ಶುಕ್ರವಾರ, ಫೆಬ್ರವರಿ 3, 2023
18 °C

ಬಯಕೆ ಬೇಕು ಬಾಳಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಯಕೆ ಬೇಕು ಬಾಳಿಗೆ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಭಾವೀ ಭಾರತೀಯರ ಪಟ್ಟಿಯಲ್ಲಿ ಇವರ ಹೆಸರಿದೆ. ಇವರ ಸಾಮ್ರಾಜ್ಯದ ಆಳ ಮತ್ತು ಅಗಲಗಳು ಇಂಥ ಪಟ್ಟಿಯಲ್ಲಿರುವ ಇತರ ಎಲ್ಲರಿಗಿಂತಲೂ ವಿಸ್ತಾರವಾದುದು. ಆದರೆ ಇವರ ವ್ಯವಹಾರ ಮಾತ್ರ ರೂಪಾಯಿಗಳಲ್ಲೋ ಡಾಲರ್‌ಗಳಲ್ಲೋ ಇಲ್ಲ. ಅದು ಕಾಣಿಸಿಕೊಳ್ಳುವುದು ಅರಿವಿನ ಬೆಳಕಿನಲ್ಲಿ ಬೆಳಗುತ್ತಿರುವ ವ್ಯಕ್ತಿಗಳ ರೂಪದಲ್ಲಿ. ಅರಿವಿನ ಬೆಳಕಿನ ಮೂಲಕ ವ್ಯಕ್ತಿಯ ಬದುಕನ್ನು ಬೆಳಗುತ್ತಿರುವ ಇವರ ಹೆಸರು ಸದ್ಗುರು ಜಗ್ಗಿ ವಾಸುದೇವ್ ಅಥವಾ ಸರಳವಾಗಿ ಸದ್ಗುರು.ಕ್ವಾಂಟಂ ಭೌತ ವಿಜ್ಞಾನದಿಂದ ಆರಂಭಿಸಿ ಎಲ್ಲರನ್ನೂ ಒಳಗೊಳ್ಳುವ ಆರ್ಥಶಾಸ್ತ್ರದ ತನಕದ ಎಲ್ಲ ವಿಷಯಗಳ ಬಗ್ಗೆಯೂ ಆತ್ಮವಿಶ್ವಾಸ ಮತ್ತು ನಿಖರತೆಯೊಂದಿಗೆ ಮಾತನಾಡುವ ಸದ್ಗುರು ಕೇವಲ ಸಂತನಷ್ಟೇ ಅಲ್ಲ. ಅವರೊಬ್ಬ ದಾರ್ಶನಿಕರೂ ಹೌದು. ಅಷ್ಟೇಕೆ ಲ್ಯಾಂಡ್‌ರೋವರ್‌ನ ಸ್ಟೇರಿಂಗ್‌ನ ಹಿಂದೆ ಆರಾಮವಾಗಿ ಕುಳಿತಂತೆ, ಘರ್ಜಿಸುವ ಬಿಎಂಡಬ್ಲ್ಯೂ ಬೈಕ್‌ನ ನಿಯಂತ್ರಣವನ್ನೂ ಅವರು ಬಲ್ಲರು. ಬದುಕಿನೊಳಗೆ ಮುಳುಗಿಹೋಗಿರುವ ಇವರು ಅದೇ ಹೊತ್ತಿನಲ್ಲಿ ಅದರಾಚೆಗೂ ನಿಲ್ಲುತ್ತಾರೆ.ಸದ್ಗುರು ವಿಶ್ವಸಂಸ್ಥೆಯ ಸಹಸ್ರಮಾನದ ಶಾಂತಿ ಶೃಂಗಕ್ಕೆ ಪ್ರತಿನಿಧಿಯಾಗಿ ತೆರಳಿದ್ದರು. 2006ರಿಂದ 2008ರ ತನಕ ದಾವೋಸ್‌ನಲ್ಲಿ ನಡೆದ ‘ವರ್ಲ್ಡ್ ಎಕನಾಮಿಕ್ ಫೋರಂ’ಗೆ ಸತತ ಮೂರು ವರ್ಷ ವಿಶೇಷ ಆಹ್ವಾನಿತರಾಗಿದ್ದರು. ಆಸ್ಟ್ರೇಲಿಯಾದ ನಾಯಕತ್ವ ಶಿಬಿರ, ಟಾಲ್‌ಬರ್ಗ್ ಫೋರಂ, ಭಾರತೀಯ ಆರ್ಥಿಕ ಶೃಂಗ ಮತ್ತಿತರ ಅನೇಕ ವೇದಿಕೆಗಳನ್ನವರು ಅಲಂಕರಿಸಿದ್ದಾರೆ.|

 

