ಶುಕ್ರವಾರ, ಜೂನ್ 18, 2021
28 °C
ಗ್ರಾಮಾಯಣ

ಬನ್ನಿಗೋಳ ಗ್ರಾಮಕ್ಕೆ ಸೌಲಭ್ಯಗಳ ಬರ!

ಪ್ರಜಾವಾಣಿ ವಾರ್ತೆ/ –ಶರಣಪ್ಪ ಆನೆಹೊಸೂರು Updated:

ಅಕ್ಷರ ಗಾತ್ರ : | |

ಮುದಗಲ್ಲ : ಸಮೀಪದ ಬನ್ನಿಗೋಳ ಗ್ರಾಮದಲ್ಲಿ ರಸ್ತೆ, ಶೌಚಾಲಯ, ಆರೋಗ್ಯ, ಪಡಿತರ, ಶುದ್ಧ ಕುಡಿಯುವ ನೀರು, ವಸತಿ ಸೇರಿ ಇನ್ನಿತರ ಮೂಲ ಸೌಲಭ್ಯ ಜನರಿಗೆ ಸಿಗುವುದು ಕನಸಿನ ಮಾತು. ಸೌಲಭ್ಯಗಳಿಗಾಗಿ ಗ್ರಾಮದ ಜನರು ದಿನವೂ ಹೋರಾಟ ನಡೆಸುವಂಥ ಸ್ಥಿತಿ ಇದೆ.ಈ ಗ್ರಾಮ ಲಿಂಗಸುಗೂರು ತಾಲೂಕಿನ ಮುದಗಲ್ಲ ಹೋಬಳಿಗೆ ಸೇರಿದೆ. ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಹೊಂದಿದೆ. ತಾಲ್ಲೂಕಿನಿಂದ ಬನ್ನಿಗೋಳ ಗ್ರಾಮ 26 ಕಿ.ಮೀ ದೂರವಿದೆ. 1750.46 ಹೆಕ್ಟೇರ್ ಭೂ ಪ್ರದೇಶದ ವ್ಯಾಪ್ತಿ ಹೊಂದಿರುವ ಗ್ರಾಮಕ್ಕೆ ಸೌಲಭ್ಯಗಳು ಸಿಗುತ್ತಿಲ್ಲ.  ಗ್ರಾಮದಲ್ಲಿ 3000 ಕ್ಕೂ ಹೆಚ್ಚು ಜನ ಇದ್ದಾರೆ.ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಗ್ರಾಮಕ್ಕೆ ಯಾವುದೇ ಸರ್ಕಾರದ ಯೋಜನೆಗಳು ಸಿಗುತ್ತಿಲ್ಲ. ಶುದ್ಧ ಕುಡಿಯುವ ನೀರು ಯೋಜನೆ, ಗ್ರಾಮಕ್ಕೆ ಪಕ್ಕಾ ರಸ್ತೆ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಯಾವುದೇ ಕಾರ್ಯಗಳು ಆಗಿಲ್ಲ.ಗ್ರಾಮದ ಕೆಲವು ಕಾಲೊನಿಗಳಲ್ಲಿ ಸಿ.ಸಿ.ರಸ್ತೆಯಾಗಿವೆ. ಹೊಸ ಕಾಲೊನಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆ ಮಧ್ಯದಲ್ಲಿಯೇ ತಗ್ಗು ಗುಂಡಿ ಬಿದ್ದವೆ.  ರಸ್ತೆಗಳಲ್ಲಿ ನೀರು ನಿಂತು ದುರ್ನಾತ ಬರುತ್ತಿದೆ. ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಗ್ರಾಮದ  ಅಭಿವೃದ್ಧಿಗಾಗಿ ಪಂಚಾಯಿತಿಗೆ ಸಾಕಷ್ಟು ಅನುದಾನ ಬಂದರೂ, ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಕಾಲೊನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.ಈ ಗ್ರಾಮ ಮಾಕಪುರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುತ್ತದೆ.  ಇಲ್ಲಿರುವ ಕಿರಿಯ ಆರೋಗ್ಯ ಸಹಾಯಕರ ಕೇಂದ್ರವಿದೆ. ಇಲ್ಲಿ ಯಾರು ಕಾರ್ಯ ನಿರ್ವಹಿಸುತ್ತಿಲ್ಲ. ಅನಾರೋಗ್ಯಕ್ಕೆ ತುತ್ತಾಗುವ ಇಲ್ಲಿನ ಜನರು ಚಿಕಿತ್ಸೆಗೆ ಮುದಗಲ್ಲ ಇಲ್ಲವೇ ಮಾಕಪುರು ಆಸ್ಪತ್ರೆಗೆ ಹೋಗಬೇಕಾದ ಸ್ಥಿತಿ ಇದೆ.  ಸೂಕ್ತವಾದ ಆರೋಗ್ಯ ರಕ್ಷಣೆ ವ್ಯವಸ್ಥೆ ಇಲ್ಲದೆ ಬಡರೋಗಿಗಳು ಪರಾದಾಡುವಂಥ ಸ್ಥಿತಿ ಇದೆ ಎಂದು ಗ್ರಾಮದ ಜನರು ಆರೋಪಿಸಿದರು.