ಮಂಗಳವಾರ, ಜನವರಿ 28, 2020
29 °C

ಬತ್ತದ ಪ್ರೀತಿಗೆ ತೇಲುವ ಬತ್ತಿ

–ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಕ್ರಿಸ್ಮಸ್‌ ಸನಿಹಕೆ ಬಂದಂತೆ ವ್ಯಾಪಾರದ ಭರಾಟೆ ಹೆಚ್ಚುತ್ತದೆ. ಕೊಡುಗೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾರಿಗೆ ಏನು? ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಿಂದ ಇಳಿ ಸಂಜೆಯಲ್ಲಿರುವವರಿಗೂ ಇಷ್ಟವಾಗುವ ಕೊಡುಗೆಯೆಂದರೆ ಬಣ್ಣಬಣ್ಣದ ಸುವಾಸನೆಯುಕ್ತ ಮೇಣದಬತ್ತಿಗಳು.ಅರೋಮಾ ಗುಣವುಳ್ಳ, ಕಣ್ಣಿಗೆ ಹಿತ, ಮನಸಿಗೆ ಮುದ ನೀಡುವ ಬಣ್ಣಬಣ್ಣದ ಮೇಣದಬತ್ತಿಗಳು. ಮೇಣದ ಬತ್ತಿಗಳನ್ನು ಅಲಂಕಾರಕ್ಕೆ ಮಾತ್ರವಲ್ಲ ಮನಃಶಾಂತಿಗಾಗಿ, ಮಾನಸೋಲ್ಲಾಸಕ್ಕಾಗಿಯೂ ಬಳಸಲಾಗುತ್ತಿದೆ. ಇದೇ ಕಾರಣಕ್ಕೆ ದೀಪಾವಳಿಯಿಂದ ಆರಂಭವಾಗುವ ಮಾರಾಟದ ಭರಾಟೆ ಕ್ರಿಸ್‌ಮಸ್‌, ಹೊಸ ವರ್ಷ, ವ್ಯಾಲೆಂಟೈನ್‌ ದಿನದವರೆಗೂ ಜೋರಾಗಿರುತ್ತದೆ.‘ಸೈಕಲ್‌’ ಬ್ರ್ಯಾಂಡ್‌ನ ರಿಪ್ಪರ್‌ ಕಂಪೆನಿಯು ಬೆಂಗಳೂರಿನಲ್ಲಿ ದೇಶದಲ್ಲಿಯೇ ಅತಿ ದೊಡ್ಡದೆನ್ನಬಹುದಾದ ಅರೋಮ ಮೇಣದ ಬತ್ತಿಯ ಶೋರೂಮ್‌ ಆರಂಭಿಸಿದೆ. ಬೆಂಗಳೂರಿನಲ್ಲಿ ಮೇಣದಬತ್ತಿಯ ಮಾರುಕಟ್ಟೆಯ ವಿಸ್ತಾರ ಅರಿಯಲು ಇದೊಂದು ಉದಾಹರಣೆ ಅಷ್ಟೆ.

ಆನ್‌ಲೈನ್‌ ಮಾರುಕಟ್ಟೆಯಲ್ಲಿಯೂ ಹೆಚ್ಚಾಗಿ ಮಾರಾಟವಾಗುವ ಉಡುಗೊರೆಯೆಂದರೆ ಅರೋಮಾ ಮತ್ತು ಫ್ಲೋಟಿಂಗ್‌ ಮೇಣದಬತ್ತಿಗಳು.ತನ್ನನ್ನು ದಹಿಸಿಕೊಂಡು, ಬೆಳಕನ್ನು ನೀಡುವ ಈ ಮೇಣದಬತ್ತಿಗಳಿಗೆ ಸಮಾಧಾನ ನೀಡುವ ಗುಣವಿದೆಯಂತೆ. ‘ಎದೆ ಹೊತ್ತಿ ಉರಿಯುತ್ತಿರೆ ದಹಿಸುವ ಮೇಣದಬತ್ತಿಯೊಂದಿಗೆ ಕುಳಿತರೆ ಕಲ್ಲಾದ ಮನಸು ಅತ್ತು ಕರಗುವುದು’ ಅಂತೆ. ಈ ಅಂತೆಗಳು ಮೇಣದಬತ್ತಿಯ ಬಗ್ಗೆ ಇಷ್ಟೇ ಹೇಳುವುದಿಲ್ಲ. ವಾತಾವರಣದಲ್ಲಿ ಬೆಳಕಿನೊಂದಿಗೆ ಪ್ರೀತಿಯನ್ನು ಕಾಪಿಡುವ ಗುಣವೂ ಇದಕ್ಕಿದೆ.ರಾತ್ರಿಯೂಟದಲ್ಲಿ ಬೆಳಕಾಗಿ...

