ಮಂಗಳವಾರ, ಜೂನ್ 22, 2021
23 °C
ಕೃಷಿ ಖುಷಿ

ಬರಡು ನೆಲ: ಭರಪೂರ ಫಸಲು

- ಹಾರೋಹಳ್ಳಿ ಪ್ರಕಾಶ್‌ Updated:

ಅಕ್ಷರ ಗಾತ್ರ : | |

ಪಾಂಡವಪುರ: ತಾಲ್ಲೂಕಿನ ಜಕ್ಕನಹಳ್ಳಿಯ ರೈತರೊಬ್ಬರು ಮಳೆಯಾಶ್ರಿತ ಭೂಮಿಯಲ್ಲಿ ಮಿಶ್ರ ಬೇಸಾಯ ಮಾಡುವ ಮೂಲಕ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ.ಬೆಂಗಳೂರಿನಲ್ಲಿ ಹಲವಾರು ವರ್ಷಗಳ ಕಾಲ ವಿದ್ಯುತ್‌ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಗಂಗಾಧರ್‌ ಅವರು ಅಲ್ಲಿಂದ ಹಳ್ಳಿಗೆ ಹಿಂದಿರುಗಿ ಎರಡು ಎಕರೆ ಬರಡು ಭೂಮಿಯಲ್ಲಿ ಬೇಸಾಯ ಮಾಡಲು ನಿರ್ಧರಿಸಿದರು.ಮೂರು ಎಕರೆ ಹೊಲದಲ್ಲಿ 3 ಕಡೆ ಕೊಳವೆಬಾವಿ ಕೊರೆಸಿದರೂ ಒಂದು ಕಡೆ ಮಾತ್ರ ಅರ್ಧ ಇಂಚು ನೀರು ಬಂದಿತು. ಇದರಿಂದ ಧೃತಿಗೆಡದೆ, ಅರ್ಧ ಇಂಚು ನೀರನ್ನು ಉಪಯೋಗಿಸಿಕೊಂಡು ಮಿಶ್ರ ಬೇಸಾಯ ಪ್ರಾರಂಭಿಸಿದರು. ಮಳೆ ನೀರಿನಿಂದ ಅಂತರ್ಜಲ ಹೆಚ್ಚಿಸಿಕೊಳ್ಳಲು ಕೊಳವೆಬಾವಿಗಳ ಬಳಿ ಇಂಗು ಗುಂಡಿಗಳನ್ನು ನಿರ್ಮಾಣ ಗೊಂಡಿತು. ಇದರಿಂದಾಗಿ ಕೊಳವೆಬಾವಿಯಲ್ಲಿ ನೀರು ಬತ್ತಲಿಲ್ಲ.ಕೃಷಿಹೊಂಡ

