ಶುಕ್ರವಾರ, ಮೇ 14, 2021
32 °C

ಬಾಳೆ ಎಲೆ ಬದುಕು

ಓದೇಶ Updated:

ಅಕ್ಷರ ಗಾತ್ರ : | |

ಬಾಳೆ ಎಲೆ ಮೇಲೆ ಇಷ್ಟಾರ್ಥ ಭಕ್ಷ್ಯಗಳನ್ನಿಟ್ಟುಕೊಂಡು ತಲೆ ಮೇಲೆತ್ತದಂತೆ  ಸವಿದಾಗಲೇ ಅದು ಪರಿಪೂರ್ಣ ಭೋಜನ ಎನ್ನಿಸಿಕೊಳ್ಳುವುದು. ತಾತ- ಮುತ್ತಾಂದಿರ ಕಾಲದಿಂದಲೂ ಹಬ್ಬ, ಶುಭ ಕಾರ್ಯಗಳ ಭೋಜನವೆಂದರೆ ಬಾಳೆ ಎಲೆಗಳೇ ಭಾಗ್ಯ ಎಂದವರು ನಾವು. ದೇವರ ನೈವೇದ್ಯಕ್ಕೂ ಇದೇ ಎಲೆ ಶ್ರೇಷ್ಠ.ದೈನಂದಿನ ಜೀವನದ ವಿಶೇಷ ಸಂದರ್ಭಗಳಲ್ಲಿ ನಾವು ಆಗಾಗ್ಗೆ ಬಳಸುವ ಈ ಬಾಳೆಎಲೆಗಳ ಬಳಕೆಯ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ಆದಿ ಮಾನವನಲ್ಲಿ ಮೂಡಿದ ಬಾಳೆಹಣ್ಣು ಸೇವನೆ ಪ್ರಜ್ಞೆಯ ಜೊತೆಗೆ ಅದರ ಎಲೆಗಳ ಬಳಕೆಯು ಆರಂಭವಾಗಿ, ಕ್ರಮೇಣ  ಮುಂದಿನ ತಲೆಮಾರಿಗೆ ರವಾನೆಯಾಗಿ ಇಂದಿನವರೆಗೂ ಉಳಿದುಕೊಂಡು ಬಂದಿದೆ.ಏನೇ ಆದರೂ ಜೀವನದ ಸುಖ- ದುಃಖದ ಸಂದರ್ಭಗಳಲ್ಲಿ ಸಮಾನವಾಗಿ ಬಳಕೆಯಾಗುವ ಈ ಬಾಳೆಎಲೆ ಮತ್ತು ಮನುಷ್ಯನ ನಡುವೆ ಒಂದು ರೀತಿಯ ಬೆಸುಗೆ ಇದೆ.

ಒಂದು ಕಾಲದಲ್ಲಿ ಮಾರುಕಟ್ಟೆ, ಅಂಗಡಿ ಹಾಗೂ ದೇವಸ್ಥಾನಗಳಲ್ಲಿ ಇತರ ಸಾಮಾನ್ಯ ವಸ್ತುಗಳಂತೆ ಮಾರಾಟವಾಗುತ್ತಿದ್ದ ಬಾಳೆ ಎಲೆಗಳು, ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಸಣ್ಣ ಉದ್ದಿಮೆಯ ಸ್ವರೂಪವನ್ನು ಪಡೆದುಕೊಂಡಿವೆ. ಬಾಳೆಎಲೆಯ ಸಗಟು ಮತ್ತು ಚಿಲ್ಲರೆ ವಹಿವಾಟನ್ನು ನಡೆಸಿ ಎಷ್ಟೋ ಜನ ಆರ್ಥಿಕವಾಗಿ ಸಧೃಡರಾಗಿದ್ದಾರಲ್ಲದೆ ತಮ್ಮಟ್ಟಿಗೆ ಇತರ ಕುಟುಂಬಗಳಿಗೂ ಆಸರೆಯಾಗಿ ನಿಂತಿದ್ದಾರೆ.ಬಳಸುವ ಎಲೆಗಳು