ಇತ್ತೀಚೆಗೆ ಅವರು ಬ್ರಿಟಿಷ್ ಸಂಸತ್ತಿನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಅಧ್ಯಾತ್ಮ ಮತ್ತು ಸುಸ್ಥಿರತೆಯ ನಡುವಣ ಸಂಬಂಧದ ಬಗ್ಗೆ ಮಾತನಾಡಿದಾಗ ಹೇಳಿದ್ದು ಇಲ್ಲಿ ಉಲ್ಲೇಖನೀಯ: ‘ನಾವು ಇಡೀ ವಿಶ್ವದ ಜೀವಜಾಲದೊಂದಿಗೆ ನಿರಂತರವಾಗಿ ವ್ಯವಹರಿಸುತ್ತಿದ್ದೇವೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರಿತಿದ್ದಾಗ ನೀವು ಕಾರ್ಯನಿರ್ವಹಿಸುವ ರೀತಿ, ಬದುಕನ್ನು ಕಟ್ಟಿಕೊಳ್ಳುವ ಕೌಶಲ್ಯ, ನಮ್ಮ ಸಮಾಜದ ವಿನ್ಯಾಸ ಎಲ್ಲವೂ ಬದಲಾಗುತ್ತದೆ. ಮನುಕುಲ ಎಲ್ಲಿಯ ತನಕ ತನ್ನ ಪ್ರಜ್ಞೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳಲು ಮುಂದಾಗುವುದಿಲ್ಲವೋ ಅಲ್ಲಿಯ ತನಕವೂ ಸುಸ್ಥಿರತೆ ಎಂಬುದು ಸಮ್ಮೇಳನ-ಸಮಾವೇಶಗಳ ವಿಷಯವಷ್ಟೇ ಆಗಿರುತ್ತದೆ.’ಒಟ್ಟಿನಲ್ಲಿ ಸ್ವಪ್ರಜ್ಞೆ ಮತ್ತು ಒಳಗೊಳ್ಳುವಿಕೆಗಳು ಅವರು ಉಪದೇಶದ ಸಾರ ಎನ್ನಬಹುದು. ಎರಡು ದಶಕಗಳ ಹಿಂದೆ ಸದ್ಗುರು ತಮ್ಮ ಈಶಾ ಯೋಗ ಪ್ರತಿಷ್ಠಾನವನ್ನು ಆರಂಭಿಸಿದರು. ಲಾಭಾಪೇಕ್ಷೆಯಿಲ್ಲದ, ಸ್ವಯಂ ಸೇವಕರಿಂದ ನಡೆಯುತ್ತಿರುವ ಈ ಸಂಸ್ಥೆ ಮನುಷ್ಯನ ಒಳಿತನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡಿದೆ. ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ಪರಿಸರ ರಕ್ಷಣೆಯಂಥ ಆಂದೋಲನಗಳಲ್ಲಿ ಪ್ರತಿಷ್ಠಾನ ತೊಡಗಿಸಿಕೊಂಡಿದೆ.ಆರಂಭ

