ಇದು ಎಲ್ಲ ಗ್ರಾಮಗಳಂಥಲ್ಲ. ಇಲ್ಲಿ ಬಯಲು ಬಹಿರ್ದೆಸೆಗೆ ಬಹಿಷ್ಕಾರ ಹಾಕಲಾಗಿದೆ. ‘ಸ್ವಾಭಿಮಾನಕ್ಕಾಗಿ ಸ್ವಚ್ಛತೆ’ ಎಂಬ ನೀತಿ ಜಾರಿಯಲ್ಲಿದೆ. ‘ಸ್ವಚ್ಛತೆ ಸ್ವಾತಂತ್ರ್ಯಕ್ಕಿಂತಲೂ ಶ್ರೇಷ್ಠ ಹಾಗೂ ಬಹುಮುಖ್ಯ’ ಎಂಬ ಮಹಾತ್ಮಗಾಂಧಿ ಅವರ ಮಾತನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಿಕೊಂಡು ಇತರ ಗ್ರಾಮಗಳಿಗೆ ಆದರ್ಶಪ್ರಾಯ ಗ್ರಾಮವೆಂಬ ಕೀರ್ತಿಗೆ ಭಾಜನವಾಗಿ ಹೆಮ್ಮೆಯಿಂದ ಬೀಗುತ್ತಿದೆ!

ಕನಿಷ್ಠ ನಾಗರಿಕ ಮೂಲಭೂತ ಸೌಕರ್ಯಗಳಿಂದ ಬಹು ದೂರ ಉಳಿದು ಕುಗ್ರಾಮದಂತೆ ನರಳುತ್ತಿರುವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಚಿಲ್ಝರಿ ಗ್ರಾಮದ ಚಿತ್ರಣ ಇದು. ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಬಯಲು ಮಲ ವಿಸರ್ಜನೆ ತೊಡೆದು ಹಾಕಲು ಹಾಗೂ ಹಳ್ಳಿಗಳಲ್ಲಿ ಸ್ವಚ್ಛ, ಸುಂದರ ಮತ್ತು ನಿರ್ಮಲ ಪರಿಸರವನ್ನು ರೂಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ‘ನಿರ್ಮಲ ಭಾರತ ಅಭಿಯಾನ’ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸಿ ಬಯಲು ಮಲ ವಿಸರ್ಜನೆಗೆ ಪೂರ್ಣ ವಿರಾಮ ನೀಡಿದೆ.

ಅನಕ್ಷರಸ್ಥರು, ಕೃಷಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಚಿಲ್ಝರಿ ಗ್ರಾಮದಲ್ಲಿ 170 ಕುಟುಂಬಗಳಿವೆ. ಇಲ್ಲಿಯ ಜನಸಂಖ್ಯೆ ಸರಿಸುಮಾರು ಒಂದು ಸಾವಿರ. ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದ ಗ್ರಾಮಗಳಲ್ಲಿ ಚಿಲ್ಝರಿಯೂ ಒಂದು. ಸರ್ಕಾರಿ ಯೋಜನೆಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದ ಈ ಗ್ರಾಮದಲ್ಲಿ 2013–14ನೇ ಸಾಲಿನ ನಿರ್ಮಲ ಭಾರತ ಅಭಿಯಾನ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡಿದೆ.

ಗ್ರಾಮದ ಎಲ್ಲ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ವಿದಾಯ ಹೇಳಿದ್ದಾರೆ!
ಕಡಿಮೆ ಖರ್ಚಿನ ಕಟ್ಟಡ ಸರ್ಕಾರ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ನೀಡುವ ರೂ. 10 ಸಾವಿರ ಸಹಾಯ ಧನದಲ್ಲಿಯೇ ರೂ. 1 ಸಾವಿರ ಉಳಿತಾಯ ಮಾಡಿಕೊಂಡು ಕೇವಲ ರೂ. 9 ಸಾವಿರದಲ್ಲಿಯೇ ಸುವ್ಯವಸ್ಥಿತ ಗುಣಮಟ್ಟದ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ ಈ ಗ್ರಾಮಸ್ಥರು.

‘ಸರ್ಕಾರದ ಸಹಾಯಧನದ ಜೊತೆಗೆ ಗ್ರಾಮ ಪಂಚಾಯ್ತಿ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಸಹಕಾರ ನೀಡುತ್ತಿದೆ. ಇದರಿಂದಾಗಿ ಇಂಥದ್ದೊಂದು ಸಾಧನೆ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ ಗ್ರಾಮಸ್ಥರಾದ ಶಾಂತವೀರಪ್ಪ ಮೇಟಿ, ಚನ್ನಪ್ಪ ನಂದಿಹಾಳ, ಲಕ್ಷಪ್ಪ ನಾಯಕರ್. ಕಡಿಮೆ ವೆಚ್ಚದ ನಿರ್ಮಾಣದ ಬಗ್ಗೆ ವಿವರಿಸುವ ಅವರು, ‘4/4 ಅಡಿ ಗುಂಡಿಯನ್ನು ಅಗೆದು 4 ರಿಂದ 6 ಸಿಮೆಂಟ್ ರಿಂಗ್ ಅಲ್ಲಿ ಹಾಕುತ್ತೇವೆ. ಇದಕ್ಕೆ 80 ಬ್ಲಾಕ್ ಇಟ್ಟಂಗಿ ಹಾಗೂ 5 ಚೀಲ ಸಿಮೆಂಟ್ ಬಳಸಲಾಗುತ್ತದೆ. ಇಷ್ಟು ಇದ್ದರೆ ಸಾಕು ಐದು ದಿನಗಳಲ್ಲಿ ಶೌಚಾಲಯ ನಿರ್ಮಾಣಗೊಳ್ಳುತ್ತದೆ. ಇದೇ ರೀತಿಯಲ್ಲಿ ಎಲ್ಲರ ಸಹಕಾರದಿಂದ 200 ವೈಯಕ್ತಿಕ ಶೌಚಾಲಯಗಳು ನಿರ್ಮಾಣಗೊಂಡಿವೆ’ ಎನ್ನುತ್ತಾರೆ.