ಸಾಮಾನ್ಯವಾಗಿ ಏಲಕ್ಕಿ, ಪಚ್ಚಬಾಳೆ ಹಾಗೂ ನಾಟಿ ಸಾಂಬಾರುಬಾಳೆ ಮರದ ಎಲೆಗಳನ್ನು ನಗರದಲ್ಲಿ ಮಾರಾಟ ಮಾಡಲಾಗುತ್ತದೆ. ಎರಡು ಫಸಲು ಬಾಳೆಕಾಯಿ ಸಿಕ್ಕಿದ ನಂತರ ಮುಂದಿನ ಫಸಲಿನ ಇಳುವರಿ ಮತ್ತು ತೂಕ ಕಡಿಮೆಯಾಗುವುದರಿಂದ ರೈತರು ನಂತರದ ಮೂರು ತಿಂಗಳವರೆಗೆ ಈ ಗಿಡಗಳನ್ನು ಎಲೆಗಳಿಗಾಗಿಯೇ ಪೋಷಿಸಿಕೊಂಡು ಬರುತ್ತಾರೆ.ಏಲಕ್ಕಿಬಾಳೆ ಎಲೆಯ ಅಗಲ ಕಡಿಮೆ ಇರುವುದಲ್ಲದೆ, ಗಾಳಿಗೆ ಬೇಗನೆ ಒಡೆದು ಹೋಗುತ್ತದೆ. ಹಾಗಾಗಿ ಪಚ್ಚಬಾಳೆ ಮತ್ತು ನಾಟಿ ಸಾಂಬಾರುಬಾಳೆಯ ಎಲೆಗಳನ್ನೇ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಊಟ ಬಡಿಸಲು ಹಾಗೂ ಪಾರ್ಸಲ್ ಕಟ್ಟಲು ಇತ್ತೀಚೆಗೆ ಬಾಳೆಎಲೆಗಳು ಹೆಚ್ಚು ಬಳಕೆಯಾಗುತ್ತಿವೆ.`ಹೋಟೆಲ್‌ನವರೂ ಪ್ರತಿನಿತ್ಯ ಬಾಳೆಎಲೆಯನ್ನು ಕೊಂಡುಕೊಳ್ಳುತ್ತಾರೆ. ಇತರ ವಸ್ತುಗಳಂತೆ ಬಾಳೆಎಲೆಗಳ ಬೆಲೆಯೂ ದಿನಕ್ಕೊಂದು ರೀತಿ ಇರುತ್ತದೆ. ಮದುವೆಯ ಸೀಸನ್‌ನಲ್ಲಿ ಬೇಡಿಕೆ ಹೆಚ್ಚುವುದರಿಂದ ಈ ಸಮಯದಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷದವರೆಗೆ ವಹಿವಾಟು ನಡೆಯುತ್ತದೆ.ಉಳಿದಂತೆ ಸಾಮಾನ್ಯವಾಗಿ ತಿಂಗಳಿಗೆ 25ರಿಂದ 30 ಸಾವಿರ ವ್ಯಾಪಾರ ಆಗುತ್ತದೆ~ ಎಂದು ನಗರದ ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯ `ಮಹಾರಾಜ ಬಾಳೆಎಲೆ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು~ ಅಂಗಡಿಯ ಮುರುಗನ್ ಹೇಳುತ್ತಾರೆ. ಕಳೆದ ಮೂವತ್ತು ವರ್ಷಗಳಿಂದ ಬಾಳೆಎಲೆ ವ್ಯಾಪಾರವನ್ನೇ ತಮ್ಮ ಜೀವನೋಪಾಯವನ್ನಾಗಿ ಮಾಡಿಕೊಂಡಿರುವ ಮುರುಗನ್, ಮೂಲತಃ ತಮಿಳುನಾಡಿನ ಕನ್ಯಾಕುಮಾರಿಯವರು. ಅಣ್ಣನೊಂದಿಗೆ ನಗರದಲ್ಲಿ ಬಾಳೆಎಲೆ ವ್ಯಾಪಾರ ಆರಂಭಸಿದ ಅವರು, ಕ್ರಮೇಣ ಇಲ್ಲೇ ನೆಲೆ ನಿಂತರು. ಸದ್ಯ ಯಶವಂತಪುರ ಮತ್ತು ಚಾಮರಾಜಪೇಟೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿರುವ ಅವರು, ತಿಂಗಳಿಗೆ 40- 50 ಸಾವಿರ ರೂಪಾಯಿ ದುಡಿಯುತ್ತಿದ್ದಾರೆ.ಬಾಳೆ ಎಲೆ ಪೂರೈಕೆ