ಸದ್ಗುರುವಿನ ಆಧ್ಯಾತ್ಮಿಕ ಅನುಭಗಳು ಆರಂಭವಾಗುವುದು ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ತನಗೆ ಯಾವುದರ ಬಗ್ಗೆಯೂ ಏನೂ ಗೊತ್ತಿಲ್ಲ ಎಂದು ಅರಿತ ಕ್ಷಣದಲ್ಲಿ. ಸದ್ಗುರುಗಳು ಹೇಳುವಂತೆ ‘ನಾನು ನೀರಿನ ಲೋಟವನ್ನು ಅದೇನೆಂದು ಅರಿಯದೆ ದಿಟ್ಟಿಸುತ್ತಿದ್ದೆ. ಅದು ದಾಹವನ್ನು ತಣಿಸುತ್ತದೆ ಎಂಬುದು ಗೊತ್ತಿತ್ತು. ಆದರೆ ಆ ಅದು ಏನು...? ಒಂದು ಎಲೆಯನ್ನೂ ಸಮಯದ ಪರಿವೇ ಇಲ್ಲದೆ ನೋಡುತ್ತಾ ಕುಳಿತುಬಿಡುತ್ತಿದ್ದೆ. ಮತ್ತೆಯೂ ನನ್ನ ಮುಂದಿದ್ದ ಪ್ರಶ್ನೆ ಆ ಅದು ಏನು...?’.ಪ್ರತಿನಿತ್ಯ ಕಾಡಿನಲ್ಲಿ ಕಳೆಯುತ್ತಿದ್ದ ಹೊತ್ತು, ತರಗತಿಗಳ ಹೊರಗೆ ಕಳೆಯುತ್ತಿದ್ದ ಸಮಯ, ಮರದ ಮೇಲೂ ಹಾವುಗಳನ್ನೂ ಹಿಡಿಯುತ್ತಲೂ ಪ್ರಕೃತಿಯನ್ನು ಅರಿತದ್ದು ಸದ್ಗುರುವಿನ ತನ್ನನ್ನು ತಾನೇ ಅರಿಯುವ ಜೀವನ ಯಾತ್ರೆಗೆ ಬೇಕಾದ ಪ್ರಾಥಮಿಕ ಸಿದ್ಧತೆಯಾಗಿತ್ತು. ತಮ್ಮ 25ನೇ ವಯಸ್ಸಿನಲ್ಲಿ ಚಾಮುಂಡಿ ಬೆಟ್ಟದ ಮೇಲೆ ಬಂಡೆಯೊಂದರ ಮೇಲಕ್ಕೆ ಹಾರಿ ಕುಳಿತುಕೊಳ್ಳುವ ಹೊತ್ತಿನಲ್ಲಿ ಸದ್ಗುರುವಿಗೆ ಮೊಟ್ಟ ಮೊದಲ ಬಾರಿಗೆ  ನಿಸ್ಸಮಯ ಮತ್ತು ನಿರ್ದೇಹದ ಅನುಭವವಾಯಿತು. ಜ್ಞಾನೋದಯದ ಆ ಕ್ಷಣದಲ್ಲಿ ಅವರು ‘ಗಾಳಿಯಲ್ಲಿ ಗಾಳಿಯಾಗಿ, ಬಂಡೆಯಲ್ಲಿ ಬಂಡೆಯಾಗಿ ತನ್ನ ಸುತ್ತ ಇರುವ ಎಲ್ಲದರಲ್ಲಿ ಒಂದಾದರು’. ಅಲ್ಲಿಂದೀಚೆಗೆ ಹಿಂದಿರುಗಿ ನೋಡಿದ್ದಿಲ್ಲ.ಈ ಅರಿವಿನ ಹೊಳಹಿನ ನಂತರ ಇಂಥದ್ದೇ ಮತ್ತೆಷ್ಟೋ ಅನುಭವಗಳು ಹಿಂಬಾಲಿಸಿದವು. ಅನುಭವದ ಉತ್ತುಂಗದಲ್ಲಿ ಅನುಭಾವ ಹುಟ್ಟುವಂತೆ ಸದ್ಗುರುವೂ ಅನುಭಾವಿಯಾದರು. ಕೊಯಮತ್ತೂರಿನ ವೆಲ್ಲಿಯನ್‌ಗಿರಿಯಲ್ಲಿ ಆಶ್ರಮ ಸ್ಥಾಪಿಸಿ ತಮಗಾದ ಅನುಭವವನ್ನು ಜಗತ್ತಿಗೆ ಹೇಳಿ ಇತರರೂ ಆ ಅನುಭವ ಪಡೆಯಲು ಸಹಾಯ ಮಾಡುವ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾದರು.‘ನನಗೆ ಗೊತ್ತಿಲ್ಲ’- ಇದು ನಮ್ಮನ್ನು ನಾವು ಅರಿತುಕೊಳ್ಳಲು ಇರುವ ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯ ಪಡುವ ಸದ್ಗುರು, ‘ನನಗೆ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುವವನು ಸ್ವೀಕಾರಕ್ಕೆ ಸಿದ್ಧನಾಗುತ್ತಾನೆ. ನನ್ನ ವಿಷಯದಲ್ಲಿ ಆದದ್ದೂ ಇದುವೇ. ಶಿಕ್ಷಣವಿಲ್ಲದೆ, ಪಾಲಕರು, ಮತ-ಧರ್ಮ, ಸಿದ್ಧಾಂತ ಯಾವುದರ ಪ್ರಭಾವವಿಲ್ಲದೆ ಉಳಿದು ನನಗೆ ಗೊತ್ತಿಲ್ಲ ಎಂದುಕೊಂಡು ಪ್ರಕೃತಿಗೆ ಕಿವಿಯಾದೆ. ಈಗ ಈ ಜೀವವೇನೆಂದು (ತನ್ನನ್ನೇ ಬೊಟ್ಟು ಮಾಡಿ) ನನಗೆ ತಿಳಿದಿದೆ. ಅದರಿಂದಾಗಿ ಉಳಿದದ್ದೂ ನನಗೆ ಅರ್ಥವಾಗುತ್ತಿದೆ!’ ಎನ್ನುತ್ತಾರೆ.‘ನಿಮ್ಮ ಅಧ್ಯಾತ್ಮದ ಅರಿವಿನ ಪ್ರಮಾಣವನ್ನಳೆಯಲು ಒಂದು ಸಣ್ಣ ಪರೀಕ್ಷೆ ನಡೆಸೋಣ. ನೀವು  ಯಾವುದನ್ನಾದರೂ ನಿಮ್ಮಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗಳಿಸಬೇಕೆಂದು ಆಶಿಸುತ್ತಿದ್ದೀರಾ? ಅದು ಏನೂ ಆಗಿರಬಹುದು-ಹಣ, ಪ್ರಸಿದ್ಧಿ, ಪ್ರೀತಿ ಹೀಗೆ ಯಾವುೂ. ನಿಮ್ಮ ಉತ್ತರ ಹೌದು ಎಂದಾದರೆ ಹೆಚ್ಚು ಬೇಕು ಎಂಬ ಈ ಆಸೆ ಎಲ್ಲ ಮಿತಿಗಳನ್ನು ಮೀರಬೇಕೆನ್ನುವ ಮನುಷ್ಯನ ಹಂಬಲಿಕೆಯ ಅಭಿವ್ಯಕ್ತಿ ಎಂದು ಅರ್ಥ ಮಾಡಿಕೊಳ್ಳಬೇಕು. ಇದು ತನ್ನಷ್ಟಕ್ಕೇ ಒಂದು ಅನುಭಾವೀ ಕ್ರಿಯೆ’ ಎಂದು ವಿವರಿಸುವ ಸದ್ಗುರು, ‘ಇದೊಂದು ಅಪ್ರಜ್ಞಾಪೂರ್ವಕ ಕ್ರಿಯೆಯಾಗಿಯಷ್ಟೇ ಇರುತ್ತದೆ. ಇದನ್ನು ಪ್ರಜ್ಞಾಪೂರ್ವಕವಾಗಿ ಯಾತ್ರೆಯಾಗಿ ಮಾರ್ಪಡಿಸಿ ಭೌತಿಕ ಆಯಾಮಗಳಿಂದ ಬೇರ್ಪಡಿಸಿದಾಗ ಅದು ಅನುಭಾವವಾಗುತ್ತದೆ. ಅದು ಲಾಜಿಕ್ ಮತ್ತು ಮ್ಯಾಜಿಕ್‌ನ ನಡುವಣ ವ್ಯತ್ಯಾಸ’ ಎಂದೂ ಮಾತು ಸೇರಿಸುತ್ತಾರೆ.ಮಾರ್ಗ

ಈ ಅಂತರ್‌ಮುಖೀ ಯಾತ್ರೆಗೆ ಬೇಕಾದ ಮೂಲಭೂತ ಅರ್ಹತೆಯೆಂದರೆ ಮುಕ್ತವಾಗಿರುವುದು. ಎಲ್ಲದಕ್ಕೂ ತೆರೆದುಕೊಂಡಿರುವುದು. ಸ್ವೀಕರಿಸುವ ಸ್ಥಿತಿಯಲ್ಲಿ ನೀವಿದ್ದರೆ ನಿಮ್ಮೊಳಗಿನ ಅರಿವನ್ನು ಆಲಿಸುವುದರ ಮೂಲಕ ಉಳಿದೆಲ್ಲವನ್ನೂ ಸಾಧಿಸಬಹುದು (ಈ ನಿಮ್ಮೊಳಗಿನ ಅರಿವನ್ನು ಬುದ್ಧಿಶಕ್ತಿ ಅಥವಾ ಮನಸ್ಸು ಎಂದು ತಪ್ಪಾಗಿ ತಿಳಿಯಬೇಡಿ). ಸದ್ಗುರು ಅವರ ಅಭಿಪ್ರಾಯದಲ್ಲಿ ಒಳಗಿನ ಅರಿವು ಎಂಬುದು ‘ಒಂದು ತುಂಡು ರೊಟ್ಟಿಯನ್ನೋ ಅಥವಾ ಒಂದು ಆಲೂಗಡ್ಡೆಯನ್ನೋ ಮನುಷ್ಯನನ್ನಾಗಿ ಮಾರ್ಪಡಿಸುವಷ್ಟು ಶಕ್ತಿಶಾಲಿ’.

ದೇಹ ಉಂಟಾದದ್ದೇ ಪ್ರಕೃತಿಯಿಂದ ಎರವಲು ಪಡೆದ ಘಟಕಗಳಿಂದ. ಅದರ ಅಸ್ತಿತ್ವಕ್ಕೆ ಬೇಕಾದ ಆಹಾರ, ನೀರು, ಬೆಳಕು ಎಲ್ಲವೂ ಪ್ರಕೃತಿಯಿಂದಲೇ ದೊರೆಯಬೇಕು.

 

‘ಉಸಿರೆಳೆದುಕೊಂಡು ಹೊರಗೆ ಬಿಡುವ ಕ್ರಿಯೆಯಲ್ಲೇ ನೀವು ಇಡೀ ಪ್ರಪಂಚದೊಂದಿಗೆ ಅನುಸಂಧಾನ ನಡೆಸುತ್ತಿರುತ್ತೀರಿ. ನಿಮ್ಮೊಳಗಿರುವ ಶಕ್ತಿ ಪ್ರಪಂಚದ ಉಳಿದೆಲ್ಲವುಗಳ ಒಳಗಿರುವ ಅದೇ ಶಕ್ತಿ. ಈ ಪ್ರಪಂಚದಿಂದ ನಿಮ್ಮನ್ನು ಪ್ರತ್ಯೇಕಗೊಳಿಸಿರುವುದು ಕೇವಲ ನಿಮ್ಮ ಮನಸ್ಸಿನೊಳಗಿರುವ ಗಡಿರೇಖೆಯೇ ಹೊರತು ಬೇರೇನೂ ಅಲ್ಲ. ನಿಮ್ಮ ಮನಸ್ಸನ್ನು ಸಕಲವೂ ಒಳಗೊಂಡಿರುವ ಪ್ರಪಂಚದ ಭಾಗವಾಗುವಂತೆ ಮಾಡಲು ಸಾಧ್ಯವಾದರೆ ಅದೇ ಒಳಗೊಳ್ಳುವಿಕೆ. ಈ ಒಳಗೊಳ್ಳುವಿಕೆಯ ಕ್ರಿಯೆ ನಿಮ್ಮೊಳಗೆ ಆನಂದವನ್ನು ತುಂಬಿಸುತ್ತದೆ.ತಂತ್ರ

