ಶುಕ್ರವಾರ, ಜುಲೈ 23, 2021
23 °C

ಬಹು ಜನರ ಬೇಡಿಕೆಯ ದೊಡ್ಡೇರಿ ಸುಣ್ಣ!

ಜಡೇಕುಂಟೆ ಮಂಜುನಾಥ್ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಪರಂಪರೆಗೆ ಹೆಸರಾಗಿರುವ ದೊಡ್ಡೇರಿ ಹಲವು ಕಾರಣಗಳಿಗೆ ಪ್ರಸಿದ್ದಿ ಆಗಿರುವುದನ್ನು ಕಾಣಬಹುದಾಗಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಒಂದು ಕಾಲದಲ್ಲಿ ದೊಡ್ಡೇರಿ ತಾಲ್ಲೂಕು ಕೇಂದ್ರವಾಗಿತ್ತು ಎಂಬುದನ್ನು ತಿಳಿಯಬಹುದು.ಇಂತಹ ದೊಡ್ಡೇರಿ ಸುಣ್ಣ ತಯಾರಿಸುವಲ್ಲಿ ಮುಂಚೂಣಿಯಲ್ಲಿದೆ. ದೊಡ್ಡೇರಿ ಸುಣ್ಣ, ನಗರಂಗೆರೆ ಅಡಿಕೆ, ಭರಮಸಾಗರದ ಎಲೆ ಸ್ವಾದವೇ ಬೇರೆ ಎಂಬ ಮಹತ್ವ ಸಾರುವ ಅಂಶವನ್ನು ನಮ್ಮ ಜನಪದರು ಸೋಬಾನೆ, ಕೋಲಾಟದ ಪದಗಳಲ್ಲಿ ಹಾಡುವುದುಂಟು.ಕಳೆದ ಹತ್ತಿಪ್ಪತ್ತು ವರ್ಷಗಳ ಹಿಂದೆ ದೊಡ್ಡೇರಿ ಸುಣ್ಣ ಕೊಳ್ಳಲು ಸುತ್ತಲ ಹತ್ತಾರು ಹಳ್ಳಿಗಳ ಜನರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ಬರುತ್ತಿದ್ದರು. ಹಿಂದಿನ ಕಾಲದ ಸುಣ್ಣದ ಗೋಡೆಗಳಿಗೆ ಸುಣ್ಣ ಬಳಿಯಲು, ಹಬ್ಬ-ಹರಿ ದಿನಗಳಲ್ಲಿ ಅಡಿಕೆ, ಎಲೆ ಜಗಿಯಲು ಬೇಕಾಗುವ ದೊಡ್ಡೇರಿ ಸುಣ್ಣ ಬಲು ಪ್ರಸಿದ್ದಿಯಾಗಿತ್ತು ಎಂಬುದನ್ನು ಹಿರಿಯ ತಲೆಮಾರಿನವರಿಂದ ತಿಳಿಯಬಹುದಾಗಿದೆ.ದೊಡ್ಡೇರಿಯಲ್ಲಿ ಇರುವ 12 ಸುಣಗಾರ ಕುಟುಂಬಗಳ ಯುವಕರು ಈಗಲೂ ತಮ್ಮ ಪಾರಂಪರಿಕ ಸುಣ್ಣ ತಯಾರಿಸುವ ಕಾಯಕದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ತಲೆ ತಲಾಂತರದಿಂದ ತಾತ, ಮುತ್ತಜ್ಜರು ಮಾಡಿಕೊಂಡು ಬಂದಿರುವ ಕುಲ ವೃತ್ತಿಯಾಗಿ ಇಂದಿಗೂ ಮುಂದುವರಿಸಿದ್ದಾರೆ.‘ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜನರು ತಮ್ಮ ಮನೆಯ ಗೋಡೆಗಳಿಗೆ ಸುಣ್ಣ ಆವಶ್ಯವಾಗಿತ್ತು. ಆದರೆ, ಪ್ರಸ್ತುತ ದಿನಮಾನದಲ್ಲಿ ಸುಣ್ಣದ ಗೋಡೆಗಳೇ ಕಣ್ಮರೆಯಾಗುತ್ತಿವೆ. ಜನರು ಬಣ್ಣಕ್ಕೆ ಮಾರುಹೋಗಿದ್ದಾರೆ. ಇದರಿಂದಾಗಿ, ತಯಾರಿಸಿದ ಸುಣ್ಣ ಖರ್ಚಾಗುವುದಕ್ಕೆ ಬಹಳ ಸಮಯ ಹಿಡಿಯುತ್ತದೆ’ ಎನ್ನುತ್ತಾರೆ ಸುಣ್ಣಗಾರ ಕುಟುಂಬದ  ಶಿವಣ್ಣ.