ನಗರಕ್ಕೆ ದಿನನಿತ್ಯ ತಮಿಳುನಾಡಿನಿಂದ ಬಾಳೆಎಲೆಗಳು ಪೂರೈಕೆಯಾಗುತ್ತವೆ. ಮಧುರೈ, ದಿಂಡಿಗಲ್ಲು, ಬೆತ್ತಲಗೊಂಡಿ ಹಾಗೂ ಸತ್ಯಮಂಗಲಗಳಲ್ಲಿ ಪ್ರತಿನಿತ್ಯ ಸಂಜೆ ಬಾಳೆಎಲೆಗಳ ಹರಾಜು ನಡೆಯುತ್ತದೆ.ಬೇಡಿಕೆಗನುಗುಣವಾದ ಬೆಲೆಗೆ ಹರಾಜಾಗುವ ಈ ಬಾಳೆಎಲೆ ಪಿಂಡಿಗಳನ್ನು (ನಿಗದಿತ ಸಂಖ್ಯೆಯ ಬಾಳೆಎಲೆಗಳ ಒಂದು ಕಟ್ಟುಗಳನ್ನು) ವ್ಯಾಪಾರಿಗಳ ಪರವಾಗಿ ಖರೀದಿಸುವ ಏಜೆಂಟ್‌ಗಳು ನಗರಕ್ಕೆ ಟ್ರಕ್‌ಗಳ ಮೂಲಕ ಬೆಳಿಗ್ಗೆ 6 ಗಂಟೆಯೊಳಗೆ ಕಳುಹಿಸುತ್ತಾರೆ. ಇದಕ್ಕೆ ಪ್ರತಿಯಾಗಿ ವ್ಯಾಪಾರಿಗಳಿಂದ ಪಿಂಡಿಗೊಂದರಂತೆ 25 ರೂಪಾಯಿ ಕಮಿಷನ್ ಪಡೆಯುತ್ತಾರೆ.ರಾಜ್ಯದ ನಂಜನಗೂಡು, ಚನ್ನಪಟ್ಟಣ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ಕೆಲ ಭಾಗಗಳಿಂದಲೂ ನಗರಕ್ಕೆ ಸ್ವಲ್ಪ ಬಾಳೆಎಲೆಗಳನ್ನು ಪೂರೈಲಾಗುತ್ತದೆ. ಆದರೆ, ನಗರದ ಬಹುತೇಕ ಸಗಟು ಮಾರಾಟಗಾರರು ಹೆಚ್ಚಾಗಿ ಅವಲಂಬಿಸಿರುವುದು ಬೇಗನೆ ಹರಿಯದ ಹಾಗೂ ಐದರಿಂದ ಆರು ದಿನಗಳಾದರೂ ಇಡಬಲ್ಲ ತಮಿಳುನಾಡಿನ ಬಾಳೆಎಲೆಗಳನ್ನೇ.ಪರರಾಜ್ಯದಿಂದ ಬಾಳೆಎಲೆ ಪೂರೈಕೆ ಮಾಡುವ ಟ್ರಕ್‌ಗಳು ನಗರ ತಲುಪುವುದು ತಡವಾದರೆ ವ್ಯಾಪಾರಿಗಳ ಜೇಬಿಗೆ ನಷ್ಟ. ಯಾಕೆಂದರೆ, ಬಿಸಿಲ ತಾಪಮಾನಕ್ಕೆ ಸಿಲುಕುವ ಈ ಎಲೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗಿ ಬೆಂದು ಹೋಗುತ್ತವಲ್ಲದೆ, ಎರಡಕ್ಕಿಂತ ಹೆಚ್ಚು ದಿನ ಉಳಿಯುವುದಿಲ್ಲ.ಜೋರು ವಹಿವಾಟು