ಈ ಅಂತರ್‌ಮುಖೀ ಯಾತ್ರೆ ಹೆಚ್ಚಿನವರಿಗೆ ಸಾಧ್ಯವಾಗಲೀ ಎಂಬ ಉದ್ದೇಶದಿಂದ ಸದ್ಗುರು ಪ್ರಾಚೀನ ಯೋಗ ತಂತ್ರವಾದ ಶಾಂಭವಿ ಮಹಾ ಮುದ್ರೆಯನ್ನು ಪುನರಾವಿಷ್ಕರಿಸಿದ್ದಾರೆ. ಇದೊಂದು ಬಗೆಯ ಆಂತರಿಕ ಪುನಾರಚನಾ ತಂತ್ರ. ಇದರ ಮೂಲಕ ಆರೋಗ್ಯವನ್ನು ಸಾಧಿಸುವುದಷ್ಟೇ ಅಲ್ಲದೆ ಮಾನಸಿಕ ಶಾಂತಿ ಮತ್ತು ಸ್ಪಷ್ಟತೆಯ ಸಮನ್ವಯವೂ ಸಾಧ್ಯವಿದೆ. ಇದು ವ್ಯಕ್ತಿಯ ವೈಯಕ್ತಿಕ ಮತ್ತು ವೃತ್ತಿ ಜೀವನದ ಉನ್ನತಿಗೂ ಕಾರಣವಾಗುತ್ತದೆ.ಈ ಆನಂದಾವಸ್ಥೆಯನ್ನು ತಲುಪುವುದಕ್ಕೆ ಎಷ್ಟು ಸಮಯ ಬೇಕು ಎಂಬ ಪ್ರಶ್ನೆಗೆ ಸದ್ಗುರು ಅವರ ಮಾತುಗಳಲ್ಲೇ ಸಿಗುವ ಉತ್ತರ  ಇಂತಿದೆ: ‘ಹಲವು ಜನ್ಮಗಳು ಬೇಕಾಗಬಹುದು... ಇಲ್ಲವಾದರೆ ನಾಳೆಯೇ ಆನಂದಾನುಭೂತಿಯನ್ನು ಪಡೆಯಬಹುದು. ಆನಂದಾನುಭವ ಯಾವಾಗ ಆಗುತ್ತದೆ ಎಂಬುದು ನೀವದನ್ನು ಎಷ್ಟು ತೀವ್ರವಾಗಿ ಬಯಸುತ್ತಿದ್ದೀರಿ ಎಂಬುದನ್ನು ಅವಲಂಬಿಸಿರುತ್ತದೆ’.

ಅಗತ್ಯ

ಮನೆ ಮಾಲೀಕನೊಬ್ಬ ಅನುಭಾವಕ್ಕೆ ಏಕೆ ತುಡಿಯಬೇಕು ಎಂಬ ಪ್ರಶ್ನೆಗೆ ಸದ್ಗುರು ನೀರುವ ಉತ್ತರ ಹೀಗಿದೆ: ‘ಸಮಸ್ಯೆ ಇರುವುದು ಅಲ್ಲ. ಮನೆಯಲ್ಲಿ ವಾಸಿಸುವ ಬದಲಿಗೆ ಅದರ ಮಾಲೀಕರಾಗಿರುತ್ತೇವೆ. ನಾವು ಏನನ್ನಾದರೂ  ನಿರ್ವಹಿಸಲು ಹೊರಡುವ ಮೊದಲು- ಅದು ದೇಶವಾಗಿರಬಹುದು ಅಥವಾ ಇಬ್ಬರು ವ್ಯಕ್ತಿಗಳಿರಬಹುದು- ನಾವು ನಮ್ಮನ್ನು ನಾವು ನಿರ್ವಹಿಸಲು ತಿಳಿದಿರಬೇಕು. ನಾವು ನಮ್ಮನ್ನು ನಿರ್ವಹಿಸುವುದು ಪ್ರಾಥಮಿಕ ಅಗತ್ಯ. ಉಳಿದೆಲ್ಲಾ ಬಗೆಯ ನಿರ್ವಹಣೆಯ ಜವಾಬ್ದಾರಿಗಳೂ ಆಕಸ್ಮಿಕ ಮಾತ್ರ. ಹೀಗೆ ಬದುಕೇ ಆಕಸ್ಮಿಕಗಳ ಗುಚ್ಛವಾಗಿರುವಾಗ ಹುಟ್ಟುವ ಎಲ್ಲ ಪ್ರತಿಕ್ರಿಯೆಗಳು, ಅನುಭೂತಿಗಳು ಹೊರ ಜಗತ್ತಿನ ಒತ್ತಡದ ಕೂಸುಗಳಷ್ಟೇ. ಈ ಒತ್ತಡವೇ ನಿಮಗೆ ಬೇಡದಿರುವುದು.