ಸುಣ್ಣ ತಯಾರಿಸಲು ಬೇಕಾಗುವ ಸುಣ್ಣದ ಕಲ್ಲು ಸಿಗುವುದು ನಾಯಕನಹಟ್ಟಿ ಹತ್ತಿರದ ಗೌಡಗೆರೆಯಲ್ಲಿ. ಅಲ್ಲಿಂದ ದೊಡ್ಡೇರಿಗೆ ತರಲು ಸುಮಾರು ಎರಡು ಸಾವಿರ ಖರ್ಚು ಭರಿಸಬೇಕು. ಇತ್ತ ಕಡೆ ಸುಣ್ಣದ ಕಲ್ಲು ಕುಟ್ಟಿ, ಅದನ್ನು ಗುಮ್ಮಿಯಲ್ಲಿ ಹಾಕಿ ಒಂದೆರೆಡು ದಿನಗಳ ಕಾಲ ಸುಟ್ಟು ಪಟ್ಟಣಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗಬೇಕು. ಇಷ್ಟು ಪರಿಶ್ರಮದ ಈ ಪಾರಂಪರಿಕ ವೃತ್ತಿಗೆ ಈಗೀಗ ಬೆಲೆಯಿಲ್ಲದಂತಾಗಿದೆ ಎಂಬುದು ಅವರ ಅಳಲು.ಮೊದಮೊದಲು ಸುತ್ತಲ ಹತ್ತಾರು ಹಳ್ಳಿಗಳ ಜನರು ಎತ್ತಿನ ಬಂಡಿಗಳಲ್ಲಿ ದೊಡ್ಡೇರಿಗೆ ಬಂದು ಸುಣ್ಣ ಕೊಳ್ಳುತ್ತಿದ್ದರು. ಈಗ ನಾವೇ ಮಾರಾಟ ಮಾಡಲು ಹಳ್ಳಿಗಳಿಗೆ ಒಯ್ಯಬೇಕಾಗಿದೆ. ಇದರಿಂದ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಪಶ್ಚತ್ತಾಪದಿಂದ ನುಡಿಯುತ್ತಾರೆ ಇಲ್ಲಿನವರು.ಸುಣ್ಣ ತಯಾರಿಸಿ ಜೀವನ ಸಾಗಿಸುವ ಸುಣ್ಣಗಾರರ ಜೀವನ ಭದ್ರತೆಗೆ ಯಾವುದೇ ಆಸರೆ ಇಲ್ಲದಂತಾಗಿದೆ. ತಲೆತಲಾಂತರದಿಂದ ಇಂತಹ ಪಾರಂಪರಿಕ ವೃತ್ತಿಗಳನ್ನು ಮುಂದುವರಿಸಿಕೊಂಡು   ಬರುತ್ತಿರುವ ಕುಟುಂಬಗಳಿಗೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದು ಸುಣ್ಣಗಾರರ ಆಗ್ರಹವಾಗಿದೆ.ಸುಣ್ಣ ಸುಡುವ ಗುಮ್ಮಿಗಳನ್ನು ಅತ್ಯಂತ ಗೌರವದಿಂದ ಕಾಣುವ ಇವರು ಪೂಜನೀಯ ಸ್ಥಾನ ನೀಡಿರುವುದು ಈ ಕುಲ ಕಸಬುದಾರರ ವೃತ್ತಿ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಪ್ರತಿ ವರ್ಷದ ಯುಗಾದಿ ಹಬ್ಬದಂದು ಇಲ್ಲಿನ ಸುಣ್ಣದ ಗುಮ್ಮಿಗಳನ್ನು ತಾವೇ ತಯಾರಿಸಿದ ಸುಣ್ಣದಿಂದ ಬಳಿದು ಪೂಜೆ ಮಾಡುವುದುಂಟು.ಈ ವೃತ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳಲ್ಲಿ ವಿದ್ಯಾವಂತರ ಕೊರತೆ ಎದ್ದು ಕಾಣುತ್ತಿದೆ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿರುವ ಕೆಲವು ಯುವಕರು ಸಹ ಹಿರಿಯರ ಜತೆಗೆ ಸುಣ್ಣದ ಗುಮ್ಮಿಗಳಲ್ಲಿ ಕೆಲಸ ಮಾಡುವುದನ್ನು ನೋಡಬಹುದಾಗಿದೆ.ಒಂದು ಕಾಲಕ್ಕೆ ದೊಡ್ಡೇರಿ ಸುಣ್ಣ ಎಂದರೆ ಹೆಸರುವಾಸಿಯಾಗಿದ್ದು, ಇಂದಿಗೂ ಈ ಸುಣ್ಣದ ಗುಣಮಟ್ಟ ಕಡಿಮೆಯಾಗದಂತೆ ವೃತ್ತಿದಾರರು ಕುಲ ಕಸುಬನ್ನು  ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.