ಗ್ರಾಮ ಪಂಚಾಯಿತಿಯಲ್ಲಿ ಆಶ್ರಯ ಮನೆಗ­ಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿಲ್ಲ. ರಾಜಕೀಯ ಮುಖಂಡರ ಸಂಬಂಧಿಗಳಿಗೆ ಹಾಗೂ ಅವರ ಹಿಂಬಾಲಿಕರಿಗೆ ನೀಡಲಾಗುತ್ತಿದೆ. ಅರ್ಹ ಫಲಾನುಭವಿಗಳು ಮನೆ ಇಲ್ಲದೇ ವಾಸ ಮಾಡುವಂಥ ಸ್ಥಿತಿ ಇದೆ. ಆಯ್ಕೆಯಾದ ಕೆಲ ಆಶ್ರಯ ಮನೆ ಫಲಾನುಭವಿಗಳಿಗೆ ವರ್ಷ ಕಳೆದರೂ ಚೆಕ್ ನೀಡಿಲ್ಲ. ಬಿಪಿಎಲ್ ಕಾರ್ಡ್‌ ಸಿಗದೇ ಹಲವಾರು ಬಡವರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ವೇ ಮಾಡುವಂತೆ ಪಂಚಾಯಿತಿಗೆ ಆದೇಶ ಬಂದರು ಇನ್ನೂ ಸರ್ವೆ ಕಾರ್ಯ ನಡೆದಿಲ್ಲ.ಬಡ ಅರ್ಹ ಫಲಾನುಭಿಗಳಿಗೆ ಪಡಿತರ ಸಿಗದೇ ತೊಂದರೆಯಾಗುತ್ತಿದೆ. ಪಡಿತರ ಕಾರ್ಡ್‌ ನೀಡಲು ಸರ್ವೇ ಕಾರ್ಯ ಆರಂಭ ಮಾಡುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನೆಯಾಗುತ್ತಿಲ್ಲ ಎಂದು ಗ್ರಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಂಡಾರಪ್ಪ ಪೂಜಾರಿ ಆರೋಪಿಸಿದರು.ಗ್ರಾಮದ ಜನರಿಗೆ ಶುದ್ಧ ನೀರು ಪೂರೈಕೆ ಮಾಡುವ ಯೋಜನೆ ದಿಕ್ಕು ತಪ್ಪಿದೆ. ಗ್ರಾಮದ ಜನರಿಗೆ ನೀರು ಪೊರೈಸುವ ಕೊಳವೆ ಬಾವಿಗಳಲ್ಲಿ ಆರ್ಸೇನಿಕ್‌ ಯುಕ್ತ ಫ್ಲೋರೈಡ್ ಅಂಶದ ನೀರೇ ಪೂರೈಕೆಯಾಗುತ್ತಿದೆ.  ಈ ನೀರನ್ನು ನಿತ್ಯವೂ ಜನರು ಸೇವನೆ ಮಾಡುವುದರಿಂದ ಗ್ರಾಮದ ಜನು ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೈ-ಕಾಲು ನೋವು, ಹಲ್ಲುಗಳು ಕಂದು ಬಣ್ಣಕ್ಕೆ ಬರುವುದು, ನಿಶಕ್ತಿ ಉಂಟಾಗುವುದು, ಜ್ವರ ಸೇರಿದಂತೆ ಹಲವಾರು ರೋಗಳು ಜನರನ್ನು ಬಾಧಿಸುತ್ತಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.ಗ್ರಾಮದಲ್ಲಿ ವ್ಯವಸ್ಥಿತವಾದ ಶೌಚಾಲಯವಿಲ್ಲ. ಮಹಿಳೆಯರು ಶೌಚಾಲಯಕ್ಕೆ ಹೋಗಲು ಹಿಂದೇಟು ಹಾಕುವಂಥ ಸ್ಥಿತಿ ಇದೆ.  ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಡಿ ಎಂದು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆಯಾಗಿಲ್ಲ. ವೈಯಕ್ತಿಕ ಶೌಚಾಲಯ ನಿರ್ಮಾಣ  ಮಾಡದೇ ಇದ್ದರೂ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಪಾವತಿ ಮಾಡಲಾಗಿದೆ ಎಂದು ಗ್ರಾಮಸ್ಥರಾದ ರಾಮಣ್ಣ ದೂರಿದರು.ಲಕ್ಷಾಂತರ ರೂಪಾಯಿ  ಖರ್ಚು ಮಾಡಿ ಪಂಚಾಯಿತಿ  ನೂತನ ಕಟ್ಟಡ ನಿರ್ಮಿಸಿ ನಾಲ್ಕು ವರ್ಷಗಳೇ ಕಳೆದಿವೆ. ವಾಸ್ತು ದೋಷದ ನೆಪ ಒಡ್ಡಿ ಕಟ್ಡ ಹಾಳುಬಿದ್ದಿದೆ. ಪಂಚಾಯಿತಿಗೆ ಕಟ್ಟಡಕ್ಕೆ  ಸುಣ್ಣ, ಬಣ್ಣ ಬಡಿದು ಹಣ ಖರ್ಚು ಮಾಡಲಾಗಿದೆ. ಆದರೆ ಕಟ್ಟಡ ಹಾಳಾಗುತ್ತಿದೆ.   ಉದ್ಯೋಗ ಕಾತರಿ ಯೋಜನೆ ದಿಕ್ಕು ತಪ್ಪುತ್ತಿದೆ ಎಂದು ಗ್ರಾಮದ ಜನರು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.