ಸಗಟು ವ್ಯಾಪಾರವನ್ನೇ ಪ್ರಮುಖವನ್ನಾಗಿಸಿಕೊಂಡಿರುವ ಬಾಳೆಎಲೆ ವ್ಯಾಪಾರಿಗಳು ತಾವು ಪಿಂಡಿಗಳ ಲೆಕ್ಕದಲ್ಲಿ ಬರುವ ಉದ್ದನೆಯ ಎಲೆಯ ತುದಿಯನ್ನು (ಕೂಡು ಬಾಳೆ) ಮಾತ್ರ ಕತ್ತರಿಸಿ ಕಟ್ಟುಗಳ ಲೆಕ್ಕದಲ್ಲಿ ಮಾರುತ್ತಾರೆ.  ಈ ರೀತಿ ಮಾರಾಟವಾಗುವ ಬಿಡಿ ಎಲೆಯೊಂದರ ಸದ್ಯದ ಬೆಲೆ 3.50 ರೂಪಾಯಿ.ಉಳಿದಂತೆ ಚಿಕ್ಕ ಗಾತ್ರದ ಸಣ್ಣ ಸಣ್ಣ ಕಟ್ಟುಗಳನ್ನು ಪ್ರತಿನಿತ್ಯ ಹೋಟೇಲ್‌ನವರು ಖರೀದಿಸುತ್ತಾರೆ. ಜೊತೆಗೆ ನಗರದ ಕಲ್ಯಾಣ ಮಂಟಪ ಹಾಗೂ ದೇವಸ್ಥಾನಗಳು ಸೇರಿದಂತೆ ಸುತ್ತಮುತ್ತಲಿನ ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಾಪಾರಿಗಳು, ಗ್ರಾಹಕ ಹೇಳಿದ ಸ್ಥಳಕ್ಕೆ ಎಲೆಗಳನ್ನು ಪೂರೈಸುತ್ತಾರೆ. ಇದಕ್ಕಾಗಿಯೇ ಕೆಲವರು ಸ್ವಂತ ವಾಹನವನ್ನು ಕೂಡ ಹೊಂದಿದ್ದಾರೆ.`ಬಾಳೆಎಲೆಯ ಜತೆಗೆ ಮದುವೆ, ಗೃಹ ಪ್ರವೇಶ ಹಾಗೂ ಪೂಜೆ- ಪುರಸ್ಕಾರದಂತಹ ಸಂದರ್ಭಗಳಲ್ಲಿ ಅಗತ್ಯವಿರುವ ಗೊನೆಯಿರುವ ಮತ್ತು ಇಲ್ಲದ ಬಾಳೆಮರಗಳನ್ನು ಸಹ ತರಿಸಿಕೊಡುತ್ತೇವೆ. ಅದಕ್ಕೆ ಅನುಕ್ರಮವಾಗಿ 700- 800 ರೂ ತೆಗೆದುಕೊಳ್ಳುತ್ತೇವೆ~ ಎನ್ನುತ್ತಾರೆ 18 ವರ್ಷಗಳ ಹಿಂದೆ ಚಿತ್ರದುರ್ಗದಿಂದ ನಗರಕ್ಕೆ ಬಂದು ನೆಲೆಸಿ ಬಾಳೆಎಲೆ ವ್ಯಾಪಾರ ಮಾಡಿಕೊಂಡಿರುವ `ಎಂ.ಎಸ್.ಬ್ರದರ್ಸ್‌ ಬಾಳೆಎಲೆ ಅಂಗಡಿ~ಯ ಶಿವು.ತ್ಯಾಜ್ಯ ನಿರ್ವಹಣೆ