ಜಮೀನಿನಲ್ಲಿ ಕೃಷಿ ಹೊಂಡವೊಂದನ್ನು ನಿರ್ಮಾಣ ಮಾಡಿಕೊಂಡು, ಅಲ್ಲಿಗೆ ಕೊಳವೆಬಾವಿಯಿಂದ ನೀರು ಸಂಗ್ರಹಿಸಿಕೊಳ್ಳುತ್ತಾರೆ. ಅದನ್ನೇ ಹನಿ ನೀರಾವರಿ ಮೂಲಕ ಹೆಚ್ಚಿನ ಫಸಲಿಗೆ ಬಳಸಿಕೊಳ್ಳುತ್ತಾರೆ.ಹೊಂಡದಲ್ಲಿ ಒಂದಿಷ್ಟು ಮೀನು ಕೃಷಿ ಕೂಡಾ ಮಾಡಿದ್ದಾರೆ. ಜಮೀನಿಗೆ ಫಲವತ್ತಾದ ಕೆರೆಯ ಮಣ್ಣನ್ನು ಸುರಿಸಿ, ಅದರ ಮೇಲೆ ಕೊಟ್ಟಿಗೆ ಹಾಗೂ ಎರೆಗೊಬ್ಬರದೊಂದಿಗೆ ಕೃಷಿ ಇಲಾಖೆಯ ಸಾವಯವ ಗೊಬ್ಬರವನ್ನು ಮಿಶ್ರಣ ಮಾಡಿ ಜಮೀನಿನ ಫಲವತ್ತತೆ ಹೆಚ್ಚಿಸಿಕೊಂಡಿದ್ದಾರೆ.ಪ್ರಾಯೋಗಿಕವಾಗಿ ಒಂದು ಎಕರೆ ಜಮೀನಿನ ಸುತ್ತ ಬೇಲಿ ನಿರ್ಮಾಣ ಮಾಡಿ, ಸೀಮೆ ಬದನೆ ಬೆಳೆದರು. ಅದರೊಂದಿಗೆ ಅಲ್ಲಿ ನಾಟಿಕೋಳಿಗಳನ್ನೂ ಸಾಕಿದರು. ಬದನೆಯ ಬೆಳೆಯೊಂದಿಗೆ ಅಲ್ಲಿನ ಹುಳ, ಹುಪ್ಪಟೆಗಳನ್ನು ತಿಂದ ಕೋಳಿಗಳು ಬಲಿಷ್ಠವಾದವು. ಇದರಿಂದ ಎರಡೂವರೆ ಲಕ್ಷ ರೂಪಾಯಿ ಆದಾಯವೂ ಸಿಕ್ಕಿತು.ಪರಂಗಿ, ಸಿಹಿ ಕುಂಬಳ

ಎರಡು ಎಕರೆ ಜಮೀನಿನಲ್ಲಿ 1,200 ಪರಂಗಿ ಸಸಿ ನೆಟ್ಟಿದ್ದಾರೆ. ಅದರ ನಡುವೆ ಸುಮಾರು 2 ಸಾವಿರ ಸಿಹಿ ಗುಂಬಳ ನೆಟ್ಟಿದ್ದರು. ಈಗಾಗಲೇ ಅವು ಕಾಯಿ ಬಿಟ್ಟಿದ್ದು, ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರಲಿವೆ. ಬದುವಿನಲ್ಲಿ 150 ನುಗ್ಗೆಕಾಯಿ ಗಿಡಗಳು ನಳನಳಿಸುತ್ತಿವೆ.ಅದರೊಂದಿಗೆ 80 ತೆಂಗಿನ ಗಿಡಗಳೂ ಬೆಳೆಯುತ್ತಿವೆ. ಇವುಗಳಿಗೆಲ್ಲಾ ಹನಿ ನೀರಾವರಿಯಿಂದಲೇ ನೀರು ಪೂರೈಸಲಾಗುತ್ತಿದೆ. ಪರಂಗಿ ಗಿಡಗಳು ಇನ್ನೊಂದು ತಿಂಗಳಿಗೆ ಕಟಾವಿಗೆ ಬರಲಿದ್ದು, ಅದರಿಂದ ಪ್ರತಿ ತಿಂಗಳೂ 20 ಸಾವಿರ ರೂಪಾಯಿ ಆದಾಯ ನಿರೀಕ್ಷಿಸಿದ್ದಾರೆ.ವೈಜ್ಞಾನಿಕ ವಿಧಾನ ಅನುಸರಿಸಿ

ರೈತ ಪ್ರಾಮಾಣಿಕವಾಗಿ ದುಡಿದರೆ, ಯಾವುದೇ ಕಾರಣಕ್ಕೂ ನಷ್ಟವಾಗುವುದಿಲ್ಲ. ಕೃಷಿ ಕೆಲಸಕ್ಕೆ ಯಾರನ್ನೂ ನಂಬಿ ಕೂರಬಾರದು. ಕಷ್ಟಪಟ್ಟು ದುಡಿಯುವುದರ ಜತೆಗೆ ಹೊಸ ಪ್ರಯೋಗ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡರೆ ಕೃಷಿಯಲ್ಲೂ ಲಾಭವಿದೆ, ಹಳ್ಳಿಯಲ್ಲೂ ಬದುಕಿದೆ.

– ರೈತ ಗಂಗಾಧರ್‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.