ಮಂಗಳವಾರ, ಆಗಸ್ಟ್ 11, 2020
27 °C

ಬಯಲು ಶೌಚಾಲಯ ಪ್ರಕರಣ: ನೊಂದ ಮಹಿಳೆ ಅಳಲು ಆಲಿಸದ ಅಧಿಕಾರಿಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಯಲು ಶೌಚಾಲಯ ಪ್ರಕರಣ: ನೊಂದ ಮಹಿಳೆ ಅಳಲು ಆಲಿಸದ ಅಧಿಕಾರಿಗಳು!

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ಬಯಲು ಶೌಚಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಗುಂಪೊಂದರಿಂದ ವಿವಸ್ತ್ರಗೊಂಡು ಹಲ್ಲೆಗೆ ಗುರಿಯಾಗಿದ್ದ ವಿಮಲಮ್ಮ (38) (ಹೆಸರು ಬದಲಾಯಿಸಲಾಗಿದೆ) ಅವರಿಗೆ ಗುರುವಾರ ರಾಗಿಮಸಲವಾಡ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಳ್ಳಲು ಅವಕಾಶವೇ ದೊರೆಯಲಿಲ್ಲ!

ಜುಲೈ 18ರಂದು ಪ್ರಕಟವಾಗಿದ್ದ `ಪ್ರಜಾವಾಣಿ~ ವರದಿ ಆಧರಿಸಿ ಗುರುವಾರ ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮಕ್ಕೆ ಡಿವೈಎಸ್ಪಿ ಎಚ್.ಆರ್. ರಾಧಾಮಣಿ, ಉಪ ವಿಭಾಗಾಧಿಕಾರಿ ಇಬ್ರಾಹಿಂ ಮೈಗೂರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ. ಪಾಂಡ್ಯಪ್ಪ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿತ್ತು.

ಅಧಿಕಾರಿಗಳ ತಂಡದ ಎದುರು ವಿಮಲಮ್ಮ `ಗ್ರಾಮದ ಬಯಲು ಶೌಚಾಲಯ ಪ್ರಕರಣದಲ್ಲಿ ಜಮೀನು ಅಕ್ರಮಣ ಪ್ರಶ್ನಿಸಿದ್ದಕ್ಕೆ ಮುಖಂಡರೊಬ್ಬರ ಕುಮ್ಮಕ್ಕಿನಿಂದ ಸ್ಥಳೀಯ ಗುಂಪೊಂದು ನನ್ನನ್ನು ಬೆತ್ತಲುಗೊಳಿಸಿ ಅಮಾನುಷವಾಗಿ ಮನಬಂದಂತೆ ಥಳಿಸಿದೆ. ನನಗೆ ನ್ಯಾಯ ದೊರಕಿಸಿಕೊಡಿ~ ಎಂದು ತಮ್ಮ ನೋವು ಬಿಚ್ಚಿಡುತ್ತಿದ್ದಂತೆಯೇ, `ಈಗ ಶೌಚಾಲಯಕ್ಕೆ ಸಂಬಂಧಿಸಿದಂತೆ ಮಾತ್ರ ಮಾತನಾಡಿ~ ಎಂದು ಅಧಿಕಾರಿಗಳು ಆ ಮಹಿಳೆಯ ಬಾಯಿ ಮುಚ್ಚಿಸಿದರು.

`ಆವತ್ತು ಕೂಡಾ ಪೊಲೀಸರು ನನ್ನ ನೋವಿಗೆ ಸ್ಪಂದಿಸಲಿಲ್ಲ. ಇವತ್ತಾದರೂ ನನಗೆ ನ್ಯಾಯ ಕೊಡಿಸ್ತಾರೆ ಅಂದುಕೊಂಡಿದ್ದೆ. ಆದರೆ, ಅವರು ನನ್ನ ಮಾತನ್ನೇ ಕೇಳಲಿಲ್ಲ~ ಎಂದು ವಿಮಲಮ್ಮ ಕಣ್ಣೀರಿಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ಹಲವಾಗಿಲು ಪೊಲೀಸ್ ಠಾಣೆಯಲ್ಲಿ ಐಪಿಸಿ 354, 323, 143 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ ಎಂದು ವಿಮಲಮ್ಮ ಅವರ ಪತಿ ತಿಳಿಸಿದರು.

ಗ್ರಾಮಸ್ಥರೊಂದಿಗೆ ಮಾತನಾಡುವ ಮುನ್ನವೇ ಅಧಿಕಾರಿಗಳ ತಂಡ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಸಿತು. ನಂತರ ಗ್ರಾಮಸ್ಥರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡ, ಶೌಚಾಲಯ ಸೌಲಭ್ಯ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರ ಅಹವಾಲು ಆಲಿಸಿತು. ವೈಯಕ್ತಿಕ ಮತ್ತು ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಭರವಸೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕುಬೇಂದ್ರಪ್ಪ, ಸಂಪೂರ್ಣ ಸ್ವಚ್ಛತಾ ಆಂದೋಲನದ ನೋಡಲ್ ಅಧಿಕಾರಿ ಬಸವರಾಜಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಾಸುದೇವ್, ಜಿಲ್ಲಾ ನೆರವು ಘಟಕದ ಸಂಯೋಜಕಿ ಜಿ. ರೂಪಾ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.