ಪ್ರತಿನಿತ್ಯ ರಾಶಿಗಟ್ಟಲೆ ಉಳಿಯುವ ಬಾಳೆಎಲೆಯ ಚೂರನ್ನು ಹಸುಗಳನ್ನು ಸಾಕಿರುವ ಸ್ಥಳೀಯರು ಬಂದು ತೆಗೆದುಕೊಂಡು ಹೋಗುತ್ತಾರೆ. ಇಲ್ಲದಿದ್ದರೆ, ಸ್ವತಃ ಅಂಗಡಿಯವರೇ ಚೀಲಗಳಲ್ಲಿ ತುಂಬಿಸಿ ವಾಹನದಲ್ಲಿ ಹಾಕಿಕೊಂಡು ಊರಾಚೆಯ ಕಸದ ತಿಪ್ಪೆಗೆ ಎಸೆದು ಬರುತ್ತಾರೆ.ಕೆ.ಆರ್.ಮಾರ್ಕೆಟ್, ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ ಸೇರಿದಂತೆ ನಗರದ ಅನೇಕ ಕಡೆ ಬಾಳೆಎಲೆ ಮಾರಾಟ ಮಾಡುವ ಅಂಗಡಿಗಳಿದ್ದರೂ, ಹಿಂದಿನಿಂದಲೂ ಚಾಮರಾಜಪೇಟೆ ಬಾಳೆಎಲೆ ವ್ಯಾಪಾರದ ಪ್ರಮುಖ ಕೇಂದ್ರ ಎಂದೇ ಗುರುತಾಗಿದೆ. ಬೇರೆ ಕಡೆಗಳಲ್ಲಿ ಚಿಲ್ಲರೆ ವ್ಯಾಪಾರವೇ ಪ್ರಧಾನವಾಗಿದ್ದರೆ, ಚಾಮರಾಜಪೇಟೆಯಲ್ಲಿ ಚಿಲ್ಲರೆ ಮಾರಾಟಕ್ಕಿಂತಲೂ ಸಗಟು ವ್ಯಾಪಾರ ಜೋರು.1978ರಲ್ಲಿ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದ ಹತ್ತಿರ ಬಿ.ಸಿ. ಮಣಿ ಎನ್ನುವವರು ಮೊದಲಿಗೆ ಬಾಳೆಎಲೆಯ ವ್ಯಾಪಾರವನ್ನು ಪ್ರಾರಂಭಿಸಿದರು. 1980ರಲ್ಲಿ ಮುರುಗನ್ ಅವರ `ಮಹಾರಾಜ ಬಾಳೆಎಲೆ ಮಾರಾಟ  ಅಂಗಡಿ~ ತಲೆ ಎತ್ತಿತು.

 

ನಂತರ ಚಾಮರಾಜಪೇಟೆ ಸೇರಿದಂತೆ ಅನೇಕ ಕಡೆ ಬಾಳೆಎಲೆ ಅಂಗಡಿಗಳು ಆರಂಭಗೊಂಡವು. ಈಗ 35- 40 ಬಾಳೆಎಲೆ ಅಂಗಡಿಗಳು ಇಲ್ಲಿ ನೆಲೆಸಿವೆ. ಅಲ್ಲದೆ, ನಗರದ ಇತರ ಭಾಗದ ಕೆಲ ಸಣ್ಣಪುಟ್ಟ ವ್ಯಾಪಾರಿಗಳು ಇಲ್ಲಿಂದಲೇ ಎಲೆಗಳನ್ನು ಖರೀದಿಸಿಕೊಂಡು ಹೋಗಿ ಮಾರುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.