ಸ್ಥಳೀಯ ಆಡಳಿತದ ಪ್ರೇರಣೆ
‘ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಆಡಳಿತದ ಪಾತ್ರವೂ ಮಹತ್ವದ್ದಾಗಿದೆ. ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಳ್ಳಲು ಅಗತ್ಯವಿರುವ ಸಾಮಗ್ರಿಗಳನ್ನು ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಅಲ್ಲದೆ ಗ್ರಾ.ಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಕಡಬಲಕಟ್ಟಿ ಇಚ್ಛಾಶಕ್ತಿ ಹಾಗೂ ಪ್ರೋತ್ಸಾಹವೂ ಸೇರಿದೆ. ಇದರಿಂದ 2013–14ನೇ ಸಾಲಿನ ‘ನಿರ್ಮಲ ಪುರಸ್ಕಾರ’ ಪ್ರಶಸ್ತಿ ಗ್ರಾಮಕ್ಕೆ ದಕ್ಕಿದೆ’ ಎನ್ನುತ್ತಾರೆ ಗ್ರಾಮದ ಆನಂದ ಗುಡಿಹಾಳ, ಭೀಮಪ್ಪ ಹುಣಸಿಮರದ.

ಇಂಥ ಕಾರ್ಯಕ್ಕೆ ನಾಂದಿ ಹಾಡಿದವರು ಶರಣಪ್ಪ ಕಡಬಲಕಟ್ಟಿ. ‘ನಿರ್ಮಲ ಭಾರತ ಅಭಿಯಾನ’ ಯೋಜನೆ ಬಗ್ಗೆ ತಿಳಿದುಕೊಂಡ ಶರಣಪ್ಪ ಅವರು, ಗ್ರಾಮಸ್ಥರ ಮನೆ–ಮನೆಗೆ ತೆರಳಿ ಶೌಚಾಲಯಗಳ ಮಹತ್ವದ ಕುರಿತು ತಿಳಿ ಹೇಳಿದರು. ಅಷ್ಟೇ ಅಲ್ಲದೇ ಖುದ್ದಾಗಿ ನಿಂತು ಕೆಲವು ಶೌಚಾಲಯಗಳನ್ನು ನಿರ್ಮಿಸಿ ಇತರರಲ್ಲೂ ಸ್ಫೂರ್ತಿ ತುಂಬಿದರು.

ಶರಣಪ್ಪ ಹಾಗೂ ಎಸ್.ಬಿ.ಕಡಬಲಕಟ್ಟಿ ಅವರು ನೆರೆಯ ಗಜೇಂದ್ರಗಡ ನಗರದ ಪರಿಚಯಸ್ಥ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಸಾಲದ ರೂಪದಲ್ಲಿ ಶೌಚಾಲಯ ನಿರ್ಮಾಣ ಸಾಮಗ್ರಿಗಳನ್ನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಮಳಿಗೆಯ ಮಾಲೀಕರು ಒಪ್ಪಿ ಸಾಮಗ್ರಿಗಳನ್ನು ನೀಡುವ ಮೂಲಕ ಶೌಚಾಲಯ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಹೀಗಾಗಿಯೇ ಈ ಗ್ರಾಮದಲ್ಲಿ ಮನೆಗೊಂದು ಶೌಚಾಲಯವಿದೆ. ಬಯಲು ಶೌಚಾಲಯಕ್ಕೆ ಶಾಶ್ವತ ಮುಕ್ತಿ ನೀಡಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಕೈಹಾಕಿದರೂ ಅಕ್ಕ–ಪಕ್ಕದವರ ತಂಟೆ–ತಕರಾರುಗಳಿರುತ್ತವೆ. ಆದರೆ, ಚಿಲ್ಝರಿ ಗ್ರಾಮದಲ್ಲಿ ಮನೆಗೊಂದು ಶೌಚಾಲಯ ನಿರ್ಮಿಸುವ ವೇಳೆ ಅಕ್ಕ–ಪಕ್ಕದವರು ತಂಟೆ–ತಕರಾರು ಮಾಡುವಂತಿಲ್ಲ. ಇಂತಹ ಸ್ವಯಂ ಘೋಷಿತ ನಿಯಮವನ್ನು ಗ್ರಾಮಸ್ಥರೇ ರೂಪಿಸಿಕೊಂಡು ಶೌಚಾಲಯಗಳ ನಿರ್ಮಾಣಕ್ಕೆ ಮುಂದಾದರು. ಇದಕ್ಕೆ ಸ್ಥಳೀಯ ಆಡಳಿತವೂ ಪೂರ್ಣ ಪ್ರಮಾಣದ ಸಹಕಾರ ನೀಡಿದ್ದು, ಅತ್ಯಲ್ಪ ಅವಧಿಯಲ್ಲಿ ಗ್ರಾಮದ ಕುಟುಂಬಗಳೆಲ್ಲ ಶೌಚಗೃಹಗಳನ್ನು ನಿರ್ಮಿಸಿಕೊಂಡು ನಿರ್ಮಲ ಭಾರತ ಅಭಿಯಾನ ಯೋಜನೆಯನ್ನು ಸಾರ್ಥಕ ಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.