ಗುರುವಾರ , ಜನವರಿ 23, 2020
23 °C

ಬಾನಲ್ಲಿ ಹಕ್ಕಿಯಾದ ಹಳ್ಳಿ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬೇಕು, ವಿಮಾನದಲ್ಲಿ ಪ್ರಯಾಣ ಬೆಳೆಸಿ ಅದರ ಆನಂದವನ್ನು ಆಸ್ವಾದಿಸಬೇಕು ಎಂಬ ನೂರಾರು ಕನಸುಗಳನ್ನು ಹೊಂದಿರುವ ಹಳ್ಳಿಗಾಡಿನ ಮಕ್ಕಳಿಗೆ ಆ ಅವಕಾಶ ಗುರುವಾರ ಒದಗಿ ಬಂತು.ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೈಸೂರಿನ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ಚನ್ನಪಟ್ಟಣದ ಹೊಂಗನೂರಿನ ವಿಶಾಲ ಕೆರೆಯಲ್ಲಿ ಕೋಡಂಬಳ್ಳಿ ಗ್ರಾಮದ ಶಾಲಾ ಮಕ್ಕಳಿಗೆ ಹಾಗೂ ಯುವ ಜನತೆಗೆ ಸಾಹಸ ಕ್ರೀಡೆ ಆಯೋಜಿಸಲಾಗಿತ್ತು. ಪ್ಯಾರಚ್ಯೂಟ್‌ನಲ್ಲಿ ಹಾರಾಡುವುದು, ಬೈಕ್ ಸವಾರಿ, ಬೆಟ್ಟ-ಗುಡ್ಡ ಹತ್ತಿ, ಕಾಡಿನಲ್ಲಿ ಚಾರಣ ಮಾಡುವ ಕ್ರೀಡೆಗಳು ಅಲ್ಲಿ ನಡೆದವು. ಕೋಡಂಬಳ್ಳಿಯ ಜ್ಯೋತಿ ವಿದ್ಯಾಸಂಸ್ಥೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.ಇದರ ಪ್ರಯೋಜನ ಪಡೆದ ಹಳ್ಳಿಗಾಡಿನ ಮಕ್ಕಳು ಸ್ವಚ್ಛಂದವಾಗಿ ಆಕಾಶದಲ್ಲಿ ಹಕ್ಕಿಗಳಂತೆ ಪ್ಯಾರಚ್ಯೂಟ್‌ನಲ್ಲಿ ಹಾರಾಡಿ ಆಕಾಶ ಮುಟ್ಟಿದಷ್ಟೇ ಸಂತಸಗೊಂಡವು. ರಾಮನಗರ ಜಿಲ್ಲೆಯಲ್ಲಿ ಈ ರೀತಿಯ ಸಾಹಸ ಕ್ರೀಡೆಗಳು ನಡೆದದ್ದು ಇದೇ ಮೊದಲು. ಇಲ್ಲಿ ನಡೆದ ವಿವಿಧ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ಸೇರಿದಂತೆ ಸುಮಾರು 200 ಜನ ಪಾಲ್ಗೊಂಡಿದ್ದರು.ಈ ಸಾಹಸ ಕ್ರೀಡೆಗಳ ಕುರಿತು ಪ್ರತಿಕ್ರಿಯಿಸಿದ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‌ನ ನಿರ್ದೇಶಕಿ ರುಕ್ಮಿಣಿ ಚಂದ್ರನ್, ಗ್ರಾಮ ಮಟ್ಟದಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಅವರಲ್ಲಿನ ಕ್ರೀಡಾ ಸ್ಪೂರ್ತಿಯನ್ನು ಬಡಿದೆಬ್ಬಿಸುವ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿದೆ.  ಕೇವಲ ನಗರ ಪ್ರದೇಶದ ಯುವಕ-ಯುವತಿಯರಿಗೆ ಮಾತ್ರ ಸೀಮಿತವಾಗಿರದೆ, ಹಳ್ಳಿ ಯುವ ಜನತೆಯನ್ನು ಸಾಹಸ ಕ್ರೀಡೆಗಳತ್ತ ಆಕರ್ಷಿಸಲು ಯೋಜಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕ್ರೀಡೆಗಳೆಂದರೆ ಬರೀ ಸೋಲು ಗೆಲುವು ಅಷ್ಟೇ ಅಲ್ಲ. ಯುವಕರಿಗೆ, ಸ್ವಯಂ ಕ್ರೀಡೆಗಳಾದ ಸಾಹಸ ಕ್ರೀಡೆಗಳು ತಮ್ಮ ಮನಸ್ಸಿನ ಹಾಗೂ ದೇಹದ ಬೆಳವಣಿಗೆಗೆ ಸಹಕಾರಿಯಾಗುತ್ತಿವೆ ಎಂಬುದನ್ನು ತಿಳಿಸುವುದೇ ಈ ಕಾರ್ಯಕ್ರಮಗಳನ ಉದ್ದೇಶ ಎಂದ ಅವರು ತಿಳಿಸಿದರು.  ಖಾಸಗಿಯಾಗಿ ಈ ಸಾಹಸ ಕ್ರೀಡೆಗಳನ್ನು ನಡೆಸಬೇಕಾದರೆ ಒಬ್ಬರಿಗೆ 600 ರೂಪಾಯಿ ಖರ್ಚಾಗುತ್ತದೆ.ಆದರೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹಳ್ಳಿಗಳ ಯುವಕರಿಗಾಗಿ ನಾವು ಕೇವಲ 250 ರೂಪಾಯಿಗೆ ಈ ಸಾಹಸ ಕ್ರೀಡೆಗಳನ್ನು ನಡೆಸಿಕೊಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಸಿಂಗರಾಜಿಪುರದ ಗವಿರಂಗಸ್ವಾಮಿ ಬೆಟ್ಟದಲ್ಲಿ ಸ್ಥಳೀಯ ಯುವಕರ ಜತೆ ಚಾರಣವನ್ನು ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)