ಭಾನುವಾರ, ಮೇ 16, 2021
27 °C

ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಬಾಲಿವುಡ್ ನಟಿ ಜಿಯಾ ಖಾನ್ (25) ಮುಂಬೈನ ಜುಹು ಪ್ರದೇಶದ ತಮ್ಮ ನಿವಾಸದಲ್ಲಿ ಸೋಮವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಜಿಯಾ ತಮ್ಮ ಕೋಣೆಯಲ್ಲಿ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಯಾ ಅವರ ತಾಯಿ ಮತ್ತು ಸಹೋದರಿ ಸೋಮವಾರ ರಾತ್ರಿ 11 ಗಂಟೆಗೆ ಮನೆಗೆ ಹಿಂತಿರುಗಿದಾಗ ಈ ಘಟನೆ ಬೆಳಕಿಗೆ ಬಂತು.

ಬಾಲಿವುಡ್ ನಟ ಆದಿತ್ಯ ಪಾಂಚಾಲಿ-  ನಟಿ ಜರೀನಾ ವಾಹಬ್ ದಂಪತಿಯ ಪುತ್ರ ಸೂರಜ್ ಪಾಂಚಾಲಿ ಅವರೊಂದಿಗೆ ಜಿಯಾ ಗೆಳೆತನ ಹೊಂದಿದ್ದರು ಎನ್ನಲಾಗಿದ್ದು, ಕಳೆದ ಒಂದು ವರ್ಷದಿಂದ ಇಬ್ಬರೂ ಪಬ್‌ಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಬಗ್ಗೆ ವದಂತಿಗಳು ಹಬ್ಬಿದ್ದವು.ಜಿಯಾ ಆತ್ಮಹತ್ಯೆಗೂ ಮುನ್ನ ಸೂರಜ್ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಇಬ್ಬರ ನಡುವೆ ಪರಸ್ಪರ ಸಂದೇಶ ರವಾನೆಯಾಗಿತ್ತು.ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸೂರಜ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಜಿಯಾ ಅವರ ಮನೆಗೆ ಕೊನೆಯದಾಗಿ ಭೇಟಿ ನೀಡಿದವರ ಮಾಹಿತಿ ಮತ್ತು ಪತ್ತೆಗಾಗಿ ಅವರ ಮನೆಗೆಲಸದ ಹುಡುಗಿ, ಕಾವಲುಗಾರ ಮತ್ತು ಅಕ್ಕಪಕ್ಕದ ಮನೆಯವರನ್ನೂ ವಿಚಾರಣೆ ಮಾಡಿದ್ದಾರೆ.ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಚಿತ್ರವೊಂದರ ಧ್ವನಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಜಿಯಾ, ಅದರಲ್ಲಿ ಯಶಸ್ವಿಯಾಗದೇ ಇದ್ದುದ್ದರ ಬಗ್ಗೆ ಖಿನ್ನವಾಗಿದ್ದರು ಎನ್ನಲಾಗಿದೆ. ಹತ್ತು ದಿನಗಳ ಹಿಂದೆ ಬ್ಲಾಗ್‌ವೊಂದರಲ್ಲಿ ಬರೆದಿದ್ದ ಜಿಯಾ, `ದಯಮಾಡಿ ಕ್ಷಮಿಸಿ. ಟ್ವಿಟರ್‌ನಿಂದ ಸ್ವಲ್ಪಕಾಲ ದೂರ ಸರಿಯುತ್ತಿದ್ದೇನೆ. ಕೆಲವೊಮ್ಮೆ ನಮ್ಮ ಚಿಂತನೆಗಳ ಪುನರಾವಲೋಕನಕ್ಕಾಗಿ ಸ್ವಲ್ಪ ವಿಶ್ರಾಂತಿ ಪಡೆಯುವುದು ಅಗತ್ಯ' ಎಂದು ಬರೆದುಕೊಂಡಿದ್ದರು.ಭಾರತದಲ್ಲಿ ಹುಟ್ಟಿದ ಜಿಯಾ ತಂದೆ ಅಲಿ ರಿಜ್ವಿ ಖಾನ್ ಮತ್ತು ತಾಯಿ ರಬಿಯಾ ಅಮಿನ್ ಅವರೊಂದಿಗೆ ಬಾಲ್ಯದಲ್ಲೇ ಲಂಡನ್‌ಗೆ ತೆರಳಿದ್ದರು. 17 ವರ್ಷದವಳಿದ್ದಾಗ ಜಿಯಾ ನ್ಯೂಯಾರ್ಕ್‌ನ `ಲೀ ಸ್ಟ್ರಾಸ್‌ಬರ್ಗ್ ರಂಗ ಮತ್ತು ಸಿನಿಮಾ ತರಬೇತಿ ಕೇಂದ್ರ'ದಲ್ಲಿ ತರಬೇತಿ ಪಡೆದಿದ್ದರು.ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ `ನಿಶ್ಯಬ್ದ್' (2007) ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದ ಜಿಯಾ, ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮಗಳ ಗೆಳತಿಯಾಗಿ ನಟಿಸಿದ್ದರು. ವಯಸ್ಸಿನ ಅಂತರವಿದ್ದೂ ಅಮಿತಾಭ್ ಅವರನ್ನು ಪ್ರೀತಿಸುವ ಪಾತ್ರದಲ್ಲಿ ಜಿಯಾ `ಬಿಸಿ'ಯಾಗಿಯೇ ನಟಿಸಿದ್ದರು. ಹಾಗಾಗಿ, ಈ ಚಿತ್ರ ವಿವಾದಕ್ಕೀಡಾಗಿತ್ತು.ಇದೇ ಚಿತ್ರದ ಅಭಿನಯಕ್ಕಾಗಿ ಹೊಸಮುಖಕ್ಕಾಗಿ ನೀಡಲಾಗುವ `ಫಿಲ್ಮ್‌ಫೇರ್' ಪ್ರಶಸ್ತಿಗೆ ಜಿಯಾ ಭಾಜನರಾಗಿದ್ದರು. ನಟ ಅಮೀರ್‌ಖಾನ್ ಅಭಿನಯದ ರಿಮೇಕ್ ಚಿತ್ರ `ಗಜನಿ' (2008) ಹಾಗೂ ನಿರ್ದೇಶಕ ಸಾಜೀದ್ ಖಾನ್ ಅವರ `ಹೌಸ್‌ಫುಲ್' (2010) ಜಿಯಾ ನಟಿಸಿದ್ದ ಕೊನೆಯ ಚಿತ್ರಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.