ನಿಮ್ಮ ಅಂತರಂಗವಂತೂ ನಿಮ್ಮದೇ ನಿಯಂತ್ರಣದಲ್ಲಿರುವುದರಿಂದ ಅದನ್ನು ಆನಂದವಾಗಿಡುವುದು ಸರಳ. ಪ್ರತಿಯೊಬ್ಬ ಮನುಷ್ಯನೂ ಚೆನ್ನಾಗಿ ಬದುಕಬೇಕೆಂದುಕೊಂಡು ಅದಕ್ಕಾಗಿ ಪ್ರಯತ್ನ ಪಡುತ್ತಿರುತ್ತಾನೆ. ಆದರೆ ಈ ಪ್ರಯತ್ನ ವೈಜ್ಞಾನಿಕವಾಗಿರುವುದಿಲ್ಲ. ಪರಿಣಾಮವಾಗಿ ಫಲಿತಾಂಶದಲ್ಲಿ ನಿಖರತೆ ಇರುವುದಿಲ್ಲ. ನೀವು ಏನನ್ನು ಮಾಡಿದರೂ ಅದು ಯಶಸ್ವಿಯಾಗುವ ರೀತಿಯಲ್ಲಿ ಮಾಡಬೇಕು. ಒಮ್ಮೆ ನಿಮ್ಮ ಸಾಮರ್ಥ್ಯವನ್ನು ಅರಿತುಕೊಂಡರೆ ಅವುಗಳ ವಿಸ್ತರಣೆ ಸುಲಭವಾಗಗುತ್ತದೆ. ಹೀಗೆ ಸಾಮರ್ಥ್ಯದ ಪ್ರಜ್ಞಾಪೂರ್ವಕ ವಿಸ್ತರಣೆ ವ್ಯಕ್ತಿಯ ಇತರ ಆಸಕ್ತಿಗಳಿಗೆ ಅಡ್ಡಿಯಾಗುವುದಿಲ್ಲ’.ದೈವೀಕತೆ

ಸೃಷ್ಟಿಕರ್ತನ ಕುರಿತಂತೆ ಸದ್ಗುರು ಕೊಡುವ ಉತ್ತರ ಹೀಗಿದೆ ನೋಡಿ: ‘ನಾವೆಲ್ಲವೂ ಒಂದೇ ಮೂಲದಿಂದ ಬಂದಿದ್ದೇವೆ. ನಮ್ಮೆಲ್ಲರಲ್ಲೂ ಇರುವುದೇ ಅದೇ ಶಕ್ತಿ. ಈ ಶಕ್ತಿಯ ಕುರಿತು ಅರಿವಿಲ್ಲದೆಯೇ ಅದನ್ನು ಹೊಂದಿರುವುದಕ್ಕಿಂತ ಪ್ರಜ್ಞಾಪೂರ್ವಕವಾಗಿ ಈ ಶಕ್ತಿಯ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿದರೆ ನಾವು ಪಾವನರಾಗುತ್ತೇವೆ. ಇದು ನಿಮಗೆ ಅರಿವಾಗುವ ತನಕ ಆ ಶಕ್ತಿ ನಿಮ್ಮ ಮಟ್ಟಿಗೆ ಇರುವುದೇ ಇಲ್ಲ. ಇದು ನಿಮ್ಮ ಹಿಂದಿರುವ ಆದರೆ ನೀವು ಕಾಣದೇ ಇರುವ ಆನೆಯಂತೆ. ಅದು ನಿಮ್ಮನ್ನು ಹಿಂಬಾಲಿಸುತ್ತಲೇ ಇದ್ದರೂ ನೀವದನ್ನು ಗಮನಿಸಿ ಗುರುತಿಸುವ ತನಕೂ ನಿಮ್ಮ ಪಾಲಿಗೆ ಅದರ ಅಸ್ತಿತ್ವವೇ ಇರುವುದಿಲ್ಲ.