ಇದೇ ಕಾರಣಕ್ಕ ಪ್ರಣಯದಲ್ಲಿ ಕ್ಯಾಂಡಲ್‌ ಲೈಟ್‌ ಡಿನ್ನರ್‌ಗೆ ಅತಿ ಹಚ್ಚು ಮಹತ್ವ ದೊರೆತಿರುವುದು. ಖಿನ್ನತೆ, ಒತ್ತಡ, ನಿದ್ರಾಹೀನತೆಯಿಂದ ಬಳಲುವವರಿಗಾಗಿಯೇ ವಿಶೇಷ ಬಗೆಯ ಮೇಣದಬತ್ತಿಗಳಿವೆ. ಸ್ಪಾದಲ್ಲಿಯೂ ನಿರಾಳರಾಗಲು ಬಳಸುವುದು ಇಂಥವೇ ಸುವಾಸಿತ ಮೇಣದಬತ್ತಿಗಳನ್ನು. ಆನ್‌ಲೈನ್‌ ಶಾಪಿಂಗ್‌ನಲ್ಲಿ ಮೇಣದಬತ್ತಿಯ ವ್ಯಾಪಾರ ಗಮನ ಸೆಳೆಯುವಂತೆ ಇದೆ. ಕೆಲವೊಮ್ಮೆ ತುಸು ದುಬಾರಿ ಎನಿಸಿದರೂ ಉಡುಗೊರೆಗೆ ಮೇಣದ ಹೂ, ಹೂ ಗುಚ್ಛ, ಹೂ ಕುಂಡ ಮುಂತಾದವುಗಳಿಗಂತೂ ಇನ್ನಿಲ್ಲದ ಬೇಡಿಕೆ. ಕೆಂಪು, ನೀಲಿ, ತಿಳಿನೀಲಿ, ಗುಲಾಬಿ, ತಿಳಿನೇರಳೆ ಬಣ್ಣದ ಮೇಣದ ಬತ್ತಿಗಳು ಮಾಡುತ್ತಿದ್ದಂತೆಯೇ ಬಿಕರಿಯಾಗುತ್ತವೆ.

ಕೆಲ ನೂರು ರೂಪಾಯಿಗಳಲ್ಲಿ ದೊರೆಯುವ ಈ ಉಡುಗೊರೆ ಹೂಗುಚ್ಛಗಳಿಗಿಂತಲೂ ಹೆಚ್ಚು ಜನಪ್ರಿಯವಾಗುತ್ತಿವೆ. ಬೇಡಿಕೆ ಇರುವುದು ಇಂಥ ಡಿಸೈನರ್‌ ಹಾಗೂ ತೇಲುವ ಮೇಣದಬತ್ತಿಗಳಿಗೆ ಎನ್ನುತ್ತಾರೆ ಕಳೆದೊಂದು ದಶಕದಿಂದ ಮೇಣದ ಬತ್ತಿ ತಯಾರಿಕೆಗೆ ತರಬೇತಿ ನೀಡುತ್ತಲೇ ವಿದೇಶಗಳಿಗೂ ಮೇಣದಬತ್ತಿಗಳನ್ನು ರಫ್ತು ಮಾಡುತ್ತಿರುವ ರೂಪಾರಾಣಿ.ಬದಲಾಗುತ್ತಿರುವ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಏಕಾಂತವನ್ನು ವಿಶೇಷವಾಗಿಸಿಕೊಳ್ಳಲು ಇಷ್ಟ ಪಡುತ್ತಾರೆ. ಅದಕ್ಕೆ ಅಗತ್ಯವಿರುವಂತೆ ಪರಿಸರ ನಿರ್ಮಿಸುವುದು ಎಲ್ಲರ ಉದ್ದೇಶವಾಗಿರುತ್ತದೆ. ಹೂ ಮತ್ತು  ಉಂಗುರದ ನಂತರದ ಸ್ಥಾನ ಪಡೆಯುವುದೇ ಈ ಸುವಾಸಿತ, ತೇಲುವ ಬತ್ತಿಗಳು.

ಇವಿಲ್ಲದೇ ಯಾವುದೇ ಸಂದರ್ಭವೂ ಪರಿಪೂರ್ಣವೆನಿಸದು ಎಂಬ ಮನೋಭಾವ ಬೆಳೆಯುತ್ತಿದೆ. ಇದೇ ಕಾರಣದಿಂದ ಮೇಣದಬತ್ತಿಯ ಮಾರುಕಟ್ಟೆಯ ಹರವು ವಿಸ್ತಾರವಾಗುತ್ತಲೇ ಇದೆ ಎನ್ನುತ್ತಾರೆ ‘ಐರಿಸ್‌’ನ ಅನೀಕ್‌ ಬ್ಯಾನರ್ಜಿ. ನೀವೂ ಕೊಡುಗೆಯನ್ನು ಕೊಳ್ಳುವಂತಿದ್ದಲ್ಲಿ ಕಮರ್ಷಿಯಲ್‌ ರಸ್ತೆಯಲ್ಲಿರುವ ಕೃಷ್ಣವೇಣಿ ಕಾಂಪ್ಲೆಕ್ಸ್‌ನಲ್ಲಿರುವ ‘ಆರ್ಟಿಸ್ಟಿಕ್ಸ್‌’ ಮಳಿಗೆಗೆ ಭೇಟಿ ನೀಡಬಹುದು. ಲ್ಯಾವೆಲ್ಲೆ ರಸ್ತೆಯಲ್ಲಿರುವ ‘ಐರಿಸ್‌’ ಮಳಿಗೆಯಲ್ಲಿ ಎಲ್ಲ ಬಗೆಯ ಆರೋಮ್ಯಾಟಿಕ್‌ ಮೇಣದಬತ್ತಿಗಳು ದೊರೆಯುತ್ತವೆ.

ಪ್ರತಿಕ್ರಿಯಿಸಿ (+)