ ಎಲ್ಲವೂ ನೋಡು ನನ್ನ ಕಡೆ ಎಂದು ಕೈ ಹಿಡಿದು ತನ್ನತ್ತ ನಿಮ್ಮ ಮುಖ ತಿರುಗಿಸಿಕೊಂಡು ಹೇಳುವಂತಿದೆ. ಅಲ್ಲಲ್ಲ, ಡಿಮಾಂಡ್‌ ಮಾಡುವಂತಿದೆ. ಅಲ್ಲೆಲ್ಲ ಬಂದದ್ದು ಹೆಣ್ಮಕ್ಕಳ ಡ್ರೆಸ್‌ಗಳಿಗೆ ಬರದೇ ಇದ್ದರೆ ಆದೀತೆ? ಮಾರಾಟ ಮಳಿಗೆಗಳ ಡಿಸ್ಪ್ಲೇ ಸ್ಟ್ಯಾಂಡ್‌ಗಳಲ್ಲಿ ನೇತಾಕಿದ್ದು ನೋಡಿದರೆ ಯಾರು ಕೊಳ್ಳುತ್ತಾರೆ ಇವನ್ನು ಎನಿಸಬಹುದು. ಈ ಸ್ಪ್ಲ್ಯಾಶೀ ಫ್ಲ್ಯಾಶೀ ಬಣ್ಣಗಳು ಫ್ಯಾಷನೇಬಲ್‌. ಆದರೆ ಕೆಲವು ಸ್ಥಳ, ಕೆಲವು ಸಂದರ್ಭಗಳಿಗೆ ಸೂಕ್ತ. ಬೇಸಿಗೆ ಬಂತೆಂದರೆ ರಜೆಯ ಸಮಯ. ಮಕ್ಕಳ ರಜೆಯ ಮೂಡ್‌ನೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವ ಇಂಥ ಬಣ್ಣದ ಟಿಶರ್ಟ್‌, ಕುರ್ತಿ, ಪ್ಯಾಂಟ್‌ಗಳಿಗೆ ಬೇಡಿಕೆಯೂ ಇದೆ. ಖಾಸಗಿಯಾಗಿ, ಕುಟುಂಬದವರೊಂದಿಗೆ ಪಿಕ್‌ನಿಕ್‌ ಹೋದಾಗ, ಪ್ರವಾಸ ಸಮಯದಲ್ಲಿ ಹೇಳಿ ಮಾಡಿಸಿದ್ದು. ವಿಶೇಷವಾಗಿ ಪುಟ್ಟ ಹೆಣ್ಮಕ್ಕಳ ಉಡುಪುಗಳಿಗೆ ಹೊಸ ಬಣ್ಣ ಹರಿದು ಬಂದಿದೆ.ರಿಲಿಯಂಟ್‌ ಬಣ್ಣಗಳು ಗಾಡಿ ಎನಿಸಬಹುದು, ಕೆಲವೊಮ್ಮೆ ತುಂಬ ದಿಟ್ಟ ಎನಿಸಬಹುದು. ಗಂಭೀರ ವರ್ತನೆ, ಡೀಸೆಂಟ್‌ ಅಭಿವ್ಯಕ್ತಿಯನ್ನೆಲ್ಲ ಪಕ್ಕಕ್ಕಿಟ್ಟು ಪಾತರಗಿತ್ತಿಯ ಪಕ್ಕಾ ಬಣ್ಣಗಳಿಗೆ ವಿಶೇಷ ಹೊಳಪು ಸೇರಿದಂಥ ಈ ಬಣ್ಣಗಳು ಮೈಮೇಲೇರಿದರೆ ಹತ್ತು ವರ್ಷ ಹಿಂದೋಡಬೇಕು ಮನಸ್ಸು, ಬರೀ ಧರಿಸಿದವರದಲ್ಲ, ಅವರನ್ನು ನೋಡುವವರದೂ. ಥೇಟ್‌ ರೈಲ್ವೆ  ಹತ್ರ ಕೆಲಸ ಮಾಡುವವರು ಹಾಕೋ ಸುರಕ್ಷಾ ಜಾಕೆಟ್‌ ತರಹ. ಎಂಥ ಮಬ್ಬಿನಲ್ಲೂ ಎದ್ದು ಕಾಣುವ ಕೇಸರಿ, ಹಸಿರು ಬಣ್ಣಗಳಲ್ಲವೆ? ಮಟ ಮಟ ಬಿಸಲಾಗೂ ಕಣ್ಣು ಕುಕ್ಕಿ, ಸಂಜೀಕೂ ಸಡ್ಡು ಹೊಡದು.. ಒಟ್ಟ ಸುಮ್ನಿರಾಕ್‌ ಬಿಡಂಗಿಲ್ಲ. ಬಿಡದೇ ಕಾಡ್ತಾವು. ಕಡೀಕೂ ಇವು ಏನ ಹೇಳಾಕ ಹೊಂಟಾವು ಅಂತ ತಲಿ ಕೆಡಿಸಿಕೊಳ್ಳುವಂಗ ಮಾಡ್ತಾವು.ಏನು ಅಂತ ಸರಿಯಾಗಿ ಅರ್ಥವಾಗುವುದಿಲ್ಲ. ಹೀಗೇ ಅಂತ ಹೇಳಲಾಗದಿದ್ದರೂ ಇಷ್ಟಂತೂ ಗೊತ್ತು... ಚಟುವಟಿಕೆ, ಸಾಹಸೀ ಪ್ರವೃತ್ತಿ, ಮಜವಾದ ಮನೋಭಾವ ರಜಾ ಮೂಡ್‌ ಅಂತ. ಬಣ್ಣ ನೋಡಿದರೇ ಸಾಕು, ಬೋರಿಂಗ್‌ ಅಲ್ಲ, ಎಕ್ಸೈಟೆಡ್‌ ಅನಿಸುತ್ತದೆ. ಖುಷಿಯಿದೆಯೊ, ಖಿನ್ನ ಭಾವ ಆವರಿಸಿದೆಯೊ ಎನ್ನುವುದಂತೂ ಯಾರಿಗೂ ತಿಳಿಯುತ್ತದೆ. ಆದರೆ ಇಂಥ ಕೋರೈಸುವ ಬಣ್ಣ ಧರಿಸಲೂ ಆತ್ಮವಿಶ್ವಾಸ ಅವುಗಳಿಗಿಂತ ಗಾಢವಾಗಿರಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.