ದೇವಸ್ಥಾನದಲ್ಲಿ, ಮಸೀದಿಯಲ್ಲಿ, ಚರ್ಚ್‌ನಲ್ಲಿ ದೇವರನ್ನು ಹುಡುಕುವುದು ಕೇವಲ ‘ಬದುಕುವ ತುಡಿತ’; ಒಂದು ಬಗೆಯ ಅಭಿವ್ಯಕ್ತಿ. ಇದಕ್ಕೂ ಅನುಭಾವಕ್ಕೂ ಸಂಬಂಧವಿಲ್ಲ. ದೇವರೆದುರು ಪ್ರಾರ್ಥಿಸಲು ಕುಳಿತಾಗ ನೀವು ೀಳುವುದೇನು? ‘ನನ್ನನ್ನು ಕಾಪಾಡು, ನನ್ನನ್ನು ರಕ್ಷಿಸು’ ಎಂದು. ಇದು ಅಸ್ತಿತ್ವಕ್ಕಾಗಿ ಮೊರೆ ಇಡುವುದಲ್ಲವೇ? ಇದಕ್ಕೇಗೆ ಸ್ವರ್ಗ ಹಾದಿಯನ್ನು ಹಿಡಿಯುತ್ತಿದ್ದೀರಿ? ನಿಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನಿಮಗೆ ಬೇಕಿರುವುದು ಅಂಗಾಂಗಗಳು ಮತ್ತು ಮೆದುಳು ಮಾತ್ರ. ಅನುಭಾವ ಆರಂಭವಾಗುವುದು ಒಬ್ಬಾತನು ತನ್ನೊಳಗೆ ತಾನು ನೋಡಿಕೊಳ್ಳುವುದರ ಮೂಲಕ.ಆಸೆಯಿಲ್ಲದ ಬದುಕಿನ ಬಗ್ಗೆ ಅರ್ಥಹೀನ ಮಾತುಗಳನ್ನಾಡುವ ಬೂಟಾಟಿಕೆಯ ಅನುಭಾವಿಗಳನ್ನು ಟೀಕಿಸುವುದಕ್ಕೆ ಸದ್ಗುರು ಪದ ಸಂಪತ್ತನ್ನು ವ್ಯಯಿಸುವುದಿಲ್ಲ. ಅವರ ದೃಷ್ಟಿಯಲ್ಲಿ: ‘ನಮ್ಮೊಳಗಿನ ಬಯಕೆಯಿಂದಷ್ಟೇ ಅನುಭಾವದ ದಾರಿ ತೆರೆದುಕೊಳ್ಳುತ್ತದೆ. ಏಕೆಂದರೆ ಇದು ಮೇರೆಗಳನ್ನು ಮೀರಿ ಬೆಳೆಯುವ ಬಯಕೆ. ಬದುಕೇ ಒಂದು ಬಯಕೆ. ಇದನ್ನು ದಿವ್ಯತೆಗೇರಿಸುವ ಅಗತ್ಯವಿಲ್ಲ. ಹಾಗೆಯೇ ಅದನ್ನು ಅಸಹ್ಯವೆನಿಸುವಂತೆ ಅಭಿವ್ಯಕ್ತಿಸಬೇಕಿಲ್ಲ. ಅದನ್ನು ಗಮನಿಸುತ್ತಾ ಬದುಕನ್ನು ಶೋಧಿಸಿ’.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.