ಸೋಮವಾರ, ಮೇ 10, 2021
25 °C

ಬಾಲಕರಿಲ್ಲದೆ ಭಣಗುಡುತ್ತಿರುವ ಬಾಲಮಂದಿರ!

ಪ್ರಜಾವಾಣಿ ವಾರ್ತೆ / ಸಿದ್ದು ಆರ್.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

ಮೈಸೂರು: ಹಲವು ವರ್ಷಗಳಿಂದ ಆಶ್ರಯ ಪಡೆದಿದ್ದ 43 ಬಾಲಕರು ಖಾಲಿಯಾಗುವ ಮೂಲಕ ಜೆ.ಪಿ. ನಗರದ ಬಾಲಮಂದಿರ ಕಳೆದ ಒಂದು ವರ್ಷದಿಂದ ಭಣಗುಡುತ್ತಿದೆ.ಹೌದು, ಬಾಡಿಗೆ ಕಟ್ಟಡದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಬಾಲಕರ ಬಾಲಮಂದಿರವು ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ವಿವಿಧೆಡೆಗೆ ಬಾಲಕರನ್ನು ವರ್ಗಾಯಿಸಿರುವುದರಿಂದ ಬಿಕೋ ಎನ್ನುತ್ತಿದೆ.ಈ ಕಟ್ಟಡ ಬಾಲಕರ ವಾಸಕ್ಕೆ ಕಿರಿದಾಗಿತ್ತು. ಶಿಥಿಲಗೊಂಡಿದ್ದ ಒಂದು ಪಾರ್ಶ್ವದ ಗೋಡೆ ಕುಸಿಯಿತು. ನೀರಿನ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿತು. ಸ್ನಾನ, ಶೌಚ, ಬಟ್ಟೆ ತೊಳೆಯಲು ಹಾಗೂ ಕುಡಿಯಲು ಸಾಕಷ್ಟು ನೀರು ಪೂರೈಕೆಯಾಗದೆ ಬಾಲಕರು ಪರದಾಡುವ ದುಃಸ್ಥಿತಿ ಎದುರಾಯಿತು. ಅಷ್ಟೇ ಅಲ್ಲದೆ, ಕಟ್ಟಡದ ಮೇಲ್ಭಾಗದಲ್ಲಿದ್ದ ಮೊಬೈಲ್ ಟವರ್‌ನಿಂದ ಬಿಡುಗಡೆಯಾಗುವ ವಿಕಿರಣಗಳಿಂದ ಬಾಲಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ 43 ಬಾಲಕರನ್ನು ತಾತ್ಕಾಲಿಕವಾಗಿ ಬೇರೆಡೆಗೆ ವರ್ಗಾಯಿಸುವ ನಿರ್ಧಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೂನ್ 2012ರಲ್ಲಿ ಕೈಗೊಂಡಿತು ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.ಇಲ್ಲಿ 6 ವರ್ಷದಿಂದ 18 ವರ್ಷದೊಳಗಿನ ಬಾಲಕರು ಆಶ್ರಯ ಪಡೆದಿದ್ದರು. ಕಾನೂನಿನೊಂದಿಗೆ ಸಂಘರ್ಷಕ್ಕೊಳಪಟ್ಟ (ಅಪಘಾತ, ಕಳ್ಳತನ, ಲೈಂಗಿಕ ದೌರ್ಜನ್ಯ ಇತ್ಯಾದಿ ಪ್ರಕರಣಗಳಲ್ಲಿ ಭಾಗಿಯಾದ) ಮಕ್ಕಳು ಮತ್ತು ಪಾಲನೆ-ಪೋಷಣೆ ಅಗತ್ಯ ಇರುವ (ಬೀದಿ ಮಕ್ಕಳು, ಅನಾಥರು, ಏಕ ಪೋಷಕರನ್ನು ಹೊಂದಿರುವವರು, ಮದ್ಯ-ಮಾದಕವಸ್ತುಗಳ ವ್ಯಸನಿಗಳು, ಬಾಲಕಾರ್ಮಿಕ ರಾಗಿದ್ದ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೊಳಗಾದವರು ಇತ್ಯಾದಿ...) ಮಕ್ಕಳಿಗೆ ಬಾಲಮಂದಿರ ನೆಲೆ ನೀಡಿತ್ತು. ಅವರಿಗೆ ಉಚಿತ ಊಟ, ವಸತಿ, ಬಟ್ಟೆ, ಶೈಕ್ಷಣಿಕ ಶುಲ್ಕ ಇತ್ಯಾದಿ ಸವಲತ್ತು ಒದಗಿಸಿತ್ತು.ಗೂಡು ತೊರೆದ ಹಕ್ಕಿಗಳು!: ಬಾಲಮಂದಿರ ದಲ್ಲಿದ್ದ ಬಾಲಕರನ್ನು ಚಿಕ್ಕಮಗಳೂರು ಮತ್ತು ಮಂಡ್ಯದ ಬಾಲಮಂದಿರಗಳಿಗೆ ಕ್ರಮವಾಗಿ 9 ಮತ್ತು 4 ಮಕ್ಕಳನ್ನು ವರ್ಗಾಯಿಸಲಾಯಿತು. 6 ಬಾಲಕರನ್ನು ಮೈಸೂರಿನ ಜೈನ್ ಎಜುಕೇಷನ್ ಸೊಸೈಟಿಗೆ ಹಾಗೂ 18 ವರ್ಷ ಮೇಲ್ಪಟ್ಟ ಯುವಕನನ್ನು ಬಾಪೂಜಿ ಮಕ್ಕಳ ಮನೆಗೆ ಕಳುಹಿಸಿಕೊಡಲಾಯಿತು. ಇನ್ನುಳಿದ 23 ಬಾಲಕರನ್ನು ಅವರ ತಂದೆ ತಾಯಿಯರೊಂದಿಗೆ ಮನೆಗೆ ಕಳುಹಿಸಲಾಗಿದೆ. ಹೀಗೆ, ಜೂನ್ 2012ರಲ್ಲಿ 43 ಬಾಲಕರಿಗೂ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಯಿತು.ಉದ್ಘಾಟನೆಗೆ ಕಾದಿರುವ ಕಟ್ಟಡ: ಬಾಲಮಂದಿರದ ಕಟ್ಟಡ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೈಸೂರಿನ ವಿಜಯನಗರದ 4ನೇ ಹಂತದಲ್ಲಿ 4 ಸಾವಿರ ಚದರ ಅಡಿ ನಿವೇಶನದಲ್ಲಿ ರೂ 70.1 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿದೆ. ಇಲ್ಲಿ ವಿಶಾಲವಾದ ಮಲಗುವ ಕೋಣೆ, ಅಡುಗೆ ಕೋಣೆ, ಶೌಚಾಲಯ, ವಿಶ್ರಾಂತಿ ಸ್ಥಳ, ಒಳಾಂಗಣ ಕ್ರೀಡೆಯ ಕೊಠಡಿ ಮುಂತಾದ ಸೌಲಭ್ಯಗಳನ್ನು ಕಲ್ಪಿಸಿದೆ. ಸುಭದ್ರ ಕಾಂಪೌಂಡ್ ನಿರ್ಮಿಸಿದೆ. ಉದ್ಘಾಟನೆಯ ಭಾಗ್ಯಕ್ಕೆ ಈ ಕಟ್ಟಡ ಕಾದು ನಿಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.