ಗುರುವಾರ , ಮೇ 6, 2021
26 °C

ಬಾಲ್ಯವಿವಾಹ ತಡೆಗಟ್ಟಿದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಅಪ್ರಾಪ್ತ ಮಗಳ ಮದುವೆಗೆ ಮುಂದಾಗಿದ್ದ ಪೋಷಕರನ್ನು ಮನವೊಲಿಸಿ, ಗುರುವಾರ ನಡೆಯಬೇಕಿದ್ದ ಮದುವೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ತಾಲ್ಲೂಕಿನ ಕಡೇಕಲ್ ತಾಂಡಾದ ನಿವಾಸಿ ಓಬ್ಯಾನಾಯ್ಕ-ಸಾಕಾಬಾಯಿ ದಂಪತಿಯ ಪುತ್ರಿ ಚಂದ್ರಕಲಾ (16) ಮೊನ್ನೆ ತಾನೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಳು. ಈ ಅಪ್ರಾಪ್ತ ಬಾಲೆಯನ್ನು ತೌಡೂರು ತಾಂಡಾ ಗ್ರಾಮದ ನಾನ್ಯಾನಾಯ್ಕ ಅವರ ಪುತ್ರ ಕುಮಾರನಾಯ್ಕ ಎಂಬಾತನ ಜತೆ ಗುರುವಾರ ಧಾರೆ ಎರೆದುಕೊಡಲು ಉಭಯ ಕುಟುಂಬಗಳ ಹಿರಿಯರು ಸಿದ್ಧತೆ ಮಾಡಿಕೊಂಡಿದ್ದರು.ವಿಷಯ ತಹಶೀಲ್ದಾರ್ ಗಮನಕ್ಕೆ ಬಂದಿದೆ. ಕೂಡಲೇ, ಪೋಷಕರ ಮನವೊಲಿಸಿ ಮದುವೆ ನಿಲ್ಲಿಸುವಂತೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.ತಹಶೀಲ್ದಾರ್ ಡಾ.ಸಿ. ವೆಂಕಟೇಶಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಂದಾಯ  ನಿರೀಕ್ಷಕ ಅಜ್ಜಪ್ಪ ಪತ್ರಿ ಹಾಗೂ ಗ್ರಾಮ ಲೆಕ್ಕಿಗ ಬಸವರಾಜ ಬುಧವಾರ ಸಾಯಂಕಾಲ ಕಡೇಕಲ್ ತಾಂಡಾದ ಬಾಲಕಿಯ  ಮನೆಗೆ ಭೇಟಿ ಮನವೊಲಿಸಿದ್ದಾರೆ.ಬಳಿಕ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯಕ ಸಂಯೋಜಕ ಟಿ.ಎಂ. ಕೊಟ್ರೇಶ್ ಹಾಗೂ ದಿನೇಶ್ ಭೇಟಿ ನೀಡಿ, ಅಪ್ರಾಪ್ತ ವಯಸ್ಸಿನಲ್ಲಿಯೇ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವುದು ಅಪರಾಧ.ಇದನ್ನು ಉಲ್ಲಂಘಿಸಿದರೆ, ಕಠಿಣ ಕಾನೂನು ಕ್ರಮ್ನ ಎದುರಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಪೋಷಕರು ಮದುವೆ ನಿಲ್ಲಿಸಲು ಒಪ್ಪಿ, ಯಾವುದೇ ಕಾರಣಕ್ಕೂ 18ವರ್ಷ ತುಂಬುವವರೆಗೂ ಮದುವೆ ಮಾಡಿಕೊಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.ಇದೇ ರೀತಿಯಲ್ಲಿ  ಅಪ್ರಾಪ್ತ ಬಾಲಕಿಯ ಮದುವೆಯನ್ನು ಅಧಿಕಾರಿಗಳು ತಡೆಗಟ್ಟಿದ ಘಟನೆ ಗುರುವಾರ ನಡೆದಿದೆ.ಹರಪನಹಳ್ಳಿ ತಾಲ್ಲೂಕಿನ ಚಿಕ್ಕಮೇಗಳಗೇರಿ ಗ್ರಾಮದ ವಾಸಿ ಲಿಂಗಮೂರ್ತೆಪ್ಪ ಮತ್ತು ನಿರ್ಮಲ ದಂಪತಿ ಪುತ್ರಿಯನ್ನು ಹರಿಹರ ತಾಲ್ಲೂಕಿನ ದೇವರಬೆಳೆಕೆರೆ ಗ್ರಾಮದ ಮಹೇಶ್ವರಪ್ಪ ಮತ್ತು ಸರೋಜಮ್ಮ ದಂಪತಿ ಪುತ್ರ ಎಸ್.ಎಂ. ತಿಪ್ಪೇಶ್ ಅವರೊಂದಿಗೆ ನಿಗದಿ ಆಗಿತ್ತು. ಚೈಲ್ಡ್‌ಲೈನ್‌ಗೆ ಬಂದ ಖಚಿತ ಮಾಹಿತಿ ಆಧಾರಿಸಿ ಅಧಿಕಾರಿಗಳೊಂದಿಗೆ ತೆರಳಿ ಮದುವೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.