ಭಾನುವಾರ, ಮೇ 16, 2021
26 °C

ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ನಡೆದದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಕ್ರಮ ಗಣಿಗಾರಿಕೆ, ಅಂತರರಾಜ್ಯ ಗಣಿ- ಗಡಿ ಒತ್ತುವರಿ ಹಾಗೂ ಕೋಟ್ಯಂತರ ರೂಪಾಯಿ ರಾಜಸ್ವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ಆದೇಶದ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ, ಓಬಳಾಪುರಂ ಗಣಿ ಕಂಪೆನಿ (ಓಎಂಸಿ) ಮಾಲೀಕ, ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಗಾಲಿ ಜನಾರ್ದನರೆಡ್ಡಿ ಹಾಗೂ ಓಎಂಸಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಸೋಮವಾರ ಬೆಳ್ಳಂಬೆಳಿಗ್ಗೆ ಬಂಧಿಸಿತು.ಸಿಬಿಐನ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ತಂಡ, ಒಂದು ಗಂಟೆ ಕಾಲ ಪರಿಶೀಲನೆ ನಡೆಸಿದ ಬಳಿಕ 6.58ಕ್ಕೆ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಗುಂತಕಲ್, ಗುತ್ತಿ ಮಾರ್ಗವಾಗಿ ಹೈದರಾಬಾದ್‌ಗೆ ಕರೆದೊಯ್ಯಿತು. ನಗರದ ಹವಂಭಾವಿ ಪ್ರದೇಶದಲ್ಲಿರುವ ಜನಾರ್ದನರೆಡ್ಡಿ ನಿವಾಸ ಹಾಗೂ ಶ್ರೀನಗರದಲ್ಲಿರುವ ಶ್ರೀನಿವಾಸರೆಡ್ಡಿ ಅವರ ನಿವಾಸದ ಮೇಲೆ ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ ಸಿಬಿಐ ಸಿಬ್ಬಂದಿ, ಇನ್ನೂ ಹಾಸಿಗೆಯಲ್ಲಿದ್ದ ರೆಡ್ಡಿಯವರನ್ನು ಎಬ್ಬಿಸಿ, ಕೆಲವು ಮಹತ್ವದ ದಾಖಲೆಗಳನ್ನು ಪರಿಶೀಲಿಸಿತು.ನಂತರ ಸ್ನಾನ ಮಾಡಿ ಸಿದ್ಧಗೊಂಡ ಜನಾರ್ದನರೆಡ್ಡಿ ಅವರೊಂದಿಗೆ  ~ಎಪಿ-24 ಎಕೆ-  0252~ ಸಂಖ್ಯೆಯ ಸಿಲ್ವರ್ ಬಣ್ಣದ ಇನೋವಾ ಕಾರಿನಲ್ಲಿ ಶ್ರೀನಿವಾಸರೆಡ್ಡಿ ಅವರ ನಿವಾಸಕ್ಕೆ ತೆರಳಿ, ಅಲ್ಲಿಂದ ಇಬ್ಬರನ್ನೂ ಹೈದರಾಬಾದ್‌ಗೆ ಕರೆದೊಯ್ಯಿತು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಿಐ ಡಿಐಜಿ ವಿ.ವಿ. ಲಕ್ಷ್ಮಿನಾರಾಯಣ, ~ಓಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಲಾಗಿದೆ. ಅವರನ್ನು ಹೈದರಾಬಾದ್‌ಗೆ ಕರೆದೊಯ್ಯಲಾಗುತ್ತಿದೆ~ ಎಂದಷ್ಟೇ ತಿಳಿಸಿ ಮುನ್ನಡೆದರು.ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ ವಿರೋಧ ಪಕ್ಷಗಳು, ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ 2009ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಆದರೆ, ಜನಾರ್ದನರೆಡ್ಡಿ ಈ ತನಿಖೆಗೆ ತಡೆಯಾಜ್ಞೆ ತಂದಿದ್ದರು. 2010ರ ಡಿಸೆಂಬರ್‌ನಲ್ಲಿ ಹೈಕೋರ್ಟ್ ಈ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದರಿಂದ ತನಿಖೆಯನ್ನು ಪುನಾರಂಭಗೊಳಿಸಿದ್ದ ಸಿಬಿಐ, ಅನೇಕ ಬಾರಿ ಗಣಿ ಪ್ರದೇಶಗಳಿಗೂ, ಬಳ್ಳಾರಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಗ್ರ ಮಾಹಿತಿ ಕಲೆ ಹಾಕಿತ್ತು.ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರನ್ನು ಒಮ್ಮೆ ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ತಂಡ, ಇದೀಗ ಮತ್ತಷ್ಟು ವಿಚಾರಣೆಗೆ ಒಳಪಡಿಸುವ ನಿಟ್ಟಿನಲ್ಲಿ ಓಎಂಸಿ ಮಾಲೀಕ ಗಾಲಿ ಜನಾರ್ದನರೆಡ್ಡಿ ಅವರ ಸಮೇತ ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಿದೆ. ಸಿಬಿಐನ ಎಸ್.ಪಿ. ವೆಂಕಟೇಶುಲು, ವಿಶೇಷ ಅಧಿಕಾರಿ ಆರ್.ಎಂ. ಖಾನ್ ಒಳಗೊಂಡಂತೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.